ಮತ್ತೆ ಶರಣರ ತಲೆದಂಡವಾಗದಿರಲಿ

Source: sonews | By Staff Correspondent | Published on 26th July 2017, 11:39 PM | State News | Editorial | Special Report | Don't Miss |

‘‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕುಯ್ಯುವೆ, ನೋಡಯ್ಯ ಮಹಾದಾನಿ ಕೂಡಲ ಸಂಗಮದೇವ ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯ’’

ಲಿಂಗಾಯತ ಹಿಂದೂಧರ್ಮದ ಒಂದು ಭಾಗವೋ ಅಥವಾ ಪ್ರತ್ಯೇಕ ಧರ್ಮವೋ ಎನ್ನುವುದಕ್ಕೆ ಬಸವಣ್ಣರ ಈ ಒಂದು ವಚನವೇ ಸಾಕು. 12ನೆ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ಶರಣರಕ್ರಾಂತಿ ದೇಶದ ವೈದಿಕ ಧರ್ಮದ ಅಡಿಪಾಯವನ್ನು ಅಲುಗಾಡಿಸಿದ್ದು ಮಾತ್ರವಲ್ಲ, ಜಾತಿ ರಹಿತ ಸಮಾಜದ ಕಲ್ಪನೆಯೊಂದನ್ನು ಅದು ನಾಡಿನಾಚೆಗೂ ಬಿತ್ತಿತು. ಮೂರ್ತಿ ಪೂಜೆಯನ್ನು ಕಟು ಭಾಷೆಯಲ್ಲಿ ವಿರೋಧಿಸಿದ ಲಿಂಗಾಯತ ಧರ್ಮ, ಆತ್ಮಲಿಂಗದ ಮೂಲಕ ತನ್ನ ಶಿವನನ್ನು ಕಂಡಿತು. ಸ್ಥಾವರಗಳನ್ನು, ಪೀಠಗಳನ್ನು ಭಂಜಿಸಿದ ಶರಣರು, ವಚನ ಸಾಹಿತ್ಯದ ಮೂಲಕ ಒಂದು ಅಧ್ಯಾತ್ಮ ಕ್ರಾಂತಿಯನ್ನು ನಡೆಸಿದರು. ಅದು ಸಾಮಾಜಿಕವಾಗಿ ಬೀರಿದ ಪರಿಣಾಮವೋ ಅಗಾಧವಾದುದು.

ಮಡಿವಾಳರು, ಚಮ್ಮಾರರಂತಹ ಕೆಳಜಾತಿಯ ಜನರನ್ನು ದೇವಸ್ಥಾನದ ಒಳಗೆ ಬಿಡಿ, ಅದರ ಆವರಣಕ್ಕೂ ಪ್ರವೇಶ ನೀಡಲು ಒಲ್ಲದ ದಿನಗಳಲ್ಲಿ, ಲಿಂಗಾಯತ ಧರ್ಮ ಅವರಿಗೆ ಹೊಸ ಗುರುತನ್ನು, ಹೊಸ ಅಸ್ತಿತ್ವವನ್ನು ನೀಡಿತು. ಬಹುಶಃ ಕನ್ನಡತನವನ್ನೇ ತನ್ನದಾಗಿಸಿಕೊಂಡು ಹುಟ್ಟಿದ ಒಂದೇ ಒಂದು ಧರ್ಮ ಬಸವಣ್ಣನ ಲಿಂಗಾಯತ ಧರ್ಮ. ಬಸವಣ್ಣನ ಪಾಲಿಗೆ ಇಂತಹದೊಂದು ಕ್ರಾಂತಿ ಸುಲಭಸಾಧ್ಯವಾಗಿರಲಿಲ್ಲ. ವ್ಯಾಪಕ ಶತ್ರುಗಳನ್ನು ಅವರು ಕಟ್ಟಿಕೊಳ್ಳಬೇಕಾಯಿತು. ಅಂತಿಮವಾಗಿ ಕಲ್ಯಾಣ ರಾಜ್ಯದೊಳಗೆ ಬಂಡಾಯ ಸೃಷ್ಟಿಯಾಯಿತು. ವೈದಿಕರ ಸಂಚಿಗೆ ಬಸವಣ್ಣ ಬಲಿಯಾದರು. ಆದರೆ ಅವರು ಮತ್ತು ಇತರ ಶರಣರು ಹರಡಿದ ವಚನಗಳು, ಸ್ಥಾಪಿಸಿದ ಧರ್ಮ, ಆ ಧರ್ಮವನ್ನು ಅನುಸರಿಸಿದ ಅನುಯಾಯಿಗಳು ಮಾತ್ರ ಕನ್ನಡದ ನೆಲದಲ್ಲಿ ಅಳಿಯಲಿಲ್ಲ. ಇನ್ನಷ್ಟು ಬೆಳೆದರು.

