ವಂಚನೆಯ ಮತ್ತೊಂದು ಮಾರ್ಗ

Source: sonews | By Staff Correspondent | Published on 14th July 2019, 8:16 PM | National News | Special Report | Don't Miss |

ಅವಕಾಶಗಳ ಬಳಕೆಗಳಿಗೆ ಪೂರಕವಾದ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳದೆ ಕೇವಲ ಸ್ವಭಾವ ಬದಲಾವಣೆಗಳ ಬಗ್ಗೆ ಮಾತ್ರ ಮಾತಾಡುವುದು ದುರುದ್ದೇಶಪೂರಿತವಾದದ್ದು.

ಸಾಮಾಜಿಕ-ಆರ್ಥಿಕ ಆಡಳಿತ ನಿರ್ವಹಣೆಯಲ್ಲಿ ಅತ್ಯಂತ ಹೀನಾಯವಾದ ಕಾರ್ಯನಿರ್ವಹಣೆ ತೋರಿದ ಸರ್ಕಾರವೊಂದು ಹಿಂದಿಗಿಂತಲೂ ಹೆಚ್ಚಿನ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿರುವ ಕಾರಣದಿಂದಾಗಿ ೨೦೧೮-೧೯ರ ಆರ್ಥಿಕ ಸಮೀಕ್ಷೆಯು ತನ್ನ ವರದಿಯಲ್ಲಿ ಸರ್ಕಾರದ ಆಡಳಿತ ನಿರ್ವಹಣೆಗೆ ಉದ್ದೇಶಪೂರ್ವಕವಾಗಿ ಮಾನವೀಯ ಮುಖವಾಡವನ್ನು ತೊಡಿಸುತ್ತಿದೆಯೇ ಎಂಬ ಅನುಮಾನ ವರದಿಯನ್ನು ನೋಡಿದ ಯಾರಿಗಾದರೂ ಮೂಡುತ್ತದೆ. ಜನಸಾಮಾನ್ಯರೆಂಬುವರು ಕೇವಲ ಆರ್ಥಿಕ ಮನುಷ್ಯರೆಂದು ಕರೆಯಲ್ಪಡುವ ತಾರ್ಕಿಕ ಉಪಭೋಗಿಗಳಲ್ಲ. ಬದಲಿಗೆ ರಕ್ತ-ಮಾಂಸ ಮತ್ತು ಮನುಷ್ಯ ಸಹಜ ಅತಾರ್ಕಿಕ ತಪ್ಪುಗಳನ್ನು ಮಾಡಬಲ್ಲ ಮನುಷ್ಯ ಜೀವಿಗಳು. ಮತ್ತು ಅವರಿಗೆ ದೇಶದಲ್ಲಿ ಸಕಾರಾತ್ಮಕ ಸಾಮಾಜಿಕ-ಆರ್ಥಿಕ ಬದಲಾವಣೆ ತರಬಲ್ಲ ಆಯ್ಕೆಯನ್ನು ಮಾಡಲು ಉತ್ತೇಜನ ನೀಡುವ ಅಗತ್ಯವಿರುತ್ತದೆ ಎಂಬುದು ಹೊಸ ತಿಳವಳಿಕೆಯೇನಲ್ಲ. ಮನುಷ್ಯ ಸ್ವಭಾವದ ಅಧ್ಯಯನವು ಕೊಡುವ ಒಳನೋಟಗಳನ್ನು ಜಗತ್ತಿನ ಹಲವಾರು ದೇಶಗಳು ಕಳೆದೊಂದು ದಶಕದಿಂದ ತಮ್ಮ ನೀತಿ-ನಿರೂಪಣೆಗಳ ಅಂತರ್ಗತ ಭಾಗವನ್ನಾಗಿ ಮಾಡಿಕೊಳ್ಳುತ್ತಿವೆ. ಇದರ ಹಿಂದಿನ ಉದ್ದೇಶವೆಂದರೆ ಸರ್ಕಾರದ ಯೋಜನೆ ಮತ್ತು ಕಾರ್ಯಕ್ರಮಗಳಲ್ಲಿ ನಾಗರಿಕರ ಪಾಲುದಾರಿಕೆಯನ್ನು ಹೆಚ್ಚಿಸುತ್ತಾ ಅವರಲ್ಲಿ ಸಕಾರಾತ್ಮಕ ಸ್ವಭಾವ-ಬದಲಾವಣೆಯನ್ನು ಮೈಗೂಡಿಸಿಕೊಳ್ಳುವ ಕಡೆಗೆ ದೂಡುವುದಾಗಿದೆ. ಹಾಲಿ ಸರ್ಕಾರವು ತನ್ನ ಸ್ವಚ್ಚ ಭಾರತ್ ಅಥವಾ ಭೇಟಿ ಪಡಾವೋ-ಭೇಟಿ ಬಚಾವೋದಂಥ ಯೋಜನೆಗ ಮೂಲಕ ಜನರಲ್ಲಿ ಅಂಥ ಸಕಾರಾತ್ಮಕ  ಸ್ಪಂದನೆಗಳನ್ನು ಮೂಡಿಸಿದೆಯೆಂದು ಹೇಳಲಾಗುತ್ತಿದೆ. ಆದಕ್ಕೆ ಪೂರಕವಾಗಿ ಯೋಜನೆಗಳ ಭೌಗೋಳಿಕ ವ್ಯಾಪ್ತಿಯು ಒಂದಷ್ಟು ಸಮರ್ಥನೆಗಳನ್ನುಒದಗಿಸಬಹುದಾದರೂ ಫಲಾನುಭವಿಗಳ ಮಟ್ಟದ ಪುರಾವೆಗಳು ಮಾತ್ರ ಪರಸ್ಪರ ತದ್ವಿರುದ್ಧವಾದ ಕಥಾನಕಗಳನ್ನು ಒದಗಿಸುತ್ತವೆ.

