ಉಡುಪಿ: ಫೈನಾನ್ಶಿಯರ್ ಅಜೇಂದ್ರ ಶೆಟ್ಟಿ ಹತ್ಯೆ ಪ್ರಕರಣ, ಆರೋಪಿ ಅನೂಪ್ ಶೆಟ್ಟಿ 7 ದಿನಗಳ ಪೊಲೀಸ್ ಕಸ್ಟಡಿಗೆ

Source: VB | By S O News | Published on 3rd August 2021, 5:31 PM | Coastal News |

ಉಡುಪಿ: ಕೋಟೇಶ್ವರ ಸಮೀಪದ ಕಾಳಾವರ -ಅಸೋಡು ಎಂಬಲ್ಲಿನ ಡ್ರೀಮ್ ಫೈನಾನ್ಸ್ ಸಂಸ್ಥೆಯ ಪಾಲುದಾರ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿ ಅನೂಪ್‌ ಕುಮಾರ್ ಶೆಟ್ಟಿ (33)ಯನ್ನು ಪೊಲೀಸರು ಬುಧವಾರ ಕುಂದಾಪುರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಆರೋಪಿಯನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ.

ಜು.30ರಂದು ರಾತ್ರಿ ಕೊಲೆ ಮಾಡಿದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಗೋವಾ ರಾಜ್ಯದ ಕೊಲ್ಲಾ ಬೀಚ್ ಬಳಿಯ ರಸಾರ್ಟ್‌ನಲ್ಲಿ ಜು.31ರಂದು ಬಂಧಿಸಿದ್ದರು. ಆ.1ರಂದು ಮಧ್ಯಾಹ್ನ ಆರೋಪಿಯನ್ನು ಕುಂದಾಪುರಕ್ಕೆ ಕರೆದುತಂದ ಪೊಲೀಸರು, ಆ.2ರಂದು ಮಧ್ಯಾಹ್ನ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಬೇಕೆಂಬ ಅಭಿಯೋಜನೆ ಪರವಾದ ಆಲಿಸಿದ ಕುಂದಾಪುರ ಒಂದನೇ ಜೆಎಂಎಫ್‌ಸಿ ನ್ಯಾಯಾಧೀಶ ನಾಗರತ್ನದ್ದು, ಆರೋಪಿಯನ್ನು ಆ.9ತನನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು. ಆರೋಪಿಯನ್ನು ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆಗೆ ಇಂದೇ ಗೋವಾಕ್ಕೆ ಕರೆದುಕೊಂಡು ಹೋಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡ್ರಗ್ಸ್ ಸೇವನೆ ಬಗ್ಗೆ ಪರೀಕ್ಷೆ: ಆರೋಪಿ ಮಾದಕ ದ್ರವ್ಯ ಸೇವಿಸಿ ಕೃತ್ಯ ಎಸಗಿದ್ದಾನೆಯೇ ಎಂಬುದರ ಬಗ್ಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಖಚಿತ ಪಡೆಸಿಕೊಳ್ಳಲಾಗುವುದು. ಕೊಲೆ ನಡೆಸಿದ ಬಳಿಕ ಅಜೇಂದ್ರ ಶೆಟ್ಟಿ ಕತ್ತಿನಲ್ಲಿದ್ದ ಸರವನ್ನು ಆರೋಪಿ ದೋಚಿಕೊಂಡು ಹೋಗಿದ್ದು, ಇನ್ನೂ ವಶಪಡಿಸಿಕೊಂಡಿಲ್ಲ. ಅದನ್ನು ಆತ ಮಾರಾಟ ಮಾಡಿದ್ದಾನೆಯೇ ಎಂಬುದು ತನಿಖೆಯಿಂದ ತಿಳಿದುಬರಬೇಕಾಗಿದೆ ಎಂದು ಎಸ್ಪಿ ತಿಳಿಸಿದರು.

ಕೊಲೆಗೆ ಬಳಸಿದ ಆಯುಧವನ್ನು ಇನ್ನಷ್ಟ ವಶಪಡಿಸಿಕೊಳ್ಳಬೇಕಾಗಿದೆ. ಆರೋಪಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುವುದರಿಂದ ಇದರಲ್ಲಿ ಬೇರೆ ಯಾರೂ ಭಾಗಿಯಾಗಿಲ್ಲ. ಎಂಬುದು ಸ್ಪಷ್ಟವಾಗಿದೆ. ಆದರೂ ಸೂಕ್ಷ್ಮವಾಗಿ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದರು.

ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಡಿವೈಎಸ್ಪಿ ಶ್ರೀಕಾಂಡ್, ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ನೇತೃತ್ವದಲ್ಲಿ ಶಂಕರನಾರಾಯಣ ಎಸ್ಐ ಶ್ರೀಧರ್‌ ನಾಯ್ಕ, ಗಂಗೊಳ್ಳಿ ಎಸ್ಐ ನಂಜ ನಾಯ್ಕ, ಕುಂದಾಪುರ ಗ್ರಾಮಾಂತರ ಠಾಣಾ ಎಸ್ಐ ನಿರಂಜನ ಗೌಡ, ಸಿಬ್ಬಂದಿ ಮೋಹನ, ಚಂದ್ರಶೇಖರ, ನಾಗೇಂದ್ರ, ಶ್ರೀನಿವಾಸ, ಸಂತೋಷ್ ಕುಮಾರ್, ಸಂತೋಷ್, ರಾಘವೇಂದ್ರ, ರಾಮು, ಸೀತಾರಾಮ, ಸತೀಶ್, ಚಿದಾನಂದ, ಮಧುಸೂಧನ್ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ್ ಈ ಕಾರ್ಯಾಚರಣೆ ನಡೆಸಿದ್ದಾರೆ.

ಹಣಕಾಸಿನ ವ್ಯವಹಾರ ಕೊಲೆಗೆ ಕಾರಣ

ಫೈನಾನ್ಸ್ ಪಾಲುದಾರರಾಗಿದ್ದ ಅಜೇಂದ್ರ ಶೆಟ್ಟಿ ಹಾಗೂ ಅನೂಪ್ ಶೆಟ್ಟಿ ನಡುವಿನ ಹಣಕಾಸಿನ ವ್ಯವಹಾರವೇ ಕೊಲೆಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆಯಿಂದ ಸ್ಪಷ್ಟ ಮಾಹಿತಿ ಬಹಿರಂಗವಾಗಬೇಕಾಗಿದೆ ಎಂದು ಉಡುಪಿ ಎಸ್ಪಿ ವಿಷ್ಣುವರ್ಧನ್ ಇಂದು ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಂಡಗಳನ್ನು ರಚಿಸಲಾಗಿತ್ತು. ಆರೋಪಿ ಕೊಲೆ ನಡೆಸಿದ ಬಳಿಕ ಅಜೇಂದ್ರ ಶೆಟ್ಟಿಯ ಹೊಸ ಕಾರಿನಲ್ಲಿ ಪರಾರಿಯಾಗಿದ್ದನು, ಈ ಹಿನ್ನೆಲೆಯಲ್ಲಿ ಟೋಲ್ ಗೇಟ್ ಮೂಲಕ ಹಾಗೂ ಖಚಿತ ಮಾಹಿತಿ ಪಡೆದು ಆರೋಪಿಯನ್ನು 24ಗಂಟೆಯೊಳಗೆ ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ. ಆರೋಪಿಯಿಂದ ಮೊಬೈಲ್ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Read These Next