ಭಟ್ಕಳ ಹೆಬಳೆ ಗ್ರಾಪಂ ಆಡಳಿತದ ವಿರುದ್ಧ ಭ್ರಷ್ಟಾಚಾರ ಆರೋಪ; ವಿಶೇಷ ಸಭೆಯಲ್ಲಿ ಆರೋಪ ಸಾಬೀತು ಪಡಿಸಲು ಆಗ್ರಹ

Source: S O News service | By V. D. Bhatkal | Published on 27th October 2021, 12:07 PM | Coastal News |

ಭಟ್ಕಳ: ತಾಲೂಕಿನ ಹೆಬಳೆ ಗ್ರಾಮ ಪಂಚಾಯತ ಆಡಳಿತದ ವಿರುದ್ಧ ಕೆಲವು ಸದಸ್ಯರು ಮಾಡಿದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳವಾರ ಪಂಚಾಯತ ಸಭಾಭವನದಲ್ಲಿ ವಿಶೇಷ ಸಭೆ ನಡೆಯಿತು.

ಪಂಚಾಯತ ಆಡಳಿತದ ಪರವಾಗಿ ಸಭೆಯಲ್ಲಿ ಮಾತನಾಡಿದ ಭಟ್ಕಳ ಬಿಜೆಪಿ ಮಂಡಲದ ಅಧ್ಯಕ್ಷರೂ ಆಗಿರುವ ಸದಸ್ಯ ಸುಬ್ರಾಯ ದೇವಡಿಗ, ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಆಗಿಲ್ಲ, ಪಂಚಾಯತ ನಿಧಿ 2ರಲ್ಲಿ 11 ಲಕ್ಷ ರುಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸುತ್ತೀರಿ, ಖರ್ಚಾದ 11 ಲಕ್ಷ ರುಪಾಯಿಯಲ್ಲಿ 4-5 ಲಕ್ಷ ರುಪಾಯಿ ಸಿಬ್ಬಂದಿಗಳ ವೇತನ, ಕಸ, ತ್ಯಾಜ್ಯ ವಿಲೇವಾರಿ ಖರ್ಚುವೆಚ್ಚಗಳೂ ಸೇರಿರುತ್ತವೆ. ಹಾಗಾದರೆ ಅವ್ಯವಹಾರ ಆಗಿರುವುದು ಎಲ್ಲಿ, ಏನಾದೂ ದಾಖಲೆ ಇದ್ದರೆ ನೀಡಿ ಎಂದು ಸವಾಲೆಸೆದರು.

ಹೆಬಳೆ ಪಂಚಾಯತ ಆಡಳಿತದ ಮೇಲೆ ಮಾಡಿರುವ ಭ್ರಷ್ಟಾಚಾರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈ ಬಗ್ಗೆ ನಡೆದ ವಿಶೇಷ ಸಭೆಯಲ್ಲಿಯೂ ಅವರಿಂದ ಆರೋಪ ಸಾಬೀತು ಪಡಿಸಲು ಆಗಲಿಲ್ಲ.
- ಸುಬ್ರಾಯ ದೇವಡಿಗ, ಹೆಬಳೆ ಗ್ರಾಪಂ ಸದಸ್ಯರು

ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಇಬ್ಬು ಅಲಿ ಮತ್ತಿತರರು, ಆರೋಪ ಸಾಬೀತುಪಡಿಸಲು ನಮಗೆ ಸಮಯಾವಕಾಶ ನೀಡಬೇಕು, ಅದಕ್ಕಾಗಿ ದಾಖಲೆ ಪತ್ರಗಳನ್ನು ಸಂಗ್ರಹಿಸಬೇಕಿದೆ, ನೀವು ನಮ್ಮ ಆರೋಪದ ಬಗ್ಗೆ ತನಿಖೆ ನಡೆಸಬೇಕು ಎಂದರು. ಇದಕ್ಕೆ ತಿರುಗೇಟು ನೀಡಿದ ಆಡಳಿತದ ಪರ ಸದಸ್ಯರು ವಿಶೇಷ ಸಭೆಗೆ ಆಗ್ರಹಿಸುವ ಮುನ್ನ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಭೆಯಲ್ಲಿ ಹಾಜರುಪಡಿಸುವ ಬಗ್ಗೆ ವಿಶ್ವಾಸ ಇತ್ತು, ಈಗ ಮತ್ತೆ ಸಮಯಾವಕಾಶದ ಬಗ್ಗೆ ಹೇಳುತ್ತೀರಿ, ಇದು ಸರಿಯಲ್ಲ ಎಂದು ತಿಳಿಸಿದರು.

ಭ್ರಷ್ಟಚಾರ ಆರೋಪಕ್ಕೆ ಸಂಬಂಧಿಸಿದಂತೆ ಪರ, ವಿರೋಧದ ಹೇಳಿಕೆಗಳಿಂದಾಗಿ ಕೆಲ ಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು. ಮಧ್ಯಾಹ್ನ 2 ಗಂಟೆಯವರೆಗೂ ಆರೋಪ, ಪ್ರತ್ಯಾರೋಪಗಳು ನಡೆದುಕೊಂಡೇ ಇತ್ತು.

ಪಂಚಾಯತ ಅಧ್ಯಕ್ಷೆ ಕುಪ್ಪು ಮಾದೇವ ಗೊಂಡ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪಾಧ್ಯಕ್ಷ ಮಾದೇವಿ ನಾಯ್ಕ, ಪಂಚಾಯತ ಅಭಿವೃದ್ಧಿ ಅಧಿಕಾರಿ ಜಯಂತಿ ನಾಯ್ಕ ಉಪಸ್ಥಿತರಿದ್ದರು. ಪಂಚಾಯತ ಆಡಳಿತದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ವಿಶೇಷ ಸಭೆಗೆ ಮನವಿ ಸಲ್ಲಿಸಿದ್ದರೂ ಸಭೆಯನ್ನು ಕರೆಯುತ್ತಿಲ್ಲ ಎಂದು ಆಪಾದಿಸಿ ಪಂಚಾಯತದ 11 ಸದಸ್ಯರು ಕಳೆದ ಸಾಮಾನ್ಯ ಸಭೆಗೆ ಗೈರು ಹಾಜರಾಗಿದ್ದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...