ಭಟ್ಕಳದಲ್ಲಿ ವೈದ್ಯರ ಮುಷ್ಕರದ ಹಿನ್ನೆಲೆ ಖಾಸಗಿ ವೈದ್ಯರ ಗೈರು; ರೋಗಿಗಳಿಂದ ತುಂಬಿದ ಸರಕಾರಿ ಆಸ್ಪತ್ರೆ

Source: S O news Service | By I.G. Bhatkali | Published on 19th June 2019, 8:46 PM | Coastal News |

ಭಟ್ಕಳ: ಕೋಲ್ಕತ್ತಾದಲ್ಲಿ ನಡೆದ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಇಂಡಿಯನ್ ಮೆಡಿಕಲ್ ಅಸೋಶಿಯೇಶನ್ ರಾಷ್ಟ್ರವ್ಯಾಪಿ ನೀಡಿರುವ ಬಂದ್ ಕರೆಗೆ ತಾಲೂಕಿನಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರು ಸೇವೆಯಿಂದ ದೂರ ಉಳಿದು ಮುಷ್ಕರಕ್ಕೆ ಬೆಂಬಲ ನೀಡಿದರು. 

ಇಲ್ಲಿನ 25ಕ್ಕೂ ಹೆಚ್ಚು ಕ್ಲಿನಿಕ್ ಮತ್ತು ನರ್ಸಿಂಗ್ ಹೋಮ್‍ಗಳಲ್ಲಿ ಸೋಮವಾರ ವೈದ್ಯರು ಕಾಣಸಿಗಲಿಲ್ಲ. ಮುಷ್ಕರದ ಮಾಹಿತಿ ಇರದೇ ಆಸ್ಪತ್ರೆಗೆ ಬಂದ ಹೊರರೋಗಿಗಳನ್ನು ಆಸ್ಪತ್ರೆಯ ಸಿಬ್ಬಂದಿಗಳು ಒಳಕ್ಕೆ ಬಿಟ್ಟುಕೊಳ್ಳಲಿಲ್ಲ. ಹೆರಿಗೆಯಂತಹ ತುರ್ತು ಪ್ರಕರಣಗಳನ್ನು ಅಸ್ಪತ್ರೆಯಲ್ಲಿದ್ದ ನರ್ಸ ಹಾಗೂ ಸಹಾಯಕರೇ ವೈದ್ಯರೊಂದಿಗೆ ದೂರವಾಣಿಯ ಮೂಲಕ ಸಲಹೆ ಪಡೆದು ನಿರ್ವಹಿಸಿದರು. ಖಾಸಗಿ ಆಸ್ಪತ್ರೆಗಳ ಸೇವಾ ನಿರ್ಬಂಧದಿಂದಾಗಿ ಭಟ್ಕಳ ಸರಕಾರಿ ಆಸ್ಪತ್ರೆ ರೋಗಿಗಳಿಂದ ತುಂಬಿ ತುಳುಕಾಡಿತು. ಆಸ್ಪತ್ರೆಯ ಆವರಣದಲ್ಲಿ ಎಲ್ಲಿ ನೋಡಿದರಲ್ಲಿ ವೈದ್ಯರನ್ನು ಕಾಣಲು ಜನರು ಸರದಿ ಸಾಲಿನಲ್ಲಿ ನಿಂತಿರುವುದು ಕಂಡು ಬಂತು. 

ವೈದ್ಯರಿಂದ ಮನವಿ: ವೈದ್ಯರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದ್ದು, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಟ್ಕಳ ಐಎಮ್‍ಎ ಸದಸ್ಯರು ಸಹಾಯಕ ಆಯುಕ್ತರ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು. ಇತ್ತೀಚಿಗೆ ಪಶ್ಚಿಮಬಂಗಾಳದಲ್ಲಿ ಯುವ ವೈದ್ಯ ಡಾ.ಪರಿಬಾ ಮುಖರ್ಜಿಯವರ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ಅಮನಾವೀಯವಾಗಿದೆ. ಪ್ರಸ್ತುತ ಹಲ್ಲೆಗೊಳಗಾದ ವೈದ್ಯರು ಜೀವನ ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ತಡೆಯುವುದಕ್ಕಾಗಿ ರಾಷ್ಟ್ರೀಯ ಕಾಯ್ದೆಯನ್ನು ಕೂಡಲೇ ಜಾರಿಗೊಳಿಸಬೇಕು. ಈ ಮೂಲಕ ವೈದ್ಯರ ರಕ್ಷಣೆಗೆ ಸರಕಾರ ಮುಂದಾಗಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ. ಭಟ್ಕಳ ಸಹಾಯಕ ಆಯುಕ್ತ ಸಾಜೀದ್ ಮುಲ್ಲಾ ಮನವಿ ಪತ್ರವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಐಎಮ್‍ಎ ಭಟ್ಕಳ ಘಟಕದ ಅಧ್ಯಕ್ಷ ಡಾ.ಗಣೇಶ ಪ್ರಭು, ಡಾ.ಆರ್.ವಿ.ಸರಾಫ್, ಡಾ.ವಿಶ್ವನಾಥ, ಡಾ.ಪಾಂಡುರಂಗ ನಾಯಕ್, ಡಾ.ಚೇತನ್ ಕಲ್ಕೂರ್, ಡಾ.ಶಿವಪ್ರಕಾಶ, ಡಾ.ವಿನೀತಾ, ಡಾ.ಯಾಸೀನ್, ಡಾ.ಸಮಿಯುಲ್ಲಾ, ಡಾ.ಕಿಣಿ ಮೊದಲಾದವರು ಉಪಸ್ಥಿತರಿದ್ದರು.
 

Read These Next