ಉ.ಪ್ರದೇಶದಲ್ಲಿ ಬಿಜೆಪಿಗೆ ಮತ್ತೊಂದು ಆಘಾತ; ಸಚಿವ ಸ್ಥಾನ ತೊರೆದ ಇನ್ನೋರ್ವ ಓಬಿಸಿ ನಾಯಕ

Source: S O News | By I.G. Bhatkali | Published on 14th January 2022, 7:09 AM | National News |

ಲಕ್ಟೋ: ವಿಧಾನಸಭಾ ಚುನಾವಣೆಗಳು ಸನ್ನಿಹಿತವಾಗಿರುವ ರಾಜಕೀಯವಾಗಿ ನಿರ್ಣಾಯಕ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೇರಲು ಹವಣಿಸುತ್ತಿರುವ ಬಿಜೆಪಿಗೆ ಆಘಾತಗಳ ಮೇಲೆ ಆಘಾತಗಳು ಎದುರಾಗುತ್ತಿವೆ. ಸೋಮವಾರ ಯೋಗಿ ಆದಿತ್ಯನಾಥ ಸಂಪುಟದಲ್ಲಿ ಸಚಿವರಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಇತರ ನಾಲ್ವರು ಶಾಸಕರಿಂದ ಆರಂಭಗೊಂಡಿದ್ದ ಸರಣಿ ರಾಜೀನಾಮೆ ಪರ್ವಮಂಗಳವಾರವೂ ಮುಂದುವರಿದಿದ್ದು, ಇನ್ನೋರ್ವ ಸಚಿವ ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಪ್ರಭಾವಿ ನಾಯಕ ದಾರಾಸಿಂಗ್ ಚೌಹಾಣ್ ಅವರು ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ. ರಾಜೀನಾಮೆ ನೀಡಿರುವ ಎಲ್ಲ ಆರೂ ನಾಯಕರು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವನ್ನು ಸೇರಲು ಸಜ್ಜಾಗಿದ್ದಾರೆ.

'ನಾನು ಬದ್ಧತೆಯಿಂದ ಕರ್ತವ್ಯವನ್ನು ನಿರ್ವಹಿಸಿದ್ದೇನೆ. ಆದರೆ ಹಿಂದುಳಿದವರು, ಶೋಷಿತ ವರ್ಗಗಳು, ದಲಿತರು, ರೈತರು ಮತ್ತು ನಿರುದ್ಯೋಗಿ ಯುವಕರತ್ತ ಈ ಸರಕಾರದ ದಮನಕಾರಿ ನಿಲುವು ಹಾಗೂ ಹಿಂದುಳಿದವರು ಮತ್ತು ದಲಿತರಿಗೆ ಮೀಸಲಾತಿಯ ನಿರ್ಲಕ್ಷ್ಯ ನನಗೆ ನೋವನ್ನುಂಟು ಮಾಡಿದೆ' ಎಂದು ಚೌಹಾಣ್ ತನ್ನ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ. ಸ್ವಾಮಿ ಪ್ರಸಾದ್ ಮೌರ್ಯ ಅವರೂ ತನ್ನ ರಾಜೀನಾಮೆ ಪತ್ರದಲ್ಲಿ ಹೆಚ್ಚುಕಡಿಮೆ ಇವೇ ಪದಗಳನ್ನು ಬಳಸಿದ್ದರು.

ತನ್ನ ನಿರ್ಧಾರವನ್ನು ಪುನರ್‌ ಪರಿಶೀಲಿಸುವಂತೆ ಚೌಹಾಣ್ ರನ್ನು ಟ್ವಿಟ್‌ನಲ್ಲಿ ಆಗ್ರಹಿಸಿರುವ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು, ಕುಟುಂಬದ ಯಾವುದೇ ಸದಸ್ಯ ದಾರಿ ತಪ್ಪಿದರೆ ಅದು ಅತ್ಯಂತ ದುಃಖಕರವಾಗುತ್ತದೆ. ದಯವಿಟ್ಟು ಮುಳುಗುತ್ತಿರುವ ನೌಕೆಯನ್ನು ಹತ್ತಬೇಡಿ, ಇಲ್ಲದಿದ್ದರೆ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದಷ್ಟೇ ನಾನು ನಿರ್ಗಮಿಸುತ್ತಿರುವ ನಾಯಕರನ್ನು ಕೋರಿಕೊಳ್ಳಲು ಸಾಧ್ಯ. ಸೋದರ ದಾರಾಸಿಂಗ್, ದಯವಿಟ್ಟು ನಿಮ್ಮ ನಿರ್ಧಾರವನ್ನು ಪುನರ್‌ಪರಿಶೀಲಿಸಿ' ಎಂದು ಬರೆದಿದ್ದಾರೆ. ಅವರು ಸ್ವಾಮಿ ಪ್ರಸಾದ್ ಮೌರ್ಯರಿಗೂ ಇದೇ ರೀತಿ ಮನವಿಯನ್ನು ಮಾಡಿಕೊಂಡಿದ್ದರು.

