ಪೌಷ್ಠಿಕಾಂಶದ ಹೆಸರಲ್ಲಿ ಶಾಲಾ ಮಕ್ಕಳಿಗೆ ಹುಳಹುಪ್ಪಡಿ ತಿನ್ನಿಸುತ್ತಿರುವ ಸರ್ಕಾರ

Source: sonews | By Staff Correspondent | Published on 28th December 2018, 5:21 PM | Coastal News | State News | Special Report | Don't Miss |

•    ಬಿಸಿಯೂಟದ ಆಹಾರ ಧಾನ್ಯಗಳಲ್ಲಿ ಹುಳು ನುಸಿಗಳದ್ದೇ ಕಾರುಬಾರು

ಭಟ್ಕಳ: ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿನ ಅಪೌಷ್ಠಿಕತೆಯನ್ನು ದೂರಮಾಡಿ ಅವರಲ್ಲಿ ಪೌಷ್ಠಿಕಾಂಶವನ್ನು ತುಂಬಿ ಸದೃಡರನ್ನಾಗಿಸುವ ಉದ್ದೇಶದೊಂದಿಗೆ ಜಾರಿಗೆ ಬಂದಿರುವ ಅಕ್ಷರ ದಾಸೋಹ ಯೋಜನೆಯ ಶಾಲೆಗಳಲ್ಲಿ ಮಧ್ಯಾಹ್ನ ವಿದ್ಯಾರ್ಥಿಗಳಿಗೆ ನೀಡುವ ಬಿಸಿಯೂಟದ ಅಕ್ಕಿ, ಬೇಳೆಕಾಳುಗಳಲ್ಲಿ ಹುಳ, ನುಸಿಗಳು ತುಂಬಿಕೊಂಡಿದ್ದು ವಿದ್ಯಾರ್ಥಿಗಳನ್ನು ಮತ್ತಷ್ಟು ರೋಗಪೀಡಿತರನ್ನಾಗಿಸು ಕಾರ್ಯ ರಾಜ್ಯಾದ್ಯಂತ ಎಗ್ಗಿಲ್ಲದೆ ನಡೆಯುತ್ತಿದ್ದು ಕಳೆದ ಎರಡು ತಿಂಗಳಿನಿಂದ ಭಟ್ಕಳ ತಾಲೂಕಿನ ಗ್ರಾಮೀಣ ಭಾಗದ ಶಾಲೆಗಳಿಗೆ ರೋಗಪೀಡಿತ ಅಕ್ಕಿ, ಬೇಳೆಕಾಳುಗಳು ಪೂರೈಕೆಯಾಗುತ್ತಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದ್ದು ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಣ ಇಲಾಖೆಯನ್ನು ನಿದ್ದೆಗೆಡುವಂತೆ ಮಾಡಿದೆ. 

ಸರ್ಕಾರದ ಬಹುತೇಕ ಯೋಜನೆಗಳು ಸರಿಯಾಗಿ ಅನುಷ್ಠಾನಗೊಳ್ಳುವುದಿಲ್ಲ ಎಂಬ ಕೊರಗು ಒಂದೆಡೆಯಾದರೆ ಅನುಷ್ಠಾನಗೊಂಡ ಯೋಜನೆಗಳು ಅಸಮರ್ಪಕವಾಗಿದ್ದು ಹಲವು ನ್ಯೂನತೆಗಳಿಂದ ಕೂಡಿರುತ್ತವೆ. 

ಸರ್ಕಾರದ ಮಧ್ಯಾಹ್ನದ ಬಿಸಿಯೂಟದ ಯೋಜನೆಯೂ ಸಹ ಆರಂಭದಿಂದಲೂ ಹಲವು ವಿಘ್ನಗಳನ್ನು ಎದುರಿಸುತ್ತ ಬಂದಿದ್ದು ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಅಸುರಕ್ಷತೆಯಿಂದ ಕೂಡಿದೆ ಎಂಬ ಕೂಗು ಸಾರ್ವಜನಿಕರಿಂದ  ಈ ಹಿಂದೆಯೇ ಕೇಳಿಬಂದಿದ್ದು, ಈಗ ತಾಲೂಕಿನ ಗ್ರಾಮೀಣ ಪ್ರದೇಶಗಳ ಶಾಲೆಗಳಿಗೆ ಹುಳಹುಪ್ಪಡಿ ನುಸಿಗಳಿಂದ ತುಂಬಿದ ಆಹಾರ ಧಾನ್ಯಗಳನ್ನು ಪೂರೈಸಲಾಗುತ್ತಿದೆ ಎಂಬ ದೂರು ಪಾಲಕ ವಲಯದಿಂದ ಕೇಳಿಬಂದಿದೆ. 

