ಅಕ್ರಮ ಹಣ ವರ್ಗಾವಣೆ ಪ್ರಕರಣ; ಡಿಕೆಶಿ ವಿರುದ್ಧ ಈ.ಡಿ. ಚಾರ್ಜ್‌ಶೀಟ್ ಸಲ್ಲಿಕೆ; ಬಿಜೆಪಿಗೆ ಸೇರುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ; ಡಿಕೆಶಿ ಆರೋಪ

Source: Vb | By I.G. Bhatkali | Published on 27th May 2022, 11:56 AM | State News |

ಹೊಸದಿಲ್ಲಿ/ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಹೈಕೋರ್ಟ್‌ನಿಂದ ಜಾಮೀನು ಪಡೆದು ಹೊರಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಇನ್ನಿತರರ ವಿರುದ್ಧ ತನಿಖಾಧಿಕಾರಿಗಳು ಜಾರಿ ನಿರ್ದೇಶನಾಲಯ(ಈ.ಡಿ.)ದ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ 2019ರಲ್ಲಿ ದಾಖಲಿಸಿದ್ದ ಪ್ರಕರಣ ಸಂಬಂಧ ದಿಲ್ಲಿಯ ಈ.ಡಿ. ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 

ದಿಲ್ಲಿಯಲ್ಲಿ ಶಿವಕುಮಾರ್‌ ಒಡೆತನದ ಫ್ಲ್ಯಾಟ್‌ವೊಂದರಲ್ಲಿ 8.5 ಕೋಟಿ ಬೇನಾಮಿ ಹಣ ಪತ್ತೆಯಾದ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಈ.ಡಿ. ಅಧಿಕಾರಿಗಳು ಪಿಎಂಎಲ್‌ಎ ಕಾಯ್ದೆ ಅಡಿ 2018ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

ಬಿಜೆಪಿಗೆ ಸೇರುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ; ಡಿಕೆಶಿ ಆರೋಪ:
ಬಿಜೆಪಿಗೆ ಸೇರುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು,ನನ್ನ ವಿರುದ್ಧ ಸಂಚು ರೂಪಿಸಲಾಗಿದೆ. ಸರಕಾರಿ ಸಂಸ್ಥೆಗಳು ನನ್ನ ವಿರುದ್ಧ ಪ್ರಕರಣ ದಾಖಲಿಸುತ್ತಿವೆ. ನನ್ನನ್ನು ಹೆದರಿಸುವುದು ಅಷ್ಟು ಸುಲಭವಲ್ಲ. ಬಿಜೆಪಿಯ 40 ಪರ್ಸೆಂಟ್ ಕಮಿಷನ್ ಸರಕಾರದಿಂದ ನಾಡಿನ ಜನ ಬೇಸತ್ತಿದ್ದಾರೆ. ಈ ರಾಜಕೀಯ ಸೇಡಿಗೆ ಸರಿಯಾದ ಉತ್ತರ ಸಿಗಲಿದೆ ಎಂದು ಹೇಳಿದ್ದಾರೆ.

