ಭಟ್ಕಳ ಜಾಲಿ ಪಟ್ಟಣ ಪಂಚಾಯತನಲ್ಲಿ ಅಂಧಾ ದರ್ಬಾರ್; ಹಾಸನದ ವ್ಯಕ್ತಿಯ ಹೆಸರಿನಲ್ಲಿ ಸುಳ್ಳು ಮರಣ ದಾಖಲೆ; ಕೋಟ್ಯಾಂತರ ರುಪಾಯಿ ವಿಮೆ ಲಪಟಾಯಿಸಲು ಯತ್ನ

Source: S O News | By V. D. Bhatkal | Published on 20th January 2022, 9:26 PM | Coastal News |

ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯತ ಆಡಳಿತದ ಅಂಧಾ ದರ್ಬಾರ್‍ಗೆ ಕೊನೆಯೇ ಇಲ್ಲದಂತಾಗಿದೆ. ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳ ಸಹಿಯನ್ನೇ ನಕಲು ಮಾಡಿ ವ್ಯಕ್ತಿಯೋರ್ವರಿಗೆ ನಿರಪೇಕ್ಷಣಾ ಪತ್ರ ನೀಡಿದ ಆರೋಪದ ಮೇರೆಗೆ ಅಲ್ಲಿನ ಸಿಬ್ಬಂದಿ ಇಸ್ಮೈಲ್ ಗುಬ್ಬಿ ಜೈಲು ಸೇರಿದ ಬೆನ್ನಿಗೇ, ಸುಳ್ಳು ಮರಣ ದಾಖಲೆ ಪತ್ರ ಸೃಷ್ಟಿಸಿ ಕೋಟ್ಯಾಂತರ ರುಪಾಯಿ ವಿಮೆ ಹಣ ಲಪಟಾಯಿಸಲು ನಡೆದಿರುವ ಇನ್ನೊಂದು ಪ್ರಯತ್ನ ಬಹಿರಂಗಗೊಂಡಿದೆ.

ಮೀನಾಕ್ಷಿ ಬಿ.ಎಚ್. ಜಂಗನಗದ್ದೆ ಜಾಲಿ ಇವರ ಹೆಸರಿನಲ್ಲಿ ಕಳೆದ 2021, ಆಗಸ್ಟ 4ರಂದು ಜಾಲಿ ಪಟ್ಟಣ ಪಂಚಾಯತಗೆ ಅರ್ಜಿಯೊಂದು ಸಲ್ಲಿಕೆಯಾಗಿದ್ದು, ಅವರ ಪುತ್ರ ಹೆ.ವಿ.ಹರ್ಷವರ್ಧನ ಅವರ ಮರಣ ದಾಖಲೆ ಪತ್ರ ಪೂರೈಸುವಂತೆ ವಿನಂತಿಸಿಕೊಳ್ಳಲಾಗಿದೆ. ಈ ಅರ್ಜಿಯ ಜೊತೆಗೆ ಬೆಂಗಳೂರು ಮಣಿಪಾಲ ಹಾಸ್ಪಿಟಲ್‍ನಲ್ಲಿ ಹರ್ಷವರ್ಧನ ಎಂಬುವವರು ಕಳೆದ 2021, ಜುಲೈ 21ರಂದು ಎದೆ ನೋವಿನ ಕಾರಣ ಚಿಕಿತ್ಸೆ ಪಡೆದ ಬಗ್ಗೆ ದಾಖಲೆಯೊಂದನ್ನು ಲಗತ್ತಿಸಲಾಗಿದೆ. ಅರ್ಜಿಯನ್ನು ಸ್ವೀಕರಿಸಿರುವ ಜಾಲಿ ಪಟ್ಟಣ ಪಂಚಾಯತ ಸಿಬ್ಬಂದಿ, ಹೆ.ವಿ.ಹರ್ಷವರ್ಧನ ಎಂಬಾತ ಕಳೆದ ಜುಲೈ 27ರಂದು ಮೃತ ಪಟ್ಟ ಬಗ್ಗೆ ವರದಿ ತಯಾರಿಸಿ, ಸೆ.13, 2021ರಂದು ಮರಣ ದಾಖಲೆ ಪತ್ರವನ್ನು ಅರ್ಜಿದಾರರಿಗೆ ನೀಡಿದ್ದಾರೆ. ಇದೇ ಮರಣ ದಾಖಲೆ ಪತ್ರದ ಆಧಾರದ ಮೇಲೆ ವಿಮೆ ಹಣವನ್ನು ಪಡೆಯಲು ಅರ್ಜಿದಾರರು ಇನ್ಶೂರೆನ್ಸ್ ಕಂಪೆನಿಗೆ ಅರ್ಜಿ ನೀಡಿದ್ದು, ವಿಮೆ ಅಧಿಕಾರಿಗಳು ಮೃತರು ಹಾಗೂ ಅವರ ವಾರಸುದಾರರ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಮುಂದಾಗುತ್ತಿದ್ದಂತೆಯೇ ಜಾಲಿ ಪಟ್ಟಣ ಪಂಚಾಯತದ ಅಂಧಾ ದರ್ಬಾರ್ ಸಂಗತಿ ಹೊರ ಬಿದ್ದಿದೆ. 

