ಬೆಂಗಳೂರಿಗೆ ಜಲದಿಗ್ಧಂಧನ; ಭಾರೀ ಮಳೆಯಿಂದಾಗಿ ಹಲವು ಬಡಾವಣೆಗಳು ಜಲಾವೃತ; ಮನೆ ಮಳಿಗೆಗಳಿಗೆ ನುಗ್ಗಿದ ನೆರೆ ನೀರು, ಹೊಳೆಯಾದ ರಸ್ತೆಗಳು

Source: Vb | By I.G. Bhatkali | Published on 6th September 2022, 10:11 AM | State News | National News |

ಬೆಂಗಳೂರು: ರವಿವಾರ ರಾತ್ರಿಯಿಂದ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರು ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ವಿವಿಧೆಡೆ ಮನೆ, ಮಳಿಗೆಗಳಿಗೂ ನೆರೆ ನೀರು ನುಗ್ಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ನಗರದ ಹಲವೆಡೆ ರಸ್ತೆಯಲ್ಲಿ ನಡೆದಾಡಲು ಸಾಧ್ಯವಾಗದಂತೆ 2 ರಿಂದ 3 ಅಡಿ ನೀರು ನಿಂತಿತ್ತು. ಇದೇ ನೀರಿನಲ್ಲಿ ನಡೆದು ಹೋಗುತ್ತಿದ್ದವರು ಸರಕಾರ, ಬಿಬಿಎಂಪಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದುದು ಎಲ್ಲ ಕಡೆಯೂ ಕಂಡುಬಂತು. ಬೆಂಗಳೂರು-ತುಮಕೂರಿನ ಸರ್ವಿಸ್ ರಸ್ತೆಯು ಜಲಾವೃತಗೊಂಡು, ಈ ಮಾರ್ಗ ದಲ್ಲಿ ವಾಹನ ಸಂಚಾರ ಮತ್ತು ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಎಚ್‌ಬಿಆರ್ ಲೇಔಟ್, ಇಂದಿರಾನಗರ ಸೇರಿದಂತೆ, ಬಹುತೇಕ ಪ್ರದೇಶಗಳು ನೀರಿನಲ್ಲಿ ಮುಳುಗಿವೆ.

ಶಾಂತಿನಗರದ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಡಿಪೊಗೆ ಸಂಪರ್ಕಿಸುವ ರಸ್ತೆ ಜಲಾವೃತಗೊಂಡಿದ್ದು, ಡಿಪೊದಿಂದ ಬಸ್‌ಗಳನ್ನು ಹೊರಕ್ಕೆ ತರಲು ಚಾಲಕರು ಪರದಾಡುವಂತಾಯಿತು. ಶಾಂತಿನಗರದ ರಸ್ತೆ ಕೆರೆಯಂತಾಗಿದೆ. ಸರ್ಜಾಪುರ ರಸ್ತೆಯ ದಿ ಕಂಟ್ರಿ ಸೈಡ್ ಲೇಔಟ್ ಭಾರೀ ಮಳೆಯ ಹೊಡೆತಕ್ಕೆ ತನ್ನ ರೂಪವನ್ನು ಕಳೆದುಕೊಂಡಿದೆ. ಇಲ್ಲಿನ ಮನೆಗಳಿಗೆ ನೀರು ನುಗ್ಗಿ ಮಕ್ಕಳು, ಮಹಿಳೆಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮತ್ತೊಂದೆಡೆ ಅಪಾರ್ಟ್ ಮೆಂಟ್‌ನಲ್ಲಿ ನೀರು ನುಗ್ಗಿ ಕಾರುಗಳು ಮುಳುಗಡೆಯಾಗಿವೆ. ಮನೆಯಲ್ಲಿದ್ದ ಜನರನ್ನು ಪರಿಹಾರ ತಂಡ ಎತ್ತಿಕೊಂಡು ಸುರಕ್ಷಿತ ಸ್ಥಳಗಳಿಗೆ ರವಾನಿಸುವ ಕಾರ್ಯದಲ್ಲಿ ನಿರತವಾಗಿದೆ. ಹಲಸೂರು ಬಳಿಯ ಕೇಂಬ್ರಿಡ್ಜ್ ಲೇಔಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ ನ ಬೇಸೈಂಟ್‌ಗೆ ನೀರು ನುಗ್ಗಿ ವಾಹನಗಳು ನೀರಿನಲ್ಲಿ ಮುಳುಗಿ ಹೋಗಿವೆ. ಸನ್ನಿಬ್ರೂಕ್ ಲೇಔಟ್‌ನಲ್ಲಿ 10ಕ್ಕೂ ಹೆಚ್ಚು ಐಶಾರಾಮಿ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳ ಬವಣೆ ಹೇಳತೀರದ್ದಾಗಿದೆ.

