ಭಟ್ಕಳ: ಜಿಲ್ಲೆಯ ದೊಡ್ಡ ಪಂಚಾಯತ ಹಿರಿಮೆಯ ಶಿರಾಲಿಯಲ್ಲಿ 2 ಕುಟುಂಬದ ನಡುವಿನ ರಾಜಕೀಯ ಕಾಳಗಕ್ಕೆ ಕೊನೆ ಇಲ್ಲ !

Source: S O News service | By V. D. Bhatkal | Published on 12th December 2020, 8:25 PM | Coastal News | Special Report |

ಭಟ್ಕಳ: ಉತ್ತರಕನ್ನಡ ಜಿಲ್ಲೆಯಲ್ಲಿ 35 ಸದಸ್ಯರು ಇರುವ ಶಿರಾಲಿ ಗ್ರಾಮ ಪಂಚಾಯತ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯತ ಎಂಬ ಹಿರಿಮೆಗೆ ಪಾತ್ರವಾಗಿದೆ. ಇಲ್ಲಿ ಗ್ರಾಮ ಪಂಚಾಯತ ಚುನಾವಣೆ ಎಂದರೆ ಅಕ್ಷರಶಃ ಎರಡು ಕುಟುಂಬದವರ ನಡುವಿನ ರಾಜಕೀಯ ಕಾದಾಟ! 

2011ರ ಜನಗಣತಿಯ ಪ್ರಕಾರ ಶಿರಾಲಿಯಲ್ಲಿ 6930 ಗಂಡಸರು ಹಾಗೂ 6969 ಹೆಂಗಡಸರು ಸೇರಿದಂತೆ ಒಟ್ಟೂ 13899 ಜನಸಂಖ್ಯೆ ಇದ್ದು, ಕೃಷಿ, ಕೂಲಿ, ಮೀನುಗಾರಿಕೆ, ವ್ಯಾಪಾರ ಈ ಭಾಗದ ಜನರ ಪ್ರಮುಖ ಉದ್ಯೋಗವಾಗಿದೆ. ನಾವು ಶಿರಾಲಿ ಗ್ರಾಮ ಪಂಚಾಯತ ಪ್ರದೇಶವನ್ನು ಸುತ್ತಿ ಬಂದರೆ ಧಾರ್ಮಿಕವಾಗಿಯೂ ಶ್ರೀಮಂತ ಪ್ರದೇಶವಾಗಿರುವುದು ಗೋಚರಿಸುತ್ತದೆ. ರಾಮಾಯಣದ ಕಥೆ ಹೇಳುವ ಪಂಚವಟಿ ಶಿರಾಲಿ ವ್ಯಾಪ್ತಿಯಲ್ಲಿದೆ. ಇತಿಹಾಸ ಪ್ರಸಿದ್ಧ ಶಂಭುಲಿಂಗೇಶ್ವರ ದೇವಸ್ಥಾನ ಇಲ್ಲಿಯೇ ಇದೆ. ಒಂದು ಕಾಲದಲ್ಲಿ ಇದು ಬ್ರಾಹ್ಮಣರ ಅಗ್ರಹಾರ ಎಂದೇ ಪ್ರಚಲಿತದಲ್ಲಿತ್ತು. ಶಂಕರಾಚಾರ್ಯರ ಶಿಷ್ಯ ಹಸ್ತಕಲಾಮಲಕ ಇಲ್ಲಿ ಬಂದು ಹೋಗಿರುವ ಬಗ್ಗೆ ಪ್ರತೀತಿ ಇದೆ. ಪೂರ್ವದಲ್ಲಿ ಪ್ರಸಿದ್ಧ ಚಿತ್ರಾಪುರ ಮಠ, ಉತ್ತರದಲ್ಲಿ ಕೋಟೆ ಶ್ರೀ ಹನುಮಂತ, ಪಶ್ಚಿಮದಲ್ಲಿ ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ, ದಕ್ಷಿಣದಲ್ಲಿ ವೆಂಕಟಾಪುರ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ಕಂಚಿನ ಶ್ರೀ ದುರ್ಗಾಪರಮೇಶ್ವರಿ, ಬೆದ್ರೊಳ್ಳಿ ಮಹಾಸತಿ, ಶಿರಾಲಿ ಕೇಂದ್ರ ಭಾಗದಲ್ಲಿ ಜಿಎಸ್‍ಬಿ ಸಮಾಜದ ಮಹಾಮ್ಮಾಯಿ ಮಹಾಗಣಪತಿ, ಶ್ರೀ ಮಾರುತಿ, ಹಾದಿಮಾಸ್ತಿ ದೇವಸ್ಥಾನಗಳಿದ್ದು, ಇಲ್ಲಿನ ಧಾರ್ಮಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ. ಸಣಬಾವಿಯಲ್ಲಿ ಕ್ರಿಶ್ಚಿಯನ್ನರ ಚರ್ಚ ಇದ್ದರೆ, ತಟ್ಟಿಹಕ್ಕಲ್‍ನಲ್ಲಿ ಮುಸ್ಲೀಮರ ಮಸೀದಿಗಳೂ ಇವೆ.

