ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ವೆಂಕಟೇಶ ಪದಗ್ರಹಣ ಚುನಾವಣೆಯನ್ನು ಗೆಲ್ಲಲು ಒಗ್ಗಟ್ಟಿನ ಮಂತ್ರ ಜಪಿಸಿದ ಮುಖಂಡರು

Source: S O News | By I.G. Bhatkali | Published on 3rd December 2022, 5:39 PM | Coastal News |

ಭಟ್ಕಳ: ಭಟ್ಕಳ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ತಾಲೂಕಿನ ಶಿರಾಲಿ ಚಿತ್ರಾಪುರದ ವೆಂಕಟೇಶ ನಾರಾಯಣ ನಾಯ್ಕ ಅಂಗಡಿಮನೆ ಗುರುವಾರ ಅಧಿಕಾರವನ್ನು ಸ್ವೀಕರಿಸಿದರು.

 ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ನೂತನ ಅಧ್ಯಕ್ಷರಿಗೆ ಕಾಂಗ್ರೆಸ್ ಬಾವುಟ ಹಾಗೂ ಅಧ್ಯಕ್ಷ ಹುದ್ದೆಯ ಆದೇಶ ಪತ್ರವನ್ನು ಹಸ್ತಾಂತರಿಸುವ ಮೂಲಕ ಪದ ಗ್ರಹಣ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ನಂತರ ಮಾತನಾಡಿದ ಜಿಲ್ಲಾಧ್ಯಕ್ಷ ಭೀಮಣ್ಣ, ರಾಜ್ಯಾಧ್ಯಕ್ಷರ ಆದೇಶದಂತೆ ಪಕ್ಷ ಸಂಘಟನೆ ಕಾರ್ಯ ನಡೆಯುತ್ತಿದೆ. ಮುಂದಿನ ವಿಧಾನಸಭೆ, ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ, ಲೋಕಸಭೆ, ಗ್ರಾಮ ಪಂಚಾಯತ ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಪಕ್ಷವನ್ನು ಬಲಗೊಳಿಸಬೇಕಾದ ಹೊಣೆಗಾರಿಕೆ ನೂತನ ಬ್ಲಾಕ್ ಅಧ್ಯಕ್ಷರ ಮೇಲೆ ಇದೆ. ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯನವರಂತಹ ಹಿರಿಯ ಕಾಂಗ್ರೆಸ್ ನಾಯಕರು ದೇಶ, ರಾಜ್ಯವನ್ನು ಸುತ್ತಿ ಬಿಜೆಪಿಯ ನಿಜವಾದ ಮುಖವನ್ನು ಅನಾವರಣಗೊಳಿಸುತ್ತಿದ್ದಾರೆ. ಇದೀಗ ಕಾಂಗ್ರೆಸ್ ಪರ ಇರುವ ಮತದಾರರ ಹೆಸರುಗಳನ್ನು ಡಿಲೀಟ್ ಮಾಡುವ ಮೂಲಕ ಚುನಾವಣೆಯನ್ನು ಗೆಲ್ಲಲು ಬಿಜೆಪಿ ವಾಮ ಮಾರ್ಗವನ್ನು ಅನುಸರಿಸುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಬೂತ್ ಮಟ್ಟಕ್ಕೆ ಹೋಗಿ ಪರಿಶೀಲನೆ ನಡೆಸಬೇಕು ಎಂದು ಕರೆ ನೀಡಿದರು. ನೂತನ ಅಧ್ಯಕ್ಷ ವೆಂಕಟೇಶ ನಾಯ್ಕ, ಪಕ್ಷವನ್ನು ಕಟ್ಟಲು ಎಲ್ಲರ ಸಹಕಾರ ಕೋರಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಭಾಗ್ವತ ಮಾತನಾಡಿದರು. 