ಉದಾಹರಣೆಗೆ ೨೦೧೮-೧೯ರ ರಾಷ್ಟ್ರೀಯ ಗ್ರಾಮೀಣ ನೈರ್ಮಲ್ಯ ಸಮೀಕ್ಷೆಯು ಮಾಡಿರುವ ಸ್ವಚ್ಚ ಭಾರತ್ ಯೋಜನೆಯ ಮೌಲ್ಯಮಾಪನದ ಪ್ರಕಾರ ಶೌಚಾಲಯ ಹೊಂದಿರುವ ಶೇ.೯೩ರಷ್ಟು ಗ್ರಾಮೀಣ ವಸತಿಗಳಲ್ಲಿ ಶೇ.೯೬.೫ರಷ್ಟು ಜನ ಅದನ್ನು ಬಳಸುತ್ತಿದ್ದಾರೆ. ಹೀಗಾಗಿ ಭಾರತದ ಶೇ.೯೦.೭ರಷ್ಟು ಹಳ್ಳಿಗಳು ಈಗ ಬಯಲು ಶೌಚಾಲಯ ಮುಕ್ತವಾಗಿವೆ. ಆದರೆ ಭಾರತದ ಮಹಾಲೇಖ ಪಾಲರು ಲೆಕ್ಕಾಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶೌಚಾಲಯ ಮುಕ್ತ ಗ್ರಾಮ ಯೋಜನೆಯ ಮಾನದಂಡಗಳನ್ನು ಅನ್ವಯಿಸಿದಾಗ ಮನೆಗಳ ಮಟ್ಟದಲ್ಲಿ ಶಾಚಾಲಯ ಬಳಕೆಯನ್ನು ಮತ್ತು ಅದಕ್ಕಾಗಿ ಒದಗಿಸಿದ ಹಣದಿಂದ ಕಟ್ಟಿದ ಶೌಚಾಲಂiವನ್ನು ಮಾತ್ರ ಲೆಕ್ಕ ಹಾಕಿ ಬಯಲು ಶೌಚ ಮುಕ್ತ ಸಾಧನೆಯನ್ನು ಹೇಗೆ ತೋರಿಸಲು ಸಾಧ್ಯ ಎಂದು ಅವರು ತಮ್ಮ  ೨೦೧೭-೧೮ರ ವರದಿಯಲ್ಲಿ ಪ್ರಶ್ನಿಸಿದ್ದಾರೆ. ಸ್ವಚ್ಚ ಭಾರತ ಯೋಜನೆಯ ಮಾನದಂಡಗಳ ಪ್ರಕಾರ ಒಂದು ಗ್ರಾಮವನ್ನು ಬಯಲು ಶೌಚಮುಕ್ತವೆಂದು ಘೋಷಿಸಬೇಕೆಂದರೆ ಗ್ರಾಮದ ಸುತ್ತಮುತ್ತಲಲ್ಲಿ ಎಲ್ಲೂ ಮಲವಿಸರ್ಜನೆಯಾಗಿರಬಾರದು ಮತ್ತು ಶೌಚಾಲಯದಲ್ಲಿ ಸಂಗ್ರಹದ ಮಲವನ್ನು ವಿಲೇವಾರಿ ಮಾಡಲು ಮನೆಯ ಮಟ್ಟದಲ್ಲಿ ಮತ್ತು ಸಾರ್ವಜನಿಕ ಅಥವಾ ಸಮುದಾಯಮಟ್ಟದಲ್ಲಿ ಸುರಕ್ಷಿತ ತಂತ್ರಜ್ನಾನವನ್ನು ಬಳಸುತ್ತಿರಬೇಕು. ಯೋಜನೆಯ ಇಡೀ ಮಾರ್ಗದರ್ಶೀ ಸೂತ್ರಗಳಲ್ಲಿ ಒಳ ಶೌಚಾಲಯವನ್ನು ಬಳಸಿದರೆ ಸಾಕು ಅದನ್ನು ಬಯಲು ಶೌಚ ಮುಕ್ತವೆಂದು ಘೋಷಿಸಬಹುದೆಂದು ಎಲ್ಲಿಯೂ ಹೇಳಲಾಗಿಲ್ಲ.  

