ಪ್ಯಾರಿಸ್: ರಫೇಲ್ ಮಾರಾಟದಲ್ಲಿ ಭ್ರಷ್ಟಾಚಾರ ಆರೋಪ ಫ್ರಾನ್ಸ್ ನ್ಯಾಯಾಧೀಶರಿಂದ ತನಿಖೆ

Source: VB | By S O News | Published on 5th July 2021, 7:10 PM | National News |

ಪ್ಯಾರಿಸ್: ರಫೇಲ್ ಯುದ್ಧವಿಮಾನಗಳ ಮಾರಾಟದಲ್ಲಿ ನಡೆದಿದೆಯೆನ್ನಲಾದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವ ಹೊಣೆಯನ್ನು ಫ್ರಾನ್ಸ್‌ನ ನ್ಯಾಯಾಧೀಶರೊಬ್ಬರಿಗೆ ವಹಿಸಲಾಗಿದೆ ಎಂದು ದೇಶದ ರಾಷ್ಟ್ರೀಯ ಆರ್ಥಿಕ ಪ್ರಾಸಿಕ್ಯೂಟರ್‌ಗಳ ಕಚೇರಿ (ಪಿಎನ್‌ಎಫ್) ಶುಕ್ರವಾರ ತಿಳಿಸಿದೆ.

ಭಾರತಕ್ಕೆ 7.8 ಬಿಲಿಯ ಯುರೋ ವೆಚ್ಚದಲ್ಲಿ 36 ರಫೇಲ್ ಯುದ್ಧವಿಮಾನಗಳನ್ನು ಮಾರಾಟ ಮಾಡುವ ಒಪ್ಪಂದಕ್ಕೆ ಭಾರತ ಸರಕಾರ ಮತ್ತು ಫ್ರಾನ್ಸ್‌ನ ಯುದ್ಧವಿಮಾನಗಳ ತಯಾರಕ ಕಂಪೆನಿ ಡಸಾಲ್ಟ್ 2016ರಲ್ಲಿ ಸಹಿ ಹಾಕಿದ್ದವು. ಈ ವ್ಯವಹಾರದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಆಗ ಎದ್ದಿದ್ದವು.

ಈ ವ್ಯವಹಾರದ ಬಗ್ಗೆ ತನಿಖೆ ನಡೆಸಲು ಆರಂಭದಲ್ಲಿ ಪಿಎನ್‌ಎಫ್ ನಿರಾಕರಿಸಿತ್ತು.

ಪ್ರಧಾನಿಗೆ ಕಾಂಗ್ರೆಸ್ ಆಗ್ರಹ

ರಫೇಲ್ ಒಪ್ಪಂದ 'ದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವುದು ಈಗ ಸ್ಪಷ್ಟವಾಗಿದೆ. ಫ್ರೆಂಚ್ ಸರಕಾರವು ತನಿಖೆಗೆ ಆದೇಶಿಸಿರುವುದು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿಯವರ ನಿಲುವನ್ನು ಎತ್ತಿಹಿಡಿದಿದೆ.

I ರಣದೀಪ್ ಸುರ್ಜೆವಾಲಾ, ಕಾಂಗ್ರೆಸ್ ಮುಖ್ಯ ವಕ್ತಾರ

ಹಾಗಾಗಿ, ರಫೇಲ್ ವ್ಯವಹಾರದ ಸುತ್ತ ಎದ್ದಿರುವ ಸಂಶಯಗಳನ್ನು ಪಿಎನ್‌ಎಫ್ ಮತ್ತು ಫ್ರಾನ್ಸ್‌ನ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳು ಮುಚ್ಚಿಹಾಕಿವೆ ಎಂಬುದಾಗಿ ಫ್ರಾನ್ಸ್‌ನ ತನಿಖಾ ವೆಬ್‌ಸೈಟ್ ಮೀಡಿಯಾಪಾರ್ಟ್‌ ಆರೋಪಿಸಿತ್ತು.

