ಯಾರಿಗೆ ಒಲಿಯಲಿದೆ ಭಟ್ಕಳ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆ? ಇಲ್ಲಿನ ತಂಝೀಮ್ ನಿರ್ಣಯವೇ ಅಂತಿಮ

Source: sonews | By Staff Correspondent | Published on 12th October 2020, 7:19 PM | Coastal News | Don't Miss |

ಭಟ್ಕಳ: ಭಟ್ಕಳ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ಅಧಿಸೂಚನೆ ಹೊರಬಿದ್ದಿದ್ದು, ಎರುಡೂ ಹುದ್ದೆಗಳು ಸಾಮಾನ್ಯ ವರ್ಗದ ಪಾಲಾಗಿವೆ. 

ಈ ಹಿಂದೆ ಅಧ್ಯಕ್ಷ ಸ್ಥಾನವನ್ನು ಕ್ರೈಸ್ತ ಸಮುದಾಯದ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಎಂಬ ಅಧಿಸೂಚನೆ ಬಂದಿತ್ತಾದರೂ, ಹಲವು ಆಕ್ಷೇಪಣೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯದರ್ಶಿ ಎ. ವಿಜಯಕುಮಾರ್ ಹೊಸ ಅಧಿಸೂಚನೆಯನ್ನು ಹೊರಡಿಸುವುದರ ಮೂಲಕ ಇಲ್ಲಿ ಎರಡೂ ಹುದ್ದೆಗಳು ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟಿದ್ದಾರೆ. 
ಭಟ್ಕಳ ಪುರಸಭೆಯಲ್ಲಿ ಒಟ್ಟು 23 ಸದಸ್ಯರಿದ್ದ, 15 ಕ್ಕೂ ಹೆಚ್ಚು ಸದಸ್ಯರು ಇಲ್ಲಿನ ಸಾಮಾಜಿಕ ಮತ್ತು ರಾಜಕೀಯ  ಸಂಸ್ಥೆ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಬೆಂಬಲದೊಂದಿಗೆ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. 

ಪುರಸಭೆಯ ಹಲವು ಮಹತ್ವದ ನಿರ್ಣಯಗಳು ಮೊದಲು ತಂಝೀಮ್ ಕಾರ್ಯಾಲಯದಲ್ಲಿ ಕೈಗೊಂಡು ಬಳಿಕ ಪುರಸಭೆಯಲ್ಲಿ ಅನುಮೂದನೆ ಪಡೆದುಕೊಳ್ಳಲಾಗುತ್ತದೆ. ಇದು ತಂಝೀಮ್ ಸಂಸ್ಥೆಯು ತನ್ನ ಭಟ್ಕಳ ಪುರಸಭೆಯ ಮೇಲೆ ಹೊಂದಿರುವ ಪ್ರಾಭಲ್ಯವನ್ನು ಎತ್ತಿತೋರಿಸುತ್ತದೆ. 

ಸದಸ್ಯರ ಆಯ್ಕೆಯಿಂದ ಹಿಡಿದು ಅಧ್ಯಕ್ಷ ಉಪಾಧ್ಯಕ್ಷ ಮತ್ತಿತರ ಹುದ್ದೆಗಳನ್ನು ಯಾರಿಗೆ ನೀಡಬೇಕು ಎಂಬ ವಿಷಯದ ವರೆಗೆ ಎಲ್ಲ ನಿರ್ಣಯಗಳು ತಂಝೀಮ್ ಕಾರ್ಯಲಯದಲ್ಲಿ ಕೈಗೊಳ್ಳಲಾಗುತ್ತದೆ. 

ಸಧ್ಯದ ಪರಿಸ್ಥಿತಿಯಲ್ಲಿ ಸಾಮಾನ್ಯ ವರ್ಗದಿಂದ ಆಯ್ಕಗೊಂಡಿರುವ ಈ ಹಿಂದೆ ಪುರಸಭೆಯ ಅಧ್ಯಕ್ಷರಾಗಿ ಅನುಭವ ಹೊಂದಿರುವ ಪರ್ವೇಝ್ ಕಾಸಿಮಜಿ ಹಾಗೂ ತಂಝೀಮ್ ಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್ ಅಲ್ತಾಫ್ ಖರೂರಿಯ  ಹೆಸರು ಜನರಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. 

