ಜಿಲ್ಲಾಧಿಕಾರಿಗಳ ಅಂಗಳಕ್ಕೆ ಭಟ್ಕಳ ಉರ್ದು ತೆರವು ವಿವಾದ; ಮಂಗಳವಾರವೂ ಕಚೇರಿಗೆ ಮುತ್ತಿಗೆ; ಮುಖ್ಯಾಧಿಕಾರಿಗೆ ಸದಸ್ಯರಿಂದ ತರಾಟೆ

Source: S O News | By V. D. Bhatkal | Published on 29th June 2022, 8:17 PM | Coastal News |

ಭಟ್ಕಳ: ಭಟ್ಕಳ ಪುರಸಭಾ ಕಚೇರಿಯ ಮುಂದೆ ಕನ್ನಡ, ಇಂಗ್ಲೀಷ್‍ನೊಂದಿಗೆ ಉರ್ದು ಭಾಷಾ ಬಳಕೆಗೆ ಸಂಬಂಧಿಸಿದಂತೆ ಭುಗಿಲೆದ್ದಿರುವ ವಿವಾದವನ್ನು ಜಿಲ್ಲಾಧಿಕಾರಿಗಳ ಅಂಗಳಕ್ಕೆ ಕೊಂಡೊಯ್ಯಲು ತಾಲೂಕಾಡಳಿತ ತೀರ್ಮಾನಿಸಿದ್ದು, ಜಿಲ್ಲಾಧಿಕಾರಿಗಳ ಆದೇಶದನ್ವಯ ಮುಂದಿನ ಕ್ರಮ ಜರುಗಿಸಲು ಸಿದ್ಧತೆ ನಡೆದಿದೆ.

ಸೋಮವಾರ ಉರ್ದು ಭಾಷೆ ಬಳಕೆಗೆ ಸಂಘ ಪರಿವಾರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿರುವ ಹಿನ್ನೆಲೆಯಲ್ಲಿ ಭಟ್ಕಳ ಸಹಾಯಕ ಆಯುಕ್ತರು ಈ ಬಗ್ಗೆ ಪುರಸಭಾ ಮುಖ್ಯಾಧಿಕಾರಿಗಳಿಂದ ವರದಿ ಕೇಳಿದ್ದರು. ಪುರಸಭಾ ನಾಮಫಲಕ ಅಥವಾ ಸ್ಟೇನ್‍ಲೆಸ್ ಸ್ಟೀಲ್ ಅಕ್ಷರ ಅಳವಡಿಕೆ ಕಾಮಗಾರಿಗೆ ಪುರಸಭೆಯಿಂದ ಯಾವುದೇ ಆದೇಶವೂ ನೀಡಿಲ್ಲ ಎಂದು ಸ್ವತಃ ಪುರಸಭಾ ಮುಖ್ಯಾಧಿಕಾರಿ ಸುರೇಶ ಮೇಲಾಧಿಕಾರಿಗಳಿಗೆ ನೀಡಿರುವ ಲಿಖಿತ ವರದಿ ಪುರಸಭಾ ಆಡಳಿತ ಮಂಡಳಿಯನ್ನು ಕೆರಳಿಸಿತ್ತು.

