ಭಟ್ಕಳ: ಗುಡುಗು ಮಿಂಚಿನ ಮಳೆ ಕೈಕೊಡುತ್ತಿರುವ ವಿದ್ಯುತ್ ಎರಡು ದಿನಗಳಿಂದ ರಾತ್ರಿ ನಿದ್ರೆ ಮಾಡದ ಜನತೆ

Source: sonews | By Staff Correspondent | Published on 31st May 2020, 8:08 PM | Coastal News | Don't Miss |

ಭಟ್ಕಳ: ಕಳೆದ ಎರಡು ದಿನಗಳಿಂದ ಭಟ್ಕಳದಲ್ಲಿ ಗುಡುಗು ಸಹಿತ ಮಳೆಯಾಗುತ್ತಿದ್ದು ಹೆಸ್ಕಾಂ ಇಲಾಖೆ ಪದೇ ಪದೇ ವಿದ್ಯುತ್ ಕಡಿತಗೊಳಿಸುತ್ತಿದೆ. ರಾತ್ರಿ ಸಮಯದಲ್ಲಿ ಕಳೆದ ಎರಡು ದಿನಗಳಿಂದ ವಿದ್ಯುತ್ ಕೈಕೊಡುತ್ತಿರುವ ಪರಿಣಾಮ ಭಟ್ಕಳದಲ್ಲಿ ರಾತ್ರಿಯ ನಿದ್ರೆಯನ್ನು ಕಳೆದುಕೊಂಡು ವಿದ್ಯುತ್ ಗೆ ಹಿಡಿ ಶಾಪ ಹಾಕುತ್ತಿದ್ದಾರೆ. 

ರವಿವಾರ ಬೆಳಗಿನ ಜಾವದಲ್ಲಿ ಭಾರೀ ಗಾಳಿ ಮಳೆಯಾಗಿದೆ. ರವಿವಾರ ಬೆಳಿಗ್ಗೆಯ ತನಕ 24 ಗಂಟೆಗಳಲ್ಲಿ 34.6 ಮಿ.ಮಿ. ಮಳೆಯಾಗಿದ್ದರೆ, ಇಲ್ಲಿಯ ತನಕ ಒಟ್ಟೂ 138.8 ಮಿ.ಮಿ. ಮಳೆಯಾಗಿದೆ.  

ದೇಶದೆಲ್ಲೆಡೆ ಕೊರೊನಾ ಲಾಕ್‍ಡೌನ್ ಜ್ಯಾರಿಯಲ್ಲಿದ್ದರೂ ಸಹ ಈ ಹಿಂದೆಯೇ ರಾಜ್ಯ ಸರಕಾರ ಕೃಷಿ ಚಟುವಟಿಕೆಗೆ ಅವಕಾಶ ಮಾಡಿಕೊಟ್ಟಿತ್ತು. ರೈತರು ತಮ್ಮ ಭೂಮಿಯನ್ನು ಹದ ಮಾಡುವುದು, ಬೀಜ ಸಂಗ್ರಹಿಸುವುದು ಮಾಡುತ್ತಲೇ ಇದ್ದು ಇಂದು ಬಂದ ಮಳೆ ಬೀಜ ಬಿತ್ತಲು ಉತ್ತಮ ಅವಕಾಶ ಮಾಡಿಕೊಟ್ಟಿದ್ದು ರೈತರ ಮೊಗದಲ್ಲಿ ಮಂದಹಾಸ ಬೀರಿದೆ. ಈ ಹಿಂದೆ ಎಪ್ರಿಲ್ ತಿಂಗಳಿನಲ್ಲಿ ಉತ್ತಮ ಮಳೆಯಾಗಿತ್ತಾದರೂ ರೈತರಿಗೆ ಅನುಕೂಲವಾಗಿಲ್ಲವಾಗಿತ್ತು.  ಆದರೆ ಮೇ ತಿಂಗಳ ಕೊನೆಯಲ್ಲಿ ಬಂದ ಮಳೆ ಮಾತ್ರ ರೈತರಿಗೆ ಬೀಜ ಬಿತ್ತನೆಗೆ ಅನುಕೂಲ ಮಾಡಿಕೊಟ್ಟಿದ್ದು ಇಂದಿನಿಂದಲೇ ಕೃಷಿ ಚಟುವಟಿಕೆ ಚುರುಕುಗೊಂಡಿದೆ. 