ಇದೇ ಬಗೆಯ ವೈರುಧ್ಯಮಯವಾದ ಉದಾಹರಣೆಗಳು ಬೇಟಿ ಪಡಾವೋ, ಬೇಟಿ ಬಚಾವೋ ಯೋಜನೆಯಲ್ಲೂ ಹೇರಳವಾಗಿ ಲಭ್ಯವಾಗುತ್ತದೆ. ಉದಾಹರಣೆಗೆ ಇತ್ತೀಚಿನ ಮಾಧ್ಯಮ ವರದಿಯ ಪ್ರಕಾರ ರಾಜಸ್ಥಾನದ ಬಿಜೆಪಿಯು ಹೆಣ್ಣುಮಗುವಿನ ಶಿಕ್ಷಣಕ್ಕೆ ಸಹಕರಿಸಲು ರಾಜ್ಯದ ಹನುಮಾನ್ಘರ್ ಜಿಲ್ಲೆಯನ್ನು ದತ್ತು ತೆಗೆದುಕೊಂಡಿತ್ತು. ಬೇಟಿ ಪಡಾವೋ ಮತ್ತು ಬೇಟಿ ಬಚಾವೋ ಯೋಜನೆಯ ಪ್ರಕಾರ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುವುದೆಂದರೆ ಶಿಕ್ಷಕರ ತರಬೇತಿ, ಶಾಲೆಯಲ್ಲಿ ನಿರ್ಮಲವಾದ ಶೌಚಾಲಯ  ಮತ್ತು ಹೆಣ್ಣು ಮಕ್ಕಳು ಶಾಲೆಗೆ ಬಂದುಹೋಗಲು ವಾಹನ ಸೌಕರ್ಯಗಳಿರಬೇಕಾದದ್ದು ಕಡ್ಡಾಯ. ಆದರೆ ಬಿಜೆಪಿ ದತ್ತು ತೆಗೆದುಕೊಂಡಿದ್ದ ಜಿಲ್ಲೆಯು ಯಾವ ಮಾನದಂಡಗಳಲ್ಲೂ ಪ್ರಗತಿಯನ್ನು ಸಾಧಿಸರಲಿಲ್ಲ. ಆದರೆ ಜಿಲ್ಲಾ ಶಿಕ್ಷಣ ಇಲಾಖೆಯು ಮಾತ್ರ ೨೦೧೬-೧೭ರಲ್ಲಿ ೫೬,೦೩೮ ಹೆಣ್ಣುಮಕ್ಕಳು ಶಾಲೆಯಲ್ಲಿ ನೊಂದಾಯಿತರಾಗಿದ್ದರೆ ೨೦೧೮-೧೯ರ  ಸಾಲಿನಲ್ಲಿ ಅದು  ೯೫,೪೬೯ಕ್ಕೆ ಹೆಚ್ಚಿತು ಎಂಬ ಪುರಾವೆಯನ್ನು ಒದಗಿಸಿದೆ. ಆದರೆ ಅದೇ ಆವಧಿಯಲ್ಲಿ ಎಷ್ಟು ಹೆಣ್ಣು ಮಕ್ಕಳು ಶಾಲೆಯನ್ನು ತೊರೆದರು ಎಂಬ ಅಂಕಿಸಂಖ್ಯೆಯನ್ನು ಮಾತ್ರ ಅವರು ಉಲ್ಲೇಖಿಸಿಲ್ಲ. ವಿಪರ್ಯಾಸವೆಂದರೆ ೨೦೧೪ರ ನಂತರ ಶಾಲೆಯನ್ನು ಹೆಣ್ಣುಮಕ್ಕಳನ್ನು ತೊರೆಯುತ್ತಿರುವರ ಸಂಖ್ಯೆ ರಾಜಸ್ಥಾನದಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಅಲ್ಲಿನ ಬಿಜೆಪಿ ಸರ್ಕಾರವು ಅಸ್ಥಿತ್ವದಲ್ಲಿದ್ದ ಶೇ.೨೦ರಷ್ಟು ಶಾಲೆಗಳನ್ನು ಹತ್ತಿರದ ಮತ್ತೊಂದು ಶಾಲೆಯೊಂದಿಗೆ ವಿಲೀನಗೊಳಿಸಿದ್ದೇ ಕಾರಣ. ವಿಲೀನಗೊಂಡ ಶಾಲೆ ದೂರದಲ್ಲಿದ್ದರೆ ಶಾಲೆ ತೊರೆಯುವವರಲ್ಲಿ ಹೆಣುಮಕ್ಕಳೇ ಜಾಸ್ತಿ. ಏಕೆಂದರೆ ಹೆಣ್ಣುಮಕ್ಕಳ ಪೋಷಕರು ಹಲವಾರು ಸಾಮಾಜಿಕ-ಸಾಂಸ್ಕೃತಿಕ ಕಾರಣಗಳಿಂದಾಗಿ ಹೆಣ್ಣುಮಕ್ಕಳನ್ನು ದೂರದೂರಿಗೆ ಶಾಲೆ ಕಲಿಯಲು ಕಳಿಸುವುದಿಲ್ಲ.

