ಭಟ್ಕಳ: ತೆಂಗಿನಗುಂಡಿ ಬಂದರು ಜಟ್ಟಿ ವಿನ್ಯಾಸದ ಬಗ್ಗೆ ತಜ್ಞರಿಂದ ಮಾಹಿತಿ : ಸಚಿವ ಎಸ್.ಅಂಗಾರ

Source: S O News | By I.G. Bhatkali | Published on 29th June 2022, 8:50 PM | Coastal News |

ಭಟ್ಕಳ: ತಾಲೂಕಿನ ತೆಂಗಿನಗುಂಡಿ ಬಂದರು ಜಟ್ಟಿಗೆ ಹೊಂದಿಕೊಂಡ ಕಾಂಕ್ರೀಟ್ ಕುಸಿತದ ಕುರಿತಂತೆ ಅಗತ್ಯ ಮಾಹಿತಿ ಪಡೆಯಲಾಗಿದ್ದು, ಪ್ರಸಕ್ತವಾಗಿ ಜಟ್ಟಿ ವಿನ್ಯಾಸದ ಬಗ್ಗೆ ಅಪಸ್ವರ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ತಜ್ಞರಿಂದ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಬಂದರು ಹಾಗೂ ಮೀನುಗಾರಿಕಾ ಇಲಾಖೆಯ ಸಚಿವ ಎಸ್.ಅಂಗಾರ ಹೆಳಿದ್ದಾರೆ.

ಅವರು ಮಂಗಳವಾರ ತಾಲೂಕಿನ ತೆಂಗಿನಗುಂಡಿ ಬಂದರು ಕುಸಿತ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಸಕ್ತವಾಗಿ ಮೀನುಗಾರಿಕಾ ಇಲಾಖೆ ರೂಪಿಸಿದ ವಿನ್ಯಾಸದಂತೆ ಜಟ್ಟಿ, ಬಂದರು ಇತ್ಯಾದಿ ಕಾಮಗಾರಿಯನ್ನು ನಡೆಸಲಾಗುತ್ತದೆ. ಆದರೆ ಮುಂದಿನ ದಿನಗಳಲ್ಲಿ ಆಯಾ ಪರಿಸರಕ್ಕೆ ಹೊಂದಿಕೊಂಡು, ಅಲ್ಲಿನ ಮೀನುಗಾರರೊಂದಿಗೆ ಕಾಮಗಾರಿಯ ಬಗ್ಗೆ ಚರ್ಚಿಸಿ ಮುಂದುವರೆಯಲಾಗುವುದು.

ಭಟ್ಕಳ ತೆಂಗಿನಗುಂಡಿ ಬಂದರು ಪ್ರದೇಶದ ಕುಸಿತದ ಬಗ್ಗೆ ಚರ್ಚಿಸಲು ಸಂಬಂಧ ಪಟ್ಟ ದಾಖಲೆಗಳೊಂದಿಗೆ ಬೆಂಗಳೂರಿಗೆ ಬರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕುಸಿತ ದುರಸ್ತಿಯ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೂ ಪೂರ್ವದಲ್ಲಿ ಜಟ್ಟಿ ನಿರ್ಮಾಣದ ತಾಂತ್ರಿಕ ದೋಷದ ಬಗ್ಗೆ ಮೀನುಗಾರ ಮುಖಂಡರು ಸಚಿವರ ಗಮನ ಸೆಳೆದರು. ಕೋಟ್ಯಾಂತರ ರುಪಾಯಿ ವ್ಯಯಿಸಿ ಬಂದರು ನಿರ್ಮಿಸಲಾಗಿದೆ, ಆದರೆ ಮೀನುಗಾರಿಕೆಗೆ ಉಪಯೋಗವಾಗದಂತಹ ಸ್ಥಿತಿ ಇದೆ. ದುರಸ್ತಿ ಕಾರ್ಯ ತ್ವರಿತವಾಗಿ ನಡೆಯದೇ ಇದ್ದರೆ, ಇನ್ನಷ್ಟು ಭಾಗ ಕುಸಿತಕ್ಕೆ ಒಳಗಾಗುವ ಅಪಾಯ ಇದೆ ಎಂದು ಮುಖಂಡರು ಆತಂಕವನ್ನು ಹೊರ ಹಾಕಿದರು.

ಶಾಸಕ ಸುನಿಲ್ ನಾಯ್ಕ, ಮೀನುಗಾರಿಕಾ ಇಲಾಖೆಯ ಬಂದರು ಯೋಜನೆಯ ಉಪನಿರ್ದೇಶಕ ನಾಗರಾಜ ಚೆಳ್ಳಜ್ಜಿಮನೆ, ಬಂದರು ಇಲಾಖೆಯ ಅಭಿಯಂತರ ರಾಮದಾಸ ಆಚಾರಿ, ಭಟ್ಕಳ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಚೇತನ್, ಭಟ್ಕಳ ಬಿಜೆಪಿ ಘಟಕದ ಅಧ್ಯಕ್ಷ ಸುಬ್ರಾಯ ದೇವಡಿಗ, ತೆಂಗಿನಗುಂಡಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ಅನಂತ ಮೊಗೇರ, ಭಟ್ಕಳ ಮೊಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ, ಮೀನುಗಾರ ಮುಖಂಡರಾದ ಪುಂಡಲೀಕ ಹೆಬಳೆ, ಕೇಶವ ಮೊಗೇರ, ನಾರಾಯಣ ಮೊಗೇರ, ಲಕ್ಷ್ಮಣ ಕರ್ಕಿ, ಪದ್ಮಯ್ಯ ಮೊಗೇರ, ಚಂದ್ರ ಗೊಂಡ, ಮಾದೇವ ನಾಯ್ಕ, ಈರಪ್ಪ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...