ಸಚಿವರೊಬ್ಬರು 40 ಪರ್ಸೆಂಟ್ ಕಮಿಷನ್ ಕೇಳಿದ್ದಕ್ಕೆ ಕಾಂಟ್ರ್ಯಾಕ್ಟರ್ ಆತ್ಮಹತ್ಯೆ ಮಾಡಿಕೊಂಡರು, ರಾಜ್ಯ ಸರಕಾರವು 40 ಪರ್ಸೆಂಟ್ ಕಮಿಷನ್ ಕೇಳುತ್ತಿದೆ ಎಂದು ಗುತ್ತಿಗೆದಾರರ ಸಂಘ ಸಾರ್ವಜನಿಕವಾಗಿ ಹೇಳಿದೆ. ಬಿಜೆಪಿ ಪ್ರಾಯೋಜಿತ ಪಿಎಸ್ಪಿ ಹಗರಣ ಭೇದಿಸಿದ್ದುಂದ ಪೊಲೀಸ್ ನೇಮಕಾತಿ ಸ್ಥಗಿತಗೊಂಡಿದೆ. ಆದರೂ ಯಾರ ಮೇಲೂ ದಾಳಿ ನಡೆದಿಲ್ಲ. ಚಾರ್ಜ್ ಶೀಟ್ ಹಾಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಆದಾಯ ತೆರಿಗೆ ಅಧಿಕಾರಿಗಳು, ಶಿವಕುಮಾರ್‌ ಅವರ ನಿವಾಸ, ಕಚೇರಿ, ಅವರ ಆಪ್ತರಿಗೆ ಸಂಬಂಧಿಸಿದ ಹಲವಾರು ಕಡೆಗಳಲ್ಲಿ ದಾಳಿ ನಡೆಸಿದ್ದರು. ಚಾರ್ಜ್‌ಶೀಟ್‌ನಲ್ಲಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಅವರ ಆಪ್ತರಾದ ಸಚಿನ್ ನಾರಾಯಣ್, ಪಾಲುದಾರ ಸ್ನೇಹಿತ ಎಸ್.ಕೆ.ಶರ್ಮ ಹಾಗೂ ಇನ್ನಿತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ನಡೆಸಿರುವ ಆರೋಪ ಹೊರಿಸಲಾಗಿದೆ ಎಂದು ತಿಳಿದು ಬಂದಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಿವಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಅಲ್ಲದೆ, ಅವರನ್ನು ಬಂಧಿಸಿ ಸುಮಾರು 48 ದಿನಗಳ ಕಾಲ ತಿಹಾರ್ ಜೈಲಿನಲ್ಲಿರಿಸಿದ್ದರು.

ಜಾರಿ ನಿರ್ದೇಶನಾಲಯದ ನ್ಯಾಯಾಲಯವು ಶಿವಕುಮಾರ್ ಗೆ ಜಾಮೀನು ನೀಡಲು ನಿರಾಕರಿಸಿದ್ದರಿಂದ, ದಿಲ್ಲಿ ಹೈಕೋರ್ಟ್ ಮೊರೆ ಹೋಗಿ ಜಾಮೀನು ಪಡೆದು ಅವರು ಬಿಡುಗಡೆಯಾಗಿದ್ದರು. ಇದೀಗ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ. ಡಿ. ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿರುವುದು ಶಿವಕುಮಾರ್ ಪಾಲಿಗೆ ಸಂಕಷ್ಟ ಎದುರಾಗುವಂತಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿ ಯಾಗಬೇಕೆಂಬ ಮಹದಾಸೆ ಹೊಂದಿರುವ ಡಿ.ಕೆ. ಶಿವಕುಮಾರ್ ಪಾಲಿಗೆ ಈ.ಡಿ. ಅಧಿಕಾರಿಗಳು ಸಲ್ಲಿಕೆ ಮಾಡಿರುವ ಚಾರ್ಜ್ ಶೀಟ್ ಬಿಸಿತುಪ್ಪವಾಗಿ ಪರಿಣಮಿಸಿದೆ.

ನ್ಯಾಯಾಲಯದ ಮೇಲೆ ಸಂಪೂರ್ಣ ವಿಶ್ವಾಸವಿದೆ: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಇದೊಂದು ರಾಜಕೀಯ ಷಡ್ಯಂತ್ರ, ಜಾರಿ ನಿರ್ದೇಶನಾಲಯ ನನ್ನ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ ಎಂಬ ಮಾಹಿತಿ ಮಾಧ್ಯಮಗಳ ಮೂಲಕ ತಿಳಿದಿದೆ. ಇದು ನನಗೆ ಹಾಗೂ ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರವಾಗಿದ್ದು, ನನಗೆ ನ್ಯಾಯಾಲಯದ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. 

