ಪುರುಷ ಪ್ರಧಾನ ಸಮಾಜ ಹಾಗೂ ಲೈಂಗಿಕತೆಗಳ ಕಾನೂನು ಮಾನ್ಯತೆ

Source: sonews | By Staff Correspondent | Published on 17th September 2018, 11:27 PM | National News | Special Report | Don't Miss |

ಸೆಕ್ಷನ್ ೩೭೭ರ ಬಗ್ಗೆ ಸುಪ್ರೀಂಕೋರ್ಟು ಇತ್ತೀಚೆಗೆ ನೀಡಿರುವ ತೀರ್ಪು ಒಂದು ದೊಡ್ಡ ಹೆಜ್ಜೆಯೇ ಆಗಿದ್ದರೂ ಅದು ಅರ್ಥಪೂರ್ಣವಾಗಬೇಕೆಂದರೆ ಲಿಂಗತ್ವಗಳ (ಜೆಂಡರ್) ಸಾಮಾಜಿಕ ಪಾತ್ರಗಳ ಬಗ್ಗೆ ಸಮಾಜದ ಗ್ರಹಿಕೆ ಬದಲಾಗಬೇಕು.

ದೇಶದ ಸರ್ವೋನ್ನತ ನ್ಯಾಯಾಲಯವು ಸೆಕ್ಷನ್ ೩೭೭ರಡಿ ಇಬ್ಬರು ಪ್ರೌಢ ವಯಸ್ಕ ವ್ಯಕ್ತಿಗಳು ಸಮ್ಮತಿಯೊಂದಿಗೆ ಖಾಸಗಿಯಾಗಿ ನಡೆಸುವ ಲೈಂಗಿಕ ಕ್ರಿಯೆಗಳು ಕಾನೂನು ಬದ್ಧವಾದದ್ದೆಂದು ೨೦೧೮ರ ಸೆಪ್ಟೆಂಬರ್ ೬ರಂದು ಘೋಷಿಸಿರುವುದು ಅನನ್ಯತೆಗಳ ಸ್ವನಿರ್ಣಯಾಧಿಕಾರಕ್ಕೆ ದಕ್ಕಿರುವ ಗೆಲುವಾಗಿದೆ. ಐದು ಜನ ನ್ಯಾಯಾಧೀಶರ ಪೀಠವು ನೀಡಿದ ನಾಲ್ಕು ಪ್ರತ್ಯೇಕ ಆದರೆ ಏಕತೀರ್ಮಾನದ ಆದೇಶವು ಈಗ ಎಲ್ಜಿಬಿಟಿ (ಲೆಸ್ಬಿಯನ್, ಗೇ, ಬೈಸೆಕ್ಸುಯಲ್, ಟ್ರಾನ್ಸ್ಜೆಂಡರ್ ಮತ್ತು ಕ್ವೀರ್) ವ್ಯಕ್ತಿಗಳಿಗೂ ಸಂವಿಧಾನದ ೧೪, ೧೫, ೧೯ ಮತ್ತು ೨೧ರ ಕಲಮುಗಳು ನೀಡುವ ಮತ್ತು ಇನ್ನಿತರ ಮೂಲಭೂತಹಕ್ಕುಗಳು ಸಮಾವಾಗಿ ಅನ್ವಯವಾಗುತ್ತವೆ. ಹೀಗಾಗಿ ಈಗ ಸೆಕ್ಷನ್ ೩೭೭ರಡಿ ಅಪ್ರಾಪ್ತರೊಡನೆ, ಪ್ರಾಣಿಗಳೊಡನೆ ಮತ್ತು ಸಮ್ಮತಿಯಿಲ್ಲದೆ ನಡೆಸುವ ಲೈಂಗಿಕ ಕ್ರಿಯೆಗಳು ಮಾತ್ರ ಅಪರಾಧವೆಂದು ಪರಿಗಣಿತವಾಗುತ್ತದೆ. ಆದೇಶವು ಸುರೇಶ್ಕುಮಾರ್ ಕೌಶಲ್ ಮತ್ತು ಇತರರು ಹಾಗೂ ನಾಜ್ ಫೌಂಡೇಶನ್ ಮತ್ತಿತರರು ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ಮತ್ತೊಂದು ಪೀಠವು ೨೦೧೩ರಲ್ಲಿ ನೀಡಿದ ಆದೇಶವನ್ನು ರದ್ದುಗೊಳಿಸಿದೆ. ೨೦೧೩ರ ಆದೇಶವು ಯೋನಿ ಮತ್ತು ಶಿಶ್ನಗಳ ನಡುವಿನ ಸಂಭೋಗವಲ್ಲದ ಇನ್ಯಾವುದೇ ಸಂಭೋಗವನ್ನು ಅಸಹಜ ಮತ್ತು ಕಾನೂನುಬಾಹಿರ ಎಂದೇ ಪರಿಗಣಿಸಿತ್ತು. ತಿಳವಳಿಕೆ ವಸಾಹತುಶಾಹಿ ಕಾನೂನಿನ ಮುಂದುವರೆಕೆಯಾಗಿದ್ದು ಎಲ್ಜಿಬಿಟಿ ಸಮುದಾಯವನ್ನು ಮತ್ತಷ್ಟು ಕಾಲ ಸಾಮಾಜಿಕ ಅಪಾಮಾನಕ್ಕೆ ಗುರಿಯಾಗುವಂತೆ  ಮಾಡಿತ್ತು