ಕತ್ತಲಿನಲ್ಲಿಯೂ ಉರ್ದು ಕಾದಾಟ     ಪುರಸಭಾ ಕಚೇರಿಯ ಮುಮದೆ ಕನ್ನಡ, ಇಂಗ್ಲೀಷ್‍ನೊಂದಿಗೆ ಅಳವಡಿಸಲಾದ ಉರ್ದು ಭಾಷಾ ಅಕ್ಷರ ತೆರವು ವಿಷಯಕ್ಕೆ ಸಂಬಂಧಿಸಿದಂತೆ ಭಟ್ಕಳ ಪಟ್ಟಣ ಪ್ರದೇಶದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಸೋಮವಾರ ರಾತ್ರಿ ನೂರಾರು ಜನರು ಪುರಸಭಾ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ರಾಜಕೀಯ ಒತ್ತಡಕ್ಕೆ ಸಿಲುಕಿ ಭಟ್ಕಳ ಸಹಾಯಕ ಆಯುಕ್ತರು ಉರ್ದು ಅಕ್ಷರ ತೆರವಿಗೆ ಭಟ್ಕಳ ಪುರಸಭಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂಬ ಸುದ್ದಿ ಸೋಮವಾರ ಸಂಜೆಯೇ ಪಟ್ಟಣ ಪ್ರದೇಶದಾದ್ಯಂತ ವ್ಯಾಪಿಸಿದ ಪರಿಣಾಮ ನೂರಾರು ಯುವಕರು ಪುರಸಭೆಯತ್ತ ಹೆಜ್ಜೆ ಹಾಕಿದರು. ಕನ್ನಡ, ಇಂಗ್ಲೀಷಗೆ ಯಾವುದೇ ವ್ಯಕ್ತಿ ವಿರೋಧ ಮಾಡುವುದಿಲ್ಲ, ಆದರೆ ಕನ್ನಡದೊಂದಿಗೆ ಇರುವ ಉರ್ದು ತೆರವಿಗೆ ನಾವು ಅವಕಾಶ ಕೊಡುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದರು. ಈ ಬಗ್ಗೆ ಮಾಹಿತಿ ಪಡೆದ ಡಿವಾಯ್‍ಎಸ್ಪಿ ಕೆ.ಯು.ಬೆಳ್ಳಿಯಪ್ಪ, ಸಿಪಿಐ ದಿವಾಕರ, ಸಿಪಿಐ ಮಹಾಬಲೇಶ್ವರ ನಾಯ್ಕ ಸಿಬ್ಬಂದಿಗಳೊಡನೆ ಸ್ಥಳಕ್ಕೆ ಆಗಮಿಸಿ ರಾತ್ರಿ ಫಲಕ ತೆರವುಗೊಳಿಸಲು ಅವಕಾಶ ನೀಡುವುದಿಲ್ಲ, ಮೊದಲು ಎಲ್ಲರೂ ಇಲ್ಲಿಂದ ತೆರಳಬೇಕು ಎಂದು ತಾಕೀತು ಮಾಡಿದರು. ನಂತರ ಆಕ್ರೋಶಿತರು ಅಲ್ಲಿಂದ ತೆರಳಿದರು. 
ಮಂಗಳವಾರ ಮನವಿ ಸಲ್ಲಿಕೆ :
ಮಂಗಳವಾರ ಬೆಳಿಗ್ಗೆ ಮತ್ತೆ ಪುರಸಭೆಗೆ ಆಗಮಿಸಿದ ಪಟ್ಟಣ ಪ್ರದೇಶದ ಜನರು ಉರ್ದು ತೆರವು ವಿರೋಧಿಸಿ ಪುರಸಭಾ ಮುಖ್ಯಾಧಿಕಾರಿಗಳು, ಡಿವಾಯ್‍ಎಸ್ಪಿ ಕೆ.ಯು.ಬೆಳ್ಳಿಯಪ್ಪ ಅವರಿಗೆ ಮನವಿ ಸಲ್ಲಿಸಿದರು. ಭಟ್ಕಳ ಪುರಸಭೆಗೆ ಬ್ರಿಟೀಷರ ಕಾಲದ ಇತಿಹಾಸ ಇದ್ದು, ಮೊದಲಿ ನಿಂದಲೂ ಕನ್ನಡದ ಜೊತೆಗೆ ಉರ್ದು ಭಾಷೆಯ ನಾಮಫಲಕಗಳನ್ನು ಅಳವಡಿಸುತ್ತ ಬರಲಾಗಿದೆ. ಇದೀಗ ಫಲಕ ಹಳೆಯದಾಗಿದ್ದು, ಇದನ್ನು ನವೀಕರಿಸಿ ಅಳವಡಿಸುವಾಗ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಒತ್ತಡಕ್ಕೆ ಮಣಿದು ಉರ್ದು ತೆರವಿಗೆ ಮುಂದಾದರೆ ಅದರಿಂದ ಉಂಟಾಗುವ ಶಾಂತಿ ಭಂಗಕ್ಕೆ ಅಧಿಕಾರಿಗಳೇ ಹೊಣೆಗಾರರಾಗ ಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಭಟ್ಕಳ ಮುಸ್ಲೀಮ್ ಯೂಥ್ ಫೆಡರೇಶನ್ ಇದರ ಅಧ್ಯಕ್ಷ ಅಝೀಜ್ ಉರ್ರೆಹೆಮಾನ್, ತೆಮೂರ್ ಗವಾಯಿ, ಮಿಸ್ಬಾ ಉಲ್ ಹಕ್, ಮುನೀರ್ ಅಹ್ಮದ್ ಮೊದಲಾದವರು ಉಪಸ್ಥಿತರಿದ್ದರು.

