ಭಟ್ಕಳ ಹೆಬಳೆ ಹನೀಫಾಬಾದ್‍ನಲ್ಲಿ ಕಸ, ತ್ಯಾಜ್ಯ ವಿಲೇವಾರಿಗೆ ಗ್ರಾಮಸ್ಥರ ವಿರೋಧ

Source: S O News service | By V. D. Bhatkal | Published on 8th May 2021, 2:42 PM | Coastal News |

ಭಟ್ಕಳ: ತಾಲೂಕಿನ ಹೆಬಳೆ ಗ್ರಾಮ ಪಂಚಾಯತ ವ್ಯಾಪ್ತಿಯ ಹನೀಫಾಬಾದ್‍ನ ಅತಿಕ್ರಮಿತ ಅರಣ್ಯ ಪ್ರದೇಶವೊಂದರಲ್ಲಿ ಕಸ, ತ್ಯಾಜ್ಯ ವಿಲೇವಾರಿಗೆ ಪಂಚಾಯತ ಆಡಳಿತ ಮುಂದಾಗಿರುವುದಕ್ಕೆ ಅಲ್ಲಿನ ಜನರು ವಿರೋಧ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆದಿದೆ.

ತಾಲೂಕಿನ ಹೆಬಳೆ ಹನೀಪಾಬಾದ್ ನೆರಳೇಸರ ಭಾಗದಲ್ಲಿ ಕಸ, ತ್ಯಾಜ್ಯಗಳು ತುಂಬಿಕೊಂಡಿದ್ದು, ಅದನ್ನು ಸದರಿ ಅತಿಕ್ರಮಿತ ಅರಣ್ಯ ಪ್ರದೇಶಕ್ಕೆ ತಂದು ಹೊಂಡ ಕೊರೆದು ಹೂಳುವುದಕ್ಕೆ ಪಂಚಾಯತ ಆಡಳಿತ ಮುಂದಾಗಿತ್ತು. ಕಸ, ತ್ಯಾಜ್ಯ ವಿಲೇವಾರಿಗೂ ಮುನ್ನ ಅದನ್ನು ಸಾಗಿಸಲು ಅನುಕೂಲವಾಗುವಂತೆ ತಾತ್ಕಾಲಿಕ ರಸ್ತೆ ನಿರ್ಮಾಣಕ್ಕಾಗಿ ಪಂಚಾಯತ ಸಿಬ್ಬಂದಿಗಳು ಜೆಸಿಬಿ ಯಂತ್ರದೊಂದಿಗೆ ಗುರುವಾರ ಸದರಿ ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ, ಅಲ್ಲಿನ ಜನರು ಪಂಚಾಯತ ಸಿಬ್ಬಂದಿಗಳನ್ನು ಸುತ್ತುವರಿದು ಆಕ್ರೋಶ ಹೊರ ಹಾಕಿದರು.

ಕಸ, ತ್ಯಾಜ್ಯ ವಿಲೇವಾರಿಗೆ ಗೊತ್ತುಪಡಿಸಿದ ಅರಣ್ಯ ಪ್ರದೇಶವು ಅತಿಕ್ರಮಿತ ಪ್ರದೇಶವಾಗಿದ್ದು, ಅತಿಕ್ರಮಣದಾರರು ತೆರಿಗೆಯನ್ನೂ ನೀಡುತ್ತ ಬಂದಿದ್ದಾರೆ. ಅಲ್ಲದೇ ಸದರಿ ಪ್ರದೇಶವು ಮಳೆಗಾಲದ ನೀರು ಹರಿದು ಹೋಗುವ ಸ್ಥಳವಾಗಿದ್ದು, ಕಸ, ತ್ಯಾಜ್ಯವನ್ನು ರಾಶಿ ಹಾಕುವುದರಿಂದ ನೀರು ಹರಿಯುವುದಕ್ಕೆ ತಡೆಯೊಡ್ಡಿದಂತಾಗುತ್ತದೆ. ಕಸ, ತ್ಯಾಜ್ಯ ವಿಲೇವಾರಿಯಿಂದಾಗಿ ಸುತ್ತಮುತ್ತಲಿನ ನಿವಾಸಿಗಳು ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ, ಬೀದಿ ನಾಯಿಗಳು ಕಸ, ತ್ಯಾಜ್ಯಗಳ ಮೇಲೆ ಮುಗಿ ಬೀಳಲಿದ್ದು, ಸುತ್ತಮುತ್ತ ತ್ಯಾಜ್ಯಗಳ ವಾಸನೆ ಹರಡಲಿದೆ ಎಂದು ಆರೋಪಿಸಿದರು.

