ನಿರ್ಬಂಧದ ಮಧ್ಯೆ ದೇಶದ ಹಲವೆಡೆ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ

Source: Vb | By I.G. Bhatkali | Published on 26th January 2023, 12:50 AM | National News |

ಹೈದರಾಬಾದ್: ಕೇಂದ್ರ ಸರಕಾರದ ನಿರ್ಬಂಧದ ನಡುವೆಯೇ ಗುಜರಾತ್ ಹತ್ಯಾಕಾಂಡದಲ್ಲಿ ಮೋದಿ ಪಾತ್ರವನ್ನು ಎತ್ತಿ ಹಿಡಿಯುವ ಬಿಬಿಸಿ ಸಾಕ್ಷ್ಯಚಿತ್ರ ದೇಶದ ಹಲವೆಡೆ ಪ್ರದರ್ಶನಗೊಂಡಿವೆ. ಈ ಬಗ್ಗೆ ಬಿಜೆಪಿ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದೆ.

2002ರ ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾತ್ರವನ್ನು ಮರುಪರಿಶೀಲಿಸುವ ಬಿಬಿಸಿ ಸಾಕ್ಷ್ಯಚಿತ್ರವನ್ನು ಶನಿವಾರ ಹೈದರಾಬಾದ್‌ ವಿಶ್ವವಿದ್ಯಾನಿಲಯದಲ್ಲಿ ಪ್ರದರ್ಶಿಸಲಾಗಿದೆ. ಇದರ ಬೆನ್ನಿಗೇ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಸಂಬಂಧಪಟ್ಟವರಿಂದ ವರದಿ ಕೇಳಿದ್ದಾರೆ.

ಜೆಎನ್‌ಯು: ವಿದ್ಯುತ್, ಇಂಟರ್‌ನೆಟ್‌ ಸ್ಥಗಿತ ಸಾಕ್ಷ್ಯ ಚಿತ್ರ ವೀಕಿಸಿದವರ ಮೇಲೆ ಕಲ್ಲು ತೂರಾಟ: 

ಹೊಸದಿಲ್ಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಬಿಬಿಸಿಯ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಆರಂಭಿಸಿದ ಸಂದರ್ಭ ಜೆಎನ್‌ಯು ಆಡಳಿತ ವಿದ್ಯುತ್‌ ಹಾಗೂ ಇಂಟರ್ ನೆಟ್ ಸಂಪರ್ಕ ಕಡಿತಗೊಳಿಸಿದೆ.

ಸಾಕ್ಷ್ಯಚಿತ್ರದ ಪ್ರದರ್ಶನವನ್ನು ರಾತ್ರಿ 9 ಗಂಟೆಗೆ ಆರಂಭಿಸಲು ನಿರ್ಧರಿಸಲಾಗಿತ್ತು. ವಿ.ವಿ. ಆಡಳಿತ ಅನುಮತಿ ನಿರಾಕರಿಸಿದ ಹೊರತಾಗಿಯೂ ವಿದ್ಯಾರ್ಥಿಗಳು ಪ್ರದರ್ಶನ ನಡೆಸಲು ತೀರ್ಮಾನಿಸಿದ್ದರು. ವಿದ್ಯುತ್‌ ಹಾಗೂ ಇಂಟರ್‌ನೆಟ್ ಕಡಿತಗೊಳಿಸಿದ ಬಳಿಕ ಸಾಕ್ಷ್ಯಚಿತ್ರವನ್ನು ಲ್ಯಾಪ್ ಟಾಪ್ ಹಾಗೂ ಮೊಬೈಲ್‌ಗಳಲ್ಲಿ ವೀಕ್ಷಿಸಿದ ವಿದ್ಯಾರ್ಥಿಗಳ ಮೇಲೆ ಎಬಿವಿಪಿ ಬೆಂಬಲಿಗರೆನ್ನಲಾದವರು ಕಲ್ಲು ತೂರಾಟ ನಡೆಸಿರುವುದಾಗಿ ವರದಿಯಾಗಿದೆ.

'ಇಂಡಿಯಾ: ದಿ ಮೋದಿ ಕ್ವೆಶ್ಚನ್' ಎಂಬ ಹೆಸರಿನ ಸಾಕ್ಷ್ಯಚಿತ್ರವನ್ನು ವಿಶ್ವವಿದ್ಯಾನಿಲಯದಲ್ಲಿ ಪ್ರದರ್ಶಿಸಿರುವ ಬಗ್ಗೆ ಸಂಸ್ಥೆಯ ಆಡಳಿತಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ದ ವಿದ್ಯಾರ್ಥಿ ಘಟಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ (ಎಬಿವಿಪಿ) ದೂರು ಸಲ್ಲಿಸಿದೆ.

ಎರಡು ಭಾಗಗಳ ಸಾಕ್ಷ್ಯಚಿತ್ರದ ಮೊದಲ ಭಾಗವನ್ನು ಬಿಬಿಸಿಯು ಜನವರಿ 17ರಂದು ಪ್ರಸಾರಿಸಿದೆ.

