ಲಕ್ನೊ: ಡಾ.ಕಫೀಲ್ ಖಾನ್ ಅಮಾನತಿಗೆ ಕಾರಣ ನೀಡಿ ಉ.ಪ್ರ. ಸರಕಾರಕ್ಕೆ ಅಲಹಾಬಾದ್ ಹೈಕೋರ್ಟ್ ಆದೇಶ

Source: VB | By S O News | Published on 4th August 2021, 2:34 PM | National News |

ಲಕ್ನೊ: ನಾಲ್ಕು ವರ್ಷಗಳಿಗೂ ಅಧಿಕ ಸಮಯದಿಂದ ಗೋರಖ್ ಪುರದ ಆಸ್ಪತ್ರೆಯಿಂದ ಡಾ.ಕಫೀಲ್ ಖಾನ್ ಅವರ ಅಮಾನತನ್ನು ಸಮರ್ಥಿಸಲು ಕಾರಣ ನೀಡುವಂತೆ ಅಲಹಾಬಾದ್ ಹೈಕೋರ್ಟ್ ಸೋಮವಾರ ಉತ್ತರಪ್ರದೇಶ ಸರಕಾರಕ್ಕೆ ತಿಳಿಸಿದೆ.

ತನ್ನನ್ನು ಸೇವೆಯಿಂದ ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ಕಫೀಲ್ ಖಾನ್ ಅವರು ಜುಲೈ 29ರಂದು ಸಲ್ಲಿಸಿದ ಅರ್ಜಿಯ ಆಲಿಕೆಯನ್ನು ನಡೆಸಿದ ನ್ಯಾಯಮೂರ್ತಿ ಯಶ್ವಂತ್ ವರ್ಮಾ ಅವರು ಈ ಆದೇಶವನ್ನು ಹೊರಡಿಸಿದ್ದಾರೆ.

ಗೋರಖ್ ಪುರದ ಬಾಬಾರಾಘವ್ ದಾಸ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ 2017ರಲ್ಲಿ ಆಮ್ಲಜನಕದ ಕೊರತೆಯಿಂದ 63 ಮಂದಿ ಮಕ್ಕಳು ಮೃತಪಟ್ಟ ಘಟನೆಗೆ ಸಂಬಂಧಿಸಿ ಕಫೀಲ್ ಖಾನ್ ಅವರನ್ನು ಅಮಾನತುಗೊಳಿಸಲಾಗಿತ್ತು. ಕರ್ತವ್ಯಲೋಪ ಭ್ರಷ್ಟಾಚಾರ ಹಾಗೂ ವೈದ್ಯಕೀಯ ನಿರ್ಲಕ್ಷ್ಯದ ಆರೋಪದಲ್ಲಿ ಅವರು 9 ತಿಂಗಳು ಜೈಲು ವಾಸ ಅನುಭವಿಸಿದ್ದರು.

ಆದರೆ 2019ರ ಸೆಪ್ಟೆಂಬರ್‌ನಲ್ಲಿ ಉ.ಪ್ರ. ಸರಕಾರವು ಡಾ.ಕಫೀಲ್ ಅವರನ್ನು ಎಲ್ಲಾ ರೀತಿಯ ಆರೋಪಗಳಿಂದ ಮುಕ್ತಗೊಳಿಸಿತ್ತು ಹಾಗೂ ಮಕ್ಕಳ ಪ್ರಾಣವನ್ನು ರಕ್ಷಿಸಲು ಅವರು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದ್ದರೆಂದು ಶ್ಲಾಘಿಸಿತ್ತು. ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನದೇ ಖರ್ಚಿನಲ್ಲಿ ಆಕ್ಸಿಜನ್ ಸಿಲಿಂಡರ್‌ಗಳನ್ನು ಡಾ.ಕಫೀಲ್‌ ಆಸ್ಪತ್ರೆಗೆ ತರಿಸಿಕೊಂಡಿದ್ದರು ಹಾಗೂ ಇನ್ನೂ ಹೆಚ್ಚು ಆಕ್ಸಿಜನ್‌ ಸಿಲಿಂಡರ್‌ಗಳನ್ನು ಆಸ್ಪತ್ರೆಗೆ ಪೂರೈಕೆಯಾಗುವಂತೆ ಏರ್ಪಾಟುಗಳನ್ನು ಮಾಡಿದ್ದರು ಎಂದು ಶ್ಲಾಘಿಸಿತ್ತು. ಆದಾಗ್ಯೂ 2019ರ ಅಕ್ಟೋಬರ್‌ನಲ್ಲಿ ಉ.ಪ್ರ. ಸರಕಾರವು ಖಾನ್ ವಿರುದ್ಧ ಗೋರಖ್ಪುರದ ಆಸ್ಪತ್ರೆಯಲ್ಲಿ ಸಂಭವಿಸಿದ ಶಿಶುಗಳ ಸಾವಿನ ಕುರಿತ ವರದಿಯ ಬಗ್ಗೆ ತಪ್ಪು ಮಾಹಿತಿಗಳನ್ನು ನೀಡಿದ ಹಾಗೂ ತನ್ನ ಅಮಾನತಿನ ಅವಧಿಯಲ್ಲಿ ಸರಕಾರಿ ವಿರೋಧಿ ಹೇಳಿಕೆ ನೀಡಿದ್ದಾರೆಂಬ ಆರೋಪದ ಬಗ್ಗೆ ತನಿಖೆಗೆ ಆದೇಶವನ್ನು ಹೊರಡಿಸಿತ್ತು.

