ಸರಕಾರಿ ಆಸ್ಪತ್ರೆಗೆ ರಜೆ, ಖಾಸಗಿ ಆಸ್ಪತ್ರೆಗೆ ಹಾಜರ್; ಭಟ್ಕಳದಲ್ಲಿ ವೈದ್ಯೆಯ ವಿರುದ್ಧ ಸಹಾಯಕ ಆಯುಕ್ತರಿಗೆ ದೂರು

Source: S O News service | By I.G. Bhatkali | Published on 16th June 2021, 3:14 PM | Coastal News |

ಭಟ್ಕಳ: ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಗರ್ಭಿಣಿಯೋರ್ವಳಿಗೆ ವೈದ್ಯರೋರ್ವರ ರಜೆಯಿಂದಾಗಿ ಸರಕಾರಿ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ಸಿಗದ ಕಾರಣ ಆಕೆ ಖಾಸಗಿ ಆಸ್ಪತ್ರೆಗೆ ತೆರಳಿದ್ದು, ಸರಕಾರಿ ಆಸ್ಪತ್ರೆಯಲ್ಲಿ ರಜೆಯಲ್ಲಿದ್ದ ವೈದ್ಯರೇ ಖಾಸಗಿ ಆಸ್ಪತ್ರೆಯಲ್ಲಿ ಪ್ರತ್ಯಕ್ಷರಾಗಿ ಚಿಕಿತ್ಸೆ ನೀಡಿರುವದಕ್ಕೆ ಗರ್ಭೀಣಿ ಮಹಿಳೆಯ ಕುಟುಂಬದವರು ಆಕ್ರೋಶವನ್ನು ಹೊರ ಹಾಕಿದ್ದಾರೆ.

ಈ ಕುರಿತು ಗರ್ಭೀಣಿಯ ಪತಿ, ಇಲ್ಲಿನ ಮುಗ್ದಮ್ ಕಾಲೋನಿಯ ನಿವಾಸಿ ಝಕ್ರಿಯಾ ಸಿದ್ದಿಕ್ ಎಂಬುವವರು ಮಂಗಳವಾರ ಭಟ್ಕಳ ಸಹಾಯಕ ಆಯುಕ್ತರಿಗೆ ದೂರು ನೀಡಿದ್ದಾರೆ.

ಸೋಮವಾರ ಗರ್ಭಿಣಿಯಾಗಿರುವ ತನ್ನ ಪತ್ನಿಯನ್ನು ಹೆರಿಗೆಯ ಸಂಬಂಧ ಭಟ್ಕಳ ಪಟ್ಟಣದಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಅರ್ಧ ಗಂಟೆಯ ಒಳಗೆ ಹೆರಿಗೆ ಮಾಡಿಸಬೇಕಾಗಿದ್ದು, ಆಪರೇಷನ್ ಅಗತ್ಯ ಇರುವ ಬಗ್ಗೆ ತಿಳಿಸಿದ್ದಾರೆ. ಆದ್ದರಿಂದ ನಾವು ಕೂಡಲೇ ಶಿರಾಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ್ದು, ಅಲ್ಲಿನ ವೈದ್ಯರೂ ತುರ್ತು ತುರ್ತು ಶಸ್ತ್ರ ಚಿಕಿತ್ಸೆಗೆ ಸೂಚಿಸಿದ್ದಾರೆ. ಅಲ್ಲಿಯೇ ಆಪರೇಷನ್ ಮಾಡುವುದಕ್ಕೆ ನಾವು ಒಪ್ಪುತ್ತಿದ್ದಂತೆಯೇ, ಶಿರಾಲಿ ಆರೋಗ್ಯ ಕೇಂದ್ರದಲ್ಲಿ ಇದ್ದ ಅರವಳಿಕೆ ತಜ್ಞರು ರಜೆಯ ಮೇಲೆ ಇರುವುದರಿಂದ ಆಪರೇಷನ್ ಅಸಾಧ್ಯವೆಂತಲೂ, ಕೂಡಲೇ ಹೊನ್ನಾವರ ಅಥವಾ ಕುಂದಾಪುರಕ್ಕೆ ಕರೆದುಕೊಂಡು ಹೋಗುವಂತೆಯೂ ತಿಳಿಸಿರುತ್ತಾರೆ.

ಆದರೆ ನಮ್ಮ ಪರಿಸ್ಥಿತಿ ಸರಿ ಇರದ ಕಾರಣ ನಾವು ವಾಪಸ್ಸು ಭಟ್ಕಳಕ್ಕೆ ಬಂದು ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು ಕರೆದುಕೊಂಡು ಹೋಗಿದ್ದೇವೆ. ವಿಶೇಷ ಎಂದರೆ ಶಿರಾಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಜೆಯ ಮೇಲೆ ಇರುವ ಅರವಳಿಕೆ ವೈದ್ಯರೇ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರತ್ಯಕ್ಷರಾಗಿ ಚಿಕಿತ್ಸೆ ನೀಡಿದ್ದಾರೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ವ್ಯಕ್ತಿಯನ್ನು ಸರಿಯಾದ ಸಮಯದಲ್ಲಿ ಉಪಚರಿಸದೇ ವಿಳಂಬ ಮಾಡಿರುವುದರಿಂದ ಗರ್ಭೀಣಿ ಹಾಗೂ ಹುಟ್ಟಿದ ಮಗುವಿಗೆ ಹೆಚ್ಚಿನ ಹಾನಿಯನ್ನು ಮಾಡಿದೆ. ಅಲ್ಲದೇ ಖಾಸಗಿ ಆಸ್ಪತ್ರೆಯ ಖರ್ಚುವೆಚ್ಚಗಳು ಹೆಚ್ಚಾಗಿದ್ದು, ನಮಗೆ ಭರಿಸಲು ಶಕ್ತಿ ಇಲ್ಲದಾಗಿದೆ. ಇದಕ್ಕೆಲ್ಲ ಶಿರಾಲಿ ಆರೋಗ್ಯ ಕೇಂದ್ರದಲ್ಲಿ ರಜೆಯ ಮೇಲೆ ಇದ್ದ ವೈದ್ಯರೇ ಕಾರಣರಾಗಿದ್ದಾರೆ. ಇದೇ ವೈದ್ಯರೇ ಖಾಸಗಿ ಆಸ್ಪತ್ರೆಯಲ್ಲಿ ಪಡೆದ ಹಣವನ್ನು ನಾವು ಶಿರಾಲಿ ಆರೋಗ್ಯ ಕೇಂದ್ರದಲ್ಲಿ ಕೇಳಿದ್ದರೂ ನೀಡಲು ಸಿದ್ಧರಿದ್ದೆವು. ಆದರೆ ಮಾನವೀಯತೆಯನ್ನು ಮರೆತು ಹಣಕ್ಕಾಗಿ ವೃತ್ತಿ ಪರತೆಯನ್ನು ವೈದ್ಯರು ಮರೆತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ. ಭಟ್ಕಳ ಸಹಾಯಕ ಆಯುಕ್ತೆ ಮಮತಾದೇವಿ ಮನವಿ ಪತ್ರವನ್ನು ಸ್ವೀಕರಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...