ಕಳೆದ ಎರಡು ದಿನಗಳಿಂದ ಗುಡುಗು ಸಿಡಿಲು ಸಹಿತ ಮಳೆಯಾಗುತ್ತಿದ್ದು ರವಿವಾರ ಬೆಳಿಗ್ಗೆ ಸಿಡಿಲಿನ ಅಬ್ಬರಕ್ಕೆ ಶಿರಾಲಿಯಲ್ಲಿನ ಒಂದು ಮನೆಗೆ ಸ್ವಲ್ಪ ಹಾನಿಯಾಗಿದ್ದರೂ ಸಹ ಮನೆಯಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ. 

ಕೈಕೊಟ್ಟ ವಿದ್ಯುತ್: ಕಳೆದ ಎರಡು ದಿನಳಿಂದ ರಾತ್ರಿ ಹೋದ ವಿದ್ಯುತ್ ಬೆಳಿಗ್ಗೆಯಾದರೂ ಬಾರದೇ ನಾಗರೀಕರು ತೀವ್ರ ಪರದಾಡುವಂತಾಯಿತು. ತೀವ್ರ ಸೆಖೆಯಿದ್ದ ಕಾರಣ ಬಿದ್ದ ಮಳೆಯು ತಂಪೆರೆಲು ಸಾಧ್ಯವಿಲ್ಲವಾಗಿತ್ತು. ಆದರೆ ತಡ ರಾತ್ರಿ ಹೋದ ವಿದ್ಯುತ್ ಬೆಳಿಗ್ಗೆಯಾದರೂ ಬಾರದೇ ಇರುವುದರಿಂದ ನಾಗರೀಕರು ತೀವ್ರ ತೊಂದರೆ ಪಡುವಂತಾಯಿತು. ಶುಕ್ರವಾರ ತಡರಾತ್ರಿ ಕೈಕೊಟ್ಟ ವಿದ್ಯುತ್ ಶನಿವಾರ ಬೆಳಿಗ್ಗೆ 9 ಗಂಟೆಯ ನಂತರ ಬಂದರೆ ಶನಿವಾರ ತಡರಾತ್ರಿ ಹೋದ ವಿದ್ಯುತ್ ರವಿವಾರ ಬೆಳಿಗ್ಗೆ ಬಂದಿದೆ.  ಭಟ್ಕಳದಲ್ಲಿ ಕಳೆದ ಸುಮಾರು ಹತ್ತು ವರ್ಷದಿಂದ 110 ಕೆ.ವಿ. ಲೈನ್ ಮಂಜೂರಿಯಾಗಿದ್ದರೂ ಸಹ ಅದರ ಕಾರ್ಯ ಮಾತ್ರ ಆಗುತ್ತಿಲ್ಲ. ಇದಕ್ಕೆ ಮೊದ ಮೊದಲು ಅರಣ್ಯ ಇಲಾಖೆಯಿಂದ ಜಾಗಾ ಮಂಜೂರಿಯಾಗಿಲ್ಲ ಎನ್ನುವ ಸಬೂಬು ಹೇಳಿದರೆ, ನಂತರ ಲೈನ್ ಎಳೆಯಲು ಅರಣ್ಯ ಇಲಾಖೆಯ ಪರವಾನಿಗೆ ಕೊಟ್ಟಿಲ್ಲ ಎನ್ನುವ ಸಬೂನು ಕೇಳಿ ಬಂದಿತ್ತು. ಆದರೆ ಅವೆಲ್ಲವೂ ಮಂಜೂರಿಯಾಗಿದೆ ಎಂದು ತಿಳಿದು ಬಂದಿದ್ದರು ಸಹ ಗ್ರಿಡ್‍ನಲ್ಲಿ ಕಾರ್ಯ ಮಾತ್ರ ಆರಂಭವಾಗದಿರುವುದಕ್ಕೆ ಕಾರಣ ಮಾತ್ರ ತಿಳಿದಿಲ್ಲ.  ಭಟ್ಕಳಕ್ಕೆ ಕುಮಟಾ-ಹೊನ್ನಾವರದ ಮೂಲಕ 110 ಕೆ.