ಕೊರೋನಾ ಹಾಟ್ ಸ್ಪಾಟ್ ಕಳಂಕದಿಂದ ಹೊರಬಂದ ಮೈಸೂರು; ಎಲ್ಲ 90 ಸೋಂಕಿತರು ಗುಣಮುಖ

Source: sonews | By Staff Correspondent | Published on 15th May 2020, 10:04 PM | State News | Don't Miss |

ಮೈಸೂರು: ರಾಜ್ಯದಲ್ಲಿಯೇ ಅತಿ ಹೆಚ್ಚು ಕೊರೋನ ಸೋಂಕಿತರನ್ನು ಹೊಂದಿದ್ದ ಪಟ್ಟಿಯಲ್ಲಿ ಸ್ಥಾನ ಪಡೆದು ಕೊರೋನ ಹಾಟ್ ಸ್ಪಾಟ್ ಆಗಿ ಗುರುತಿಸಿಕೊಂಡಿದ್ದ ಸಾಂಸ್ಕೃತಿಕ ನಗರಿ ಮೈಸೂರು ಇದೀಗ ಕೊರೋನ ಮುಕ್ತ ಜಿಲ್ಲೆಯಾಗಿ ಬದಲಾಗಿದೆ.

90 ಕೊರೋನ ಸೋಂಕು ಪ್ರಕರಣಗಳು ದಾಖಲಾಗಿದ್ದ ಮೈಸೂರು ಜಿಲ್ಲೆ ಕೊರೋನ ಹಾಟ್ ಸ್ಪಾಟ್ ಆಗಿತ್ತು. ಆದರೆ ಎಲ್ಲ ಕೊರೋನ ಸೊಂಕಿತರು ಸಂಪೂರ್ಣ ಗುಣಮುಖವಾಗುವ ಮೂಲಕ ಇತರೆ ಜಿಲ್ಲಗಳಿಗೆ ಮಾದರಿಯಾಗಿದೆ. ಪ್ರಮುಖವಾಗಿ ಜ್ಯಬಿಲಿಯಂಟ್ ಕಂಪೆನಿಯಿಂದ ಹಬ್ಬಿದ ಕೋವಿಡ್ -19 ವೈರಾಣು ಜಿಲ್ಲೆಯನ್ನು ವ್ಯಾಪಿಸಿ ಒಟ್ಟಾರೆ 90 ಮಂದಿಗೆ ಸೋಂಕು ತಗುಲುವ ಮೂಲಕ ರಾಜ್ಯದಲ್ಲೇ ಅತಿಹೆಚ್ಚು ಪಾಸಿಟಿವ್ ಪ್ರಕರಣವುಳ್ಳ ಜಿಲ್ಲೆ ಎಂಬ ಹಣೆ ಪಟ್ಟಿಹೊತ್ತಿತ್ತು. ಆದರೆ ಎಲ್ಲರೂ ಸಂಪೂರ್ಣವಾಗಿ ಗುಣಮುಖರಾಗಿದ್ದು, ಇಂದು ಇಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಕೊರೋನ ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಿದೆ.

ಈ ಸಂಬಂಧ ಶುಕ್ರವಾರ ಫೇಸ್‍ಬುಕ್ ಲೈವ್‍ನಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಮಾರ್ಚ್‍ನಲ್ಲಿ ಮೊದಲ ರೋಗಿ.20 ವ್ಯಕ್ತಿಗೆ ಕೊರೋನ ಸೋಂಕು ಕಾಣಿಸಿಕೊಂಡು ಬಳಿಕ ಸೋಂಕು 90 ಮಂದಿಗೆ ತಗುಲಿತ್ತು. ಅವರೆಲ್ಲರಿಗೂ ನಮ್ಮ ವೈದ್ಯರ ತಂಡ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ಮಾಡಿದೆ. ಕೊರೋನ ಮುಕ್ತವಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು, ಮತ್ತು ನಮ್ಮ ಮನವಿಗೆ ಸ್ಪಂಧಿಸಿದ ಸಾರ್ವಜನಿಕರಿಗೂ ಅಭಿನಂದನೆಗಳು, ಕೊರೋನ ಮುಕ್ತಗೊಳ್ಳುವಲ್ಲಿ ಸಾರ್ವಜನಿಕರ ಪಾತ್ರ ಬಹುದೊಡ್ಡದು ಎಂದು ಹೇಳಿದರು.

ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಈ ಬಗ್ಗೆ ಪ್ರತಿಕ್ರಯಿಸಿದ್ದು, ಜಿಲ್ಲೆ ಕೊರೋನ ಪಾಸಿಟಿವ್ ಪ್ರಕರಣದಿಂದ ಮುಕ್ತವಾಗಿರುವುದಕ್ಕೆ ಮುಖ್ಯಮಂತ್ರಿಗಳ ಮಾರ್ಗದರ್ಶನ, ಸಮಸ್ತ ಆಡಳಿತ ವರ್ಗ, ವೈದ್ಯಕೀಯ, ಮಾಧ್ಯಮ ಹಾಗೂ ನಾಡಿನ ಜನತೆಗೆ ಅಭಿನಂದನೆಗಳು ಎಂದು ತಿಳಿಸಿದರು.

