ಹೋರಾಟಗಾರ್ತಿ ದಿಶಾ ರವಿ ಬಂಧನ ದಿಲ್ಲಿ ಮಹಿಳಾ ಆಯೋಗದ ಕಳವಳ ಪೊಲೀಸರಿಗೆ ನೋಟಿಸ್ ಜಾರಿ

Source: VB news | By S O News | Published on 17th February 2021, 1:23 PM | National News |

ಹೊಸದಿಲ್ಲಿ: ಟೂಲ್‌ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಿಂದ ಪರಿಸರ ಹೋರಾಟಗಾರ್ತಿ ದಿಶಾ ರವಿ (22) ಅವರನ್ನು ಬಂಧಿಸಿರುವ ಬಗ್ಗೆ ಫೆ.19ರೊಳಗೆ ಆಯೋಗಕ್ಕೆ ಮಾಹಿತಿಗಳನ್ನು ಸಲ್ಲಿಸುವಂತೆ ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಮಂಗಳವಾರ ದಿಲ್ಲಿ ಪೊಲೀಸರಿಗೆ ನೋಟಿಸ್ ಹೊರಡಿಸಿದ್ದಾರೆ.

ದಿಲ್ಲಿ ಪೊಲೀಸ್ ನ ಸೈಬರ್ ಅಪರಾಧ ಘಟಕದ ಡಿಸಿಪಿಯವರಿಗೆ ರವಾನಿಸಲಾಗಿರುವ ನೋಟಿಸಿನಲ್ಲಿ ದಿಶಾರ ಹೆತ್ತವರಿಗೆ ಮಾಹಿತಿ ನೀಡದೇ ಅವರನ್ನು ಬೆಂಗಳೂರಿನಿಂದ ದಿಲ್ಲಿಗೆ ತರಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ಉಲ್ಲೇಖಿಸಲಾಗಿದೆ. ದಿಶಾರನ್ನು ಟ್ರಾನ್ಸಿಟ್ ರಿಮಾಂಡ್ಗಾಗಿ  ಬೆಂಗಳೂರಿನ ನ್ಯಾಯಾಲಯದಲ್ಲಿ ಹಾಜರು ಪಡಿಸದೆ ನೇರವಾಗಿ ದಿಲ್ಲಿಗೆ ಕರೆತರಲಾಗಿದೆ ಮತ್ತು ನಂತರ ತನಗೆ ವಕೀಲರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನೂ ನೀಡದೆ ಅವರನ್ನು ದಿಲ್ಲಿಯ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ ಎಂದೂ ನೋಟಿಸ್ ಬೆಟ್ಟು ಮಾಡಿದೆ.

ಮಾಧ್ಯಮದ ವರದಿಗಳನ್ನು ಆಯೋಗವು ಸ್ವಯಂಪ್ರೇರಿತವಾಗಿ ಗಣನೆಗೆ ತೆಗೆದುಕೊಂಡಿದ್ದು, ಟ್ರಾನ್ಸಿಟ್ ರಿಮಾಂಡ್ ಪಡೆದುಕೊಳ್ಳುವಲ್ಲಿ ಪೊಲೀಸರ ವೈಫಲ್ಯವು ಅತ್ಯಂತ ಗಂಭೀರ ವಿಷಯವಾಗಿದೆ ಎಂದಿರುವ ನೋಟಿಸ್‌, ಪೊಲೀಸರು ಬಂಧಿತ ವ್ಯಕ್ತಿಯನ್ನು ಸಮೀಪದ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಬಳಿಕ ಟ್ರಾನ್ಸಿಟ್ ರಿಮಾಂಡ್ ಪಡೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದ ದಿಲ್ಲಿ ಉಚ್ಚ ನ್ಯಾಯಾಲಯದ 2019ರ ಆದೇಶವನ್ನು ಉಲ್ಲೇಖಿಸಿದೆ. ಬಂಧಿತ ಪ್ರತಿ ವ್ಯಕ್ತಿಗೂ ನ್ಯಾಯಾಲಯದಲ್ಲಿ ತನ್ನ ಪರವಾಗಿ ವಾದಿಸಲು ವಕೀಲರನ್ನು ನೇಮಿಸಿಕೊಳ್ಳುವ ಹಕ್ಕನ್ನು ಸಂವಿಧಾನದ 22(1) ವಿಧಿಯು ನೀಡಿದೆ ಎಂದೂ ನೋಟಿಸ್‌ನಲ್ಲಿ ಹೇಳಲಾಗಿದೆ.