ಲಿಂಗಾಯತ ಧರ್ಮದ ಅಧ್ಯಾತ್ಮ ಮತ್ತು ಸಾಮಾಜಿಕ ಕ್ರಾಂತಿಯ ತಳಹದಿಯಲ್ಲೇ ನಮ್ಮ ಕನ್ನಡತನ ನಿಂತಿದೆ ಎನ್ನುವುದನ್ನು ಮರೆಯುವಂತಿಲ್ಲ. ಶರಣರು ಸರಳ, ಸುಂದರವಾದ ಕನ್ನಡವನ್ನು ಉಳಿಸಿ ಬೆಳೆಸಿದರು. ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎನ್ನುವ ಸರಳ ಸತ್ಯಗಳನ್ನು ಸರಳ ಗನ್ನಡದಲ್ಲಿ ಅವರು ಹರಡಿದರು. ಅಂದರೆ ಜನಸಾಮಾನ್ಯರಿಂದ ಅತ್ಯಂತ ದೂರದಲ್ಲಿದ್ದ ವೈದಿಕರ ಭಾಷೆಗೂ ಅವರು ತಮ್ಮ ಸರಳಕನ್ನಡದ ಮೂಲಕವೇ ಅವರು ಉತ್ತರಿಸಿದರು. ಶರಣರ ವಚನಗಳಿಗೆ ಕಾವ್ಯಗುಣವಿದೆ. ಅಂದರೆ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕವಾಗಿ ಲಿಂಗಾಯತ ಧರ್ಮ ನಾಡಿಗೆ ಹೊಸ ನೋಟವನ್ನು ಕೊಟ್ಟಿತು. ಕಾಯಕವೇ ಕೈಲಾಸ ಎನ್ನುವ ಮೂಲಕ ದುಡಿಮೆಗೆ ಗೌರವ ನೀಡಿ, ಶ್ರಮಿಕರ ಬದುಕನ್ನು ಎತ್ತಿ ಹಿಡಿಯಿತು.

ಇಂತಹ ಲಿಂಗಾಯತ ಧರ್ಮ, ‘ತಮಗೆ ಸ್ವತಂತ್ರ ಸ್ಥಾನಮಾನ ಕೊಡಿ’ ಎಂದು ಕೇಳುತ್ತಿರುವುದು ಇಂದು ನಿನ್ನೆಯ ಸಂಗತಿಯಲ್ಲ. ಹಲವು ದಶಕಗಳಿಂದ ಚಿಂತಕರು, ಸಂಶೋಧಕರು ಲಿಂಗಾಯತ ಧರ್ಮಕ್ಕೂ ಹಿಂದೂ ಧರ್ಮ ಎಂದು ಕರೆಯುತ್ತಿರುವ ವೈದಿಕ ಧರ್ಮಕ್ಕೂ ಯಾವ ಸಂಬಂಧವೂ ಇಲ್ಲ. ಇದ್ದರೆ, ಎಣ್ಣೆ ಮತ್ತು ಸೀಗೆಕಾಯಿಯ ಸಂಬಂಧ ಎನ್ನುವುದನ್ನು ಹೇಳುತ್ತಲೇ ಬಂದಿದ್ದಾರೆ. ಯಾವ ವೈದಿಕ ಧರ್ಮದ ವಿರುದ್ಧ ಹೋರಾಡಿ, ತ್ಯಾಗ ಬಲಿದಾನಗಳನ್ನು ಮಾಡಿ ಶರಣರು ಲಿಂಗಾಯತ ಧರ್ಮದ ಮೂಲಕ ಸಾಮಾಜಿಕ ನ್ಯಾಯವನ್ನು ಸ್ಥಾಪಿಸಿದರೋ, ಅದೇ ಧರ್ಮವನ್ನು ಮಗದೊಂದು ದಾರಿಯಲ್ಲಿ ತಮ್ಮ ವಶಕ್ಕೆ ತೆಗೆದುಕೊಂಡ ಪುರೋಹಿತಶಾಹಿ ವ್ಯವಸ್ಥೆ, ಲಿಂಗಾಯತರನ್ನು ಮತ್ತೆ ಜಾತಿಯ ಕುಣಿಕೆಯಲ್ಲಿ ಬೀಳಿಸಲು ನೋಡಿತು. ಹಲವು ಲಿಂಗಾಯತ ಧರ್ಮದ ರಾಜಕೀಯ ನಾಯಕರೇ ಓಟಿಗಾಗಿ ಲಿಂಗಾಯತ ಧರ್ಮವನ್ನು ಬಲಿಕೊಟ್ಟರು.