2 ಕುಟುಂಬದ ನಡುವಿನ ಕಾಳಗ:
 ರಾಜಕೀಯ ವಿಷಯಕ್ಕೆ ಬಂದರೆ ಶಾಸಕ ಸುನಿಲ್ ನಾಯ್ಕ ಅವರ ಮನೆ ಶಿರಾಲಿ ಪೇಟೆಯ ಸನಿಹದಲ್ಲಿಯೇ ಇದೆ. ತಾಲೂಕು ಪಂಚಾಯತ ಅಧ್ಯಕ್ಷರಾಗಿದ್ದ ಕೆ.ಎನ್.ನಾಯ್ಕ ಸಹ ಇದೇ ಶಿರಾಲಿ ಚಿತ್ರಾಪುರದವರು. ಪಂಚಾಯತ ಅಧ್ಯಕ್ಷರಾಗಿ ಪಂಚಾಯತ ಆಡಳಿತದ ಮೇಲೆ ಹಿಡಿತ ಸಾಧಿಸಿದವರು. ಅವರದ್ದೇ ಸಹೋದರ ವೆಂಕಟೇಶ ನಾಯ್ಕ ಪಂಚಾಯತದ ನಿಕಟ ಪೂರ್ವ ಅಧ್ಯಕ್ಷರಾಗಿದ್ದಾರೆ. ಶಾಸಕ ಸುನಿಲ್ ನಾಯ್ಕರ ತಂದೆ ಬಿ.ಕೆ.ನಾಯ್ಕ ಸಹ ಈ ಹಿಂದೆ 2 ಬಾರಿ ಪಂಚಾಯತ ಅಧ್ಯಕ್ಷರಾಗಿ ಕೆಲಸ ಮಾಡಿದವರು. ಹಾಗೆ ನೋಡಿದರೆ ಶಿರಾಲಿ ಪಂಚಾಯತ ಅಧಿಕಾರಕ್ಕಾಗಿ ಕೆ.ಎನ್.ನಾಯ್ಕ ಹಾಗೂ ಬಿ.ಕೆ.ನಾಯ್ಕ (ಈಗ ಶಾಸಕ ಸುನಿಲ್ ನಾಯ್ಕ) ಕುಟುಂಬದ ರಾಜಕೀಯ ಸೆಣಸಾಟ ಇಂದು ನಿನ್ನೆಯದ್ದಲ್ಲ. ಅಪ್ಪಿತಪ್ಪಿ ಮೀಸಲಾತಿಯಿಂದಾಗಿ ಯಾರೇ ಅಧ್ಯಕ್ಷ, ಉಪಾಧ್ಯಕ್ಷ ಪಟ್ಟ ಏರಿದರೂ ಕುರ್ಚಿಯ ಹಿಂದಿನ ಗಾಡ್‍ಫಾದರ್‍ಗಳು ಇದೇ ಎರಡು ಕುಟುಂಬದವರು ಎನ್ನುವುದು ಶಿರಾಲಿಯ ಪ್ರತಿಯೊಬ್ಬ ವ್ಯಕ್ತಿಗೂ ಗೊತ್ತು. ನೆಪ ಮಾತ್ರಕ್ಕಷ್ಟೇ ಪಕ್ಷಪಂಗಡದ ಧಿರಿಸುಗಳು! ಈಗಲೂ ಜಿಲ್ಲೆಯ ದೊಡ್ಡ ಪಂಚಾಯತ ಎಂದೇ ಪ್ರಸಿದ್ಧಿ ಪಡೆದಿರುವ ಶಿರಾಲಿ ಪಂಚಾಯತನಲ್ಲಿ ಒಂದು ಕಡೆ ಮಾಜಿ ಶಾಸಕ ಮಂಕಾಳು ನಾಮ ಬಲದೊಂದಿಗೆ ಕೆ.ಎನ್.ನಾಯ್ಕ ಸಹೋದರ ವೆಂಕಟೇಶ ನಾಯ್ಕ ಬಿಲ್ಲು ಬಾಣ ಧರಿಸಿ ಹೊರಟರೆ, ಇನ್ನೊಂದು ಕಡೆ ಬಿ.ಕೆ.ನಾಯ್ಕರ ಪುತ್ರ ಶಾಸಕ ಸುನಿಲ್ ನಾಯ್ಕ, ಅವರ ಸಹೋದರ ಸಿದ್ಧಾರ್ಥ ನಿಂತು ಕತ್ತಿ ಝಳಪಿಸುತ್ತಲೇ ಇದ್ದಾರೆ. ಫಲಿತಾಂಶದ ಲೆಕ್ಕ ಅಷ್ಟು ಸುಲಭವಾಗಿಲ್ಲ. 

ಪಂಚಾಯತ ಒಡೆಯುವ ಕೂಗಿಗೆ ಬಲವಿಲ್ಲ:
ಶಿರಾಲಿ ಗ್ರಾಮ ಪಂಚಾಯತ ದೊಡ್ಡ ಪಂಚಾಯತ ಆಗಿರುವುದರಿಂದ ಇದನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ 2005ರ ಹೊತ್ತಿಗೇ ಚರ್ಚೆ ಆರಂಭವಾಗಿತ್ತು. ಆದರೆ ಕೆ.ಎನ್.ನಾಯ್ಕ ಮತ್ತಿತತರು ಮುಂದೆ ನಿಂತು ವಿರೋಧ ವ್ಯಕ್ತಪಡಿಸಿದ್ದರು. ನಂತರವೂ ಚರ್ಚೆ ಮುಂದುವರೆದುಕೊಂಡೇ ಇದೆ. ಶಿರಾಲಿಯಲ್ಲಿ ಬಡವರು ಹೆಚ್ಚಾಗಿರುವುದರಿಂದ ಮನೆ, ಅಂಗಡಿ ಕರಗಳು ಹೆಚ್ಚಳವಾಗಿ ಕಷ್ಟವಾಗಬಹುದು ಎಂಬ ಭೀತಿಯೇ ಇದಕ್ಕೆ ಕಾರಣವಾಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಪಂಚಾಯತ ಹಿರಿಯ ಸದಸ್ಯ ಎ.ಬಿ.ಡಿ. ಕೊಸ್ತಾ. ಸದ್ಯ ಪಂಚಾಯತ ಸದಸ್ಯರ ಸಂಖ್ಯೆ 35 ಆಗಿದೆ. ಈಗ ವಿಭಜನೆ ಮಾಡಬಹುದಲ್ಲ ಎಂದು ಕೇಳಿದರೆ, ಮತ್ತೆ 2 ಅವಧಿ ಕಳೆಯಲಿ, ಮುಂದೆ ನೋಡಿದರಾಯಿತು ಎಂದು ಮುಗುಮ್ಮಾಗಿ ಉತ್ತರಿಸುತ್ತಾರೆ. 

Read These Next

ಕಾರವಾರ: ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೂಚನೆ

ಮುಂದಿನ ಎರಡು ವರ್ಷದೊಳಗಾಗಿ ಜಿಲ್ಲೆಯಲ್ಲಿರುವ ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದ್ದು, ...