ಆಯೋಗವು ನೋಟಿಸಿನ ಪ್ರತಿಯನ್ನು ಟೀಟಿಸಿದ್ದು, ಅದರಲ್ಲಿ ಮಲಿವಾಲ್ ಅವರು ಆಯೋಗದ ಕಳವಳಗಳಿಗೆ ಉತ್ತರಿಸುವಂತೆ ದಿಲ್ಲಿ ಪೊಲೀಸರಿಗೆ ಸೂಚಿಸಿದ್ದಾರೆ. ಎಫ್‌ಐಆರ್‌ ಪ್ರತಿ ಮತ್ತು ಕ್ರಮಪಾಲನಾ ವರದಿಯ ವಿವರಗಳನ್ನು ಸಲ್ಲಿಸುವಂತೆ ಹಾಗೂ ಟ್ರಾನ್ಸಿಟ್ ರಿಮಾಂಡ್ ನ್ನು ಪಡೆಯುವಲ್ಲಿ ವೈಫಲ್ಯ ಮತ್ತು ದಿಶಾ ಅವರಿಗೆ ಅವರ ಆಯ್ಕೆಯ ವಕೀಲರನ್ನು ಒದಗಿಸದ್ದಕ್ಕೆ ಕಾರಣಗಳನ್ನು ನೀಡುವಂತೆ ನೋಟಿಸಿನಲ್ಲಿ ಪೊಲೀಸರಿಗೆ ಸೂಚಿಸಲಾಗಿದೆ.

ಪೊಲೀಸರಿಂದ ಸಮರ್ಥನೆ: ತನ್ಮಧ್ಯೆ, ದಿಶಾರ ಬಂಧನದಲ್ಲಿ ಪೊಲೀಸರಿಂದ ಯಾವುದೇ ಲೋಪವಾಗಿರುವುದನ್ನು ನಿರಾಕರಿಸಿದ ದಿಲ್ಲಿ ಪೊಲೀಸ್ ಆಯುಕ್ತ ಎಸ್.ಎನ್.ಶ್ರೀವಾಸ್ತವ ಅವರು, ಸ್ಥಾಪಿತ ಕಾರ್ಯವಿಧಾನಕ್ಕನುಗುಣವಾಗಿ ದಿಶಾರನ್ನು ಬಂಧಿಸಲಾಗಿದೆ. 22 ವರ್ಷದವರಾಗಿರಲಿ ಅಥವಾ 50 ವರ್ಷದವರಾಗಿರಲಿ,ಕಾನೂನಿನ ಮುಂದೆ ಎಲ್ಲರೂ ಒಂದೇ. ಅವರನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿ 5 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಅವರ ಬಂಧನದಲ್ಲಿ ಲೋಪಗಳಿವೆ ಎನ್ನುವುದು ಸುಳ್ಳು ಎಂದು ಹೇಳಿದರು.

ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಗೆ ನೆರವಾಗಲು ಟೂಲ್‌ಕಿಟ್ ರೂಪಿಸುವಲ್ಲಿ ಭಾಗಿಯಾಗಿದ್ದರು ಎಂಬ ಆರೋಪದಲ್ಲಿ ದಿಲ್ಲಿ ಪೊಲೀಸರು ರವಿವಾರ ದಿಶಾರನ್ನು ಬೆಂಗಳೂರಿನ ಅವರ ನಿವಾಸದಿಂದ ಬಂಧಿಸಿದ್ದರು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...