ಇಂಥಾ ಪುರಾವೆಗಳು ರಾಚುವಂತೆ ಕಣ್ಣ ಜುಂದಿರುವಾಗ ಆರ್ಥಿಕ ಸಮೀಕ್ಷೆಯು ಅಥವಾ ಸರ್ಕಾರವು ಪದೇಪದೇ ಪ್ರತಿಪಾದಿಸುವ ಸ್ವಭಾವ ಬದಲಾವಣೆ ಅಧಿಕೃತತೆಯ ಮೇಲೆ ವಿಶ್ವಾಸ ಹುಟ್ಟುವುದು ಕಷ್ಟ. ಹೆಚ್ಚೆಂದರೆ ಇಂಥಾ ಯೋಜನೆಗಳ ಆಡಂಬರದ ಉದ್ಘಾಟನಾ ಕಾರ್ಯಕ್ರಮಗಳು ಸಿಹಿ ಹಂಚಿಕೆಗಳು, ಪ್ರಮಾಣ ಪತ್ರ ವಿತರಣೆಗಳು, ಸಂಬಂಧಪಟ್ತ ಸಾರ್ವಜನಿಕ ಕಾರ್ಯಕ್ರಮಗಳು, ಬೈಕ್ ಮೆರವಣಿಗೆಗಳು, ಸ್ಪರ್ಧೆಗಳು ಮೂಡಿಸುವ ಭಾವನೆಗಳಲ್ಲಿ ಬದಲಾವಣೆಯಾಗಿರಬಹುದೇ ವಿನಾ ತಳಮಟ್ಟದಲ್ಲಿ ಬದಲಾವಣೆ ತರಬಹುದಾದ ಯಾವ ಕ್ರಮಗಳೂ ಜಾರಿಯಾಗಿಲ್ಲ. ಹಾಗಿದ್ದಲ್ಲಿ ಸಾಮಾಜಿಕ ಆರ್ಥಿಕ ಬದಲಾವಣೆಯನ್ನು ಸ್ವಾಗತಿಸುವಂಥ ರೀತಿಯಲ್ಲಿ ಜನರ ಸ್ವಭಾವದಲ್ಲಿ ಬದಲಾವಣೆಯನ್ನು ಉತ್ತೇಜಿಸುವ ಕ್ರಮಗಳಿಗೂ ಹಾಗೂ ಜನರ ಸಾರ್ವಜನಿಕ ವರ್ತನೆಗಳನ್ನು ರಾಜಕೀಯ ಲಾಭಗಳಿಗಾಗಿ ದುರ್ಬಳಕೆ ಮಾಡಿಕೊಳ್ಳುವಂಥ ಕ್ರಮಗಳಿಗೂ ನಡುವೆ ವ್ಯತ್ಯಾಸವೇನಿರುತ್ತದೆ? ಉದಾಹರಣೆಗೆ ಹೆಂಗಸರ ಓಡಾಟಗಳ ಮೇಲೆ ಸಮಾಜದ ಸಂಪ್ರದಾಯಗಳು ಹೇರುವ ಕಟ್ಟುಪಾಡುಗಳಿಂದಾಗಿ ಬೇಟಿ ಪಡಾವೋ ಯೋಜನೆಯ ಮೂಲಕ ಹೆಣ್ಣುಮಕ್ಕಳು ಸೈಕಲ್ ಪಡೆದುಕೊಳ್ಳುವ ಯೋಜನೆಯ ಫಲಾನುಭವಿಯಾಗುವ ಅವಕಾಶದಿಂದ ವಂಚಿತಳಾಗುತ್ತಾರೆ. ಬದಲಿಗೆ ಸೈಕಲ್ಲನ್ನು ಮನೆಯ ಇತರ ಸದಸ್ಯರ ಬಳಸುವಂತಾಗುತ್ತದೆ ಮತ್ತು  ಮೂಲಕ ಅವರ ರಾಜಕೀಯ ಪಕ್ಷಗಳ ಆಯ್ಕೆಯೂ ಪ್ರಭಾವಿತವಾಗುತ್ತದೆ.

