ದಸರಾ ರಜೆಗೆ ಮುರುಡೇಶ್ವರವನ್ನು ತುಂಬಿಕೊಂಡ ಪ್ರವಾಸಿಗರು; ಕಡಲತಡಿಯಲ್ಲಿ ಜನವೋ ಜನ; ವಾಹನ ದಟ್ಟಣೆ ನಿಭಾಯಿಸಲು ಪೊಲೀಸ್ ಸಾಹಸ
ಭಟ್ಕಳ: ಸರಣಿ ರಜೆಯಿಂದಾಗಿ ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರ ಪ್ರವಾಸಿಗರಿಂದ ತುಂಬಿ ಹೋಗಿದೆ. ಕಡಲ ತಡಿಯಲ್ಲಿ ಕಣ್ಣು ಹಾಯಿಸಿದಷ್ಟೂ ಇರುವೆ ತುಂಬಿಕೊಂಡಂತೆ ಜನರೇ ಕಾಣಿಸುತ್ತಿದ್ದು, ಮುರುಡೇಶ್ವರ ಇನ್ನಷ್ಟು ಕಿರಿದಾದಂತೆ ಭಾಸವಾಗುತ್ತಿದೆ.
ಕಳೆದ 5-6 ದಿನಗಳಿಂದ ಮುರುಡೇಶ್ವರಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದಾರೆ. ಮುರುಡೇಶ್ವರ ದೇವಸ್ಥಾನದಲ್ಲಿಯೂ ಸಹಸ್ರಾರು ಭಕ್ತರು ಜಮಾಯಿಸಿರುವುದು ಕಂಡು ಬಂದಿದೆ. ಗೋಪುರದ ಆವರಣದಲ್ಲಿ ಲೆಕ್ಕವಿಲ್ಲದಷ್ಟು ಜನರ ಓಡಾಟ ಮುರುಡೇಶ್ವರಕ್ಕೆ ಹೊಸ ಚೈತನ್ಯವನ್ನು ತಂದಿದೆ. ಪರಿಣಾಮವಾಗಿ ಮುರುಡೇಶ್ವರದಲ್ಲಿನ ಬಹುತೇಕ ಎಲ್ಲ ವಸತಿಗೃಹಗಳು ಭರ್ತಿಯಾಗಿವೆ. ವಸತಿಗೃಹದ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಕೋಣೆಗಳ ಬಾಡಿಗೆ ದರವೂ 3-4 ಪಟ್ಟು ಏರಿಕೆ ಕಂಡಿದೆ. ಮಳೆಗಾಲದಲ್ಲಿ ಮುದುಡಿಕೊಂಡು ಕುಳಿತಿದ್ದ ಹೊಟೆಲ್, ಅಂಗಡಿಗಳು ಭರ್ಜರಿ ವ್ಯಾಪಾರ ವಹಿವಾಟು ನಡೆಸಿವೆ. ಕಡಲತಡಿಯಲ್ಲಿನ ಸಣ್ಣಪುಟ್ಟ ಅಂಗಡಿಗಳಿಗೂ ಕಳೆ ಬಂದು ಬಿಟ್ಟಿದೆ. ಬೋಟಿಂಗ್ ಉದ್ಯಮವೂ ಪ್ರಗತಿಯತ್ತ ಹೆಜ್ಜೆ ಹಾಕಿದೆ. ಈ ನಡುವೆ ಕಡಲಿನೊಂದಿಗೆ ಆಟವಾಡಲು ನೀರಿಗೆ ಇಳಿಯುವವರ ಸಂಖ್ಯೆಯೂ ಹೆಚ್ಚುತ್ತಲೇ ಇದ್ದು, ಜೀವ ರಕ್ಷಕ ಸಿಬ್ಬಂದಿಗಳು ಕಟ್ಟೆಚ್ಚರ ವಹಿಸಿದ್ದಾರೆ.