ಹೀಗಾಗಿ ಸುಪ್ರೀಂ ಕೋರ್ಟಿನ ಇತ್ತೀಚಿನ ಆದೇಶವನ್ನು ಎಲ್ಜಿಬಿಟಿ ಸಮುದಾಯವು ಅತ್ಯಂತ ಸಂತಸದಿಂದ ಸ್ವಾಗತಿಸಿದೆ. ಹಾಗೂ ಯಾರು ಯಾವ ಬಗೆಯ ಅನನ್ಯತೆಯ ಗುರುತನ್ನು ಹೊಂದಬೇಕೆಂದು ಬಯಸುತ್ತಾರೆಯೋ ಅದನ್ನು ಅವರು ಘನತೆಯಿಂದ ಹೊಂದುವ ಹಕ್ಕನ್ನು ಗುರುತಿಸಿರುವ ನ್ಯಾಯಾಲಯದ ತೀರ್ಪನ್ನು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. ಇದಕ್ಕೂ ಮುನ್ನ ೨೦೧೪ರ ನ್ಯಾಷನಲ್ ಲೀಗಲ್ ಸರ್ವೀಸ್ ಅಥಾರಿಟಿ (ನಾಲ್ಸ) ಮತ್ತು ಭಾರತ ಸರ್ಕಾರದ ಪ್ರಕರಣದಲ್ಲಿ  ನೀಡಲಾದ ತೀರ್ಪು ಇಂಥಾ ಆದೇಶವೊಂದು ಹೊರಬರುವಲ್ಲಿ ಪ್ರಮುಖ ಪಾತ್ರವಹಿಸಿತು. ಆದೇಶದಲ್ಲಿ ಲಿಂಗಾಂತರಿ ವ್ಯಕ್ತಿಗಳನ್ನು ಮೂರನೇ ಲಿಂಗ (ಜೆಂಡರ್) ಎಂದು ಗುರುತಿಸುವ ಮೂಲಕ ಗಂಡು ಮತ್ತು ಹೆಣ್ಣು ಎಂಬ ದ್ವಿಲಿಂಗ ಮಾತ್ರ ಮನಸ್ಥಿತಿಯಿಂದ ಹೊರಬರಲು ಆದೇಶವು ಸಹಾಯ ಮಾಡಿತಲ್ಲದೆ ಲಿಂಗ ಅನನ್ಯತೆ (ಜೆಂಡರ್ ಐಡೆಂಟಿಟಿ) ಎಂಬುದು ಜೀವನದ ಅತ್ಯಂತ ಮೂಲಭೂತ ಅಂಶಗಳಲ್ಲಿ ಒಂದು ಎಂಬುದನೂ ಸಹ ಅದು ಎತ್ತಿಹಿಡಿಯಿತು. ಎಲ್ಲಕ್ಕಿಂತ ಮುಖ್ಯವಾಗಿ  ಒಬ್ಬ ವ್ಯಕ್ತಿಯು ವೈಯಕ್ತಿಕವಾಗಿ ಮತ್ತು ಅಂತರಿಕವಾಗಿ ಯಾವ ಲಿಂಗದ ಅನುಭವನ್ನೂ ತೀವ್ರವಾಗಿ ಅನುಭಾವಿಸುತ್ತಾರೋ ಅದು ವ್ಯಕ್ತಿಯ ಲೈಂಗಿಕ ಅನನ್ಯತೆಯಾಗಿರುತ್ತದೆ ಮತ್ತು ಅದು ಹುಟ್ಟಿನ ಸಮಯದಲ್ಲಿ ಯಾವ ಲಿಂಗ ಅನನ್ಯತೆಯನ್ನು ವ್ಯಕ್ತಿಯ ಮೇಲೆ ನಿಗದಿಪಡಿಸಲಾಯಿತೋ ಅದಕ್ಕೆ ತಕ್ಕನಾಗಿಯೇ ಇರಬಹುದು ಅಥವಾ ಇರದೆಯೂ ಇರಬಹುದು ಎಂದು ಅತ್ಯಂತ ಸ್ಪಷ್ಟವಾಗಿ   ಆದೇಶವು ಲಿಂಗ ಅನನ್ಯತೆಯ ನಿರ್ವಚನ ಮಾಡಿತ್ತು.