ತನ್ನ ಪ್ರಕರಣಕ್ಕೆ ಸಂಬಂಧಿಸಿ ಶಿಸ್ತುಕ್ರಮ ಸಮಿತಿಯು 2019ರ ಎಪ್ರಿಲ್ 15ರಂದು ವರದಿಯೊಂದನ್ನು ಸಲ್ಲಿಸಿತ್ತು. ಶಿಸ್ತುಕ್ರಮ ಸಮಿತಿಯು ವರದಿಯನ್ನು ಸ್ವೀಕರಿಸಿತ್ತಾದರೂ, ಪ್ರಕರಣದಲ್ಲಿ ತನ್ನ ದೋಷಮುಕ್ತಿಯನ್ನು ಒಪ್ಪಿಕೊಳ್ಳಲಿಲ್ಲ ಮತ್ತು 11 ತಿಂಗಳ ಬಳಿಕ ತನಿಖೆಗೆ ಮರು ಆಜ್ಞಾಪಿಸಿತ್ತು ಎಂದು ಡಾ. ಕಫೀಲ್ ನ್ಯಾಯಾಲಯಕ್ಕೆ ತಿಳಿಸಿದ್ದರು.

ತನ್ನನ್ನು ಹೊರತುಪಡಿಸಿ, ಗೋರಖ್‌ಪುರದ ಆಸ್ಪತ್ರೆಯಲ್ಲಿ ಶಿಶು ಮರಣದ ಘಟನೆಗೆ ಸಂಬಂಧಿಸಿ ಅಮಾನತುಗೊಂಡ ಎಲ್ಲಾ ಸಿಬ್ಬಂದಿಯನ್ನು ಅವರ ಹುದ್ದೆಗಳಲ್ಲಿ ಮರುಸ್ಥಾಪಿಸಲಾಗಿದೆ ಎಂದು ಖಾನ್ ನ್ಯಾಯಾಲಯದಲ್ಲಿ ದೂರಿದ್ದರು.

ಪ್ರಕರಣದ ಆಲಿಕೆ ನಡೆಸಿದ ನ್ಯಾಯಾಲಯವು ನಾಲ್ಕು ವರ್ಷಗಳಿಗೂ ಅಧಿಕ ಸಮಯದವರೆಗೆ ಕಫೀಲ್‌ ಅವರ ಅಮಾನತು ಆದೇಶವನ್ನು ಮುಂದುವರಿಸಿರುವುದಕ್ಕೆ ಸೂಕ್ತ ಕಾರಣ ನೀಡುವಂತೆ ಉತ್ತರಪ್ರದೇಶ ಸರಕಾರಕ್ಕೆ ಸೂಚಿಸಿತು ಮತ್ತು ಮುಂದಿನ ವಿಚಾರಣೆಯನ್ನು ಆಗಸ್ಟ್ 5ಕ್ಕೆ ಮುಂದೂಡಿತು.

Read These Next

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

'ದಾರಿ ತಪ್ಪಿಸುವ ಜಾಹೀರಾತು' ಸಾರ್ವಜನಿಕ ಕ್ಷಮಾಪಣೆ ಕೇಳಲು ರಾಮ್‌ದೇವ್‌ಗೆ 1 ವಾರದ ಗಡುವು

ಅಲೋಪತಿ ವೈದ್ಯಕೀಯ ಪದ್ಧತಿಯ ವಿರುದ್ಧ ಅಪಪ್ರಚಾರ ಮಾಡದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಯೋಗ ಗುರು ರಾಮ್ ದೇವ್ ಮತ್ತು ಪತಂಜಲಿ ...

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...