ಲಾಕ್ ಡೌನ್ ಎಫೆಕ್ಟ್ ಕಂಪು ಕಳೆದುಕೊಳ್ಳುತ್ತಿರುವ ಭಟ್ಕಳ ಮಲ್ಲಿಗೆ; ಕಂಗಲಾದ ರೈತ ಕುಟುಂಬ

Source: sonews | By Staff Correspondent | Published on 7th April 2020, 6:55 PM | Coastal News | Special Report | Don't Miss |

ಭಟ್ಕಳ ಮಲ್ಲಿಗೆ ದೇಶ ದಲ್ಲಷ್ಟೆ ಅಲ್ಲದೇ ವಿದೇಶಗಳಲ್ಲೂ ಭಾರಿ ಬೇಡಿಕೆ. ಇಲ್ಲಿನ ನವಾಯತ್ ಮುಸ್ಲಿಮರು ಭಟ್ಕಳ ಮಲ್ಲಿಗೆಯ ಕಂಪನ್ನು ಗಲ್ಫ್ ರಾಷ್ಟ್ರಗಳಲ್ಲೂ ಹರಡುವಂತೆ ಮಾಡಿದ್ದಾರೆ. ಭಟ್ಕಳದ ಪ್ರಮುಖ ತೋಟಗಾರಿಕಾ ಬೆಳೆಯಾಗಿರುವ ಮಲ್ಲಿಗೆ ಲಾಕ್ ಡೌನ್ ನಿಂದಾಗಿ ಗಿಡದಲ್ಲೇ ಮೊಗ್ಗು ಅರಳುವ ಮುನ್ನವೇ ಬಾಡಿ ಹೋಗಲಾರಂಭಿಸಿವೆ. ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಾಗಿದ್ದ ಈ ಮಲ್ಲಿಗೆ ಮೇಲೆ ಕೊರೋನಾ ಕರಿನೆರಳು ಬಿದ್ದು  ತನ್ನ ಕಂಪನ್ನು ಸೂಸದೆ ಅಲ್ಲಿಯೆ ಮುದುಡಿಕೊಳ್ಳುತ್ತಿದೆ.

ಮಲ್ಲಿಗೆಯನ್ನು ಬೆಳೆಯುವ ರೈತರು ಅತ್ತ ಗಿಡದಲ್ಲೂ ಬಿಡಲಾಗದೆ, ಅದನ್ನು ತೆಗೆದು ಕಟ್ಟೆ ಕಟ್ಟಿ ಮಾರಾಟ ಮಾಡಲಾಗದೆ ಅತಂತ್ರರಾಗಿದ್ದಾರೆ.

ಭಟ್ಕಳ ತಾಲೂಕಿನ ಸುಮಾರು 90 ಹೆಕ್ಟೇರ್ ಪ್ರದೇಶದಲ್ಲಿ ಮಲ್ಲಿಗೆಯನ್ನು ಒಂದು ಪ್ರಮುಖ ಬೆಳೆಯನ್ನಾಗಿ ಬೆಳಸಲಾಗುತ್ತಿದೆ. ಕೃಷಿಯಲ್ಲಿ ಮಲ್ಲಿಗೆಯೂ ಒಂದು ಪ್ರಮುಖ ಪಾತ್ರ ಪಡೆದಿದ್ದು, ಭಟ್ಕಳ ತಾಲ್ಲೂಕೊಂದರಲ್ಲೇ 8ರಿಂದ 10 ಸಾವಿರ ಕುಟುಂಬಗಳು ಮಲ್ಲಿಗೆಯನ್ನು ಆಶ್ರಯಿಸಿ ಬದುಕು ಸಾಗಿಸುತ್ತಿವೆ. ಮಲ್ಲಿಗೆಯ ಗಿಡ ಬೆಳೆಸಿ ಅದರಿಂದ ಫಸಲು ಪಡೆಯಲು ಸುಮಾರು 2 ವರ್ಷಗಳಂತೂ ಬೇಕು. ಅದು ಫಸಲು ಕೊಡಲು ಆರಂಭಿಸಿದ ನಂತರ ಸತತವಾಗಿ ಅದರ ಆರೈಕೆ ಆಗಲೇಬೇಕು.