ವ್ಯಕ್ತಿಯ ಸ್ವಭಾವ ಮತ್ತು ವರ್ತನೆಗಳು ಸಾಮಾಜಿಕ-ಸಾಂಸ್ಕ್ಟುತಿಕ ಪದ್ಧತಿಗಳಲ್ಲಿ ಆಳವಾದ ಬೇರುಗಳನ್ನು ಹೊಂದಿರುವಂಥ ನಮ್ಮ ದೇಶದಲ್ಲಿ ಹಣಕಾಸು ಸಹಾಯ, ಹಣಕಾಸು ವರ್ಗಾವಣೆಯಂಥ ಕಾರ್ಯಕ್ರಮಗಳು ವ್ಯಕ್ತಿಗಳ ವರ್ತನೆಗಳಲ್ಲಿ ಯಾವುದೇ ಮೂಲಭೂತ ಬದಲಾವಣೆಗಳನ್ನು ತರುವುದಿಲ್ಲ. ಬದಲಿಗೆ ಅದರ ಫಲಾನುಭವಿಗಳು ಆಳದಲ್ಲಿ  ಯಾವುದೇ ಬದಲಾವಣೆಗಳನ್ನು ಮಾಡಿಕೊಳ್ಳದೆ ಕೇವಲ ಯೋಜನೆಯ ಲಾಭಗಳನ್ನು ಪಡೆಯಲೋಸುಗ ತೋರಿಕೆಯ ಬದಲಾವಣೆಗಳನ್ನು ಪ್ರದರ್ಶಿಸುವಂತೆ ಪ್ರಚೋದಿಸುವ ಮೂಲಕ ಸಾರ್ವಜನಿಕರ ನಡವಳಿಕೆಗಳನ್ನೇ ಭ್ರಷ್ಟಗೊಳಿಸಬಹುದು.

ಸೀಮಿತವಾದ ಸಂಪನ್ಮೂಲ, ವ್ಯಾಪ್ತಿ ಮತ್ತು ಸಾಮರ್ಥ್ಯಗಳಿಂದ ಕೂಡಿದ ಸಂದರ್ಭವೊಂದರಲ್ಲಿ ಒಬ್ಬ ಮನುಷ್ಯ ಜೀವಿಯನ್ನು ಒಬ್ಬ ಆರ್ಥಿಕ ಜೀವಿಯಿಂದ ಬೇರ್ಪಡಿಸಿ ನೋಡಲಾಗುವುದಿಲ್ಲ. ಏಕೆಂದರೆ ಅಂಥಾ ಸೀಮಿತ ಸಂದರ್ಭಗಳಲ್ಲಿ ತಾನು ಮಾತ್ರ ಉಳಿದುಕೊಳ್ಳುವ ಸಲುವಾಗಿ ಸಮುದಾಯದ ಹಿತಾಸಕ್ತಿಯನ್ನು ಬದಿಗೊತ್ತಿ ಗರಿಷ್ಠ ಮಟ್ಟದಲ್ಲಿ ತನ್ನ ಸ್ವಾರ್ಥ ಹಿತಾಸಕ್ತಿಯನ್ನು ಈಡೇರಿಸಿಕೊಳ್ಳುವ ಕಡೆಗೆ ವ್ಯಕ್ತಿಗಳು ತಳ್ಳಲ್ಪಡುತ್ತಾರೆ. ಆಳುವ ಸರ್ಕಾರ ನೈಜ ವಾಸ್ತವಗಳ ಬಗ್ಗೆ ಸರಿಯಾದ ಮೌಲ್ಯಂದಾಜನ್ನು ಮಾಡಿಲ್ಲ. ಅಥವಾ ಆರ್ಥಿಕ ಅವಕಾಶಗಳನ್ನೂ, ಹಕ್ಕುಗಳನ್ನು ಮತ್ತು ಸಾಮರ್ಥ್ಯಗಳನ್ನೂ ವಿಸ್ತರಿಸುವಂಥ ಯಾವ ಯೋಜನೆಗಳಿಗೂ ಮುಂದಾಗಿಲ್ಲ. ಅದೇನನ್ನೂ ಮಾಡದೆ ತನ್ನ ಒತ್ತು ಆರ್ಥಿಕ ಮನುಷ್ಯನಿಂದ ಮನುಷ್ಯ ಜೀವಿಯಾಗಿಸುವ ಕಡೆಗೆ ಮೂಲಭೂತವಾಗಿ ಬದಲಾಗುತ್ತಿದೆ ಎನ್ನುವ ಸರ್ಕಾರದ ಹೆಗ್ಗಳಿಕೆಗಳು ಕೇವಲ ದುರುದ್ದೇಶದಿಂದ ಪೂರಿತವಾಗಿದೆ. ಇನ್ನೆಷ್ಟು ಕಾಲ ಸರ್ಕಾರವು ತನ್ನ ನಿಷ್ಕ್ರಿಯತೆಯನ್ನು ಇಂಥಾ ರಾಜಕೀಯ ಪದಪುಂಜಗಳು ಮತ್ತು ಹೆಸರು ಬದಲಾವಣೆಗಳಂಥ ಹೀನಾಯವಾದ ತಂತ್ರಗಳ ಹಿಂದೆ ಬಚ್ಚಿಡಲು ಸಾಧ್ಯ?

ಕೃಪೆ: Economic and Political Weekly ಅನು: ಶಿವಸುಂದರ್ 

 

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...