ಭಾರತ ಸರಕಾರ ಮತ್ತು ಡಸಾಲ್ಟ್ ನಡುವಿನ ಒಪ್ಪಂದದಲ್ಲಿ ಮಧ್ಯವರ್ತಿಗಳಾಗಿದ್ದವರಿಗೆ ಮಿಲಿಯಗಟ್ಟಲೆ ಯುರೋ ಮೊತ್ತವನ್ನು ನೀಡಲಾಗಿದೆ. ಈ ಹಣದ ಒಂದು ಭಾಗವನ್ನು ಭಾರತೀಯ ಅಧಿಕಾರಿಗಳಿಗೆ ಲಂಚವಾಗಿ ನೀಡಿರುವ ಸಾಧ್ಯತೆಗಳಿವೆ ಎಂದು ಎಪ್ರಿಲ್‌ನಲ್ಲಿ ಮೀಡಿಯಾಪಾರ್ಟ್ ಆರೋಪಿಸಿತ್ತು.

ತನ್ನ ಕಂಪೆನಿಯ ಲೆಕ್ಕಪರಿಶೋಧನೆಯಲ್ಲಿ ಯಾವುದೇ ಅವ್ಯವಹಾರ ಪತ್ತೆಯಾಗಿಲ್ಲ ಎಂಬುದಾಗಿ ಡಸಾಲ್ಟ್ ಹೇಳಿಕೊಂಡಿತ್ತು.

ಈ ವರದಿಗಳ ಬಳಿಕ, ಆರ್ಥಿಕ ಅಪರಾಧ ತನಿಖೆಯಲ್ಲಿ ಪರಿಣತಿ ಹೊಂದಿರುವ ಫ್ರಾನ್ಸ್‌ನ ಶೆರ್ಪಾ ಎನ್‌ಜಿಒ, ರಫೇಲ್ ವ್ಯವಹಾರದಲ್ಲಿ ಭ್ರಷ್ಟಾಚಾರ ಮತ್ತು ವಶೀಲಿಬಾಜಿ ಒಳಗೊಂಡಿದೆ ಎಂದು ಆರೋಪಿಸುವ ಅಧಿಕೃತ ದೂರನ್ನು ದಾಖಲಿಸಿತ್ತು. ಅದರ ಮುಂದುವರಿದ ಭಾಗವಾಗಿ ಈಗ ಈ ವ್ಯವಹಾರದ ತನಿಖೆಯ ಹೊಣೆಯನ್ನು ಮ್ಯಾಜಿಸ್ಟ್ರೇಟ್ ಒಬ್ಬರಿಗೆ ವಹಿಸಲಾಗಿದೆ.

ರಫೇಲ್ ಒಪ್ಪಂದದ ಬಗ್ಗೆ ತನಿಖೆ ಆಗಬೇಕೆಂದು ಶೆರ್ಪಾವು 2018ರಲ್ಲೇ ಒತ್ತಾಯಿಸಿತ್ತು. ಆದರೆ, ಆಗ ಪಿಎನ್‌ಎಫ್ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ.

ಪ್ರಧಾನಿ ನರೇಂದ್ರ ಮೋದಿಗೆ ಆಪ್ತರಾಗಿರುವ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಗ್ರೂಪನ್ನು ತನ್ನ ಭಾರತೀಯ ಪಾಲುದಾರನಾಗಿ ಡಸಾಲ್ಟ್ ಆರಿಸಿಕೊಂಡಿರುವುದಕ್ಕೆ ಎನ್‌ಜಿಒ ಆಕ್ಷೇಪ ವ್ಯಕ್ತಪಡಿಸಿತ್ತು. ಆರಂಭದಲ್ಲಿ, ಭಾರತಕ್ಕೆ 126 ಯುದ್ಧ ವಿಮಾನಗಳನ್ನು ಪೂರೈಸುವ ಗುತ್ತಿಗೆಯನ್ನು ಡಸಾಲ್ಟ್ 2012ರಲ್ಲಿ ಪಡೆದುಕೊಂಡಿತ್ತು. ಹಾಗೂ ಭಾರತೀಯ ವಿಮಾನಯಾನ ಕಂಪೆನಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನೊಂದಿಗೆ ಮಾತುಕತೆ ನಡೆಸುತ್ತಿತ್ತು. 2015 ಮಾರ್ಚ್‌ನಲ್ಲಿ ಆ ಮಾತುಕತೆಗಳು ಬಹುತೇಕ ಪೂರ್ಣಗೊಂಡಿದ್ದವು.

ಆದರೆ, ಅದೇ ವರ್ಷದ ಎಪ್ರಿಲ್‌ನಲ್ಲಿ ಪ್ರಧಾನಿ ಮೋದಿ ಫ್ರಾನ್ಸ್‌ಗೆ ಅಧಿಕೃತ ಭೇಟಿ ನೀಡಿದ ಬಳಿಕ ಆ ಮಾತುಕತೆಗಳು ಒಮ್ಮೆಲೆ ಸ್ಥಗಿತಗೊಂಡವು ಹಾಗೂ ಎಲ್ಲರ ಅಚ್ಚರಿಗೆ ಕಾರಣವಾಯಿತು. ಅದುವರೆಗೆ ಭಾರತೀಯ ಭಾಗೀದಾರನಾಗಿದ್ದ ಎಚ್‌ಎಎಲ್‌ನ್ನು ಹೊರಹಾಕಿ ಅದರ ಸ್ಥಾನದಲ್ಲಿ ವಿಮಾನಯಾನ ಕ್ಷೇತ್ರದಲ್ಲಿ ಯಾವುದೇ ಅನುಭವವಿರದ ರಿಲಯನ್ಸ್ ಗ್ರೂಪನ್ನು ನೇಮಿಸಲಾಯಿತು ಹಾಗೂ 36 ಯುದ್ಧವಿಮಾನಗಳಿಗಾಗಿ ಹೊಸ ಒಪ್ಪಂದವೊಂದನ್ನು ಅಂತಿಮಗೊಳಿಸಲಾಯಿತು.

ಜೆಪಿಸಿ ತನಿಖೆಗೆ ಆದೇಶಿಸಿ

ರಫೇಲ್ ಯುದ್ಧವಿಮಾನಗಳ ಖರೀದಿ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಯಿಂದ ತನಿಖೆಯನ್ನು ನಡೆಸಬೇಕು ಎಂದು ಶುಕ್ರವಾರ ಆಗ್ರಹಿಸಿ ರುವ ಕಾಂಗ್ರೆಸ್, ಈ ವ್ಯವಹಾರ ದಲ್ಲಿ ಭ್ರಷ್ಟಾಚಾರದ ಕುರಿತು ಸತ್ಯವನ್ನು ಬಯಲಿ ಗೆಳೆಯಲು ಇದೊಂದೇ ಮಾರ್ಗವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಂದೆ ಬಂದು ತನಿಖೆಗೆ ಆದೇಶಿಸಬೇಕು ಎಂದು ಹೇಳಿದೆ.

ಭಾರತದೊಂದಿಗಿನ 59,000 ಕೋ.ರೂ.ಗಳ ರಫೇಲ್ ವ್ಯವಹಾರದಲ್ಲಿ ಭ್ರಷ್ಟಾಚಾರ ಆರೋಪಗಳ ಕುರಿತು ತನಿಖೆಗಾಗಿ ಫ್ರಾನ್ಸ್ ನ್ಯಾಯಾಧೀಶರೋರ್ವರನ್ನು ನೇಮಿಸಿದೆ ಎಂದು ಫ್ರೆಂಚ್ ತನಿಖಾ ಜಾಲತಾಣ ಮೀಡಿಯಾಪಾರ್ಟ್ ವರದಿ ಮಾಡಿರುವ ಬೆನ್ನಲ್ಲೇ ಕಾಂಗ್ರೆಸ್ ಈ ಆರೋಪವನ್ನು ಮಂಡಿಸಿದೆ.

ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವುದು ಈಗ ಸ್ಪಷ್ಟವಾಗಿದೆ. ಫ್ರೆಂಚ್ ಸರಕಾರವು ತನಿಖೆಗೆ ಆದೇಶಿಸಿರುವುದು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿಯವರ ನಿಲುವನ್ನು ಎತ್ತಿಹಿಡಿದಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಕಾಂಗ್ರೆಸ್ ನ ಮುಖ್ಯವಕ್ತಾರ ರಣದೀಪ್ ಸುರ್ಜೆವಾಲಾ ಅವರು, ವಿಷಯವು ರಾಷ್ಟ್ರೀಯ ಭದ್ರತೆ ಮತ್ತು ಅನನ್ಯತೆಗೆ ಸಂಬಂಧಿಸಿರುವುದರಿಂದ ಜೆಪಿಸಿ ಮೂಲಕ ನ್ಯಾಯಯುತ ಮತ್ತು ಸ್ವತಂತ್ರ ತನಿಖೆಯು ಏಕಮಾತ್ರ ಮಾರ್ಗವಾಗಿದೆಯೇ ಹೊರತು ಸರ್ವೋಚ್ಚ ನ್ಯಾಯಾಲಯವಲ್ಲ. ಒಪ್ಪಂದದಲ್ಲಿ ಭ್ರಷ್ಟಾಚಾರವನ್ನು ಫ್ರೆಂಚ್ ಸರಕಾರವೇ ಒಪ್ಪಿಕೊಂಡಿರುವಾಗ ಭ್ರಷ್ಟಾಚಾರ ನಡೆದಿರುವ ಭಾರತದಲ್ಲಿ ಜೆಪಿಸಿ ತನಿಖೆಯನ್ನೇಕೆ ನಡೆಸಬಾರದು ಎಂದು ಪ್ರಶ್ನಿಸಿದರು.

ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಿರೋಧದ ವಿಷಯವಲ್ಲ, ಇದು ರಾಷ್ಟ್ರದ ಭದ್ರತಾ ಕಳವಳಗಳು ಮತ್ತು ರಕ್ಷಣಾ ಒಪ್ಪಂದದಲ್ಲಿಯ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವಿಷಯವಾಗಿದೆ. ಇದು ರಾಷ್ಟ್ರೀಯ ಹಿತಾಸಕ್ತಿಯ ವಿಷಯವಾಗಿದೆ. ರಕ್ಷಣಾ ವ್ಯವಹಾರಗಳಲ್ಲಿ ಭ್ರಷ್ಟಾಚಾರದ ಮೂಲಕ ತಮ್ಮ ಜೇಬುಗಳನ್ನು ತುಂಬಿಸಿಕೊಳ್ಳುವವರ ವಿರುದ್ಧದ ವಿಷಯವಾಗಿದೆ ಎಂದ ಸುರ್ಜೆವಾಲಾ, ಸಾಕ್ಷಿಗಳನ್ನು ಕರೆಸಲು ಮತ್ತು ಎಲ್ಲ ಸರಕಾರಿ ಕಡತಗಳನ್ನು ಪರಿಶೀಲಿಸಲು ಜೆಪಿಸಿಗೆ ಸಾಧ್ಯವಿದೆ, ಆದರೆ ಸರ್ವೋಚ್ಚ ನ್ಯಾಯಾಲಯ ಅಥವಾ ಕೇಂದ್ರ ಜಾಗೃತ ಆಯೋಗಕ್ಕೆ ಇವುಗಳನ್ನು ನೋಡಲು ಎಂದೂ ಸಾಧ್ಯವಿಲ್ಲ. ವಿಚಾರಣಾ ಪ್ರಶ್ನೆಗಳನ್ನು ಕೇಳಲು,ಸುಳ್ಳು ಹೇಳುವವರನ್ನು ದಂಡಿಸಲು ಹಾಗೂ ಪ್ರಧಾನಿ, ರಕ್ಷಣಾ ಸಚಿವ ಅಥವಾ ರಕ್ಷಣಾ ಸಚಿವಾಲಯದ ಅಧಿಕಾರಿಗಳನ್ನು ಅಥವಾ ಇತರ ಯಾರನ್ನೂ ವಿಚಾರಣೆಗೆ ಕರೆಸಲು ಜೆಪಿಸಿಗೆ ಸಾಧ್ಯವಿದೆ. ಹೀಗಾಗಿ ರಫೇಲ್ ವ್ಯವಹಾರದಲ್ಲಿ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಜೆಪಿಸಿ ತನಿಖೆ ಏಕಮಾತ್ರ ಮಾರ್ಗವಾಗಿದೆ ಎಂದರು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...