‘ಕಲ್ಲು ದೇವರು ದೇವರಲ್ಲ, ಮಣ್ಣದೇವರು ದೇವರಲ್ಲ, ಮರ ದೇವರು ದೇವರಲ್ಲ, ಪಂಚಲೋಹದಲ್ಲಿ ಮಾಡಿದ ದೇವರು ದೇವರಲ್ಲ, ಸೇತು ರಾಮೇಶ್ವರ ಗೋಕರ್ಣ, ಕಾಶಿ, ಕೇದಾರ ಮೊದಲಾಗಿ ಅಷ್ಟಾಷಷ್ಟಿ ಕೋಟಿ ಪುಣ್ಯ ಕ್ಷೇತ್ರಂಗಳಲ್ಲಿನ ದೇವರು ದೇವರಲ್ಲ, ತನ್ನ ತಾನರಿದು ತಾನಾರೆಂದು ತಿಳಿದಡೆ ತಾನೇ ದೇವ ನೋಡಾ...’’

ಎನ್ನುವ ಬಸವಣ್ಣನ ವಚನವನ್ನು ಬಲಿಕೊಟ್ಟು ಲಿಂಗಾಯತರನ್ನು ಮತ್ತೆ ಕಲ್ಲು ದೇವರೆಡೆಗೆ, ಮಣ್ಣದೇವರೆಡೆಗೆ, ಪಂಚಲೋಹದಲ್ಲಿ ಮಾಡಿದ ದೇವರೆಡೆಗೆ, ಪುಣ್ಯಕ್ಷೇತ್ರಗಳ ಕಡೆಗೆ ರಾಜಕೀಯ ನಾಯಕರು ದೂಡಿದರು. ಲಿಂಗಾಯತ ಧರ್ಮವನ್ನು ವಿರೂಪಗೊಳಿಸುವಲ್ಲಿ ಆರೆಸ್ಸೆಸ್‌ನಂತಹ ಸಂಘಟನೆಗಳ ಕೆಲಸವೂ ಬಹುದೊಡ್ಡದು. ಲಿಂಗಾಯತ ನಾಯಕರ ಕೈಯಿಂದಲೇ ಆರೆಸ್ಸೆಸ್ ಅಂತಹ ಕೆಲಸವನ್ನು ಮಾಡಿಸಿತು.

ಬಸವಣ್ಣನ ವಿರುದ್ಧ ಯಾವ ಸಂಚು ಇತಿಹಾಸದಲ್ಲಿ ನಡೆಯಿತೋ ಅದೇ ಸಂಚು ಮತ್ತೆ ವರ್ತಮಾನದಲ್ಲಿ ನಡೆದು, ಬಸವಣ್ಣನ ವಚನಗಳ ತಲೆದಂಡವಾಯಿತು. ಆದರೆ ಇದರ ವಿರುದ್ಧ ಮೂರು ದಶಕಗಳಿಂದ ಪ್ರತಿಭಟನೆಯ ಕೂಗು ಕೇಳುತ್ತಲೇ ಬಂದಿದೆ. ಇದೀಗ ಲಿಂಗಾಯತರೊಳಗೆ ಈ ಕುರಿತ ಜಾಗೃತಿ ತೀವ್ರಗೊಂಡಿದ್ದು, ‘ವೈದಿಕ ಧರ್ಮದ ಯಾವುದೇ ನಂಬಿಕೆಗಳಿಗೂ ಲಿಂಗಾಯತ ಧರ್ಮಕ್ಕೂ ಸಂಬಂಧವಿಲ್ಲ. ಆದುದರಿಂದ ನಮ್ಮದು ಸ್ವತಂತ್ರ ಧರ್ಮ’ ಎಂದು ಘೋಷಿಸಿ ಬೀದಿಗಿಳಿದಿದ್ದಾರೆ. ಕರ್ನಾಟಕದಲ್ಲಿ ಹುಟ್ಟಿದ ಏಕೈಕ ಧರ್ಮವನ್ನು ಸ್ವತಂತ್ರವೆಂದು ಘೋಷಿಸುವುದು ಪರೋಕ್ಷವಾಗಿ ಕನ್ನಡಿಗರಿಗೆ ಸಲ್ಲುವ ಬಹುದೊಡ್ಡ ಗೌರವವೂ ಹೌದು. 12ನೆ ಶತಮಾನದ ಧಾರ್ಮಿಕ, ಸಾಮಾಜಿಕ ಕ್ರಾಂತಿ ಆ ಮೂಲಕ ವಿಶ್ವವ್ಯಾಪಿಯನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ.

ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎಂಬ ಆಂದೋಲದೊಳಗೇ ಕೆಲವು ಸಮಸ್ಯೆಗಳಿವೆ. ಮುಖ್ಯವಾಗಿ ಲಿಂಗಾಯತ ಧರ್ಮಕ್ಕೆ ವೀರಶೈವ ಧರ್ಮವನ್ನು ತಳಕು ಹಾಕಿರುವುದು ಸಕಲ ಗೊಂದಲಕ್ಕೆ ಮುಖ್ಯ ಕಾರಣ. ಕೆಲವು ನಾಯಕರು ‘ವೀರಶೈವ ಲಿಂಗಾಯತ ಧರ್ಮ’ದ ಬಗ್ಗೆ ಮಾತನಾಡುತ್ತಿದ್ದರೆ, ಮಾತೆ ಮಹಾದೇವಿಯಂಥವರು ‘ವೀರಶೈವಕ್ಕೂ ಲಿಂಗಾಯತಕ್ಕೂ ಸಂಬಂಧವೇ ಇಲ್ಲ. ಬೇಕಾದರೆ ವೀರಶೈವರು ತಮ್ಮದೇ ಪ್ರತ್ಯೇಕ ಧರ್ಮಕ್ಕೆ ಬೇಡಿಕೆ ಸಲ್ಲಿಸಲಿ. ಲಿಂಗಾಯತ ಧರ್ಮದ ಜೊತೆಗೆ ಬೇಡ’ ಎನ್ನುತ್ತಿದ್ದಾರೆ. ಈ ಮಾತಿನಲ್ಲಿ ಹುರುಳಿಲ್ಲದೇ ಇಲ್ಲ. ಯಾಕೆಂದರೆ ವೀರಶೈವ ಪಂಥ ಕರ್ನಾಟಕಕ್ಕೆ ಕಾಲಿಟ್ಟಿರುವುದು ಆಂಧ್ರ, ತಮಿಳುನಾಡಿನ ಕಡೆಯಿಂದ. ಎರಡು ಶತಮಾನಗಳ ಹಿಂದೆ ನಡೆದ ಈ ಕಲಬೆರಕೆ ಲಿಂಗಾಯತ ಧರ್ಮದ ಕುರಿತಂತೆ ವ್ಯಾಪಕ ತಪ್ಪುಕಲ್ಪನೆಗಳನ್ನು ಹುಟ್ಟಿಸಿ ಹಾಕಿತು. ವೈದಿಕ ಧರ್ಮದಲ್ಲಿರುವ ಹಲವು ಜಾತಿಗಳಂತೆ ಲಿಂಗಾಯತ ಧರ್ಮ ಎಂಬ ತಪ್ಪುಕಲ್ಪನೆಯನ್ನು ಬಿತ್ತಿತು. ಲಿಂಗಾಯತ ಧರ್ಮದ ಚಿಂತನೆಗೂ ವೀರಶೈವ ಚಿಂತನೆಗೂ ಭಾರೀ ವ್ಯತ್ಯಾಸಗಳಿವೆ. ವೀರಶೈವ ಪಂಥ ಶೈವ ಪಂಥದ ಪ್ರಭಾವದಿಂದ ಹುಟ್ಟಿರುವುದು.