 ಆರ್‍ಎನ್ ನಾಯ್ಕ ಸಲಹೆ, ಎಚ್ಚರಿಕೆಗೆ ಮಂಕಾಳ ಉತ್ತರ :
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ವೆಂಕಟೇಶ ನಾಯ್ಕ ಅವರ ಮೇಲೆ ನನಗೆ ಭರವಸೆ ಇದೆ. ಆದರೆ ನಾಲ್ಕೂವರೆ ವರ್ಷಗಳ ಕಾಲ ಪಕ್ಷಕಟ್ಟಲು ಶ್ರಮಿಸಿದ್ದ ಸಂತೋಷ ನಾಯ್ಕ ಅವರನ್ನು ಕೈ ಬಿಟ್ಟಿದ್ದೇಕೆ ಎನ್ನುವುದು ಗೊತ್ತಾಗಿಲ್ಲ. ಅವರೇನಾದರೂ ತಪ್ಪು ಮಾಡಿದ್ದರೆ ಕಾರಣ ಕೇಳಬೇಕಿತ್ತು, ಸಮಸ್ಯೆ ಇದ್ದರೆ ಒಳಗೆ ಮಾತನಾಡಿ ಪರಿಹರಿಸಿಕೊಳ್ಳಬಹುದಿತ್ತು ಎಂದೆನ್ನಿಸುತ್ತದೆ. ಪಕ್ಷದಲ್ಲಿ ಬೇರೆ ಯಾವುದಾದರೂ ಹುದ್ದೆ ನೀಡಿ, ನಂತರ ಅವರಿಂದ ರಾಜಿನಾಮೆ ಕೇಳಬೇಕಿತ್ತು, ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಕಟ್ಟಬೇಕಾಗಿದೆ, ಕೆಲವು ಬ್ಲಾಕ್‍ಗಳಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಮಾಜಿ ಸಚಿವನಾದ ನನಗೆ ಸಭೆ, ಕಾರ್ಯಕ್ರಮಕ್ಕೆ ಆಹ್ವಾನ ನೀಡುವುದಿಲ್ಲ, ಕೇಳಿದರೆ ವಾಟ್ಸಪ್‍ನಲ್ಲಿ ಕಳುಹಿಸಿದ್ದೇವೆ ಎನ್ನುತ್ತಾರೆ. ಪಕ್ಷದಲ್ಲಿನ ಸದ್ಯದ ಬೆಳವಣಿಗೆ ಬೇಸರ ತರಿಸಿದ್ದು, ನಮಗೆ ಕ್ರೀಯಾಶೀಲರಾಗಲು ಅವಕಾಶ ಕೊಡಬೇಡಿ ಎಂದು ಮಾಜಿ ಸಚಿವ ಆರ್.ಎನ್.ನಾಯ್ಕ ಎಚ್ಚರಿಸಿದರು. 