ಆದರೆ ಪೂರ್ವಗ್ರಹಗಳೇ ತುಂಬಿಕೊಂಡಿರುವ ಸಮಾಜದಲ್ಲಿ  ಲಿಂಗ ಅನನ್ಯತೆಯ ಸ್ವ ನಿರ್ಣಯಾಧಿಕಾರದ ಬಗೆಗಿನ ಕಾನೂನು ಮಾನ್ಯತೆಯು ಎಲ್ಜಿಬಿಟಿ ಸಮುದಾಯಗಳ ದೈನಂದಿನ ಬದುಕನ್ನು ಎಷ್ಟರಮಟ್ಟಿಗೆ ಸುಗಮಗೊಳಿಸಬಹುದು? ಸುಪ್ರೀಂ ಕೋರ್ಟಿನ ಆದೇಶವು ಸಾಂವಿಧಾನಿಕ ನೈತಿಕತೆಯು ಸಮಾಜದ ನೈತಿಕತೆಗಿಂದ ಪರಮೋಚ್ಚವಾದದ್ದೆಂದು ಪುನರುಚ್ಚರಿಸಿದೆ. ಆದರೆ ಸಮಾಜದಲ್ಲಿ ಸಹಜವಾಗಿಸಲ್ಪಟ್ಟಿರುವ ಅನ್ಯಲಿಂಗ ಲೈಂಗಿಕತೆಯ(ಹೆಟ್ರೋಸೆಕ್ಶುಯಲ್-ಗಂಡು ಹೆಣ್ಣಿನೊಡನೆ ಮತ್ತು ಹೆಣ್ಣು ಗಂಡಿನೊಡಗೂಡುವ ಲೈಂಗಿಕತೆ) ಧೋರಣೆಗಳನ್ನು ಉಲ್ಲಂಘಿಸುವ ಸಮುದಾಯದ ದೈನಂದಿನ ಸಂಘರ್ಷಗಳನ್ನು ಅಂತಿಮವಾಗಿ ಪ್ರಭಾವಿಸುವುದು ಸಮಾಜದ ನೈತಿಕತೆಯೇ ಆಗಿರುತ್ತದೆ. ಆದ್ದರಿಂದಲೇ ಸಮುದಾಯದ ವ್ಯಕ್ತಿಗಳು  ಹೆಚ್ಚಿನ ಹಿಂಸೆ ಮತ್ತು ಅಪಮಾನಗಳಿಗೆ ತುತ್ತಾಗುತ್ತಾರೆ.