ಶೈವಪಂಥದ ಹಲವು ಆಚರಣೆಗಳು ವೀರಶೈವರಲ್ಲಿವೆ. ಬಸವಣ್ಣ ಯಾವುದನ್ನು ವಿರೋಧಿಸಿದ್ದನೋ ಅದನ್ನು ವೀರಶೈವ ಪಂಥ ಅನುಸರಿಸುತ್ತಿದೆ. ವೀರಶೈವರೊಳಗೆ ಜಾತಿ ವ್ಯವಸ್ಥೆ ಇದೆ. ಅಸ್ಪಶ್ಯತೆಯನ್ನು ಆಚರಿಸುತ್ತಾರೆ. ವೈದಿಕ ಪೀಠಗಳನ್ನು ನಂಬುತ್ತಾರೆ. ನಿಜಕ್ಕೂ ತಮ್ಮದೂ ಲಿಂಗಾಯತ ಧರ್ಮ ಎಂದು ವೀರಶೈವರು ಭಾವಿಸುತ್ತಾರಾದರೆ, ಅವರು ಬಸವಣ್ಣನನ್ನು ಅನುಸರಿಸಬೇಕಾಗುತ್ತದೆ. ಈಗ ಅವರ ಮುಂದೆ ಇರುವುದು ಎರಡು ಆಯ್ಕೆಗಳು. ಒಂದು, ವೀರಶೈವ ಪಂಥ ಎನ್ನುವುದು ಪ್ರತ್ಯೇಕ ಧರ್ಮ ಎಂದು ಒಪ್ಪಿಕೊಳ್ಳುವುದು. ಅಥವಾ ಮತ್ತೆ ಬಂದು ಸೇರಿಕೊಂಡ ವೈದಿಕ ಆಚರಣೆಗಳನ್ನು ಸಂಪೂರ್ಣ ಕಳಚಿಕೊಂಡು ಸಂಪೂರ್ಣ ಲಿಂಗಾಯತರಾಗಿ, ಜಾತಿ ರಹಿತವಾದ ವಿಶ್ವಮಾನವ ಧರ್ಮಕ್ಕೆ ತೆರೆದುಕೊಳ್ಳುವುದು.

ಎಚ್.ಡಿ. ಕುಮಾರಸ್ವಾಮಿಯಂತಹ ನಾಯಕರು ಲಿಂಗಾಯತ ಧರ್ಮದ ಬಗ್ಗೆ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ. ‘ನಾಳೆ ಒಕ್ಕಲಿಗರೂ ಪ್ರತ್ಯೇಕ ಧರ್ಮ ಕೇಳಬಹುದು’ ಎಂದು ಅವರು ಹೇಳುತ್ತಿದ್ದಾರೆ. ವೈದಿಕರ ದೇವಸ್ಥಾನಗಳಲ್ಲೇ ಕಾಲಕಳೆಯುತ್ತಿರುವ ದೇವೇಗೌಡರೇ ಇದಕ್ಕೆ ಉತ್ತರ ಹೇಳಬೇಕು. ವೈದಿಕರ ಜಾತಿಗಳನ್ನು ಮೀರುವ, ತಮ್ಮದೇ ಧರ್ಮವನ್ನು ಕಟ್ಟಿಕೊಂಡವರು ಲಿಂಗಾಯತರು. ಅಂತಹ ಸಾಮರ್ಥ್ಯ ಕುಮಾರಸ್ವಾಮಿಯ ಒಕ್ಕಲಿಗರ ಸಮುದಾಯಕ್ಕೆ ಇದೆಯಾದರೆ, ವೈದಿಕರ ಎಲ್ಲ ಆಚರಣೆ, ಸಂಕೇತಗಳನ್ನು ನಿರಾಕರಿಸುವ ಅಧ್ಯಾತ್ಮ ಶಕ್ತಿ ಕುಮಾರಸ್ವಾಮಿಯವರ ಹಿಂಬಾಲಕರಿಗೆ ಇದೆ ಎಂದಾದರೆ ಅವರೂ ಪ್ರತ್ಯೇಕ ಧರ್ಮವನ್ನು ಘೋಷಿಸುವುದಕ್ಕೆ ಯಾವ ಅಡ್ಡಿಯೂ ಇಲ್ಲ. ಅಂತಿಮವಾಗಿ ಎಲ್ಲ ಧರ್ಮಗಳೂ ಮನುಷ್ಯ ಪರವಾಗಿರಬೇಕು, ಮನುಷ್ಯನ ಘನತೆಗೆ ಗೌರವಿಸಬೇಕು ಎನ್ನುವುದೇ ಎಲ್ಲ ಅಧ್ಯಾತ್ಮವಾದಿಗಳ ಆಶಯ.

ಕೃಪೆ:ವಾರ್ತಾಭಾರತಿ ಸಂಪಾದಕೀಯ

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...