ಭಟ್ಕಳ: ತೆವಳುತ್ತಲೇ ಸಾಗಿದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ; ಉದ್ಘಾಟನೆ ಮುಗಿದರೂ ಕೆಲಸ ಮುಗಿಯಲೇ ಇಲ್ಲ

ಯಾವುದೇ ದೇಶ, ರಾಜ್ಯ ಆಗಿರಲಿ, ಸುಸಜ್ಜಿತ ರಸ್ತೆ ಎನ್ನುವುದು ಅಭಿವೃದ್ಧಿಯ ಸಂಕೇತವಾಗಿದೆ. ಅದರಲ್ಲಿಯೂ ಹೆದ್ದಾರಿಗಳು ಆಧುನಿಕತೆಯ ...

ಭಟ್ಕಳ ಮಿನಿ ವಿಧಾನಸೌಧದಲ್ಲಿ ಕಲ್ಲೇರಿ ನಿಂತರಷ್ಟೇ ಕೆಲಸ ! ಮರಿಪುಢಾರಿಗಳ ಕಾಟ ತಾಳಲಾರದೆ ಒಳಗಡೆಗೂ ಬಿದ್ದಿದೆ ಬೀಗ; ಸದ್ದಿಲ್ಲದೇ ಸೊರಗುತ್ತಿದೆ ಕನಸಿನ ಸೌಧ

ಇದು ಜನರ ಅಲೆದಾಟವನ್ನು ತಪ್ಪಿಸಿ ಒಂದೇ ಸೂರಿನಡಿ ಜನರಿಗೆ ಸೇವೆ ನೀಡಲು ರು.10ಕೋ.ಗೂ ಅಧಿಕ ಹಣವನ್ನು ವ್ಯಯಿಸಿ ಕಟ್ಟಲಾದ ಭಟ್ಕಳ ಮಿನಿ ...

ಜಾನುವಾರು ಸಾಗಾಟಕ್ಕೆ ನಿರಂತರ ತಡೆ ಹಿನ್ನೆಲೆ; ಬಕ್ರೀದ್ ಹಬ್ಬಕ್ಕಾಗಿ ಭಟ್ಕಳಕ್ಕೆ ಬಂದ ಸಾವಿರಾರು ಕುರಿಗಳು; ಭಟ್ಕಳದಲ್ಲಿ ಬೀಡುಬಿಟ್ಟ ಪರ ಜಿಲ್ಲೆಗಳ ಕುರಿಗಾಹಿಗಳು

ಇಸ್ಲಾಮ್ ಧರ್ಮೀಯರ ಪವಿತ್ರ ಹಬ್ಬ ಬಕ್ರೀದ್‍ಗೆ 3 ದಿನಗಳಷ್ಟೇ ಬಾಕಿ ಇದೆ. ಜಾನುವಾರು ಸಾಗಾಟಕ್ಕೆ ಪೊಲೀಸರು ನಿರಂರವಾಗಿ ತಡೆಯೊಡ್ಡಿರುವ ...

ರಾಜ್ಯದಲ್ಲಿ ಕೊರೊನಾ, ಲಸಿಕೆ ಪೂರೈಕೆ ಸಂಕಟದ ನಡುವೆ ಡಯಾಲಿಸೀಸ್ ರೋಗಿಗಳಿಗೂ ಆತಂಕ ತಂದ ಸರಕಾರ; ಸೇವೆಯಿಂದ ಹಿಂದೆ ಸರಿಯಲು ಬಿ.ಆರ್.ಶೆಟ್ಟಿ ಫೌಂಡೇಶನ್ ನಿರ್ಧಾರ

ಸರಿಯಾದ ಪೂರ್ವ ತಯಾರಿ, ವ್ಯವಸ್ಥಿತ ಕಾರ್ಯಯೋಜನೆ ಇಲ್ಲದೇ ಕೊರೊನಾ ಸೋಂಕು ನಿಯಂತ್ರಣ, ಲಸಿಕೆ ಪೂರೈಕೆ ಕೆಲಸ ಕಾರ್ಯಗಳ ನಡುವೆ ಬಿದ್ದು ...