ಭಟ್ಕಳದಲ್ಲಿ ಮುಂದಿನ 3 ವಾರಗಳ ಒಳಗೆ ಅಂಗಡಿಕಾರರು ವ್ಯಾಪಾರ ಪರವಾನಿಗೆ ಪತ್ರ ಪಡೆದುಕೊಳ್ಳಬೇಕು

Source: S O News Service | By V. D. Bhatkal | Published on 19th September 2020, 2:15 AM | Coastal News |

ಭಟ್ಕಳ: ತಾಲೂಕಿನ ಪುರಸಭಾ ವ್ಯಾಪ್ತಿಯಲ್ಲಿ ವ್ಯಾಪಾರ ಪರವಾನಿಗೆ (ಟ್ರೇಡಿಂಗ್ ಲೈಸೆನ್ಸ್) ಪತ್ರವನ್ನು ಪಡೆಯಲು 3 ವಾರಗಳ ಕಾಲಾವಕಾಶವನ್ನು ನೀಡಲಾಗಿದೆ ಎಂದು ಭಟ್ಕಳ ಸಹಾಯಕ ಆಯುಕ್ತ ಭರತ್ ಹೇಳಿದ್ದಾರೆ.

ಕಳೆದ 2 ದಿನಗಳ ಹಿಂದೆ ವ್ಯಾಪಾರ ಪರವಾನಿಗೆ ಪತ್ರವನ್ನು ಹೊಂದದವರು ಅಂಗಡಿ ಮುಚ್ಚುವಂತೆ ಸಹಾಯಕ ಆಯುಕ್ತರು ನೀಡಿರುವ ಸೂಚನೆಯ ಬಗ್ಗೆ ಶುಕ್ರವಾರ ಸಂಜೆ ಭಟ್ಕಳ ಮರ್ಚಂಟ್ ಅಶೋಶಿಯೇಶನ್ ಸದಸ್ಯರು ಸಹಾಯಕ ಆಯುಕ್ತರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಪುರಸಭಾ ವ್ಯಾಪ್ತಿಯಲ್ಲಿ ಹಲವು ಅಂಗಡಿಕಾರರು ಪರವಾನಿಗೆ ಪತ್ರವನ್ನು ಪಡೆದಿಲ್ಲ, ನೋಟೀಸ್ ನೀಡಿದರೂ ಆಸಕ್ತಿ ವಹಿಸುತ್ತಿಲ್ಲ, ಇದು ನಿಯಮಕ್ಕೆ ವಿರೋಧವಾಗಿದೆ ಎಂದು ಸಹಾಯಕ ಆಯುಕ್ತರು ಸಂಘಟನೆಯ ಸದಸ್ಯರ ಗಮನಕ್ಕೆ ತಂದರು.

ಇದಕ್ಕೂ ಪೂರ್ವದಲ್ಲಿ ಮಾತನಾಡಿದ ಮರ್ಚಂಟ್ ಅಸೋಶಿಯೇಶನ್ನಿನ ಪ್ರಮುಖ ಮೊತೇಶಮ್ ಸೈಬ್, ಅಂಗಡಿಕಾರರು ಹಾಗೂ ಕಟ್ಟಡ ಮಾಲಕರನ್ನು ಬೇರೆ ಬೇರೆಯಾಗಿ ನೋಡಬೇಕು, ಬಹಳಷ್ಟು ಕಟ್ಟಡ ಮಾಲಕರು ಊರಿನ ಹೊರಗೆ ಇದ್ದಾರೆ, ಅಂಗಡಿಕಾರರ ಸಮಸ್ಯೆ ಬೇರೆ ತೆರನಾಗಿದೆ, ಕೋವಿಡ್ ಕಾರಣದಿಂದಾಗಿ ಅಂಗಡಿಯ ಬಾಡಿಗೆ ಹಣವನ್ನು ಪಾವತಿಸಲು ಅಂಗಡಿಕಾರರಿಗೆ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಇದು ಸರಕಾರಕ್ಕೂ ಗೊತ್ತಿದೆ, ವಾಸ್ತವವನ್ನು ಅರಿತಿರುವ ಹಿರಿಯ ಅಧಿಕಾರಿಗಳಾಗಿರುವ ತಾವು ಏಕಾಏಕಿಯಾಗಿ ಅಂಗಡಿಗಳಿಗೆ ತೆರಳಿ ಬಾಗಿಲು ಮುಚ್ಚಿಸಲು ಯತ್ನಿಸಿದ್ದು ಬೇಸರ ತಂದಿದೆ, ವ್ಯಾಪಾರ ಪರವಾನಿಗೆ ಪತ್ರದ ವಿಷಯದಲ್ಲಿ ಮರ್ಚಂಟ್ ಅಸೋಶಿಯೇಶನ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯಬೇಕು ಎಂದು ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಭಟ್ಕಳ ಪುರಸಭಾ ಮುಖ್ಯಾಧಿಕಾರಿ ದೇವರಾಜು, ಎಸೈ ಭರತ್, ಹಿರಿಯ ಆರೋಗ್ಯಾಧಿಕಾರಿ ಸೋಜಿಯಾ ಸೋಮನ್, ಮರ್ಚಂಟ್ ಅಸೋಶಿಯೇಶನ್ನಿನ ಸಿದ್ದಿಕ್ ಇಸ್ಮೈಲ್, ಮಂಜುನಾಥ ಪ್ರಭು, ಪುರಸಭಾ ಸದಸ್ಯ ರವೂಫ್ ನಾಯಿತೇ ಮೊದಲಾದವರು ಉಪಸ್ಥಿತರಿದ್ದರು. 

 

Read These Next