 

ಈ ನಡುವೆ ಸದರಿ ವರದಿಯ ಆಧಾರದ ಮೇಲೆ ಮೇಲಾಧಿಕಾರಿಗಳ ಸೂಚನೆಯಂತೆ ಪುರಸಭಾ ಕಚೇರಿಯ ಮುಂದೆ ಅಳವಡಿಸಲಾದ ಕನ್ನಡ, ಇಂಗ್ಲೀಷ್, ಉರ್ದು ಮೂರೂ ಭಾಷೆಗಳ ಫಲಕವನ್ನು ತೆರವುಗೊಳಿಸಲು ಮಂಗಳವಾರ ಸಂಜೆ ಪೊಲೀಸ್ ಭದ್ರತೆಯೊಂದಿಗೆ ಪುರಸಭಾ ಮುಖ್ಯಾಧಿಕಾರಿಗಳು ಮುಂದಾಗಿರುವ ಬಗ್ಗೆ ಮಾಹಿತಿ ಪಡೆದ ಪುರಸಭಾ ವ್ಯಾಪ್ತಿಯ ನೂರಾರು ಜನರು ಪುರಸಭಾ ಕಚೇರಿಯ ಮುಂದೆ ಮತ್ತೊಮ್ಮೆ ಸೇರಲು ಆರಂಭಿಸಿದರು. ಇದರಿಂದ ಪುರಸಭಾ ಕಚೇರಿಯ ಮುಂದೆ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪುರಸಭಾ ಸದಸ್ಯರು, ಮೇಲಾಧಿಕಾರಿಗಳು ಕೇಳಿರುವ ಮಾಹಿತಿಯನ್ನು ಪುರಸಭಾ ಆಡಳಿತ ಮಂಡಳಿಯ ಗಮನಕ್ಕೆ ತಾರದೇ ಹೇಗೆ ಉತ್ತರಿಸಿದ್ದೀರಿ, ಈಗ ಉಂಟಾಗಿರುವ ಪರಿಸ್ಥಿತಿಗೆ ನೀವೇ ಹೊಣೆಗಾರರು ಎಂದು ಆಕ್ರೋಶವನ್ನು ಹೊರ ಹಾಕಿದರು. ಭಟ್ಕಳ ಮಜ್ಲಿಸೇ ಇಸ್ಲಾ ವ ತಂಜೀಮ್ ಅಧ್ಯಕ್ಷ ಎಸ್.ಎಮ್.ಫರ್ವೇಜ್, ಪ್ರಧಾನ ಕಾರ್ಯದರ್ಶಿ ಅಬ್ದುರ್ರಕೀಬ್, ಇನಾಯಿತುಲ್ಲಾ ಶಾಬಂದ್ರಿ, ಇರ್ಷಾದ್ ಗವಾಯಿ, ಅಝೀಜ್ ಉರ್ರೆಹೆಮಾನ್ ಮತ್ತಿತರರು ಸ್ಥಳಕ್ಕೆ ಆಗಮಿಸಿ ಪುರಸಭಾ ಮುಖ್ಯಾಧಿಕಾರಿಗಳ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಕನ್ನಡ, ಇಂಗ್ಲೀಷ್, ಉರ್ದು ಫಲಕ ಅಳವಡಿಕೆಗೆ ಈಗಾಗಲೇ ಪುರಸಭೆಯ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ಯಾವುದೇ ಫಲಕವನ್ನು ತೆರವುಗೊಳಿಸುವುದಿದ್ದರೂ ಪುರಸಭೆಯ ಸಭೆಯಲ್ಲಿ ಚರ್ಚಿಸಲು ಅವಕಾಶ ಸಿಗಬೇಕು, ಪುರಸಭೆಯ ಆಡಳಿತ ಮಂಡಳಿಯನ್ನೇ ನಿರ್ಲಕ್ಷ್ಯಿಸಿ ಮುಖ್ಯಾಧಿಕಾರಿಗಳು ಕೆಲಸ ನಿರ್ವಹಿಸುವುದಾದರೆ ಚುನಾಯಿತ ಪ್ರತಿನಿಧಿಗಳ ಅಗತ್ಯವಾದರೂ ಏನಿದೆ ಎಂದು ಪ್ರಶ್ನಿಸಿದರು. ತಹಸೀಲ್ದಾರ ಸುಮಂತ್ ಸ್ಥಳಕ್ಕೆ ಆಗಮಿಸಿ ಪುರಸಭಾ ಸದಸ್ಯರ ಮನವೊಲಿಸಲು ಪ್ರಯತ್ನಿಸಿದರಾದರೂ ಅದಕ್ಕೆ ಸದಸ್ಯರು ಜಗ್ಗಲಿಲ್ಲ. 