ಕೋವಿಡ್ -19 ವೈರಾಣು ಜಿಲ್ಲೆಯನ್ನು ವ್ಯಾಪಿಸಿ ಒಟ್ಟಾರೆ 90 ಮಂದಿಗೆ ಸೋಂಕು ತಗುಲುವ ಮೂಲಕ ರಾಜ್ಯದಲ್ಲೇ ಅತಿಹೆಚ್ಚು ಪಾಸಿಟಿವ್ ಪ್ರಕರಣವುಳ್ಳ ಜಿಲ್ಲೆ ಎಂಬ ಹಣೆ ಪಟ್ಟಿಯಿಂದ ಹೊರಬಂದು ಈಗ ಶೂನ್ಯಕ್ಕೆ ಸೋಂಕಿತ ಪ್ರಕರಣ ಇಳಿಯುವುದು ಎಂದರೆ ಕಡಿಮೆ ಸಾಧನೆಯಲ್ಲ. ಹೀಗಾಗಿ ನಾನು ಚಪ್ಪಾಳೆ ಮೂಲಕ ಹೃದಯತುಂಬಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. 

ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಹಾಗೂ ಅವರ ತಂಡದ ಕಾರ್ಯವೈಖರಿ ಶ್ಲಾಘನೀಯ. ಇವರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿವೆ ಎಂದು ಸಚಿವರು ಶ್ಲಾಘಿಸಿದರು. 

ವೈದ್ಯರು, ನರ್ಸ್, ಆಶಾಕಾರ್ಯಕರ್ತೆಯರಿಗೆ ಹ್ಯಾಟ್ಸ್ ಆಫ್ 
ಇಲ್ಲಿ ನಾನು ಬಹುಮುಖ್ಯವಾಗಿ ವೈದ್ಯರು, ನರ್ಸ್, ಆಶಾಕಾರ್ಯಕರ್ತೆಯರಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಪ್ರಾಣದ ಹಂಗು ತೊರೆದು, ವೈಯಕ್ತಿಕ ಜೀವನವನ್ನು ಮರೆತು ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ. ಕೆಲವರಂತೂ ಮನೆಗೇ ಹೋಗದೆ ಹೋಟೆಲ್ ಗಳಲ್ಲಿ ವಾಸ್ತವ್ಯ ಮಾಡಿದ್ದಾರೆ. ಮಕ್ಕಳನ್ನು ದೂರವಿಟ್ಟು ವಾರಗಟ್ಟಲೇ ಭೇಟಿಯಾಗದೆ ಸೇವೆ ಸಲ್ಲಿಸಿದ್ದಾರೆ. ಇವರ ನಿಸ್ವಾರ್ಥ ಸೇವೆ ಅವಿಸ್ಮರಣೀಯ ಎಂದು ಸಚಿವರು ತಿಳಿಸಿದರು. 

ಪತ್ರಕರ್ತರಿಗೆ ಅಭಿನಂದನೆ: ವೈದ್ಯರಂತೆಯೇ ಪತ್ರಕರ್ತರೂ ಸಹ ಜೀವದ ಹಂಗು ತೊರೆದು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಇದಕ್ಕಾಗಿ ನಾನು ಈ ಸಂದರ್ಭದಲ್ಲಿ ಎಲ್ಲ ಪತ್ರಕರ್ತ ಮಿತ್ರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವ ಸೋಮಶೇಖರ್ ಹೇಳಿದರು.

ನಾಗರಿಕರ ಸಹಕಾರ ದೊಡ್ಡದು
ಕೊರೋನ ಸೋಂಕು ನಿಯಂತ್ರಣಕ್ಕೆ ಬರುವುದರ ಹಿಂದೆ ನಾಗರಿಕರ ಪಾತ್ರವೂ ದೊಡ್ಡದಿದೆ. ಅವರ ಸಹಕಾರ ಇಲ್ಲದಿದ್ದರೆ ಇದರ ನಿಯಂತ್ರಣ ಕಷ್ಟಕರವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಹಕಾರ ದೊಡ್ಡದು ಎಂದು ಸಚಿವ ಸೋಮಶೇಖರ್ ತಿಳಿಸಿದರು.

Read These Next

ಕಾರ್ಮಿಕ ಸಂಘಟನೆಗಳಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಾಸಕರಿಗೆ ಮನವಿ

ಭಟ್ಕಳ: ತಾಲೂಕಿನ ಕಾರ್ಮಿಕ ಸಂಘಟನೆಗಳ ಮುಖಂಡರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರ ಶಾಸಕ ಸುನಿಲ್ ...

ಗೃಹಿಣಿಯ ಕತ್ತಿನಿಂದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ ಸರಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾದ ಹೊನ್ನಾವರ,ಭಟ್ಕಳ ಪೊಲೀಸರು

ಗೃಹಿಣಿಯ ಕತ್ತಿನಿಂದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ ಸರಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾದ ಹೊನ್ನಾವರ,ಭಟ್ಕಳ ಪೊಲೀಸರು