ಭಟ್ಕಳ: ದೈಹಿಕ ಅಂತರ ಕಾಪಾಡುತ್ತ ಭಟ್ಕಳ ಮಸೀದಿಯಲ್ಲಿ ನಮಾಝ್ ಆರಂಭ

Source: S O News Service | By Staff Correspondent | Published on 9th June 2020, 5:01 PM | Coastal News |

ಭಟ್ಕಳ: ಭಟ್ಕಳದಲ್ಲಿ ಇಂದಿನಿಂದ ಅಲ್ಲಾಹನ ಭವನ ಮಸೀದಿಗಳು ಮರು ಆರಂಭಗೊಂಡಿವೆ. ಕಳೆದ ಎರಡು ತಿಂಗಳಗಳಿಂದ ತಮ್ಮ ತಮ್ಮ ಮನೆಯಲ್ಲಿ ನಮಾಜು ಮಾಡುತ್ತಿದ್ದ  ಜನರು ಇಂದು ಮದೀಸಿಗಳಿಗೆ ತೆರಳುವುದರ ಮೂಲಕ ತಮ್ಮ ಪ್ರಭುವಿನ ಆರಾಧನೆ ಕೈಗೊಂಡರು. 

ಮಂಗಳವಾರ ಖ್ಯಾತ ಗುರುಗಳ ಪಳ್ಳಿಯಂದೆ ಪ್ರಸಿದ್ಧಿ ಪಡೆದ ಖಲಿಫಾ ಜಾಮಿಯಾ ಮಸೀದಿ, ಚಿನ್ನದ ಪಳ್ಳಿ ಜಾಮಿಯಾ ಮಸೀದಿಯಲ್ಲಿ  ದೈಹಿಕ ಅಂತರವನ್ನು ಪಾಲಿಸುತ್ತ ಜನರು ಪ್ರಾರ್ಥನೆ ನಮಾಝ್ ನಿರ್ವಹಿಸಿದರು. 

ಮಸೀದಿಯಲ್ಲಿ ಪ್ರವೇಶಿಸುವ ಮುನ್ನ ದ್ವಾರದಲ್ಲಿ ನೀರು ಮತ್ತು ಸೋಪ್ ನ್ನು ಇಡಲಾಗಿದ್ದು ಜನರು ತಮ್ಮ ಕೈಗಳನ್ನು ತೊಳೆದುಕೊಂಡು ಮಸೀದಿಯನ್ನು ಪ್ರವೇಶಿಸಿದರು. ಅಲ್ಲದೆ ತಮ್ಮ ತಮ್ಮ ಮನೆಗಳಲ್ಲೇ ವಝೂ( ಅಂಗಸ್ನಾನ) ಮಾಡಿಕೊಂಡು ಬರುವಂತೆ ಎಲ್ಲರಿಗೂ ನಿರ್ದೇಶನವನ್ನು ನೀಡಲಾಗಿತ್ತು.

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಗುರುಗಳ ಪಳ್ಳಿ ಖಲಿಫಾ ಜಮಿಯಾ ಮಸೀದಿಯ ಇಮಾಮ್ ಮತ್ತು ಖತೀಬ್ ಮೌಲಾನ ಕ್ವಾಜಾ ಮುಹದ್ದೀನ್ ನದ್ವಿ ಮದನಿ, ಮಸೀದಿಗಳು ಪುನರ್ ಆರಂಭಗೊಂಡಿದ್ದಕ್ಕೆ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಿದ್ದು ಮುಸ್ಲಿಮರು ತಮ್ಮ ಮನೆಗಳಿಂದ ದೂರ ಇರಬಹುದು. ಆದರೆ ಮಸೀದಿಗಳಿಂದ ದೂರ ಇರಲು ಸಾಧ್ಯವಿಲ್ಲ ಎಂದರು.

ಆಹ್ಮದ್ ಸಯೀದ್ ಜಾಮಿಯಾ ಮಸೀದಿಯ ಇಮಾಮ್ ಮತ್ತು ಖತೀಬ್ ಮೌಲಾನ ಮುಹಮ್ಮದ್ ಜಾಫರ್ ಫಕ್ಕಿಭಾವ್, ಲಾಕ್ಡೌನ್ ಸಂದಂರ್ಭ ಮುಸ್ಲಿಮರು ತಪ್ಪದೆ ತಮ್ಮ ತಮ್ಮ ಮನೆಗಳಲ್ಲಿ ಐದು ಹೊತ್ತಿನ ನಮಾಝ್ ನಿರ್ವಹಿಸಿದರು. ಈಗ ಮಸೀದಿಗಳು ಆರಂಭಗೊಂಡಿವೆ. ಮಸೀದಿಗಳು ಅಲ್ಲಾಹನ ಭವನಗಳಾಗಿದ್ದು ಇದು ಮುಸ್ಲಿಮರಿಗೆ ಅತ್ಯಂತ ಪವಿತ್ರ ಸ್ಥಾನಗಳಾಗಿವೆ. ಅಷ್ಟೇ ಅಲ್ಲದೆ ಮಸೀದಿಗಳು ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಕೇಂದ್ರವೂ ಆಗಿವೆ ಎಂದು ಪ್ರತಿಕ್ರಿಯಿಸಿದರು.

ತಂಝೀಮ್ ಸಂಸ್ಥೆಯ ಅಧ್ಯಕ್ಷ ಎಸ್.ಎಂ. ಪರ್ವೇಝ್, ಭಟ್ಕಳದ ಎಲ್ಲ ಮಸೀದಿಗಳಲ್ಲಿ ಸರ್ಕಾರದ ಮಾರ್ಗದರ್ಶಿ ನಿಯಮಗಳನ್ನು ಪಾಲಿಸುವಂತೆ ಆಡಳಿತ ಮಂಡಳಿಗೆ ನಿರ್ದೇಶನವನ್ನು ನೀಡಲಾಗಿದ್ದು ಎಲ್ಲ ಮಸೀದಿಗಳು ದೈಹಿಕ ಅಂತರವನ್ನು ಕಾಪಾಡುತ್ತ ವಯಸ್ಕರು ಹಾಗೂ ಮಕ್ಕಳನ್ನು ಮಸೀದಿಗಳಿಗೆ ಕಳುಹಿಸದಂತೆ ತಿಳಿಸಲಾಗಿದೆ ಎಂದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...