ಮಂಗಳೂರಿಗೆ ಬೆಳಗಾವಿ ವಿಮಾನ ನಿಲ್ದಾಣ ಪೈಪೋಟಿ.

Source: SO News | By Laxmi Tanaya | Published on 30th September 2020, 4:23 PM | State News |

ಮಂಗಳೂರು : ವಿಮಾನಗಳು, ಪ್ರಯಾಣಿಕರ ನಿರ್ವಹಣೆಯಲ್ಲಿ ಬೆಂಗಳೂರಿನ ನಂತರದ ಸ್ಥಾನದಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಎಂಐಎ) ಪ್ರಸ್ತುತ ಬೆಳಗಾವಿ ವಿಮಾನ ನಿಲ್ದಾಣ ಪೈಪೋಟಿ ನೀಡುತ್ತಿದೆ. ವಿಮಾನ ನಿಲ್ದಾಣಗಳ ನಿರ್ವಹಣೆ ಅಂಕಿಅಂಶ ಗಮನಿಸಿದರೆ ಇದು ಸ್ಪಷ್ಟ. ಭಾರತೀಯ ವಿಮಾನಯಾನ ಪ್ರಾಧಿಕಾರ ಈ ಮಾಹಿತಿಯನ್ನು ಪ್ರತಿ ತಿಂಗಳು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡುತ್ತಿದೆ.

ಆಗಸ್ಟ್ ತಿಂಗಳ ಏರ್ ಟ್ರಾಫಿಕ್ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಬೆಂಗಳೂರು ವಿಮಾನ ನಿಲ್ದಾಣವನ್ನು 6,52,582 ಪ್ರಯಾಣಿಕರು ಬಳಕೆ ಮಾಡಿದ್ದು, ಒಟ್ಟು 7,556 ವಿಮಾನಗಳು ಕಾರ್ಯನಿರ್ವಹಿಸಿವೆ. ಎರಡನೇ ಸ್ಥಾನದಲ್ಲಿರುವ ಮಂಗಳೂರು ಏರ್‌ಪೋರ್ಟ್ 19,201 ಪ್ರಯಾಣಿಕರು ಮತ್ತು 283 ವಿಮಾನಗಳ ನಿರ್ವಹಣೆ ಮಾಡಿದೆ. ಬೆಳಗಾವಿ ವಿಮಾನ ನಿಲ್ದಾಣವನ್ನು 17,914 ಪ್ರಯಾಣಿಕರು ಬಳಕೆ ಮಾಡಿದ್ದು, 418 ವಿಮಾನ ಇಲ್ಲಿ ಕಾರ್ಯನಿರ್ವಹಿಸಿದೆ. ಮಂಗಳೂರಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೂ, ವಿಮಾನಗಳ ಹಾರಾಟದಲ್ಲಿ ಬೆಳಗಾವಿ ಮುಂದಿದೆ.

ಲಾಕ್‌ಡೌನ್ ಮುಗಿದು ಮೇ 25ರಿಂದ ವಿಮಾನಗಳ ಹಾರಾಟ ಆರಂಭವಾಗಿದೆ. ಅಂದಿನಿಂದ ಆಗಸ್ಟ್ ಅಂತ್ಯದವರೆಗೆ ಮಂಗಳೂರು ವಿಮಾನ ನಿಲ್ದಾಣ 726 ವಿಮಾನಗಳನ್ನು ನಿರ್ವಹಿಸಿದ್ದು, 42,896 ಮಂದಿ ಪ್ರಯಾಣ ಮಾಡಿದ್ದಾರೆ. ಇದೇ ಅವಧಿಯಲ್ಲಿ ಬೆಳಗಾವಿ ನಿಲ್ದಾಣವನ್ನು 41,609 ಮಂದಿ ಬಳಸಿದ್ದು, 1301 ವಿಮಾನಗಳ ನಿರ್ವಹಣೆ ಮಾಡಲಾಗಿದೆ. ಇದು ಮಂಗಳೂರು-ಬೆಳಗಾವಿ ನಡುವಿನ ಸ್ಪರ್ಧೆಗೆ ನಿದರ್ಶನ. ಆದರೆ ಮುಂದಿನ ದಿನಗಳಲ್ಲಿ ಮಂಗಳೂರಿನಲ್ಲಿ ಮತ್ತೆ ಅಂತಾರಾಷ್ಟ್ರೀಯ ವಿಮಾನಗಳ ನಿರ್ವಹಣೆ ಆರಂಭವಾದರೆ ಎರಡನೇ ಸ್ಥಾನ ಗಟ್ಟಿಯಾಗಲಿದೆ. ಈಗಾಗಲೇ ದೆಹಲಿ, ಚೆನ್ನೈ, ಹೈದರಾಬಾದ್ ನಡುವೆ ಹೆಚ್ಚುವರಿ ವಿಮಾನಗಳ ಓಡಾಟ ಆರಂಭವಾ ಗಿದೆ. ಇದು ಕೂಡ ಸ್ಥಾನ ಉಳಿಸಿಕೊಳ್ಳಲು ನೆರವಾಗಲಿದೆ.

ಕೋವಿಡ್ ಕಾಟಕ್ಕಿಂತ ಮೊದಲು ಎರಡನೇ ಸ್ಥಾನದಲ್ಲಿದ್ದ ಎಂಐಎ ಇದೀಗ ತನ್ನ ಸ್ಥಾನ ಉಳಿಸಿಕೊಳ್ಳಲು ಕಷ್ಟಪಡುತ್ತಿರುವುದಕ್ಕೆ ಪ್ರಮುಖ ಕಾರಣ, ಕೇಂದ್ರ ಸರ್ಕಾರ ಬೆಳಗಾವಿ ವಿಮಾನ ನಿಲ್ದಾಣವನ್ನು ಉಡಾನ್ ಯೋಜನೆಯಲ್ಲಿ ಸೇರ್ಪಡೆಗೊಳಿಸಿರುವುದು. ಯೋಜನೆ ಪ್ರಾದೇಶಿಕ ವಿಮಾನ ಸಂಪರ್ಕಕ್ಕೆ ಸಂಬಂಧಿಸಿದ್ದಾಗಿರುವುದರಿಂದ ಜನರಿಗೆ ಹೆಚ್ಚು ಅನುಕೂಲವಾಗಿದೆ. ಇನ್ನೊಂದೆಡೆ ಬೆಳಗಾವಿ ಪುಣೆ ವಿಮಾನ ನಿಲ್ದಾಣಕ್ಕಿಂತಲೂ ಹತ್ತಿರವಾಗಿರುವುದರಿಂದ ಮಹಾರಾಷ್ಟ್ರದ ಗಡಿಭಾಗದ ಜನರು, ಉದ್ಯಮಿಗಳು, ನೌಕರರು ಇದರ ಲಾಭ ಪಡೆಯುತ್ತಿದ್ದಾರೆ. ಜತೆಗೆ ಸೇನಾ ಚಟುವಟಿಕೆಗೆ ಸಂಬಂಧಿಸಿದಂತೆ ಅಧಿಕಾರಿಗಳು, ಸಿಬ್ಬಂದಿ ವರ್ಗ ಇದೇ ವಿಮಾನ ನಿಲ್ದಾಣವನ್ನು ಬಳಸುತ್ತಾರೆ.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...