ತಂಝೀಮ್ ಸಂಸ್ಥೆಯಲ್ಲಿ ಪ್ರಮುಖ ಎರಡು ಬಣಗಳಿದ್ದು, ಜನತಾದಳ ತಾಲೂಕಾಧ್ಯಕ್ಷ ಇನಾಯತುಲ್ಲ ಶಾಬಂದ್ರಿ ಹಾಗೂ ಕಾಂಗ್ರೇಸ್ ಸಿದ್ಧಾಂತವನ್ನು ಒಪ್ಪಿಕೊಂಡಿರುವ ಸದಸ್ಯರ ಮತ್ತೊಂದು ಬಣ. ಪರ್ವೇಝ್ ಕಾಶಿಮಜಿ ಕಾಂಗ್ರೇಸ್ ಬಣದಲ್ಲಿ ಗುರುತಿಸಿಕೊಂಡರೆ ಅಲ್ತಾಫ್ ಖರೂರಿ ಜನತಾದಳದ ಬಣದೊಂದಿಗೆ ಗುರುತಿಸಿಕೊಳ್ಳುತ್ತಾರೆ. ಈರ್ವರ ಬಣವು ತಂಝೀಮ್ ಸಂಸ್ಥೆಯಲ್ಲಿ ಪ್ರಾಭಲ್ಯತೆ ಪಡೆದುಕೊಂಡಿದ್ದು ಯಾರು ಅಧ್ಯಕ್ಷರಾಗುತ್ತಾರೆ ಎಂದು ನಿಖರವಾಗಿ ಹೇಳುವುದು ಕಷ್ಠವಾಗುತ್ತದೆ ಎಂದು ಹೆಸರು ಹೇಳಲಿಚ್ಚಿಸದ ತಂಝೀಮ್ ಸದಸ್ಯ ಮಾಹಿತಿ ನೀಡಿದ್ದಾರೆ. ಅದಾಗ್ಯೂ ಪರ್ವೇಝ್ ಕಾಶಿಮಜಿ ಹೆಚ್ಚು ಅನುಭವಿ ಹಾಗೂ ಉತ್ತಮ ಆಡಳಿತಗಾರನಾಗಿದ್ದು ಹೆಚ್ಚಿನ ಸದಸ್ಯರ ಒಲವು ಇವರ ಕಡೆಗೆ ಇದೆ ಎಂದೂ ಹೇಳಲಾಗುತ್ತಿದೆ. 

ಪುರಸಭೆಯಲ್ಲಿನ ಕೆಲ ಹಿರಿಯ ಸದಸ್ಯರೂ ಕೂಡ ತಾವೇಕೆ ಅಧ್ಯಕ್ಷರಾಗುವ ಭಾಗ್ಯವನ್ನು ಪಡೆದುಕೊಳ್ಳಬಾರದು? ಅವಕಾಶ ಸಿಕ್ಕರೆ ನೋಡೋಣ ಎನ್ನುವವರು ಇದ್ದಾರೆ. ಅಬ್ದುಲ್ ರವೂಫ್ ನಾಯತೆ ಮತ್ತು ಕೈಸರ್ ಮೊಹತಾಶಮ್  ಎನ್ನುವವರು ಅಧ್ಯಕ್ಷ ಗಾದಿಯ ಓಟದಾಟದಲ್ಲಿ ಶಾಮಿಲಾಗುವ ಸಾಧ್ಯತೆಗಳು ಇವೆ. ಈ ಬಾರಿ ಒಂಬತ್ತು ಮುಸ್ಲಿಂ ಮಹಿಳೆಯರನ್ನು  ತಂಝೀಮ ಸಂಸ್ಥೆ ಬೆಂಬಲಿಸಿ ಗೆಲ್ಲಿಸಿದೆ. ಇವರಲ್ಲಿ ಓರ್ವ ಮಹಿಳಾ ಸದಸ್ಯೆ ಅಧ್ಯಕ್ಷಗಿರಿಯ ಓಟದಲ್ಲಿ ಭಾಗವಹಿಸಬಹುದು ಎಂಬ ಅನುಮಾನವನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ಭಟ್ಕಳದ ಪುರಸಭೆಯ ಅಧ್ಯಕ್ಷರ ಗಾದಿಯನ್ನು ಹತ್ತಲು ಆಸಕ್ತ ಸದಸ್ಯರು ತಂಝೀಮ್ ಕಡೆ ಮುಖ ಮಾಡಿದ್ದಾರೆ. ಅಚಿತಿಮ ನಿರ್ಣಯ ಮಾತ್ರ ತಂಝೀಮ್ ಸಂಸ್ಥೆ ತೆಗೆದುಕೊಳ್ಳಲಿದ್ದು ಪುರಸಭೆಯ ಅಧ್ಯಕ್ಷಗಿರಿ ಅನುಭವಸ್ಥರಿಗೆ ಒಲಿದು ಬರುತ್ತದೋ ಅಥವಾ ತಂಝೀಮ್ ಮತ್ತಾರಿಗೂ ಮಣೆ ಹಾಕುತ್ತದೋ ಎಂಬುದನ್ನು ಕಾದು ನೋಡಬೇಕಾಗಿದೆ.   
 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...