ಕಳಪೆ ಗುಣಮಟ್ಟದ ಅಕ್ಕಿ, ಬೇಳೆಕಾಳುಗಳು ಪೂರೈಕೆಯಾದ ಬಗ್ಗೆ ಹಲವು ದೂರುಗಳು ಬಂದಿದ್ದು ಅಕ್ಕಿ ಚೀಲ ತೆರೆದುಕೊಂಡರೆ ಸಾಕು ಅದರಿಂದ ಲೆಕ್ಕವಿಲ್ಲದಷ್ಟು ಹುಳಗಳು ಬಾಹ್ಯಲೋಕಕ್ಕೆ ತೆರೆದುಕೊಳ್ಳುತ್ತಿವೆ. ಅದನ್ನು ಶುದ್ಧಗೊಳಿಸಿ ಆಹಾರ ಸಿದ್ಧಗೊಳಿಸುವುದೇ ಅಡುಗೆಯವರಿಗೆ ಸಹಾಸದ ಕೆಲಸವಾಗಿಬಿಟ್ಟಿದೆ. ಹುಳಹುಪ್ಪಡಿಯನ್ನು ಸ್ವಚ್ಛಗೊಳಿಸುವಾಗ ಹತ್ತಾರು ಕೆ.ಜಿ. ತೂಕದ ಅಕ್ಕಿ, ಬೇಳೆಕಾಳುಗಳು ನಷ್ಟಗೊಳ್ಳುತ್ತಿವೆ. ಆದರೆ ಇದನ್ನು ಬಹಿರಂಗವಾಗಿ ಹೇಳು ಮುಂದೆ ಬಾರದ ಕೆಲ ಶಾಲೆಗಳ ಅಡುಗೆಯವರು ಹಾಗೂ ಮುಖ್ಯಾಧ್ಯಾಪಕರು ಮೇಲಾಧಿಕಾರಿಗಳಿಗೆ ಹೆದರಿ ವಿಷಯವನ್ನು ಅಲ್ಲಿಯೆ ಸಮಾಧಿ ಮಾಡುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಕೆಲ ಶಿಕ್ಷಕರು ಮನಸ್ಸು ಮಾಡಿದ್ದರೂ ‘ಇದನ್ನು ಯಾರಲ್ಲಿ ಅಂತ ಹೇಳಿಕೊಳ್ಳುವುದು? ಮಕ್ಕಳಿಗೇನಾದರೂ ತೊಂದರೆಯಾದರೆ, ನಮ್ಮನ್ನೆ ಜವಾಬ್ದಾರರನ್ನಾಗಿಸುತ್ತಾರೆ. ನಮ್ಮ ಮೇಲೆ ಯಾವುದೇ ಕಳಂಕ ಬರಬಾರದು ಎನ್ನುವ ದೃಷ್ಟಿಯಿಂದ ಎಷ್ಟು ಸಾಧ್ಯವೋ ಅಷ್ಟು ಅಡುಗೆ ಕೋಣೆಯನ್ನು ಸ್ವಚ್ಚವಾಗಿಟ್ಟುಕೊಂಡಿದ್ದೇವೆ’ ಎನ್ನುತಾರೆ. ನಾಲ್ಕೈದು ಬಾರಿ ತೊಳೆದರೂ ಅಕ್ಕಿ ಬೇಳೆಯಿಂದ ಹುಳಗಳು ಹೋಗುವುದಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಧಾನ್ಯ ವಿತರಣೆ ಮಾಡುವ ಸಂದರ್ಭದಲ್ಲಿ ತಿಳಿಸಿದರೆ ಬೇಕಾದರೆ ಇಟ್ಟುಕೊಳ್ಳಿ ಇಲ್ಲದಿದ್ದರೆ ವಾಪಸು ಕೊಡಿ ಎಂದು ನಮಗೆ ಹೇಳುತ್ತಾರೆ. ಏನು ಮಾಡಬೇಕು ಎನ್ನುವುದು ತಿಳಿಯದು. ಮಾಧ್ಯಮಗಳ ಮೂಲಕವಾದರೂ ಈ ವಿಷಯ ಬಹಿರಂಗಗೊಂಡರೆ ಸರ್ಕಾರಿ ಶಾಲೆಗಳ ಸಮಸ್ಯೆಯಾದರೂ ಬಗೆ ಹರೆದೀತು ಎಂದು ಹೆಸರು ಹೇಳಲಿಚ್ಚಿಸದೆ ಶಿಕ್ಷಕರೋರ್ವರು ಮಾಧ್ಯಮಗಳಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಲಸ ವಿದ್ಯಾರ್ಥಿಗಳು ಗುಣಮಟ್ಟದ ಆಹಾರ ಪೂರೈಕೆಯಾಗದಿದ್ದಲ್ಲಿ ಮುಂದಿನ ವಾರದಿಂದ ಬಿಸಿಯೂಟ ಸೇವನೆ ಸ್ಥಗಿತಗೊಳಿಸಲು ಮುಂದಾಗಿರುವ ಕುರಿತ ಮಾಹಿತಿಯಿದೆ. 