ಭಟ್ಕಳ ತಾಲೂಕಿನ ಮುಠ್ಠಳ್ಳಿ, ಮಣ್ಕುಳಿ, ತಲಾಂದ, ಮುಂಡಳ್ಳಿ, ಶಿರಾಲಿ, ಬೆಂಗ್ರೆ, ಮಾವಳ್ಳಿ- 1 ಹಾಗೂ ಮಾವಳ್ಳಿ-2, ಬೈಲೂರು ಪಂಚಾಯತಿ ವ್ಯಾಪ್ತಿಯಲ್ಲಿ ಮಲ್ಲಿಗೆಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ಇವರೆಲ್ಲರೂ ಆರ್ಥಿಕವಾಗಿ ಸಬಲರಾಗುವ ಕಾರಣಕ್ಕೆ ಉಳಿದ ಕೃಷಿಯನ್ನು ಕೈ ಬಿಟ್ಟು ಮಲ್ಲಿಗೆಯನ್ನು ನಂಬಿಕೊಂಡಿದ್ದಾರೆ. ಆದರೆ, ಇದೀಗ ದೇಶದಲ್ಲಿ ಕೊರೋನಾ ಕಂಟಕ ಎದುರಾಗಿದ್ದು, ಲಾಕ್‌ಡೌನ್ ಸಂಕಟದಲ್ಲಿ ದೇಶವಿದೆ. ಇದರಿಂದ ಹೂವಿನ ಮಾರುಕಟ್ಟೆ ಸಂಪೂರ್ಣ ಸ್ತಬ್ಧವಾಗಿದ್ದು, ಇದನ್ನೇ ಆಶ್ರಯಿಸಿದ್ದ ಬೆಳೆಗಾರರು ಕಂಗಾಲಾಗಿದ್ದಾರೆ.

ಬಿಟ್ಟರೆ ಹುಳದ ಕಾಟ, ತೆಗೆದರೆ ಬೆಲೆಯಿಲ್ಲ: ಮಲ್ಲಿಗೆಗೆ ಫೆಬ್ರ‍್ರುವರಿ, ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಭಾರಿ ಬೇಡಿಕೆ ಇರುತ್ತಿದ್ದವು. ಆದರೆ, ಈ ಕೊರೋನಾದಿಂದ ಎಲ್ಲವೂ ಹಾಳಾಗಿದಂತಾಗಿದೆ. ಅತ್ತ ಕಡೆ ಮಾರಾಟವಿಲ್ಲ ಎಂದು ಸುಮ್ಮನೆ ಗಿಡದಲ್ಲೇ ಮಲ್ಲಿಗೆಯನ್ನು ಬಿಟ್ಟರೆ ಕೀಟಗಳಿಂದ ಗಿಡವು ನಾಶವಾಗಲಿವೆ. ಗಿಡದಲ್ಲಿನ ಮಲ್ಲಿಗೆ ಮೊಗ್ಗು ತೆಗೆದರೆ ಅದನ್ನು ಖರೀದಿಸುವವರಿಲ್ಲ. ಇದರಿಂದಾಗಿ ಬೆಳೆಗಾರರು ಅಕ್ಕಪಕ್ಕದ ಮನೆಯವರಿಗೆ ಮುಡಿಯಲು, ದೇವರ ಪೂಜೆಗೆ ನೀಡುತ್ತಾ ಸಮಾಧಾನಪಟ್ಟುಕೊಳ್ಳುತ್ತಿದ್ದಾರೆ.

ಮಕ್ಕಳಂತೆ ಮಲ್ಲಿಗೆ: ಮಲ್ಲಿಗೆ ಮೊಗ್ಗು ಕೊಯ್ಯುವವರಿಗೆ ಪ್ರತಿದಿನ ಮೊಳದ ಲೆಕ್ಕದಂತೆ ನೀಡುವ ಸಂಭಾವನೆ ಒಂದೆಡೆಯಾದರೆ, ತೆಗೆದ ಹೂವು ಹಾಳಾಗುತ್ತಿರುವ ಹೊರೆ ಇನ್ನೊಂದೆಡೆ. ಕಾಲಕ್ಕೆ ತಕ್ಕಂತೆ ನೀರು, ಗೊಬ್ಬರ, ಮದ್ದು ಸಿಂಪಡಣೆ ಎಲ್ಲವೂ ಹಾಕಿ ಮಲ್ಲಿಗೆಯನ್ನು ತಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿಯೇ ನೋಡಿಕೊಂಡಿದ್ದು, ಮಕ್ಕಳಂತೆ ಪೋಷಿಸಿದ್ದಾರೆ. ಆದರೆ, ಇವೆಲ್ಲದರ ಮಧ್ಯೆ ಅವರ ಪಾಲನೆ, ಪೋಷಣೆ, ಬೆಳೆಗೆ ಮಾಡಿದ ಖರ್ಚು ದುಬಾರಿಯಾಗಿರುವುದು ಮಲ್ಲಿಗೆ ಬೆಳೆಗಾರರಿಗೆ ಆತಂಕ ದ್ವಿಗುಣಗೊಳಿಸಿದೆ. ಕೋವಿಡ್- 19 ಮಹಾಮಾರಿಯ ವಿಷಯದಲ್ಲಿ ಭಟ್ಕಳ ಹಾಟ್‌ಸ್ಪಾಟ್ ಆಗಿ ಗುರುತಿಸಿಕೊಂಡಿರುವುದು ರೈತರ ನೆಮ್ಮದಿ ಮತ್ತಷ್ಟು ಹಾಳು ಮಾಡಿದೆ.