ಸದಾಶಿವ ನಗರದಲ್ಲಿ ತಮ್ಮ ನಿವಾಸದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ನನ್ನನ್ನು ಬಂಧಿಸಿದ 60 ದಿನಗಳ ಒಳಗಾಗಿ ಆರೋಪ ಪಟ್ಟಿ ಸಲ್ಲಿಸಬೇಕಿತ್ತು. ಅವರು ಸರಿಯಾದ ಸಮಯಕ್ಕೆ ಆರೋಪಪಟ್ಟಿ ಸಲ್ಲಿಸದ ಕಾರಣ ನನಗೆ ಜಾಮೀನು ದೊರೆತಿತ್ತು ಎಂದರು.

ಆದರೆ, ಮೂರು ವರ್ಷಗಳ ನಂತರ ಆರೋಪಪಟ್ಟಿ ಸಲ್ಲಿಸುತ್ತಿದ್ದಾರೆ. ನನಗೆ ಇನ್ನು ಅದರ ಪ್ರತಿ ಸಿಕ್ಕಿಲ್ಲ. ಅವರು ಹೊಸದಾಗಿ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲ. ತೆರಿಗೆ ಇಲಾಖೆಯವರು ಕಾನೂನು ವಿರುದ್ಧವಾಗಿ ಸಾಕಷ್ಟು ಸೃಷ್ಟಿಸಿದ್ದಾರೆ. ಈಗ ಈ ವಿಚಾರ ನನ್ನ ಹಾಗೂ ನ್ಯಾಯಾಲಯದ ಮಧ್ಯೆ ಇದೆ. ನಾನು ಈ ನೆಲದ ಕಾನೂನನ್ನು ಗೌರವಿಸುತ್ತಿದ್ದು, ನ್ಯಾಯಾಂಗ ವ್ಯವಸ್ಥೆ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿದ್ದೇನೆ ಎಂದು ಅವರು ಹೇಳಿದರು.

ಇದೊಂದು ರಾಜಕೀಯ ಷಡ್ಯಂತ್ರದ ಪ್ರಕರಣ. ಅಹ್ಮದ್ ಪಟೇಲ್ ಅವರ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡಿದೆ ಎಂಬ ಕಾರಣಕ್ಕೆ ನನ್ನ ಹಾಗೂ ನನ್ನ ಸ್ನೇಹಿತರ ಮೇಲೆ ದಾಳಿ ಮಾಡಿ, ಅವರ ಹಣವನ್ನೂ ನನ್ನ ಹಣ ಎಂದು ಬರೆದಿದ್ದಾರೆ. ಬಿಜೆಪಿಯವರು ಅವರ ಪಕ್ಷದವರನ್ನೇ ಬಿಡುತ್ತಿಲ್ಲ, ಇನ್ನು ನನ್ನನ್ನು ಬಿಡುತ್ತಾರೆಯೇ? ಅವರ ರಾಜಕೀಯ ಹಾದಿಗೆ ಅಡ್ಡಿಯಾಗಿರುವವರನ್ನು ನಿರ್ಮೂಲನೆ ಮಾಡಲು ಹೊರಟಿದ್ದಾರೆ. ಅವರಿಗೆ ಶರಣಾಗಬೇಕು, ಇಲ್ಲದಿದ್ದರೆ ಅಂತಹವರನ್ನು ಮುಗಿಸಲು ಪ್ರಯತ್ನಿಸುತ್ತಾರೆ ಎಂದು ಶಿವಕುಮಾರ್‌ ತಿಳಿಸಿದರು.