ನಗರದ ರೈನ್ ಬೋ ಲೇಔಟ್‌ನಲ್ಲೂ ರವಿವಾರ ಸುರಿದ ಧಾರಾಕಾರ ಮಳೆಗೆ ರಸ್ತೆಗಳಲ್ಲಿ ನೀರು ನಿಂತು ಮನೆಗಳಿಗೂ ನೀರು ನುಗ್ಗಿದೆ. ಅಂಡರ್ ಪಾಸ್‌ಗಳ ಪರಿಸ್ಥಿತಿಯೂ ಅಯೋಮಯವಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲೂ ಭಾರೀ ಮಳೆಯಿಂದಾಗಿ ಜಲಾವೃತಗೊಂಡಿದ್ದು, ಹೊರ ದೇಶಗಳಿಂದ ಬಂದ ಜನರನ್ನು ಟ್ರ್ಯಾಕ್ಟರ್‌ಗಳನ್ನು ಬಳಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಹಲವು ಬಡಾವಣೆಗಳಲ್ಲಿ ನೀರಿನಲ್ಲಿ ಸಿಕ್ಕಿಹಾಕಿಕೊಂಡಿರುವ ಜನರನ್ನು ದೋಣಿ ಬಳಸಿ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಈ ಮಧ್ಯೆ ಬಿಬಿಎಂಪಿ ಸಹಾಯವಾಣಿ ಸ್ಥಾಪಿಸಿದ್ದು, ಟೋಲ್ ಫ್ರೀ ಸಂಖ್ಯೆ 1533 ಮಳೆ ಸಹಾಯವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಕುಡಿಯುವ ನೀರಿನ ಅಭಾವ ಸೃಷ್ಟಿ:
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರವಿವಾರ ಸುರಿದ ಮಳೆಯಿಂದಾಗಿ ಕಾವೇರಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದ್ದು, ಮುಂದಿನ ಎರಡು ಮೂರು ದಿನ ನೀರು ಸರಬರಾಜಿನಲ್ಲಿ ಗಂಭೀರ ವ್ಯತ್ಯಯ ಕಂಡುಬರಲಿದೆ ಎಂದು ಜಲ ಮಂಡಳಿಯು ಮಾಹಿತಿ ನೀಡಿದೆ. ಮಂಡ್ಯ ಜಿಲ್ಲೆಯ ಹಲಗೂರಿನಲ್ಲಿ ಧಾರಾಕಾರ ಮಳೆ ಸುರಿದಿರುವ ಹಿನ್ನೆಲೆಯಲ್ಲಿ ಮಳವಳ್ಳಿ ತಾಲೂಕು ಟಿ.ಕೆ. ಹಳ್ಳಿಯಲ್ಲಿರುವ ಕಾವೇರಿ ನೀರಿನ ಜಲರೇಚಕ ಸ್ಟೇಷನ್ ) ಯಂತ್ರಾಗಾರ(ಪಂಪ್ ಜಲಾವೃತಗೊಂಡಿದ್ದು, ಬೆಂಗಳೂರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಏರುಪೇರಾಗಲಿದೆ.

ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಮಳೆ:
ಬೆಂಗಳೂರಿನಲ್ಲಿ ನಿರಂತರ ಸುರಿ ಯುತ್ತಿರುವ ಮಳೆ ಮುಂದಿನ ದಿನ ಮುಂದುವರಿಯಲಿದೆ. 3 ನಗರದಲ್ಲಿ ಸೆ.6ರಂದು ಭಾರೀ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಿಸಿದೆ.

ಐಟಿ ಕಂಪೆನಿಗಳಿಗೆ ರಜೆ:
ಬೆಂಗಳೂರು ನಗರದಲ್ಲಿ ಸುರಿದ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದ್ದು, ಸರ್ಜಾಪುರ, ಮಾರತಹಳ್ಳಿ, ಮಾನ್ಯತಾ ಟೆಕ್ ಪಾರ್ಕ್ ಸೇರಿದಂತೆ ಇತರ ಪ್ರದೇಶಗಳಲ್ಲಿರುವ ಐಟಿಬಿಟಿ ಕಂಪೆನಿಗಳಲ್ಲಿ ರಜೆ ಘೋಷಿಸಲಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಮಳೆಯಿಂದಾಗಿ ಐಟಿ ಕಂಪೆನಿಗಳಿಗೆ 225 ಕೋಟಿ ರೂ. ನಷ್ಟವಾಗಿದೆ ಎಂದು ಹೇಳಲಾಗಿತ್ತು.

2 ಎಸ್‌ಡಿಆರ್‌ಎಫ್ ತಂಡ ನಿಯೋಜನೆ: ಸಿಎಂ:
ಬೆಂಗಳೂರು ನಗರದಲ್ಲಿಯೂ ಹೆಚ್ಚಿನ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯದಲ್ಲಿ 30ಕ್ಕೂ ಹೆಚ್ಚು ಕಡೆ ಹಾನಿಯಾಗಿದೆ. ತಲಾ 30 ಜನರುಳ್ಳ ಎರಡು ಎಸ್‌ಡಿಆರ್‌ಎಫ್(ರಾಜ್ಯ ವಿಪತ್ತು ನಿರ್ವಹಣಾ ಪಡೆ) ತಂಡವನ್ನು ಅಲ್ಲಿಗೆ ಕಳುಹಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಗರದ ಹಲವು ಪ್ರದೇಶಗಳ ರಸ್ತೆಗಳ ಮೇಲೆ ಮಳೆ ನೀರು ನಿಂತಿದ್ದು, ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ಮಳೆ ನೀರು ತೆರವುಗೊಳಿಸಲು ಸೂಚಿಸಿದ್ದು, ಯೋಜಿಸಿದಂತೆ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದರು.

ರಾಜ್ಯದ ಹಲವೆಡೆ ಇಂದು, ನಾಳೆ ಯೆಲ್ಲೋ ಅಲರ್ಟ್:
ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 3 ದಿನ ಮುಂದುವರಿಯಲಿದೆ. ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಸೆ.6ರಿಂದ 3 ದಿನ ಭಾರೀ ಮಳೆ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಬೆಂಗಳೂರು, ಬೆಂ.ಗ್ರಾಮಾಂತರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಬಳ್ಳಾರಿ ಮತ್ತು ದಾವಣಗೆರೆಯಲ್ಲಿ 4 ದಿನ ಹಾಗೂ ವಿಜಯಪುರ, ಬಾಗಲಕೋಟೆ, ಬೆಳಗಾವಿಯಲ್ಲಿ ಸೆ.6, 7ರಂದು ಯೆಲ್ಲೋ ಅಲರ್ಟ್ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...