ಎಸಿ ಮಮತಾದೇವಿ ಭೇಟಿ :
ಪುರಸಭಾ ಕಚೇರಿಯಲ್ಲಿ ಉದ್ವಿಗ್ನ ವಾತಾವರಣ ಮುಂದುವರೆದಿರುವಂತೆಯೇ ಸಹಾಯಕ ಆಯುಕ್ತೆ ಮಮತಾದೇವಿ ಪುರಸಭಾ ಕಚೇರಿಗೆ ಆಗಮಿಸಿ, ಪುರಸಭಾ ಅಧ್ಯಕ್ಷ ಫರ್ವೇಜ್ ಕಾಶೀಮ್‍ಜಿ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿ ತೆರವು ಕಾರ್ಯಾಚರಣೆಗೆ ಸ್ಪಂದಿಸುವಂತೆ ವಿನಂತಿಸಿಕೊಂಡರು. ನಂತರ ಸದಸ್ಯರೊಂದಿಗೆ ಚರ್ಚೆ ನಡೆಸಿದ ಅವರು, ಸರಕಾರಿ ಕಚೇರಿಯಲ್ಲಿ ನಾಮಫಲಕ ಅಳವಡಿಸುವ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ತಿಳಿಹೇಳಲು ಪ್ರಯತ್ನಿಸಿದರು. ಆದರೆ ಇದನ್ನು ಒಪ್ಪದ ಪುರಸಭಾ ಸದಸ್ಯರು ಹಾಗೂ ತಂಜೀಮ್ ಮುಖಂಡರು, ಕನ್ನಡ, ಇಂಗ್ಲೀಷ್‍ನೊಂದಿಗೆ ಉರ್ದು ಭಾಷೆಯನ್ನು ಬಳಸುತ್ತಿರುವುದು ಹೊಸದೇನೂ ಅಲ್ಲ, ಬ್ರಿಟೀಷ್ ಕಾಲದಿಂದಲೂ ಅದು ನಡೆದುಕೊಂಡು ಬಂದಿದೆ, ಕನ್ನಡ, ಇಂಗ್ಲೀಷ್‍ನೊಂದಿಗೆ ಹೊಸ ಮೀನುಮಾರುಕಟ್ಟೆಯಲ್ಲಿ ಉರ್ದು ಬಳಸಲಾಗಿದ್ದು, ಇದನ್ನು ಸಚಿವರು, ಶಾಸಕರು ಉದ್ಘಾಟಿಸಿದ್ದಾರೆ. ಪುರಸಭಾ ಕಚೇರಿಯ ಒಳಗಿನ ಫಲಕದಲ್ಲಿಯೂ ಉರ್ದು ಬರೆಯಲಾಗಿದೆ. ಆಗ ಇಲ್ಲದ ಆಕ್ಷೇಪ, ಪ್ರತಿಭಟನೆ ಈಗ ಹುಟ್ಟಿದ್ದು ಹೇಗೆ, ನಮಗೂ ಈ ಬಗ್ಗೆ ನಿರ್ಣಯ ಕೈಗೊಳ್ಳಲು ಅವಕಾಶ ಕೊಡಿ ಎಂದು ಆಗ್ರಹಿಸಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಸಹಾಯಕ ಆಯುಕ್ತೆ ಮಮತಾದೇವಿ, ಪುರಸಭೆ ಸಾಮಾನ್ಯ ಸಭೆಯನ್ನು ಕರೆದು ಈ ಬಗ್ಗೆ ನಿರ್ಣಯವನ್ನು ಅಂಗೀಕರಿಸಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿ, ಕಾನೂನಿನ್ವಯ ಜಿಲ್ಲಾಧಿಕಾರಿಗಳು ಕೈಗೊಳ್ಳುವ ಕ್ರಮಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ತಿಳಿಸಿದರು. ಪುರಸಭಾ ಅಧ್ಯಕ್ಷ ಫರ್ವೇಜ್ ಕಾಶೀಮ್‍ಜಿ, ಉಪಾಧ್ಯಕ್ಷ ಕೈಸರ್ ಮೊತೇಶಮ್ ಉಪಸ್ಥಿತರಿದ್ದರು. ಡಿವಾಯ್‍ಎಸ್ಪಿ ಕೆ.ಯು.ಬೆಳ್ಳಿಯಪ್ಪ, ಸಿಪಿಐ ದಿವಾಕರ, ಎಸ್‍ಐ ಬಿ.ಸುಮಾ ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...