ಭಟ್ಕಳ: ಬಿಜೆಪಿ ಸರಕಾರ ಜನವಿರೋಧಿ ಕಾರ್ಯ ಮುಂದುವರೆಸಿದೆ : ಅಬ್ದುಲ್ ಮಜೀದ್

Source: S O News | By I.G. Bhatkali | Published on 30th November 2022, 6:49 PM | Coastal News | Don't Miss |

ಭಟ್ಕಳ: ರಾಜ್ಯದಲ್ಲಿ ಬಿಜೆಪಿ ಸರಕಾರ ಜನ ವಿರೋಧಿ, ಸಂವಿಧಾನ ವಿರೋಧಿ ಕಾರ್ಯಗಳನ್ನು ಮುಂದುವರೆಸಿದ್ದು, ಕೂಡಲೇ ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ಸರಕಾರವನ್ನು ವಜಾಗೊಳಿಸಬೇಕು ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಇದರ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಆರೋಪಿಸಿದ್ದಾರೆ.

ಅವರು ಮಂಗಳವಾರ ಭಟ್ಕಳ ಎಸ್‍ಡಿಪಿಐ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯಮಂತ್ರಿಗಳ ಕಚೇರಿಗೆ ತರಲಾಗಿದ್ದ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯಿಂದ ಜಾಹೀರಾತು ನಿಯಮಗಳ ಕಡತಗಳು ನಾಪತ್ತೆಯಾಗಿ ಹೋಗಿದ್ದು, ಇದು ಭ್ರಷ್ಟಾಚಾರ ಯಾವ ಮಟ್ಟಿಗೆ ಹೋಗಿದೆ ಎನ್ನುವುದರ ಸೂಚನೆಯಾಗಿದೆ. 2023ರ ವಿಧಾನಸಬಾ ಚುನಾವಣೆಯು ಇನ್ನು 5-6 ತಿಂಗಳುಗಳಲ್ಲಿ ನಡೆಯಲಿದ್ದು, ಇಂತಹ ಸಂದರ್ಭದಲ್ಲಿ ಮತದಾರರ ಖಾಸಗಿ ಮಾಹಿತಿಯನ್ನು ಕದ್ದು ಲಕ್ಷಾಂತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕಾನೂನು ಬಾಹೀರವಾಗಿ ಕೈ ಬಿಡಲಾಗಿದೆ. ಇದರಲ್ಲಿ ಚಿಲುಮೆ ಎಂಬ ಸಂಸ್ಥೆಯ ಕೈವಾಡ ಸ್ಪಷ್ಟವಾಗಿದ್ದು, ಇದರೊಂದಿಗೆ ಬಿಜೆಪಿ ಸರಕಾರದ ಸಚಿವ ಅಶ್ವತ್ಥ್ ನಾರಾಯಣ ಅವರ ಹೆಸರು ಕೇಳಿ ಬಂದಿದೆ. ಮತದಾರರ ಪಟ್ಟಿಯಲ್ಲಿ ಗೋಲ್‍ಮಾಲ್ ಮೂಡುವ ಮೂಲಕ ಬಿಜೆಪಿ ಚುನಾವಣೆಯನ್ನು ಗೆಲ್ಲಲು ಹೊರಟಿರುವುದು ಸ್ಪಷ್ಟವಾಗಿದೆ.

ಕಳೆದ 7 ವರ್ಷಗಳಿಂದ ದಕ್ಷಿಣಕನ್ನಡದ ಸುರತ್ಕಲ್‍ನಲ್ಲಿ ಅಕ್ರಮವಾಗಿ ಟೋಲ್‍ಗೇಟ್ ನಿರ್ಮಿಸಿ ಸರಿಸುಮಾರು ರು.400ಕೋ. ಟೋಲ್ ವಸೂಲಿ ಮಾಡಲಾಗಿದೆ. ಇದರ ವಿರುದ್ಧ ಜನರು ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದ್ದು, ವಾರದ ಹಿಂದೆಯಷ್ಟೇ ಸುರತ್ಕಲ್ ಟೋಲ್ ಅನ್ನು ಬಂದ್ ಮಾಡಲಾಗಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಲ್ಲಿಸುವುದಾಗಿ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ ಕಟೀಲ್ ಟ್ವೀಟ್ ಮಾಡಿದ್ದರು. ಆದರೆ ಸುರತ್ಕಲ್ ಟೋಲ್‍ನಿಂದ 17ಕಿಮೀ ದೂರ ಇರುವ ಹೆಜಮಾಡಿ ಟೋಲ್‍ನಲ್ಲಿ ಎರಡನ್ನೂ ಸೇರಿಸಿ ಟೋಲ್ ವಸೂಲಿ ನಡೆಸಲಾಗುತ್ತಿದೆ.