ವಿ. ಲೈನ್ ಬರಬೇಕಿದ್ದು ದಟ್ಟ ಅರಣ್ಯದ ನಡುವೆ ವಿದ್ಯುತ್ ಲೈನ್ ಬಂದಿದ್ದರಿಂದ ಗುಡುಗು ಸಿಡಿಲಿಗೆ ಅಲ್ಲಲ್ಲಿ ಲೈನ್ ಹಾಳಾಗುತ್ತಲೇ ಇರುತ್ತದೆ.  ಪ್ರತಿ ವರ್ಷವೂ ಕೂಡಾ ಈ ಗೋಳು ಜನತೆಗೆ ತಪ್ಪಿದ್ದಲ್ಲ. ಆದರೂ ಕೂಡಾ 110 ಕೆ.ವಿ.ಲೈನ್ ಕುರಿತು ಇಲ್ಲಿಯ ತನಕ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಯಾವುದೇ ಮುತುವರ್ಜಿ ವಹಿಸಿದಂತೆ ಕಾಣುತ್ತಿಲ್ಲ. ವಿದ್ಯುತ್ ಹೋದ ತಕ್ಷಣ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ದೂರುವುದು, ಬೈಯುವುದು ಸಾಮಾನ್ಯವಾಗಿದ್ದು ಮುಂದಾಗಿ 110 ಕೆ.ವಿ. ಸ್ಟೇಶನ್ ಸ್ಥಾಪನೆಗೆ ಯಾರೂ ಕೂಡಾ ಹೋರಾಟ ಮಾಡುತ್ತಿಲ್ಲ ಎನ್ನುವುದು ಮಾತ್ರ ಬೇಸರದ ಸಂಗತಿಯಾಗಿದೆ. ಭಟ್ಕಳದಲ್ಲಿ 110 ಕೆ.ವಿ. ವಿದ್ಯುತ್ ಕೇಂದ್ರ ಸ್ಥಾಪನೆಯಾದರೆ ಪರ್ಯಾಯವಾಗಿ ನಾವುಂದ ದಿಂದ ಲೈನ್ ಪಡೆಯಲು ಕೂಡಾ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು ಎರಡೂ ಕೆಲಸಗಳು ಎಕ ಕಾಲದಲ್ಲಿ ಆಗಬೇಕಾಗಿದ್ದು ಬೆಕ್ಕಿಗೆ ಗಂಟೆ ಕಟ್ಟುವವರ್ಯಾರು ಎನ್ನುವ ಪ್ರಶ್ನೆ ಇಲ್ಲಿ ಎದುರಾಗಿದೆ. 
 

Read These Next

ಕೋವಿಡ್-19 ತಡೆಗಟ್ಟಲು ವರ್ಗಾವಣೆ ಮಾಡಿದರೂ ಪರವಾಗಿಲ್ಲ ಕಠಿಣ ಕ್ರಮ ಕೈಗೊಂಡು ಕೊರೊನ ನಿಯಂತ್ರಿಸಲು ಪ್ರಯತ್ನಿಸುತ್ತೇನೆ : ತಹಶೀಲ್ದಾರ ಮುಂದಲಮನಿ

ಮುಂಡಗೋಡ : ನನ್ನನ್ನು ಇಲ್ಲಿಂದ ವರ್ಗಾವಣೆ ಮಾಡಿದರು ಪರವಾಗಿಲ್ಲ ಕೋವಿಡ್ 19 ನಿಯಂತ್ರಣಕ್ಕೆ ನಾನು ಕಠಿಣ ಕ್ರಮ ಕೈಗೊಳ್ಳುತ್ತೇನೆ. ...