ಆದೆಶವು ಬಂದ ದಿನ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯು ಮುಂಬೈನ ಲೋಕಲ್ ಟ್ರೈನಿನಲ್ಲಿ ಭಿಕ್ಷಾಟನೆ ಮಾಡುವ ಇಬ್ಬರು ಲಿಂಗಾಂತರಿ ವ್ಯಕ್ತಿಗಳನ್ನು ಮಾತಾಡಿಸಿತು. ಅವರಿಬ್ಬರಿಗೂ ಸುಪ್ರೀಂ ಕೋರ್ಟಿನ ಆದೇಶದ ಬಗ್ಗೆಯಾಗಲೀ ಅದು ತಮ್ಮ ಬದುಕಿನ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆಯಾಗಲೀ ಏನೂ ಗೊತ್ತಿರಲಿಲ್ಲ: ಇದು ಕಾನೂನಿನ ವಿಷಯವಲ್ಲ. ಅದಕ್ಕಿಂತ ಹೆಚ್ಚಾಗಿ ಸಮಾಜದಲ್ಲಿ ನಮ್ಮ ಬಗ್ಗೆ ಗೌರವ ಮೂಡಬೇಕು ಎಂದು ಅವರು ಹೇಳಿದರು. ಒಂದು ಕಾನೂನು ಒಬ್ಬ ವ್ಯಕ್ತಿಗೆ ಎಷ್ಟು ಸುರಕ್ಷತೆ ಕೊಡಬಲ್ಲದು ಎಂಬುದು ಸಮಾಜದಲ್ಲಿ ವ್ಯಕ್ತಿಗಿರುವ ಪ್ರತಿಷ್ಟೆಯನ್ನೂ ಹಾಗೂ ಸಮಾಜದಲ್ಲಿನ ಪಡೆದುಕೊಂಡಿರುವ ಇತರ ಸ್ಥಾಮಾನಗಳನ್ನೂ ಆಧರಿಸಿರುತ್ತದೆ. ಹೀಗಾಗಿ ಖಾಸಗಿಯಾಗಿ ನಡೆಸುವ ಲೈಂಗಿಕ ಕ್ರಿಯೆಗಳನ್ನು ಕಾನೂನುಬದ್ಧಗೊಳಿಸಿದ್ದರೂ ಅದು ಸಾರ್ವಜನಿಕ ಸ್ಥಳಗಳಲ್ಲಿ ಎಲ್ಜಿಬಿಟಿ ವ್ಯಕ್ತಿಗಳಿಗೆ ನೀಡುವ ಕಿರುಕುಳಗಳನ್ನಾಗಲೀ, ಉದ್ಯೋಗಾವಕಾಶಗಳಲ್ಲಿ ತೋರುವ ತಾರತಮ್ಯಗಳನ್ನಾಗಲೀ ಅಷ್ಟೊಂದು ಕಡಿಮೆ ಮಾಡಲಾರದು.

ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ನೀಡಿರುವ ಆದೇಶವು ಮದುವೆ, ದತ್ತಕ, ಆಸ್ತಿ ಮತ್ತು ಉದ್ಯೋಗಗಳಂಥ ಎಲ್ಲಾಕ್ಷೇತ್ರಗಳಲ್ಲೂ ಸಂಪೂರ್ಣವಾದ ಸಾಂವಿಧಾನಿಕ ಹಕ್ಕುಗಳನ್ನು ಪಡೆದುಕೊಳ್ಳುವ ಬಾಗಿಲನ್ನೇ ತೆರೆದಿಟ್ಟಿದೆ ಎಂದು ಹೇಳಲಾಗುತ್ತಿದೆ. ಎಲ್ಜಿಬಿಟಿ ವ್ಯಕ್ತಿಗಳನ್ನು ಆರ್ಥಿಕವಾಗಿಯೂ ಒಳಗೊಳ್ಳುವಂಥ ಸಕಾರಾತ್ಮಕ ಮೂಲಭೂತ ಕ್ರಮಗಳನ್ನು ತೆಗೆದುಕೊಳ್ಳಲೂ ಮತ್ತು ವಸತಿ ಮತ್ತು ಶಿಕ್ಷಣದಲ್ಲಿ ನಡೆಯುವ ತಾರತ್ಮಯಿಂದ ಸಮುದಾಯವನ್ನು ರಕ್ಷಿಸಲು ತಾರತಮ್ಯ ಪ್ರತಿಬಂಧಕ ಕಾಯಿದೆಗಳ ರಚನೆಗೂ ಇದು ಕಾರಣವಾಗಬಹುದೆಂಬ ನಿರೀಕ್ಷೆಗಳಿವೆ. ಆದರೆ ನಾಲ್ಸ ಪ್ರಕರಣದ ಆದೇಶ ಹೊರಬಿದ್ದು  ನಾಲ್ಕು ವರ್ಷಗಳೇ ಕಳೆಯುತ್ತಾ ಬಂದಿದ್ದರೂ ಲಿಂಗಾಂತರಿ ವ್ಯಕ್ತಿಗಳ ಹಕ್ಕುಗಳ ರಕ್ಷಣೆ ಮಸೂದೆ-೨೦೧೬-ಗೆ ಬಂದಿರುವ ಗತಿಯನ್ನು ನೋಡಿದರೆ ನಮ್ಮ ಸಂಸದರು ಇದನ್ನು ನಿಜಕ್ಕೂ ಗಂಭೀರವಾಗಿ ಪರಿಗಣಿಸುವರೇ ಎಂಬ ಬಗ್ಗೆ ಪ್ರಶ್ನೆಗಳು ಮೂಡುತ್ತವೆ.