ಆದರೆ ಇದನ್ನು ಅಲ್ಲಗಳೆದ ಕೆಲ ಪಂಚಾಯತ ಸದಸ್ಯರು ಹಾಗೂ ಸಿಬ್ಬಂದಿಗಳು, ಈ ಮೊದಲೇ ಮನೆಯ ಸಮೀಪ ಕಸ, ತ್ಯಾಜ್ಯವನ್ನು ಹಾಕಿಕೊಳ್ಳಲಾಗಿತ್ತು, ಹಬ್ಬ ಸಮೀಪಿಸುತ್ತಿರುವುದರಿಂದ ಜನರಿಗೆ ಕಿರಿಕಿರಿಯಾಗದಿರಲಿ ಎನ್ನುವ ಕಾರಣಕ್ಕೆ ಹನೀಫಾಬಾದ್ ನೇರಳೇಸರ ಸುತ್ತಮುತ್ತ ಬಿದ್ದಿರುವ ಕಸ, ತ್ಯಾಜ್ಯಗಳನ್ನು ತಂದು, ಒಂದು ಬಾರಿ ಮಾತ್ರ ಅರಣ್ಯ ಪ್ರದೇಶದಲ್ಲಿ ಹೊಂಡ ಕೊರೆದು ಮುಚ್ಚುವುದಕ್ಕೆ ತೀರ್ಮಾನಿಸಿದ್ದೆವು.

ಹೆಬಳೆ ಪಂಚಾಯತಕ್ಕೆ ಪ್ರತ್ಯೇಕ ತ್ಯಾಜ್ಯ ವಿಲೇವಾರಿ ಘಟಕ ಮಂಜೂರಾಗಿದ್ದು, ಮತ್ತೆ ಇಲ್ಲಿ ಕಸ, ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದಿಲ್ಲ, ಆದರೆ ಇದನ್ನು ಅರ್ಥ ಮಾಡಿಕೊಳ್ಳದೇ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿರುಗೇಟು ನೀಡಿದರು.

ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ತಾತ್ಕಾಲಿಕ ರಸ್ತೆ ನಿರ್ಮಾಣ ಕಾಮಗಾರಿಯನ್ನು ಅಲ್ಲಿಗೇ ಬಿಟ್ಟು ಪಂಚಾಯತ ಸದಸ್ಯರು, ಸಿಬ್ಬಂದಿಗಳು ತೆರಳಿದರು. ಈ ಸಂದರ್ಭದಲ್ಲಿ ಪಂಚಾಯತ ಸದಸ್ಯರು ಹಾಗೂ ಭಟ್ಕಳ ಬಿಜೆಪಿ ಘಟಕದ ಅಧ್ಯಕ್ಷರೂ ಆಗಿರುವ ಸುಬ್ರಾಯ ದೇವಡಿಗ, ಚಂದ್ರು ಗೊಂಡ, ವಿಜೇತ ಶೆಟ್ಟಿ, ಸ್ಥಳೀಯ ನಿವಾಸಿಗಳಾದ ಮುಷ್ತಾಕ್, ಸಾದೀಕ್, ವಾಸೀಕ್, ಸುಹೈಲ್, ಜಮಾನ್, ಪಂಚಾಯತ ಸಿಬ್ಬಂದಿ ವಿನಾಯಕ ಮತ್ತಿತರರು ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...