ಈ ಕುರಿತು ಅಕ್ಷದಾಸೋಹ ಅಧಿಕಾರಿಯಾಗಿರುವ ತಾ.ಪಂ.ಕಾರ್ಯನಿರ್ವಾಣಾಧಿಕಾರಿ ಪ್ರಭಾಕರ್ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದು, ಕಳಪೆ ಗುಣಮಟ್ಟದ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು ಅಕ್ಕಿ ಬೇಳೆ ಸಂಗ್ರಹಣಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಆಹಾರ ಧಾನ್ಯಗಳಿಗೆ ಹುಳ ಹಿಡಿಯದಂತೆ ಮುಂಜಾಗೃತೆ ಕ್ರಮಗಳನ್ನು ಜರಗಿಸಲಾಗುವುದು. ಯಾವುದಾದರೂ ಚೀಲಗಳಿಗೆ ಹುಳ, ನುಸಿ ಹಿಡಿದರೆ ಅದನ್ನು ಪ್ರತ್ಯೇಕವಾಗಿಡುವಂತೆ ಸೂಚಿಸಿದ್ದೇನೆ ಎಂದಿದ್ದಾರೆ. 

ಭಟ್ಕಳ ತಾಲೂಕಿನ ಗ್ರಾಮೀಣ ಭಾಗದ ಶಾಲೆಗಳಲ್ಲಿ ಬಿಸಿಯೂಟದಲ್ಲಿ ಸಮಸ್ಯೆಯ ಕುರಿತಂತೆ ಉತ್ತರಕನ್ನಡ ಜಿಲ್ಲಾ ಉಪನಿರ್ದೇಶಕ ಜಿ.ಎನ್.ನಾಯಕರನ್ನು ಸಂಪರ್ಕಿಸಿದಾಗ ‘ಭಟ್ಕಳ ತಾಲೂಕಿನ ಬಿಸಿಯೂಟದಲ್ಲಿ ಹುಳಹುಪ್ಪಡಿಗಳ ಸಮಸ್ಯೆ ಕುರಿತಂತೆ ಇದುವರೆಗೆ ಯಾವುದೇ ಅಧಿಕೃತ ದೂರು ಬಂದಿಲ್ಲ. ಹೊನ್ನಾವರ ಕುಮಟಾ ತಾಲೂಕಿನ ಶಾಲೆಗಳನ್ನು ಸಂದರ್ಶಿಸಿದಾಗ ನನಗೇನು ಅಂತಹ ಸಮಸ್ಯೆ ಕಂಡುಬಂದಿಲ್ಲ. ಇಂದು(ಶುಕ್ರವಾರ) ಹೊನ್ನಾವರ ತಾಲೂಕಿನ ಗ್ರಾಮೀಣ ಪ್ರದೇಶವಾಗಿರುವ ಗುಣವಂತೆಯ ಕರಾವಳಿ ಶಾಲೆಗೆ ಭೇಟಿ ನೀಡಿ ಅಲ್ಲಿನ ಬಿಸಿಯೂಟವನ್ನು ಮಾಡಿಬಂದಿದ್ದೇನೆ. ಅಲ್ಲಿಯೂ ಯಾವುದೇ ರೀತಿಯ ಸಮಸ್ಯೆಯಿಲ್ಲ. ಕುಮಟಾ ತಾಲೂಕಿನಲ್ಲಿ ತೊಗರಿಬೇಳೆ ಸರಿಯಿಲ್ಲ ಎಂಬುದು ಗೊತ್ತಾಗಿ ಅದನ್ನು ಮರಳಿ ಬೇರೆ ತೊಗರಿಬೇಳೆಯನ್ನು ತರಿಸಿ ವಿತರಿಸಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ’ 

ಭಟ್ಕಳ ಕ್ಷೇತ್ರಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ ಪ್ರತಿಕ್ರಿಯೆ ನೀಡಿದ್ದು, ‘ಕೆಲವು ಕಡೆ ಹಳೆ ಚೀಲಗಳನ್ನು ಬಳಸಿದ್ದಾರಿಂದಾಗಿ ಅಕ್ಕಿ ಬೇಳೆಗಳಲ್ಲಿ ನುಸಿ ಕಾಣಿಸಿಕೊಳ್ಳುವ ಸಾಧ್ಯತೆಗಳಿದ್ದು ಅಂತಹದ್ದನ್ನು ಕಂಡು ಬಂದಲ್ಲಿ ಕೂಡಲೇ ಅದನ್ನು ಮರಳಿಸುವಂತೆ ತಾಲೂಕಿನ ಎಲ್ಲ ಮುಖ್ಯಾಧ್ಯಾಪಕರಿಗೆ ಸೂಚಿಸಲಾಗಿದೆ’. ಎಂದು ತಿಳಿಸಿದ್ದಾರೆ. 
 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...