ಅರ್ಜಿದಾರರು, ಸತ್ತವರು ಯಾರು?:
ಲಭ್ಯ ಮಾಹಿತಿಯ ಪ್ರಕಾರ ಮರಣ ಹೊಂದಿದವರು ಹಾಗೂ ಮರಣ ದಾಖಲೆಗೆ ಅರ್ಜಿ ಸಲ್ಲಿಸಿದ ಆತನ ತಾಯಿ ಇಬ್ಬರೂ ಹಾಸನ ಮೂಲದವರಾಗಿದ್ದು, ಭಟ್ಕಳದಲ್ಲಿ ಅವರು ವಾಸಿಸಿದ್ದು ಇರುವುದಿಲ್ಲ. ಅಲ್ಲದೇ ಇವರು ಸೃಷ್ಟಿಸಿರುವ ಮರಣ ದಾಖಲೆಯಲ್ಲಿ ಇರುವ ವ್ಯಕ್ತಿ ಮರಣ ಹೊಂದಿಲ್ಲ! (ಮೂಲಗಳ ಪ್ರಕಾರ ಇದೇ ಹರ್ಷವರ್ಧನ ಎಂಬಾತ ಕೆಲ ತಿಂಗಳ ಹಿಂದೆಯಷ್ಟೇ ಸುದ್ದಿ ಬಿತ್ತರಿಸುವ ವೆಬ್‍ಸೈಟ್‍ವೊಂದನ್ನು ಪ್ರಾರಂಭಿಸಿದ್ದು, ಕರ್ನಾಟಕದ ಹಾಲಿ ಸಚಿವರೋರ್ವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ) ಆದರೆ ಜಾಲಿ ಪಟ್ಟಣ ಪಂಚಾಯತ ಸಿಬ್ಬಂದಿಗಳೇ ಜಾಲಿ ಪಟ್ಟಣ ಪಂಚಾಯತ ಜಂಗನಗದ್ದೆ ವಿಳಾಸದಲ್ಲಿ ಮೃತರು ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಬಗ್ಗೆ ನಕಲಿ ವಿಳಾಸ ಸೃಷ್ಟಿಸಿ ಈ ಕುಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಅರ್ಜಿಯ ಜೊತೆಗೆ ಲಗತ್ತಿಸಿರುವ ಪಂಚನಾಮೆಯಲ್ಲಿರುವ ವ್ಯಕ್ತಿಗಳ ಹೆಸರು, ಫೋನ್ ನಂಬರ ಎಲ್ಲವೂ ನಕಲಿಯಾಗಿರುವುದು ಇದಕ್ಕೆ ಇನ್ನಷ್ಟು ಪುಷ್ಠಿ ನೀಡಿದೆ. ವಿಮೆ ಕಂಪನಿಯ ಮೂಲದ ಪ್ರಕಾರ ಕೋಟಿಗೂ ಅಧಿಕ ವಿಮೆ ಹಣವನ್ನು ಲಪಟಾಯಿಸಲು ಷಡ್ಯಂತ್ರ ರೂಪಿಸಿರುವುದು ಸ್ಪಷ್ಟವಾಗಿದೆ. ಇಲ್ಲಿನ ಜಾಲಿಯ ಯುವ ಮುಖಂಡ ಹರೀಶ ನಾಯ್ಕ, ಈ ಕುರಿತು ದಾಖಲೆ ಸಂಗ್ರಹಿಸಿದ್ದು, ಪ್ರಕರಣ ಹೊರ ಬರುತ್ತಿದ್ದಂತೆಯೇ ಜಾಲಿ ಪಟ್ಟಣ ಪಂಚಾಯತ ಸಿಬ್ಬಂದಿಯೋರ್ವರು, ಈ ಕುರಿತು ತನಿಖೆ ನಡೆಸುವಂತೆ ಬುಧವಾರ ರಾತ್ರಿಯೇ ಪೊಲೀಸರ ಮೊರೆ ಹೋಗಿದ್ದಾರೆ.

ಭಟ್ಕಳ ಶಹರ ಠಾಣಾ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...