ಎಲ್ ಜಿಬಿಟಿ ವ್ಯಕ್ತಿಗಳಿಗೆ ನಿಜವಾದ ಸ್ವಾತಂತ್ರ್ಯವನ್ನು ದೊರಕಿಸುವ ಬಗ್ಗೆ ಭಾರತವು ನೀಡಿರುವ ಭರವಸೆ ಕೇವಲ ಸಾಂಕೇತಿಕವಾಗಬಾರದು; ಅದನ್ನು ಸ್ತ್ರೀ-ಪುರುಷರೆಂಬ ದ್ವಿಲಿಂಗ ಮಾತ್ರ ನೀತಿತತ್ವದಡಿಯಲ್ಲಿ ಸುತ್ತಿಡಲಾಗದು. ನಮ್ಮ ರಾಷ್ಟ್ರತ್ವದೊಳಗಿರುವ ಪಿತೃ ವಂಶಾವಳಿ ಮತ್ತು ಪುರುಷಪ್ರಧಾನ ಧೋರಣೆಗಳನ್ನು ಕಿತ್ತೊಗೆಯದೇ ಸಮಾನ ಹಕ್ಕುಗಳು ಮತ್ತು ಘನತೆಯ ಬದುಕಿಗಾಗಿನ ಹೋರಾಟ ತನ್ನ ಗುರಿ ಸೇರಲಾರದು. ಫ್ರಾನ್ಸ್ ಇದಕ್ಕೆ ಒಂದು ದೊಡ್ಡ ಉದಾಹರಣೆ. ಅಲ್ಲಿ ಸಲಿಂಗ ಧೋರಣೆಗೆ ನೀಡಿದ ಶಾಸನಾತ್ಮಕ ಮಾನ್ಯತೆಯನ್ನು ಅದರ ಪ್ರಗತಿಪರತೆಗೆ ದ್ಯೋತಕವೆಂದು ಪ್ರದರ್ಶಿಸಲಾಯಿತು. ಆದರೆ ಎಲ್ಲಿಯತನಕ ಅದು ಅಲ್ಲಿಯ ಕುಟುಂಬದ ಸಹಜ ಆದರ್ಶಗಳಿಗೆ ಸವಾಲೆಸೆಯಲಿಲ್ಲವೋ ಆಲ್ಲಿಯ ತನಕ ಮಾತ್ರ ಸಲಿಂಗಧೋರಣೆಯುಳ್ಳವರಿಗೆ ರಿಯಾಯತಿಯನ್ನು ನೀಡಲಾಗಿತ್ತು. ೧೯೯೯ರಲ್ಲಿ ಅವರಿಗೆ ಸಂಘ-ಸಂಸ್ಥೆಗಳನ್ನು ಕಟ್ಟಿಕೊಳ್ಳುವ ನಾಗರಿಕ ಹಕ್ಕುಗಳನ್ನು ನೀಡಲಾಯಿತಾದರೂ ಸಮುದಾಯದವರು ದತ್ತಕ ಮಾಡಿಕೊಳ್ಳುವುದನ್ನು ಅಥವಾ ಸಲಿಂಗ ದಂಪತಿಗಳು ತಂತ್ರಜ್ನಾನದ ಮೂಲಕ ಮಕ್ಕಳನ್ನು ಹೊಂದುವ ಹಕ್ಕನ್ನು ಕಡಿತಗೊಳಿಸಲಾಯಿತು. ನ್ಯಾಯಮೂರ್ತಿ ರೋಹಿಂಗ್ಟನ್ ನಾರಿಮನ್ ಅವರ ಆದೇಶದಲ್ಲಿ ಬಗ್ಗೆ ಸರ್ಕಾರಿ ಅಧಿಕಾರಿಗಳಲ್ಲಿ ಅದರಲ್ಲೂ ಪೋಲಿಸರಲ್ಲಿ ಅರಿವನ್ನು ಉಂಟುಮಾಡುವ ಮತ್ತು ಸಂವೇದನಾಶೀಲರನ್ನಾಗಿ ಮಾಡುವ ಪ್ರಚಾರಾಂದೋಲನವನ್ನು ಕಾಲಕಾಲಕ್ಕೆ ಕೈಗೊಳ್ಳಬೇಕೆಂಬ ಶಿಫಾರಸ್ಸನ್ನು ಮಾಡಲಾಗಿದೆ. ಆದರೆ ಎಲ್ಲಿಯತನಕ ಅನ್ಯಲಿಂಗಧೋರಣೆಗಳ ಮತ್ತು ಅನ್ಯಲಿಂಗಿಗಳ ಲೈಂಗಿಕ ಚಟುವಟಿಕೆಗಳ ಸಾಂಸ್ಥಿಕ ವೈಭವೀಕರಣವನ್ನು ಸಾಂಸ್ಥಿಕವಾಗಿಯೇ ಅಪಮೌಲ್ಯೀಕರಿಸುವುದಿಲ್ಲವೋ ಅಲ್ಲಿಯತನಕ ಅಧಿಕಾರಿಗಳನ್ನು ಸವೇದನಾಶೀಲರನ್ನಾಗಿ ಮಾಡುವ ಆಂದೋಲನವು ಅಪೂರ್ಣವಾಗಿಯೇ ಇರುತ್ತದೆ.

