ಹೊಸದಿಲ್ಲಿ: 2019ರಲ್ಲಿ ಪೆಗಾಸಸ್ ಬಳಸಿ ದಾಳಿ ನಡೆಸಲಾಗಿದ್ದ 1,400 ಬಳಕೆದಾರರಲ್ಲಿ ಸರಕಾರಿ ಅಧಿಕಾರಿ ತಳಿ ದತ್ತ, ದೃಢಪಡಿಸಿದ ವಾಟ್ಸ್‌ಆ್ಯಪ್ ಸಿಇಒ

Source: VB | By S O News | Published on 26th July 2021, 2:42 PM | National News |

ಹೊಸದಿಲ್ಲಿ: ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್ ಸ್ಪೈವೇರ್ ಬಳಸಿ 2019ರಲ್ಲಿ ದಾಳಿ ಪ್ರಯತ್ನಗಳಿಗೆ ಗುರಿಯಾಗಿದ್ದ 1,400 ವಾಟ್ಸ್‌ಆ್ಯಪ್ ಬಳಕೆದಾರರ ಗುಂಪಿನಲ್ಲಿ ವಿಶ್ವಾದ್ಯಂತದ ಸರಕಾರಿ ಅಧಿಕಾರಿಗಳೂ ಸೇರಿದ್ದರು ಎಂದು ವಾಟ್ಸ್‌ಆ್ಯಪ್‌ನ ಸಿಇಒ ವಿಲ್ ಕ್ಯಾಥ್ ಕಾಟ 'ದಿ ಗಾರ್ಡಿಯನ್'ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಗೊಳಿಸಿದ್ದಾರೆ. ಪೆಗಾಸಸ್ ಸ್ಪೈವೇರ್‌ ಬಗ್ಗೆ ತನಿಖೆಯನ್ನು ನಡೆಸಿರುವ 17 ಮಾಧ್ಯಮಗಳಲ್ಲಿ 'ದಿ ಗಾರ್ಡಿಯನ್' ಸೇರಿದೆ.

ಗಮನಾರ್ಹವೆಂದರೆ, 2019ರಲ್ಲಿ ವಾಟ್ಸ್ ಆ್ಯಪ್ ಬಳಕೆದಾರರ ಮೇಲೆ ನಡೆದಿದ್ದ ದಾಳಿ ಮತ್ತು ಮಾಧ್ಯಮಗಳ 'ಪೆಗಾಸಸ್ ಪ್ರಾಜೆಕ್ಟ್ 'ತನಿಖೆಗೆ ಆಧಾರವಾಗಿದ್ದ ಸೋರಿಕೆಯಾಗಿರುವ ಡಾಟಾ ಕುರಿತು ವರದಿಗಳಲ್ಲಿ ಸಾಮ್ಯತೆಗಳು ಕಂಡು ಬರುತ್ತಿವೆ ಎಂದು ಕ್ಯಾಥ್‌ಕಾರ್ಟ್ ಹೇಳಿದರು.

ತನ್ನ ಬಳಕೆದಾರರು ಪೆಗಾಸಸ್ ಸ್ಪೈವೇರ್ ಬಳಸಿ ದಾಳಿ ಪ್ರಯತ್ನಗಳಿಗೆ ಗುರಿಯಾಗಿದ್ದಾರೆ ಎಂದು ಎರಡು ವರ್ಷಗಳ ಹಿಂದೆ ವಾಟ್ಸ್ ಆ್ಯಪ್ ಪ್ರಕಟಿಸಿದ್ದಾಗ, 1,400 ಗುರಿಗಳ ಪೈಕಿ ಸುಮಾರು ನೂರರಷ್ಟು ಬಳಕೆದಾರರು ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ ಎಂದು ಅದು ಹೇಳಿತ್ತು. ವಾಟ್ಸ್‌ಆ್ಯಪ್‌ನ ಭದ್ರತಾ ವ್ಯವಸ್ಥೆಯಲ್ಲಿನ ಲೋಪವೊಂದನ್ನು ಬಳಸಿ ಈ ಬಳಕೆದಾರರನ್ನು ಗುರಿಯಾಗಿಸಿಕೊಳ್ಳಲಾಗಿತ್ತು ಮತ್ತು ಈ ಲೋಪವನ್ನು ನ೦ತರ ನಿವಾರಿಸಲಾಗಿತ್ತು.

'ಈಗಿನ ಸೋರಿಕೆ ವರದಿಯು ನಾವು ಎರಡು ವರ್ಷಗಳ ಹಿಂದೆ ವಿಫಲಗೊಳಿಸಿದ್ದ ದಾಳಿಯನ್ನು ಹೋಲುತ್ತಿದೆ.

ನಾವು ಆಗ ಬಲವಾಗಿ ಪ್ರತಿಪಾದಿಸಿದ್ದಕ್ಕೆ ತಾಳೆಯಾಗುತ್ತಿದೆ' ಎಂದು ಹೇಳಿದ ಕ್ಯಾಥ್‌ಕಾರ್ಟ್, 'ಎನ್‌ಎಸ್‌ಒ ಗ್ರೂಪ್ ನಮ್ಮ ಸೇವೆಯ ಮೂಲಕ ಜನರ ಫೋನ್‌ಗಳ ಮೇಲೆ ದಾಳಿ ನಡೆಸಲು ಪ್ರಯತ್ನಿಸಿತ್ತು ಮತ್ತು ಅದು ಸ್ಪಷ್ಟವಾಗಿತ್ತು. ಆ ಪಟ್ಟಿಯಲ್ಲಿ ಪತ್ರಕರ್ತರು, ಮಾನವ ಹಕ್ಕು ಹೋರಾಟಗಾರರು ಮತ್ತು ಇತರರೊಂದಿಗೆ ವಿಶ್ವಾದ್ಯಂತದ ದೇಶಗಳ ಸರಕಾರಿ ಅಧಿಕಾರಿಗಳೂ ಇದ್ದರು' ಎಂದರು.