ಧರ್ಮ ದ್ವೇಷದ ಮೂಲಕ ಅಧಿಕಾರದಲ್ಲಿ ಉಳಿಯಲು ಹವಣಿಸುತ್ತಿರುವ ಬಿಜೆಪಿ, ಹಿಂದುತ್ವದ ಹೆಸರಿನಲ್ಲಿ ಕೆಲವು ರೌಡಿಗಳನ್ನು ಛೂಬಿಟ್ಟಿದೆ. ಈ ರೌಡಿಗಳು ದಿನಬೆಳಗಾದರೆ ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುವ ಕೆಲವನ್ನು ಮಾಡುತ್ತಿದ್ದಾರೆ. ಸರಕಾರದ ಅಧೀನದಲ್ಲಿ ಇರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಹಿಂದೂಯೇತರರಿಗೆ ವ್ಯಾಪಾರ ನಿರ್ಬಂಧಿಸಬೇಕು ಎಂದು ಬ್ಯಾನರ್ ಹಚ್ಚಲಾಗುತ್ತಿರುವುದು ಖಂಡನೀಯವಾಗಿದೆ. ಮಣಿಪಾಲ ತಾಂತ್ರಿಕ ವಿದ್ಯಾಲಯದಲ್ಲಿ ಪ್ರಾಧ್ಯಾಪಕರೋರ್ವರು ಮುಸ್ಲೀಮ್ ವಿದ್ಯಾರ್ಥಿಯೋರ್ವನನ್ನು ಉಗ್ರವಾದಿ ಎಂದು ಕರೆದಿದ್ದಾರೆ. ಈ ಬಗ್ಗೆ ವಿಡಿಯೋ ಬಹಿರಂಗವಾಗಿದ್ದು, ಕೋಮು ದ್ವೇಷ ಬಿತ್ತುವ ಮಾಧ್ಯಮಗಳು ಹಾಗೂ ಫ್ಯಾಶಿಸ್ಟ್ ಬಿಜೆಪಿಯೇ ವಿದ್ಯಾಸಂಸ್ಥೆಗಳಲ್ಲಿ ಈ ರೀತಿಯ ಮುಸ್ಲೀಮ್ ದ್ವೇಷ ಹರಡಲು ಕಾರಣವಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿಯೂ 5 ವರ್ಷಗಳ ಹಿಂದೆ ಪರೇಶ ಮೇಸ್ತ ಎಂಬ ಬಡ ಯುವಕ ಮೃತಪಟ್ಟಿದ್ದು, ಮುಸ್ಲೀಮ್ ಸಮುದಾಯದವರ ಮೇಲೆ ಆಪಾದನೆ ಹೊರಿಸಿ ಅಮಾಯಕರನ್ನು ಜೈಲಿಗೆ ತಳ್ಳಲಾಯಿತು. ಮುಸ್ಲೀಮ್ ಸಮುದಾಯದವರನ್ನು ಗುರಿಯಾಗಿಸಿ ನಿಂದನೆ ಮಾಡಲಾಯಿತು. ಆದರೆ ತನಿಖೆ ನಡೆಸಿದ ಸಿಬಿಐ ಬಿ ರಿಪೋರ್ಟ ಸಲ್ಲಿಸಿದೆ. ಇದಕ್ಕಾಗಿ ಸರಕಾರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಕೋಮು ದ್ವೇಷ ಹರಡಿ ಚುನಾವಣೆ ಗೆಲ್ಲುವ ಅನಂತಕುಮಾರ ಹೆಗಡೆಗೆ ಇಲ್ಲಿನ ಅಭಿವೃದ್ಧಿಯ ಬಗ್ಗೆ ಕಾಳಜಿ ಇಲ್ಲ. ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಯಂತಹ ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬಿದ್ದಿವೆ ಎಂದರು. ಎಸ್‍ಡಿಪಿಐ ಜಿಲ್ಲಾಧ್ಯಕ್ಷ ತೌಫಿಕ್ ಬ್ಯಾರಿ, ಕಾರ್ಯದರ್ಶಿ ಅಶ್ರಫ್ ಮಾಚಾರ್, ಜಿಲ್ಲಾ ಕಾರ್ಯದರ್ಶಿ ವಾಸೀಮ್ ಮನೇಗಾರ್, ಸಾಕೀಬ್ ಶೇಖ್ ಉಪಸ್ಥಿತರಿದ್ದರು.

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...