ನ್ಯಾಯಮೂರ್ತಿ ಚಂದ್ರಚೂಡ್ ಅವರು ಗುರುತಿಸುವಂತೆ ಲಿಂಗಾಧಾರಿತ ತಾರತಮ್ಯಗಳು ಪ್ರತ್ಯಕ್ಷವಾಗಿಯೂ ಇರಬಹುದು ಮತ್ತು ಪರೋಕ್ಷವಾಗಿಯೂ ಇರಬಹುದು. ಹಾಗೂ ಅದು ಒಂದು ಲಿಂಗದ ಪಾತ್ರದ ಬಗ್ಗೆ ಇರುವ ನಿರ್ದಿಷ್ಟ ಗ್ರಹಿಕೆಗಳನ್ನು ಮತ್ತು  ಯಾವ್ಯಾವ ಲಿಂಗದ ವ್ಯಕ್ತಿಗಳು ಯಾವ್ಯಾವ ಪಾತ್ರವನ್ನು ವಹಿಸಬೇಕೆಂಬ ತಿಳವಳಿಕೆಯನ್ನೂ ಮತ್ತು ಸ್ತ್ರೀ ಮತ್ತು ಪುರುಷ ಮಾತ್ರ ಎಂಬ  ದ್ವಿಲಿಂಗ ಧೋರಣೆಯನ್ನು ಆಧರಿಸಿರಬಹುದು. ಲಿಂಗಗಳ ಪಾತ್ರದ ಬಗ್ಗೆ ಇರುವ ಸಾಪ್ರದಾಯಿಕ ಪಡಿಯಚ್ಚು ತಿಳವಳಿಕೆಗಳಿಂದಾಗಿಯೇ ಸಲಿಂಗ ಲೈಂಗಿಕತೆಯನ್ನು ಅಪರಾಧೀಕರಿಸಲಾಯಿತು ಮತ್ತು ಅದು ತಾರತಮ್ಯವನ್ನೂ ಖಾತರಿಗೊಳಿಸಿತು ಎಂದು ಅವರು ಪ್ರತಿಪಾದಿಸುತ್ತಾರೆ.