ನಂತರ ಮಾತನಾಡಲು ನಿಂತ ಮಾಜಿ ಶಾಸಕ ಮಂಕಾಳ ವೈದ್ಯ, ಪಕ್ಷದ ಅಧ್ಯಕ್ಷರ ಬದಲಾವಣೆ ಯಾರ ಉದ್ದೇಶವೂ ಆಗಿರಲಿಲ್ಲ. ಅವರಿಗಿಂತ ಮೊದಲು ಇದ್ದ ಅಧ್ಯಕ್ಷರನ್ನೂ ಬದಲಾಯಿಸಿದ್ದಲ್ಲ. ನಾನು ಚುನಾವಣೆಗೆ ಸೋತಾಗ ಅವರೇ ಬಂದು ರಾಜಿನಾಮೆ ನೀಡಿದರು. ನಾನು ಬೇಡ ಎಂದರೂ ಅವರು ಕೇಳಲಿಲ್ಲ. ಜಿಲ್ಲೆಯಲ್ಲಿ ಭೀಮಣ್ಣ ನಾಯ್ಕ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿ ಕೈಯಿಂದ ಹಣವನ್ನು ಖರ್ಚು ಮಾಡಿಕೊಂಡು ಪಕ್ಷವನ್ನು ಸಂಘಟಿಸುತ್ತ ಬಂದಿದ್ದಾರೆ. ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತ, ಜಿಲ್ಲಾ ಪಂಚಾಯತ, ಪಟ್ಟಣ ಪಂಚಾಯತ ಯಾವುದೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಇರಲಿ ಪಕ್ಷದ ಕಾರ್ಯಕರ್ತರ ಪರವಾಗಿ ನಿಂತಿದ್ದೇನೆ. ನನ್ನ ಮೇಲೆ ಯಾರೇ ಏನೇ ಆಪಾದನೆ ಮಾಡಿದರೂ ಸಹಿಸಿಕೊಳ್ಳುತ್ತೇನೆ, ಆದರೆ ಕಾರ್ಯಕರ್ತರ ಮೇಲಿನ ಆಪಾದನೆಯನ್ನು ಸಹಿಸಲು ಸಾಧ್ಯವಿಲ್ಲ. ಈಗ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ವೆಂಕಟೇಶ ಅವರನ್ನು ಆಯ್ಕೆ ಮಾಡಿರುವುದು ಕಾರ್ಯಕರ್ತರೇ ಹೊರತೂ ನಾನಲ್ಲ. ಅವರಿಗೆ ಪಕ್ಷ ಕಟ್ಟಲು ಸಂಪೂರ್ಣವಾದ ಸ್ವಾತಂತ್ರ್ಯ ಇದೆ. ಅವರನ್ನು ಕರೆಯಬೇಡಿ, ಇವರನ್ನು ಕರೆಯಬೇಡಿ ಎಂದು ನಾನು ಯಾವತ್ತೂ ಯಾರಿಗೂ ಹೇಳುವುದಿಲ್ಲ. ಆರ್.ಎನ್.ನಾಯ್ಕರು ರಾಜಕೀಯದಲ್ಲಿ ಕ್ರೀಯಾಶೀಲರಾಗಬೇಕು, ಒಳಗಡೆ ಏನು ನಡೆಯುತ್ತದೆ, ಯಾರದ್ದು ತಪ್ಪು, ಸರಿ ಎಲ್ಲವೂ ಅರ್ಥವಾಗುತ್ತದೆ. ಪಕ್ಷದ ಒಳಗಿನ ಗುಂಪುಗಾರಿಕೆ ಇಂದು ಹುಟ್ಟಿದಲ್ಲ. ಆರ್.ಎನ್.ನಾಯ್ಕರ ಕಾಲದಿಂದ ಕಾಂಗ್ರೆಸ್‍ನಲ್ಲಿ ಇದೆ. ಯಾರು ಗುಂಪುಗಾರಿಕೆಯನ್ನು ಯಾಕಾಗಿ ಮಾಡುತ್ತ ಬಂದಿದ್ದಾರೆ ಎನ್ನುವುದು ನನಗಿಂತ ಆರ್.ಎನ್.ನಾಯ್ಕರಿಗೇ ಚೆನ್ನಾಗಿ ಗೊತ್ತು ಎನ್ನುತ್ತಿದ್ದಂತೆಯೇ ವೇದಿಕೆಯಲ್ಲಿದ್ದ ಆರ್.ಎನ್.ನಾಯ್ಕ ನಗೆಗಡಲಲ್ಲಿ ತೇಲಿ ಹೋದರು.

ಜಿಪಂ ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಲ್ಲಾ ಕಾಂಕ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಬ್ದುಲ್ ಮಜೀದ್, ತಾಪಂ ಮಾಜಿ ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ, ಸೋಮಯ್ಯ ಗೊಂಡ, ವೆಂಕ್ಟಯ್ಯ ಭೈರುಮನೆ, ಚಂದ್ರಶೇಖರ ಗೌಡ, ವಾಮನ ನಾಯ್ಕ ಮಂಕಿ, ಭಟ್ಕಳ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿಠ್ಠಲ್ ನಾಯ್ಕ, ಅಬ್ದುರ್ರವೂಫ್ ನಾಯಿತೇ, ಶಿರಾಲಿ ಗ್ರಾಪಂ ಅಧ್ಯಕ್ಷೆ ರೇವತಿ ನಾಯ್ಕ ಮೊದಾದವರು ಉಪಸ್ಥಿತರಿದ್ದರು. ಕಾಂಗ್ರೆಸ್ ಸೇವಾದಳ ಭಟ್ಕಳ ಘಟಕದ ಅಧ್ಯಕ್ಷ ರಾಜೇಶ ನಾಯ್ಕ ಸ್ವಾಗತಿಸಿದರು. ವಿಷ್ಣು ದೇವಡಿಗ ವಂದಿಸಿದರು. ದುರ್ಗಾದಾಸ ಪ್ರಾರ್ಥನೆಯನ್ನು ಹಾಡಿದರು. ನಾಗರಾಜ ಕರಿಕಲ್ ಕಾರ್ಯಕ್ರಮ ನಿರೂಪಿಸಿದರು.  
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...