ಅಖಿಲೇಶ್ ಯಾದವ್ ಅವರು ಪಕ್ಷಕ್ಕೆ ಮುಖ್ಯ ಎದುರಾಳಿಯಾಗಿರುವ ಮತ್ತು ಹಿಂದುಳಿದ ವರ್ಗಗಳ ಮತಗಳು ನಿರ್ಣಾಯಕವಾಗಿರುವ ಚುನಾವಣೆಗೆ ಮುನ ಈ ಸರಣಿ ನಿರ್ಗಮನಗಳು ಬಿಜೆಪಿಯ ಒಬಿಸಿ ನಾಯಕ ರಂಧ್ರ ಕೊರೆಯುತ್ತಿವೆ.

ಪೂರ್ವ ಉ.ಪ್ರದೇಶದ ಪ್ರಭಾವಿ ನಾಯಕರಾಗಿರುವ ಚೌಹಾಣ್ 2015ರಲ್ಲಿ ಮಾಯಾವತಿಯವರ ಬಿಎಸ್‌ಪಿಯನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಅವರು 2009ರಿಂದ 2014ರವರೆಗೆ ಬಿಎಸ್‌ಪಿ ಸಂಸದರಾಗಿದ್ದರು. ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಅವರನ್ನು ಪಕ್ಷದ ಒಬಿಸಿ ಘಟಕದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿತ್ತು.

ಸೋಮವಾರ ಸ್ವಾಮಿ ಪ್ರಸಾದ್ ಮೌರ್ಯ ಅವರ ರಾಜೀನಾಮೆ ಬಿಜೆಪಿಗೆ ಮೊದಲ ಆಘಾತವನ್ನು ನೀಡಿದ್ದು, ಅವರ ಹಿಂದೆಯೇ ಬಿಜೆಪಿ ಶಾಸಕರಾದ ರೋಶನ್‌ಲಾಲ್ ವರ್ಮಾ, ಬೃಜೇಶ್ ಪ್ರಜಾಪತಿ, ಭಗವತಿ ಸಾಗರ ಮತ್ತು ವಿನಯ ಶಾಕ್ಯ ಅವರು ಪಕ್ಷವನ್ನು ತೊರೆದಿದ್ದರು.

ವ್ಯೂಹಾತ್ಮಕವಾಗಿ ಮುಖ್ಯರಾಗಿರುವ ಒಬಿಸಿ ನಾಯಕರ ನಿರ್ಗಮನಗಳಿಂದ ದಿಗ್ಧಾಂತಗೊಂಡಿರುವ ಬಿಜೆಪಿ ನಾಯಕತ್ವವು ತಮ್ಮ ನಿರ್ಧಾರವನ್ನು ಬದಲಿಸುವಂತೆ ಅವರನ್ನು ಓಲೈಸುವ ಹೊಣೆಯನ್ನು ಕೇಶವ ಪ್ರಸಾದ ಮೌರ್ಯ ಅವರ ಮೇಲೆ ಹೊರಿಸಿದೆ.

ಬಿಜೆಪಿಯಿಂದ ನಿರ್ಗಮಿಸಿರುವ ಈ ನಾಯಕರು ಕಳೆದ ವರ್ಷ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಬಂಡೆದ್ದು, ಅವರ ಕಾರ್ಯವೈಖರಿ ಮತ್ತು ಅವರ ದುರಹಂಕಾರದ ವಿರುದ್ಧ ನಾಯಕತ್ವಕ್ಕೆ ದೂರು ಸಲ್ಲಿಸಿದ್ದ ಗುಂಪಿನ ಭಾಗವಾಗಿದ್ದರು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...