ಭಟ್ಕಳ ವಿವಿಧ ಕಡೆ ನೀರಿಗಾಗಿ ಹಾಹಾಕಾರ

Source: so news | Published on 5th May 2019, 8:14 PM | Coastal News | Special Report |

ಭಟ್ಕಳ:ಬಿಸಿಲ ಬೇಗೆಗೆ ಧರೆ ಹತ್ತಿ ಉರಿಯುತ್ತಿದೆ. ಕರಾವಳಿಯ ಚಿರಾಪುಂಜಿ ಎಂದೇ ಗುರುತಿಸಲಾಗುವ ಭಟ್ಕಳದಲ್ಲಿ ನೀರಿನ ಸೆಲೆ ಇಲ್ಲದಾಗಿದೆ. ಸುತ್ತ ನೀರಿದ್ದರೂ ಕುಡಿಯುವ ಜೀವಜಲಕ್ಕೆ ಜನರು ತೊಂದರೆ ಅನುಭವಿಸುವಂತಾಗಿದೆ. ಜತೆಗೆ, ಜಾನುವಾರುಗಳನ್ನು ಸಾಕುವುದೇ ಹರಸಾಹಸವಾಗಿದೆ.

ನಗರದ ವಿ.ವಿ. ರಸ್ತೆ, ಮುಟ್ಟಳ್ಳಿ ಬೈಪಾಸ್, ಹೊಂಡದಕೇರಿ, ನೆಹರು ರಸ್ತೆ, ಆಸರಕೇರಿ, ಸೋನಾರಕೇರಿ, ವಿ.ಟಿ. ರಸ್ತೆ, ವಿವಿಧೆಡೆಯ ಬಾವಿಯ ಜಲವೆಲ್ಲ ಬತ್ತಿ ಹೋಗಿದ್ದು, ನೀರಿಗಾಗಿ ಹಾಹಾಕಾರ ಉಂಟಾಗಿದೆ. ಮಳೆಯ ಅಭಾವ, ನೀರಿನ ಸಂರಕ್ಷಣೆ ಕುರಿತು ಬೇಜವಾಬ್ದಾರಿ, ಜಲಮಟ್ಟ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಳವಾಗದಿರುವುದು ಸಮಸ್ಯೆಯ ಜಟಿಲತೆಗೆ ಕಾರಣವಾಗಿದೆ. ಇದರಿಂದ ಸ್ಥಳೀಯರು ಬೇಸಿಗೆ ಎಂದರೆ ನರಕಯಾತನೆ ಅನುಭವಿಸುವಂತಾಗಿದೆ. ನೀರಿನ ನಡುವೆಯೇ ಹುಟ್ಟಿ ಬೆಳೆದರೂ ಇಂದು ಪರಿಸ್ಥಿತಿ ಸಂಪೂರ್ಣ ಭಿನ್ನ. ಒಂದೆರಡು ಕೊಡ ನೀರು ಸಂಗ್ರಹಿಸುವುದೂ ಅಸಾಧ್ಯವೆನ್ನಿಸಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ನೀರಿಗಾಗಿ ಅಲೆಯುವ ಸ್ಥಿತಿ ಎದುರಾಗಲಿದೆ. ನೀರಿಲ್ಲದೆ ಕೃಷಿ ಕಾರ್ಯಗಳಿಗೆ ತೊಡಕಾದರೆ, ಕಟ್ಟಡ ಕಾಮಗಾರಿಗಳು ಬಹುತೇಕ ಸ್ಥಗಿತಗೊಂಡಿದ್ದು, ಕೂಲಿ ಕಾರ್ವಿುಕರಿಗೂ ಇದರ ಪರಿಣಾಮ ತಟ್ಟಲಾರಂಬಿಸಿದೆ.

ಪುರಸಭೆ ವ್ಯಾಪ್ತಿಯ ನೀರು ಕುಡಿಯೋ ಹಾಗಿಲ್ಲ: ಭಟ್ಕಳ ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ಜನರು ಈ ಹಿಂದೆ ನೀರಿಗಾಗಿ ಬಾವಿ ಅವಲಂಬಿಸಿದ್ದರು. ಆದರೆ, ಪುರಸಭೆಯ ಒಳಚರಂಡಿ ಕಾಮಗಾರಿ ಯಾವಾಗ ಆರಂಭವಾಯಿತೋ ಅಂದಿನಿಂದ ಜನರಿಗೆ ನೀರಿನ ಸಮಸ್ಯೆ ತಲೆದೋರಿದೆ. ಚರಂಡಿ ನೀರು ಬಾವಿಗಳಿಗೆ ಸೇರಿ ಬಾವಿಯ ನೀರು ಕಲುಷಿತಗೊಳ್ಳುತ್ತಿದೆ. ಇದರಿಂದ ಬಾವಿಯಲ್ಲಿ ನೀರಿದ್ದರೂ ಜನರು ಕುಡಿಯುತ್ತಿಲ್ಲ. ಅಲ್ಲದೆ, ಇತರ ಬಳಕೆಗೂ ಉಪಯೋಗಿಸುತ್ತಿಲ್ಲ. ಅವೈಜ್ಞಾನಿಕ ಕಾಮಗಾರಿ ಕುರಿತು ಹಲವು ಬಾರಿ ಪುರಸಭೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಶರಾಬಿ ನದಿ ಸೇರಿ ತಾಲೂಕಿನ ಹಲವು ನದಿಗಳಲ್ಲಿ ಹೂಳು ತುಂಬಿದ್ದು, ಹೂಳೆತ್ತುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ. ಇಲ್ಲವಾದಲ್ಲಿ ಉ.ಕ. ಜಿಲ್ಲೆಯ ಚಿರಾಪುಂಜಿಯಾಗಿರುವ ಭಟ್ಕಳದ ಜನರು ಹನಿ ನೀರಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದರೂ ಆಶ್ಚರ್ಯಪಡಬೇಕಿಲ್ಲ.

ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಭಟ್ಕಳ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೊಷಿಸಲಾಗಿದೆ. ಈಗಾಗಲೇ 10 ಗ್ರಾಪಂ ವ್ಯಾಪ್ತಿಗಳಲ್ಲಿ 15 ಗ್ರಾಮಗಳ ಅಡಿ 58 ಮಜರೆ ಗ್ರಾಮಗಳಿಗೆ ಕುಡಿಯುವ ನೀರನ್ನು ಆದ್ಯತೆ ಮೇರೆಗೆ ಪೂರೈಸಲಾಗುತ್ತಿದೆ. ಗ್ರಾಮೀಣ, ಪಟ್ಟಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಆಗುತ್ತಿದ್ದಲ್ಲಿ ತಹಸೀಲ್ದಾರ್ ಕಚೇರಿಯ ದೂ.ಸಂ. 08385-226422 ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದು. | ಎನ್.ಬಿ. ಪಾಟೀಲ ತಹಸೀಲ್ದಾರ್ ಭಟ್ಕಳ

ಅಂತರ್ಜಲ ಬತ್ತಲು ಏನು ಕಾರಣ?

ಮೊದಲೆಲ್ಲ ಶರಾಬಿ ನದಿಗೆ ಅಲ್ಲಲ್ಲಿ ಪಕ್ಕದ ರೈತರೆಲ್ಲ ಸೇರಿ ಕಟ್ಟೆ ಕಟ್ಟವುದು ವಾಡಿಕೆಯಾಗಿತ್ತು. ಇದರಿಂದ ನೀರು ನಿಲ್ಲುತ್ತಿದ್ದು, ಅಕ್ಕಪಕ್ಕದ ಬಾವಿಗಳಿಗೆ ನೀರಿನ ಸೆಲೆ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತಿತ್ತು. ಹೀಗಾಗಿ, ಸಮಸ್ಯೆ ಇಷ್ಟೊಂದು ಗಂಭೀರ ರೂಪ ಪಡೆಯುತ್ತಿರಲ್ಲಿಲ್ಲ. ಆದರೆ, ಈಗ ಶರಾಬಿ ನದಿ ತುಂಬೆಲ್ಲ ಹೂಳು ತುಂಬಿ ನೀರು ಪೋಲಾಗುತ್ತಿದ್ದರೂ ಸಂಬಂಧಪಟ್ಟ ಇಲಾಖೆ, ತಾಲೂಕಾಡಳಿತ, ಯಾವುದೇ ಜನಪ್ರತಿನಿಧಿಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಕೊಂಕಣ ರೈಲ್ವೆ ಬಂದಾಗಿನಿಂದ ಈ ಭಾಗದ ಜನರಿಗೆ ನೀರಿನ ಬವಣೆ ಎದುರಾಗಿದೆ. ಮಣ್ಣು ತುಂಬಿದ ಜಾಗವನ್ನೆಲ್ಲ ಹಾಗೆಯೇ ಬಿಟ್ಟಿರುವುದು ನೀರಿನ ಸಂಗ್ರಹ ಕಡಿಮೆಯಾಗಲು ಒಂದು ಕಾರಣವಾದರೆ, ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದ ಸೇತುವೆ ತಳವನ್ನು ಬ್ಲಾಕ್ ಮಾಡಿ ನೀರಿನ ಹರಿವನ್ನು ತಡೆದಿರುವುದು ಇನ್ನೊಂದು ಕಾರಣ. ಜನರ ಸಂಕಷ್ಟಕ್ಕೆ ಐಆರ್​ಬಿ ಸಂಸ್ಥೆಯ ಸಿಬ್ಬಂದಿ ಸ್ಪಂದಿಸುತ್ತಿಲ್ಲ. ಭಟ್ಕಳದಲ್ಲಿ ಸಣ್ಣ ನೀರಾವರಿ ಇಲಾಖೆ ಇದ್ದೂ ಇಲ್ಲದಂತಾಗಿದೆ. ಪ್ರತಿವರ್ಷ ನೀರಿನ ಅನುದಾನವನ್ನು ಮಾತ್ರ ಖರ್ಚು ಮಾಡುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

Read These Next

ಜನವರಿ 16 ರಿಂದ ಜಿಲ್ಲೆಯ 11 ಕೇಂದ್ರಗಳಲ್ಲಿ ಕೋವಿಶಿಲ್ಡ್ ಲಸಿಕೆ ವಿತರಣೆ : ಜಿಲ್ಲಾಧಿಕಾರಿ ಹರೀಶಕುಮಾರ.