ವಾಹನ ದಟ್ಟಣೆ ನಿಭಾಯಿಸಲು ಸಾಹಸ:
ಮುರುಡೇಶ್ವರದಲ್ಲಿ ಹೆಚ್ಚಿನ ಪ್ರವಾಸಿಗರಿಂದಾಗಿ ನಿರಂತರವಾಗಿ ವಾಹನ ದಟ್ಟಣೆ ನಿರ್ಮಾಣವಾಗುತ್ತಿರುವುದು ಕಂಡು ಬಂದಿದೆ. ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಕಾರು, ಟೆಂಪೋಗಳು ಸಮುದ್ರ ಬೇಲೆಯನ್ನೇ ಆಶ್ರಯಿಸಿಕೊಳ್ಳುತ್ತಿವೆ. ರಸ್ತೆಯಲ್ಲಿಯಂತೂ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರಿಗೂ ವಾಹನ ದಟ್ಟಣೆಯ ಬಿಸಿ ತಟ್ಟಿದೆ. 200-300 ಮೀ. ಅಂತರವನ್ನು ಕ್ರಮಿಸಲು ಒಮ್ಮೊಮ್ಮೆ ಅರ್ಧ ಗಂಟೆಗೂ ಅಧಿಕ ಕಾಲ ರಸ್ತೆಯಲ್ಲಿಯೇ ಕಾಲ ಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬಸ್ತಿಯಿಂದ ಮುಂದಕ್ಕೆ ಮುರುಡೇಶ್ವರವನ್ನು ತಲುಪುವ ರಸ್ತೆಯ ಕೊನೆಯಲ್ಲಿ ಅಲ್ಲಲ್ಲಿ ಚರಂಡಿ ಕಾಮಗಾರಿಗಾಗಿ ಹೊಂಡವನ್ನು ತೆಗೆದು ಹಾಗೆಯೇ ಬಿಡಲಾಗಿದ್ದು, ಪ್ರಯಾಣಿಕರು, ವಾಹನ ಸವಾರರ ಸಂಕಷ್ಟವನ್ನು ಹೆಚ್ಚಿಸಿದೆ.
ಕಳೆದ 1 ವಾರದಿಂದ ಮುರುಡೇಶ್ವರದಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ವಾಹನ ದಟ್ಟಣೆಯನ್ನು ನಿಭಾಯಿಸಲು ಪೊಲೀಸರು ಸತತವಾಗಿ ಪ್ರಯತ್ನ ನಡೆಸಿದ್ದಾರೆ - ರವೀಂದ್ರ ಬಿರಾದಾರ, ಎಸ್‍ಐ, ಮುರುಡೇಶ್ವರ ಠಾಣೆ |
ಹೆಚ್ಚಿನ ಪೊಲೀಸರು ವಾಹನ ದಟ್ಟಣೆಯನ್ನು ನಿಭಾಯಿಸುವಲ್ಲಿಯೇ ಹೈರಾಣಾಗಿ ಹೋಗಿದ್ದಾರೆ. ಓಲಗ ಮಂಟಪದಿಂದ ಮುರುಡೇಶ್ವರ ದೇವಸ್ಥಾನ ಪಕ್ಕದ ಗೋಪುರದವರೆಗೂ ವಾಹನಗಳನ್ನು ತಡೆದು ಮುಂದಕ್ಕೆ ಸಾಗ ಹಾಕುವುದೇ ನಿತ್ಯದ ಕೆಲಸವಾಗಿ ಬಿಟ್ಟಿದೆ.
ಅಭಿವೃದ್ಧಿ ಕಾಮಗಾರಿ ವಿಳಂಬ:
ಪ್ರತಿ ವರ್ಷ ಮುರುಡೇಶ್ವರದಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದ್ದರೂ ಅದಕ್ಕೆ ಹೊಂದಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸುವ ಕಾರ್ಯ ವಿಳಂಬವಾಗುತ್ತಲೇ ಇದೆ. ರಸ್ತೆ, ಚರಂಡಿ, ಪಾರ್ಕಿಂಗ್ ಎಲ್ಲವೂ ಮುರುಡೇಶ್ವರದಲ್ಲಿ ಸಮಸ್ಯೆಯನ್ನು ತಂದೊಡ್ಡುತ್ತಲೇ ಇದ್ದರೂ ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಆಡಳಿತ ಸೋತಿದೆ ಎನ್ನುವ ಅಭಿಪ್ರಾಯ ಸ್ಥಳೀಯವಾಗಿ ವ್ಯಕ್ತವಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ ಮುರುಡೇಶ್ವರದ ಯಾತನೆ ಮತ್ತಷ್ಟು ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ!