ಕೋವಿಡ್ ಮಾರ್ಗಸೂಚಿ ನಡುವೆ ಅದ್ಧೂರಿಯಾಗಿ ಸಂಪನ್ನಗೊಂಡ ಮುರುಡೇಶ್ವರ ದೇವರ ಮಹಾ ರಥೋತ್ಸವ

Source: SO NEWS | By MV Bhatkal | Published on 20th January 2022, 11:49 PM | Coastal News | Don't Miss |

ಭಟ್ಕಳ: ಸರಕಾರ, ಜಿಲ್ಲಾಢಳಿತ, ತಾಲೂಕಾಢಳಿತದ ಕೋವಿಡ್ ಕಟ್ಟುನಿಟ್ಟಿನ ಆದೇಶದಂತೆ ವಿಶ್ವ ಪ್ರಸಿದ್ಧ ಮುರುಡೇಶ್ವರ ಜಾತ್ರಾ ಮಹೋತ್ಸವವೂ ಸರಳವಾಗಿ ಧಾರ್ಮಿಕ ವಿಧಿ ವಿಧಾನಗಳನುಸಾರದಲ್ಲಿ ನಿಗದಿತ ಜನರ ಮಧ್ಯೆ ಸಂಭ್ರಮದಿಂದ ಗುರುವಾರದಂದು ನಡೆಯಿತು. 

ಕಳೆದ ವರ್ಷಗಳಿಂದ ಈ ವರ್ಷ ವಿಶೇಷವಾಗಿ ನೂತನ ಬ್ರಹ್ಮರಥದ ನಿರ್ಮಾಣಗೊಂಡಿದ್ದು ಕೆಲ ದಿನಗಳ ಹಿಂದೆಯಷ್ಟೇ ಸಹಸ್ರಾರು ಜನ ಸಂಖ್ಯೆಯಲ್ಲಿ ಅದ್ದೂರಿಯಾಗಿ ಬ್ರಹ್ಮ ರಥವನ್ನು ಸ್ವಾಗತಿಸಲಾಗಿತ್ತು. ನಂತರ ಸರಕಾರವು ವಿಕೆಂಡ್ ಹಾಗೂ ನೈಟ್ ಕರ್ಪ್ಯೂ ಜಾರಿಗೊಳಿಸಿದ ಹಿನ್ನೆಲೆ ಜಾತ್ರಾ ಮಹೋತ್ಸವಕ್ಕೆ ಜರುಗಲು ಕೋವಿಡ್ ಮಾರ್ಗಸೂಚಿ ಪಾಲನೆ ಅಗತ್ಯವಾಯಿತು. 

ಇದರಂತೆ ಸಹಾಯಕ ಆಯುಕ್ತರು, ದೇವಾಲಯದ ಆಡಳಿತ ಮಂಡಳಿ ಹಾಗೂ ಸಾರ್ವಜನಿಕ ನೇತ್ರತ್ವದಲ್ಲಿ ಸಭೆ ನಡೆಸಲಾಗಿದ್ದು, 200 ಮಂದಿ ಆರ್. ಟಿ. ಪಿ. ಸಿ. ಆರ್. ಪರೀಕ್ಷೆ ನಡೆಸಿ ಪಾಸ ನೀಡಿ ರಥೋತ್ಸವಕ್ಕೆ ಅನುಮತಿ ನೀಡಿ ಆದೇಶ ಪಾಲನೆಗೆ ಸಹಾಯಕ ಆಯುಕ್ತೆ ಮಮತಾದೇವಿ ಅವರು ಸೂಚನೆ ನೀಡಿದ್ದರು. 

ಗುರುವಾರದಂದು ಜಾತ್ರಾ ದಿನ ಮುಂಜಾನೆಯಿಂದಲೇ ಜಾತ್ರಾ ಮಹೋತ್ಸವದ ವಿಧಿ ವಿಧಾನಗಳು ಜರುಗಿದ್ದು, ಸಂಜೆ ವೇಳೆ ಶ್ರೀ ಮುರುಡೇಶ್ವರ ದೇವರ ಮಹಾ ರಥೋತ್ಸವವು ನೂರಾರು ಭಕ್ತರು ರಥವನ್ನು ಭಕ್ತಿ-ಭಾವದಿಂದ ಎಳೆಯುವ ಮೂಲಕ ಸಂಪನ್ನಗೊಂಡಿತು. 
ಮುರುಡೇಶ್ವರ ದೇವರ ಮಹಾ ರಥೋತ್ಸವ ಭಕ್ತರು ರಥ ಕಾಣಿಕೆ ಸಲ್ಲಿಸಿ ದೇವರಿಗೆ ಪೂಜೆ ನೆರವೇರಿಸಿದರು. 
ಮಹಾರಥೋತ್ಸದ ಪೂರ್ವದಲ್ಲಿ ತೆಂಗಿನಕಾಯಿಯನ್ನು ಒಡೆಯುವ ಕ್ರಮ ಜರುಗಿದ ನಂತರ ರಥವನ್ನು ನೂರಾರು ಜನರ ಜಯಘೋಷದೊಂದಿಗೆ ಎಳೆಯಲಾಯಿತು. 

ಪ್ರತಿವರ್ಷ ಮಕರ ಸಂಕ್ರಮಣದಂದು ರಥೋತ್ಸವದ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿ, ಮೊದಲನೇ ದಿನ ಮೃತ್ತಿಕಾಹರಣ, ಧ್ವಜಾರೋಹಣ, ಬೀಜವಾಹನ, ಭೇರಿತಾಡನ, ಐನಬಲಿ, ಶಿಬಿಕಾ ಯಂತ್ರೋತ್ಸವ, ಎರಡನೇ ದಿನ ಮಯೂರ ಯಂತ್ರೋತ್ಸವ, ಮೂರನೇ ದಿನ ಗಜ ಯಂತ್ರೋತ್ಸವ, ನಾಲ್ಕನೇ ದಿನ ವೃಷಭ ಯಂತ್ರೋತ್ಸವ, ಐದನೇ ದಿನ ಡೋಲಾ ಯಂತ್ರೋತ್ಸವ ಹಾಗೂ ಆರನೇ ದಿನ ಮಹಾ ರಥೋತ್ಸವ ಜರುಗಿತು. ಎಂಟನೇ ದಿನ ಚೂರ್ಣೋತ್ಸವ, ಅವಭೃಥ ಸ್ನಾನ, ಧ್ವಜಾವರೋಹಣ, ಅಂಕುರಾರೋಪಣ ಇತ್ಯಾದಿಗಳೊಂದಿಗೆ ರಥೋತ್ಸವ ಸಂಪನ್ನಗೊಂಡಿದೆ. 

ಕಳೆದ ಬಾರಿ ಕೋವಿಡ್ ಪ್ರಕರಣ ಅಥವಾ ಮಾರ್ಗಸೂಚಿಗಳ ಆದೇಶವಿಲ್ಲದೇ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಭಕ್ತರ ನಡುವೆ ಅದ್ದೂರಿಯಾಗಿ ನಡೆದಿತ್ತು. ಆದರೆ ಈ ಬಾರಿ ನಿಗದಿಪಡಿಸಿದ ಜನರಿಗೆ ಮಾತ್ರ ಪಾಸ್ ವಿತರಿಸಿ ರಥವನ್ನು ಎಳೆಯಲಾಗಿದ್ದು, ಪೋಲೀಸ ಬಂದೋಬಸ್ತನಲ್ಲಿ ರಥವನ್ನು ಭಕ್ತಿ ಭಾವದಿಂದ ಎಳೆಯಲಾಯಿತು. ಓಲಗ ಮಂಟಪಕ್ಕೆ ಹಾಗೂ ಪುಷ್ಕರಣಿಗೆ ಸಂಪರ್ಕಿಸುವ ನಾಲ್ಕು ರಸ್ತೆಯಲ್ಲಿ ಬ್ಯಾರಿಗೇಟ್ ಅಳವಡಿಸಿ ಪೋಲೀಸ್ ಸಿಬ್ಬಂದಿಗಳನ್ನು ನೇಮಿಸಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಆದರು ಸಹ ಬ್ಯಾರಿಗೇಟ್ ಹೊರಗಡೆ ನೂರಾರು ಮಂದಿ ಜನರು ನಿಂತು ರಥೋತ್ಸವದ ಸಂಭ್ರಮವನ್ನು ವೀಕ್ಷಿಸಿ ಸಂತಸ ಪಟ್ಟರು. ಇನ್ನು ತಾಲೂಕಾಢಳಿತದಿಂದ ಮನೆಯಲ್ಲಿಯೇ ಕುಳಿತು ಜಾತ್ರಾ ನೇರ ಪ್ರಸಾರ ವೀಕ್ಷಿಸಲು ಖಾಸಗಿ ಸ್ಥಳೀಯ ಸುದ್ದಿ ವಾಹಿನಿ ಹಾಗೂ ಯೂಟ್ಯೂಬ್ ಚಾನೆಲಗಳಲ್ಲಿ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಾಕಷ್ಟು ಜನರು ಮನೆಯಲ್ಲಿಯೇ ಕುಳಿತು ಜಾತ್ರಾ ಮಹೋತ್ಸವವನ್ನು ವೀಕ್ಷಿಸಿ ಸಂತಸ ಪಟ್ಟರು. 