ಕಾರವಾರ : ಜಿಲ್ಲೆಯ ಆರೋಗ್ಯ ಇಲಾಖೆಯ ವಿವಿಧ ಸ್ಥರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 14665 ಸಿಬ್ಬಂಧಿಗೆ ಮೊದಲ ಆಧ್ಯತೆಯಲ್ಲಿ ...

ಕರ್ನಾಟಕದಲ್ಲಿ ಕೊರೊನಾ ತಡೆಗೆ ಸರಕಾರದ ರಾತ್ರಿ ಕಫ್ರ್ಯೂ; ಭಟ್ಕಳದಲ್ಲಿ ಮದುವೆ ಕಾರ್ಯಕ್ರಮಗಳ ಮೇಲೆ ಕರಿನೆರಳು

ದೂರದ ಸೌದಿಅರೇಬಿಯಾ ಸರಕಾರ ಈಗಾಗಲೇ ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿಷೇಧ ಹೇರಿರುವುದರ ನಡುವೆಯೇ, ಕರ್ನಾಟಕ ಸರಕಾರ ಹೊಸ ವರ್ಷ ...

ಭಟ್ಕಳ: ಜಿಲ್ಲೆಯ ದೊಡ್ಡ ಪಂಚಾಯತ ಹಿರಿಮೆಯ ಶಿರಾಲಿಯಲ್ಲಿ 2 ಕುಟುಂಬದ ನಡುವಿನ ರಾಜಕೀಯ ಕಾಳಗಕ್ಕೆ ಕೊನೆ ಇಲ್ಲ !

ಉತ್ತರಕನ್ನಡ ಜಿಲ್ಲೆಯಲ್ಲಿ 35 ಸದಸ್ಯರು ಇರುವ ಶಿರಾಲಿ ಗ್ರಾಮ ಪಂಚಾಯತ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯತ ಎಂಬ ...

ಭಟ್ಕಳ: ಉತ್ತರಕನ್ನಡಕ್ಕೆ ದಂಡೆತ್ತಿ ಬಂದವರು ಇನ್ನೂ ದಡ ಸೇರಲೇ ಇಲ್ಲ; ದುಡಿದುಡಿದು ದಣಿವಾದರೂ ದುಂಡಗಾಗಲೇ ಇಲ್ಲ !

ಇದು ಕಾಡಿನ ನಡುವಿನ ಮನುಷ್ಯರ ರೋಧನ ! ರಾಜರ ದಂಡಿನೊಂದಿಗೆ ದಂಡೆತ್ತಿ ಬಂದ ಮರಾಠಿಗರು ಕಾಡಿನಲ್ಲಿಯೇ ತಲೆ ಮರೆಸಿಕೊಂಡು ಶತಮಾನಗಳೇ ...

ಉತ್ತರಕನ್ನಡ ಕಾಂಗ್ರೆಸ್‍ನಲ್ಲಿ ಧೂಳೆಬ್ಬಿಸಿದ ಡಿಕೆಶಿ ನಡೆ; ಕುಮಟಾ, ಶಿರಸಿಗೆ ಹೊಸ ಅಭ್ಯರ್ಥಿ ಸಾಧ್ಯತೆ ; ದೇಶಪಾಂಡೆ ನಿಗೂಢ ಹೆಜ್ಜೆ

ನಿವಾರ್, ಬುರೆವಿಯಂತಹ ಚಂಡಮಾರುತಗಳು ದೇಶದ ವಿವಿಧ ರಾಜ್ಯಗಳಲ್ಲಿ ಸದ್ದು ಮಾಡುತ್ತಿದ್ದರೂ ಉತ್ತರಕನ್ನಡ ಜಿಲ್ಲೆಗೆ ಅಂತಹ ಹಾನಿಯೇನೂ ...

ಭಟ್ಕಳ ಹೆಬಳೆಯಲ್ಲಿ ಕಸ, ತ್ಯಾಜ್ಯ ಸಂಗ್ರಹಕ್ಕೆ ತಡೆ; ಊರೆಲ್ಲ ದುರ್ವಾಸನೆ; ಜಾಗ, ಹಣವಿದ್ದರೂ ಯೋಜನೆ ಇಲ್ಲ !

ತಾಲೂಕಿನ ಹೆಬಳೆ ಪಂಚಾಯತ ಪ್ರದೇಶದಲ್ಲಿ ಮನೆ ಮನೆಯ ಕಸ, ತ್ಯಾಜ್ಯಗಳನ್ನು ಎತ್ತಿಕೊಂಡು ಊರ ನಡುವಿನ ಖಾಲಿ ಪ್ರದೇಶದಲ್ಲಿ ಸಂಗ್ರಹಿಸಿ ...