“ಗಲಭೆಗಳು ನಡೆದಾಗ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಮೋದಿ ರಾಜ್ಯದಲ್ಲಿ ಶಿಕ್ಷೆಯ ಭಯವಿರದ ವಾತಾವರಣವೊಂದನ್ನು ಸೃಷ್ಟಿಸಿದ್ದರು. ಅದರಿಂದಾಗಿಯೇ ಮುಸ್ಲಿಮರ ವಿರುದ್ಧ ಹಿಂಸಾಚಾರ ನಡೆಯಿತು' ಎಂದು ಬ್ರಿಟಿಷ್ ಸರಕಾರ ಕಳಹಿಸಿದ್ದ ತಂಡವೊಂದು ಆರೋಪಿಸಿದೆ ಎಂದು ಸಾಕ್ಷ್ಯಚಿತ್ರದ ಮೊದಲ ಭಾಗ ಆರೋಪಿಸಿದೆ.

ಹಿಂಸಾಚಾರದ ಬಗ್ಗೆ ಬ್ರಿಟನ್ ಸರಕಾರ ಸಿದ್ಧಪಡಿಸಿದ್ದ ವರದಿಯೊಂದನ್ನೂ ಈ ಸಾಕ್ಷ್ಯಚಿತ್ರವು ಬಹಿರಂಗಪಡಿಸಿದೆ. “ಗುಜರಾತ್ ಗಲಭೆಯು ಜನಾಂಗೀಯ ಹತ್ಯೆಯ ಸಕಲ ಗುಣಲಕ್ಷಣಗಳನ್ನೂ ಹೊಂದಿತ್ತು” ಎಂಬುದಾಗಿ ಆ ವರದಿ ಹೇಳುತ್ತದೆ.

ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿಲ್ಲ. ಆದರೆ ಅದನ್ನು ವಿವಿಧ ಯೂಟ್ಯೂಬ್ ಚಾನೆಲ್‌ಗಳಲ್ಲಿ ಹಾಕಲಾಗಿತ್ತು ಹಾಗೂ ಟ್ವಿಟರ್ ಮೂಲಕ ವ್ಯಾಪಕವಾಗಿ ಪ್ರಸಾರಿಸಲಾಗಿತ್ತು.

ಶುಕ್ರವಾರ, ಭಾರತ ಸರಕಾರವು ಮಾಹಿತಿ ತಂತ್ರಜ್ಞಾನ ನಿಯಮಗಳು, 2021ರ ಅಡಿಯಲ್ಲಿ ಲಭ್ಯವಾಗುವ ತುರ್ತು ಅಧಿಕಾರಗಳನ್ನು ಬಳಸಿಕೊಂಡು, ಸಾಕ್ಷ್ಯಚಿತ್ರವನ್ನು ತೆಗೆದುಹಾಕುವಂತೆ ಯೂಟ್ಯೂಬ್ ಮತ್ತು ಟ್ವಿಟರ್‌ಗೆ ನಿರ್ದೇಶನಗಳನ್ನು ನೀಡಿತ್ತು.

ಸಾಕ್ಷ್ಯಚಿತ್ರವನ್ನು ತಡೆಹಿಡಿಯುವ ಕೇಂದ್ರ ಸರಕಾರದ ನಿರ್ಧಾರವನ್ನು ಉಲ್ಲೇಖಿಸಿರುವ ಎಬಿವಿಪಿ, ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ವಿಶ್ವವಿದ್ಯಾನಿಲಯ ಅಧಿಕಾರಿಗಳನ್ನು ಕೋರಿದೆ. 

ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಸುಮಾರು 70-80 ವಿದ್ಯಾರ್ಥಿ ಗಳು ಸಾಕ್ಷ್ಯಚಿತ್ರವನ್ನು ವೀಕ್ಷಿಸಿದ್ದಾರೆ ಎನ್ನಲಾಗಿದೆ.

ಅನುಮತಿಯಿಲ್ಲದೆ ವಿಶ್ವವಿದ್ಯಾನಿಲಯ ಆವರಣದೊಳಗೆ ಸಾಕ್ಷ್ಯಚಿತ್ರವನ್ನು ವೀಕ್ಷಿಸಲಾಗಿದೆ ಎಂದು ಎಬಿವಿಪಿ ವಿದ್ಯಾರ್ಥಿ ನಾಯಕರೊಬ್ಬರು ಪಿಟಿಐಗೆ ಹೇಳಿದ್ದಾರೆ. ವಿಶ್ವವಿದ್ಯಾನಿಲಯ ಆಡಳಿತವು ಕ್ಯಾಂಪಸ್ ಭದ್ರತಾ ಇಲಾಖೆಯಿಂದ ವಿವರವಾದ ವರದಿಯನ್ನು ಕೇಳಿದೆ ಎಂದು ವಕ್ತಾರರೊಬ್ಬರು ಹೇಳಿದರು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...