ಜಾತ್ರಾ ಮಹೋತ್ಸವದ ನಂತರ ಸಾರ್ವಜನಿಕರಿಗೆ ಪ್ರವೇಶ ಮುಕ್ತ ಮಾಡಲಾಗಿದ್ದು, ಕೆಲ ಕಾಲ ನೂರಾರು ಭಕ್ತರು ರಥಬೀದಿಯಲ್ಲಿ ಸುತ್ತಾಡಿ ರಾತ್ರಿ ವೇಳೆ‌ ಮನೆ ಕಡೆ ತೆರಳಿದರು. 

ದೇವಸ್ಥಾನದ ವತಿಯಿಂದ ಆಡಳಿತಾಧಿಕಾರಿ, ಸಹಾಯಕ ಆಯುಕ್ತೆ ಮಮತಾದೇವಿ ಅವರ ಉಪಸ್ಥಿತಿಯಲ್ಲಿ ತಹಸೀಲ್ದಾರ ಎಸ್. ರವಿಚಂದ್ರ, ಡಿವೈಎಸ್ಪಿ ಬೆಳ್ಳಿಯಪ್ಪ, ಗ್ರಾಮಾಂತರ ಠಾಣಾ ಸಿಪಿಐ ಮಹಾಬಲೇಶ್ವರ ನಾಯ್ಕ, ಪಿಎಸ್ಐಗಳಾದ ಭರತ ಕುಮಾರ, ರವೀಂದ್ರ ‌ಬಿರಾದಾರ್, ಸುಮಾ ಬಿ. ಹಾಗೂ 100 ಕ್ಕೂ ಅಧಿಕ ಪೋಲೀಸ್ ಸಿಬ್ಬಂದಿಗಳನ್ನು ಬಂದೋಬಸ್ತ ನೀಡಿದ್ದರು. 

ಈ ಸಂಧರ್ಭದಲ್ಲಿ ಆರ್. ಎನ್.‌ ಶೆಟ್ಟಿ ಪುತ್ರ ಸುನೀಲ ಶೆಟ್ಟಿ ಹಾಗೂ ಅವರ ಕುಟುಂಬಸ್ಥರು, ಶಾಸಕ ಸುನೀಲ ನಾಯ್ಕ, ವಕೀಲ ಆರ್. ಆರ್. ಶ್ರೇಷ್ಟಿ, ಮಾವಳ್ಳಿ 1 ಮತ್ತು 2 ಅಧ್ಯಕ್ಷ ಸದಸ್ಯರು, ಗ್ರಾ. ಪಂ. ಸದಸ್ಯ ಕೃಷ್ಣಾ ನಾಯ್ಕ, ಈಶ್ವರ ದೊಡ್ಮನೆ, ಶ್ರೀರಾಮ ಸೇನೆಯ ಜಯಂತ ನಾಯ್ಕ, ಗುತ್ತಿಗೆದಾರ ಈಶ್ವರ ಎನ್. ನಾಯ್ಕ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...