ಸೋರಿಕೆಯಾದ ಡಾಟಾ ಕಣ್ಣಾವಲಿಗೆ ಗುರಿಯಾಗಿರುವವರನ್ನು ಪ್ರತಿನಿಧಿಸುತ್ತದೆ ಎನ್ನುವುದನ್ನು ನಿರಾಕರಿಸಿದ್ದ ಎನ್‌ಎಸ್‌ಒ ಗ್ರೂಪ್, 50,000ಕ್ಕೂ ಅಧಿಕ ಫೋನ್‌ಗಳು ಕಣ್ಗಾವಲಿಗೆ ಗುರಿಯಾಗಿವೆ ಎಂದು ವರದಿಗಳಲ್ಲಿ ಹೇಳಿರುವುದು ಉತ್ಪ್ರೇಕ್ಷೆಯಾಗಿದೆ. ತಾನು ಕೇವಲ 40-45 ದೇಶಗಳಿಗೆ ಪೆಗಾಸಸ್ ಸ್ಪೈವೇರ್ ಮಾರಾಟ ಮಾಡಿದ್ದು, ಈ ದೇಶಗಳಲ್ಲಿ ಕಣ್ಗಾವಲಿಗೆ ಗುರಿಯಾಗಿದ್ದ ದೂರವಾಣಿಗಳ ಸರಾಸರಿ ಸಂಖ್ಯೆ ಸುಮಾರು ನೂರರಷ್ಟಿದೆ ಎಂದು ಹೇಳಿಕೊಂಡಿತ್ತು.

ಆದರೆ ಎನ್‌ಎಸ್‌ ಗ್ರೂಪ್‌ನ ಈ ಸಮಜಾಯಿಷಿ ವಾಟ್ಸ್ ಆ್ಯಪ್ ಎರಡು ವರ್ಷಗಳ ಹಿಂದೆ ಕಂಡುಕೊಂಡಿದ್ದ ಅಂಶದೊಂದಿಗೆ ತಾಳೆಯಾಗುತ್ತಿಲ್ಲ ಎಂದು ಹೇಳಿದ ಕ್ಯಾಡ್‌ಕಾರ್ಟ್, 'ವಾಸ್ತವಗಳು ಸ್ಪಷ್ಟವಾಗಿವೆ. ಸಂಕ್ಷಿಪ್ತ ಅವಧಿಯಲ್ಲಿ ನಮ್ಮ 1,400 ಬಳಕೆದಾರರು ಪೆಗಾಸಸ್ ದಾಳಿಗೆ ಗುರಿಯಾಗಿದ್ದನ್ನು ನಾವು ನೋಡಿದ್ದೇವೆ. ಸುದೀರ್ಘಾವಧಿಯಲ್ಲಿ ದಾಳಿಗೆ ಗುರಿಯಾಗಿರುವ ಜನರ ಸಂಖ್ಯೆ ತುಂಬಾ ಹೆಚ್ಚಾಗಿದೆ ಎನ್ನುವುದನ್ನು ಅದು ನಮಗೆ ಸೂಚಿಸುತ್ತದೆ. ಸಂಕ್ಷಿಪ್ತ ಅವಧಿಯಲ್ಲಿ 1,400 ಜನರು ದಾಳಿಗೊಳಗಾಗಿದ್ದರೆ ಎರಡು ವರ್ಷಗಳ ಅವಧಿಯಲ್ಲಿ ಬಹಳಷ್ಟು ಜನರು ದಾಳಿಗೊಳಗಾಗಿದ್ದಾರೆ ಎನ್ನುವುದು ನಿಮಗೇ ಗೊತ್ತಾಗುತ್ತದೆ' ಎಂದರು.

ಇಂತಹ ದಾಳಿಯು ವಿಶ್ವಾದ್ಯಂತ ಪತ್ರಕರ್ತರ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತಿದ್ದರೆ ವಿಶ್ವಾದ್ಯಂತದ ಮಾನವ ಹಕ್ಕು ಹೋರಾಟಗಾರರ ಮೇಲೂ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ನಮ್ಮೆಲ್ಲರ ಮೇಲೂ ಪರಿಣಾಮವನ್ನುಂಟು ಮಾಡುತ್ತದೆ ಹಾಗೂ ಯಾವುದೇ ವ್ಯಕ್ತಿಯ ಫೋನ್ ಸುರಕ್ಷಿತವಲ್ಲ ಎಂದಾದರೆ ಪ್ರತಿಯೊಬ್ಬರ ಫೋನ್‌ಗಳೂ ಸುರಕ್ಷಿತವಲ್ಲ ಎಂದ ಅವರು, ಸ್ಪೈವೇರ್ ತಯಾರಕರಿಗೆ ಉತ್ತರದಾಯಿತ್ವನ್ನು ರೂಪಿಸಲು ನೆರವಾಗುವಂತೆ ಸರಕಾರಗಳಿಗೆ ಕರೆಯನ್ನು ನೀಡಿದರು.

Read These Next