ಭಟ್ಕಳದಲ್ಲಿ ಪ್ರತಿದಿನ ಸರಾಸರಿ 1.10 ಲಕ್ಷ ಮೊಳ (11 ಸಾವಿರ ಅಟ್ಟೆ) ಹೂವು ಮಾರುಕಟ್ಟೆಗೆ ಹೋಗುತ್ತಿದ್ದವು. ಇದಕ್ಕೆ ಮಂಗಳೂರು ಮುಖ್ಯ ಮಾರುಕಟ್ಟೆಯಾದರೆ, ರಾಜ್ಯದ ವಿವಿಧೆಡೆಯೂ ಭಟ್ಕಳ ಮಲ್ಲಿಗೆಗೆ ಬೇಡಿಕೆ ಇದೆ. ಉಳಿದಂತೆ ಪಟ್ಟಣದಲ್ಲೂ ಮಲ್ಲಿಗೆ ಹಾಟ್ ಫೇವರೇಟ್. ಹೀಗಿರುವಾಗ ಪ್ರತಿದಿನ ಇಷ್ಟು ಪ್ರಮಾಣದ ಹೂವು ಹಾಳಾಗುತ್ತಿರುವುದು ಬೆಳೆಗಾರರ ಚಿಂತೆಗೆ ಕಾರಣವಾಗಿದ್ದು, ಸರ್ಕಾರ ತಮ್ಮ ನೆರೆವಿಗೆ ಬರಬೇಕು ಎಂದು ಕೃಷಿಕರು ಆಗ್ರಹಿಸುತ್ತಿದ್ದಾರೆ.

ಕಳೆದ ವರ್ಷ ಮಾರ್ಚ್‌ನಿಂದ ಮೇ ತಿಂಗಳ ತನಕ ದಿನಕ್ಕೆ ನೂರಾರು ಮಲ್ಲಿಗೆ ಮೊಳ ಸಿಗುತ್ತಿದ್ದು, ಭಾರಿ ಬೇಡಿಕೆ ಹಾಗೂ ಉತ್ತಮ ದರವೂ ಲಭಿಸಿತ್ತು. ಅದರಂತೆ ಈ ವರ್ಷವೂ ಒಳ್ಳೆಯ ಬೇಡಿಕೆ ಬರಲಿದೆ ಎಂದು ಭರವಸೆಯಿಟ್ಟಿದ್ದೆವು. ಆದರೆ ದೇಶಕ್ಕೆ ಬಂದ ಕೊರೋನಾ ರೋಗದಿಂದ ಮಲ್ಲಿಗೆ ಬೆಳೆಗೆ ಬೇಡಿಕೆ ಕುಸಿದಿದೆ. ಇದನ್ನೇ ನಂಬಿ ಬದುಕು ಸಾಗಿಸುವ ನಮಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಈ ಬಗ್ಗೆ ಇಲಾಖೆಯವರು ನಮ್ಮ ಬೆಂಬಲಕ್ಕೆ ಬರಬೇಕಿದೆ.
ಶಾಂತಿ ದೇವಾಡಿಗ, ಮಲ್ಲಿಗೆ ಬೆಳೆಗಾರರು

ಭಟ್ಕಳದಲ್ಲಿ ಮಲ್ಲಿಗೆ ಬೆಳೆಗೆ ಅದರದೇ ಆದ ಮಾರುಕಟ್ಟೆ ಇದೆ. ಪ್ರತಿದಿನ ಲಕ್ಷ ಮೊಳದಷ್ಟು ಹೂವು ಹಾಳಾಗುತ್ತಿರುವ ಕುರಿತು ಕಾರವಾರದ ಉಪನಿರ್ದೇಶಕರ ಗಮನಕ್ಕೆ ತರಲಾಗಿದೆ. ಇವರಿಗೂ ಬೆಂಬಲ ಬೆಲೆ ನೀಡುವ ಕುರಿತು ಉಪನಿರ್ದೇಶಕರು ರಾಜ್ಯ ಮಟ್ಟದಲ್ಲಿ ಮಾತುಕತೆ ನಡೆಸುತ್ತಿದ್ದಾರೆ. ಕೃಷಿಕರಿಗೆ ತಿರುಗಾಡಲು ಯಾರು ತಡೆ ಒಡ್ಡುವಂತಿಲ್ಲ ಎಂದು ಸರ್ಕಾರ ಆದೇಶಿಸಿದೆ.
ಸಂಧ್ಯಾ ಭಟ್, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ

 

Read These Next

ಭಟ್ಕಳದಲ್ಲಿ ಭಾನುವಾರದಂದು ಬೆ.8ರಿಂದ ಮ.2 ಗಂಟೆ ವರೆಗೆ ಲಾಕ್‍ಡೌನ್  ಸಡಿಲಿಕೆ-ಸಹಾಯ ಆಯುಕ್ತ

ಭಟ್ಕಳ: ರಾಜ್ಯಾದ್ಯಂತ ಭಾನುವಾರದ ಕಫ್ರ್ಯೂ ಆದೇಶವನ್ನು ಸರ್ಕಾರ ಹಿಂಪಡೆದ ಹಿನ್ನೆಯಲ್ಲಿ ಈ ಆದೇಶ ಭಟ್ಕಳಕ್ಕೂ ಅನ್ವಯಿಸುತ್ತಿದ್ದು ...

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕರಾವಳಿ ಮೀನುಗಾರರ ನಿರ್ಲಕ್ಷ್ಯ; ಮೀನುಗಾರ ಮುಖಂಡ ವಸಂತ ಖಾರ್ವಿ ಆರೋಪ

ಭಟ್ಕಳ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕರಾವಳಿ ಮೀನುಗಾರರನ್ನು ನಿರ್ಲಕ್ಷ ಮಾಡಿದ್ದು ಕೋಟಿಗಟ್ಟಲೆ ಪರಿಹಾರ ನೀಡಿದ್ದು ...

ಮಂಗಳೂರು ಆಸ್ಪತ್ರೆಯಿಂದ ಭಟ್ಕಳಕ್ಕೆ ಶಿಫ್ಟಾದ ಕೊರೋನಾ;12 ಹೊಸ ಕೊರೋನಾ ಪ್ರಕರಣ ಪತ್ತೆ

ಭಟ್ಕಳ: ಇಂದು ಶುಕ್ರವಾರ ಎಲ್ಲರಿಗೂ ಶುಭವನ್ನು ತರುವ ವಾರ. ಆದರೆ ಭಟ್ಕಳಕ್ಕದು ಶುಭವಾಗದೆ 12 ಹೊಸ ಕೊರೋನಾ ಪ್ರಕರಣ ಪತ್ತೆಯಾದ ದಿನವಾಗಿ ...

ಭಟ್ಕಳಕ್ಕೆ ಸಧ್ಯಕ್ಕಿಲ್ಲ ಲಾಕ್‍ಡೌನ್ ಸಡಿಲಿಕೆಯ ಭಾಗ್ಯ; ಅಗತ್ಯ ಸೇವೆ ಹೊರತುಪಡಿಸಿ ಯಥಾಸ್ಥಿತಿ ಮುಂದುವರಿಕೆ

ಕರಾವಳಿ ಜಿಲ್ಲೆಗಳಲ್ಲಿ ಮೊದಲ ಕೊರೋನಾ ಪ್ರಕರಣ ದಾಖಲು ಮಾಡಿದ ಅಪಕೀರ್ತಿಗೆ ಪಾತ್ರವಾಗಿರುವ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಮಾತ್ರ ...

ಕೋವಿಡ್-19; ಹಸಿರು ವಲಯದತ್ತ ಹೆಜ್ಜೆ ಹಾಕುತ್ತಿದೆ ಭಟ್ಕಳ ಕೇವಲ ಒಂದು ಸಕ್ರಿಯ ಪ್ರಕರಣ ಬಾಕಿ

ಉತ್ತರಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ನ ಕೊರೋನಾ ಸೋಂಕಿನ ಪ್ರಥಮ ಪ್ರಕರಣ ದಾಖಲಾಗಿದ್ದು ಮಾ.19 ಹಾಗೂ ಕೊನೆಯ ಪ್ರಕರಣ ದಾಖಲಾಗಿದ್ದು ಎ.14 ಈ ...

ಭಟ್ಕಳದಲ್ಲಿ ಭಾನುವಾರದಂದು ಬೆ.8ರಿಂದ ಮ.2 ಗಂಟೆ ವರೆಗೆ ಲಾಕ್‍ಡೌನ್  ಸಡಿಲಿಕೆ-ಸಹಾಯ ಆಯುಕ್ತ

ಭಟ್ಕಳ: ರಾಜ್ಯಾದ್ಯಂತ ಭಾನುವಾರದ ಕಫ್ರ್ಯೂ ಆದೇಶವನ್ನು ಸರ್ಕಾರ ಹಿಂಪಡೆದ ಹಿನ್ನೆಯಲ್ಲಿ ಈ ಆದೇಶ ಭಟ್ಕಳಕ್ಕೂ ಅನ್ವಯಿಸುತ್ತಿದ್ದು ...