ಪುಟ್ಟಸ್ವಾಮಿ ಪ್ರಕರಣದಲ್ಲಿ ಒಂಭತ್ತು ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟಿನ ಪೀಠವು ಖಾಸಗಿತನವು ಒಂದು ಮೂಲಭೂತ ಹಕ್ಕೆಂದು ನೀಡಿದ ಆದೇಶವನ್ನು ಉಲ್ಲೇಖಿಸುತ್ತಾ ನ್ಯಾಯಮೂರ್ತಿ ಚಂದ್ರಚೂಡ್ ಅವರು ಸಮ್ಮತಿ ಪೂರ್ವಕ ಲೈಂಗಿಕ ಕ್ರಿಯೆಯನ್ನು ಖಾಸಗಿಯಾಗಿ ನಡೆಸಲು ನೀಡಿರುವ ರಕ್ಷಣೆಯನ್ನು ಸಾರ್ವಜನಿಕ ಪ್ರದೇಶಗಳಿಗೂ ವಿಸ್ತರಿಸಬೇಕೆಂದು ಅಭಿಪ್ರಾಯ ಪಡುತ್ತಾರೆ. ಏಕೆಂದರೆ ಲೈಂಗಿಕ ಅಲ್ಪಸಂಖ್ಯಾತರು ತಮ್ಮ ಲೈಂಗಿಕತೆ ಮತ್ತು ಕಾಣಿಸಿಕೊಳ್ಳುವ ರೀತಿಗಳಿಂದಾಗಿ ಅತಂತ್ರ ಸ್ಥಿತಿಯನ್ನು ಎದುರಿಸಬೇಕಿದೆ ಎಂದು ಅವರು ಟಿಪ್ಪಣಿ ಮಾಡಿದ್ದಾರೆ. ಸಲಿಂಗ ಕ್ರಿಯೆಯನ್ನು ಖಾಸಗಿ ವಲಯಕ್ಕೆ ದೂಡುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಸರ್ವವ್ಯಾಪೀ ಅನ್ಯಲಿಂಗೀಯತೆಯೇ ಪದೇಪದೇ ಪುನರ್ ಪ್ರತಿಪಾದಿತವಾಗುತ್ತದೆ. ಆದ್ದರಿಂದ ಸಾರ್ವಜನಿಕವಾಗಿ ತಮ್ಮ ಅನನ್ಯತೆಯನ್ನು ಅಭಿವ್ಯಕ್ತಗೊಳಿಸುವುದನ್ನು ಸಹ ಲೈಂಗಿಕ ಖಾಸಗಿತನವು ಒಳಗೊಳ್ಳಬೇಕು ಎಂದು ನ್ಯಾಯಮೂರ್ತಿ ಚಂದ್ರಚೂಡ್ ಪ್ರತಿಪಾದಿಸಿದ್ದಾರೆ.

ಹೀಗಾಗಿ ಲಿಂಗತ್ವದ ಬಗ್ಗೆ ನಮ್ಮ ಪರಿಕಲ್ಪನೆಯ ಅಮೂಲಾಗ್ರ ಬದಲಾವಣೆಯ ಮೂಲಕ ಮಾತ್ರ ದೇಶದ ಹಲವು ನಾಗರಿಕರಿಗೆ ಮತ್ತು ಲಿಂಗತ್ವಗಳಿಗೆ ಘನತೆಯುಳ್ಳ ಬದುಕನ್ನು ಖಾತರಿಗೊಳಿಸಲು ಸಾಧ್ಯ. ಲೈಂಗಿಕ ಬಯಕೆಯನ್ನು ಒಬ್ಬ ನಾಗರಿಕರ ನೈತಿಕ ಮತ್ತು ಸುಸಂಬದ್ಧ ಆಶಯವೆಂದು ಮಾನ್ಯ ಮಾಡದೆ ಮತ್ತು ಲೈಂಗಿಕ ಕ್ರಿಯೆಗಳನ್ನು ಸಂತಾನೋತ್ಪತ್ತಿಯ ವ್ಯಾಕರಣದಿಂದ ಮುಕ್ತಗೊಳಿಸದೆ ನಿಜವಾದ ಸ್ವಾತಂತ್ರ್ಯ ಸಿಗಲು ಸಾಧ್ಯವಿಲ್ಲ. ಪ್ರಭುತ್ವವೆಂದರೆ ತನ್ನ ನಾಗರಿಕರನ್ನು ರಕ್ಷಿಸುವ ಮತ್ತು ಅವರ ನೈತಿಕತೆಯ ಮೇಲೆ ಉಸ್ತುವಾರಿ ಮಾಡುವ ಒಂದು ಪ್ರಶ್ನಾತೀತ, ಪಿತೃಸ್ವಾಮ್ಯ ಸಂಸ್ಥೆ ಎಂಬ ಧೋರಣೆಯನ್ನು ಪ್ರಶ್ನಿಸದೇ ನಿಜವಾದ ಸ್ವಾತಂತ್ರ್ಯ ಸಿಗಲು ಸಾಧ್ಯವಿಲ್ಲ. ಐಹಾಸಿಕ ನ್ಯಾಯಾದೇಶವು ಅಂಥಾ ಒಂದು ಪ್ರಕ್ರಿಯೆಯ ಪ್ರಾರಂಭವಾಗಿದೆ.

ಕೃಪೆ: Economic and Political Weekly ಅನು: ಶಿವಸುಂದರ್ 

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...