ಬಿಜೆಪಿ ಸರಕಾರ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಿದೆ. ನಾನು ಪ್ರತೀ ವರ್ಷ ನನ್ನ ಆದಾಯ ತೆರಿಗೆ ವಿವರ ಸಲ್ಲಿಸುತ್ತಿದ್ದು, ಈ ಪ್ರಕರಣ ಸಿಬಿಐಗೆ ನೀಡುವ ಪ್ರಕರಣವಲ್ಲ ಎಂದು ಅಡ್ವಕೇಟ್ ಜನರಲ್ ಅವರೇ ಹೇಳಿದ್ದರೂ ಬಿಜೆಪಿ ಸರಕಾರ ನನ್ನ ಪ್ರಕರಣವನ್ನು ಸಿಬಿಐಗೆ ನೀಡಿದೆ. ಅವರು ತಮ್ಮ ಬಳಿ ಇರುವ ಎಲ್ಲ ಅಸ್ತ್ರಗಳನ್ನು ಪ್ರಯೋಗ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ನಾವು ಎಲ್ಲದ್ದಕ್ಕೂ ಸಿದ್ಧವಾಗಿದ್ದೇವೆ: ಬಿಜೆಪಿ ಸರಕಾರದ ಒಳಸಂಚು, ಷಡ್ಯಂತ್ರವನ್ನು ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್‌ನವರು ಸಮರ್ಥವಾಗಿ ಎದುರಿಸಲಿದ್ದಾರೆ. ನಾವು ಎಲ್ಲದ್ದಕ್ಕೂ ಸಿದ್ಧವಾಗಿದ್ದೇವೆ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.

'ನಾವು ಯಾವುದೇ ಕಾರಣಕ್ಕೂ ಅವರಿಗೆ ಹೆದರು ವುದಿಲ್ಲ, ಶರಣಾಗುವುದಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಸುದೀರ್ಘವಾಗಿ ತನಿಖೆ ನಡೆಯುತ್ತಲೇ ಇದೆ. ಇನ್ನೂ ನಡೆಯಲಿ, ಅದನ್ನು ಎದುರಿಸಲು ನಾವು ಮಾನಸಿಕವಾಗಿ, ದೈಹಿಕವಾಗಿ ಸಮರ್ಥವಾಗಿದ್ದೇವೆ ಎಂದು ಅವರು ಹೇಳಿದರು.

ವಿಧಾನಸಭೆಯಲ್ಲಿ ಹಣ ವರ್ಗಾವಣೆ ವಿಚಾರ ಪ್ರಸ್ತಾಪವಾಗಿದೆ. ಶಾಸಕರ ಖರೀದಿ ಪ್ರಕರಣ ನಡೆದಿದೆ. ಆದರೂ ಬಿಜೆಪಿಯವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿ ಹುದ್ದೆ ಮಾರಾಟಕ್ಕಿದೆ ಎಂದಿದ್ದಾರೆ. ಆದರೂ ಈ ಬಗ್ಗೆ ತನಿಖೆ ಇಲ್ಲ. ಇದೆಲ್ಲವೂ ನಿಮಗೆ ತಿಳಿದಿದೆ. ಈ ವಿಚಾರವಾಗಿ ಸಿಬಿಐ, ಈ.ಡಿ. ಯಾಕೆ ಪಾರದರ್ಶಕವಾಗಿ ತನಿಖೆ ಮಾಡಿಲ್ಲ ಎಂದು ಸುರೇಶ್ ಪ್ರಶ್ನಿಸಿದರು.

Read These Next

ಶಾಲಾ ಪಠ್ಯ ಪರಿಷ್ಕರಣೆ ವಿವಾದ; ಮುಖ್ಯಮಂತ್ರಿ ಮಧ್ಯಪ್ರವೇಶಕ್ಕೆ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದ ಮನವಿ

ಪಠ್ಯಪುಸ್ತಕ ಪರಿಷ್ಕರಣೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ವಿವಾದ ಉಂಟಾಗಿ ಕೆಟ್ಟ ಪರಿಣಾಮ ಬೀರುತ್ತಿದೆ. ಹೀಗಾಗಿ ಸಿಎಂ ಕೂಡಲೇ ...

ಶಾಲಾ ಪಠ್ಯ ಪರಿಷ್ಕರಣೆ ವಿವಾದ; ತಪ್ಲೊಪ್ಪಿಕೊಂಡ ಶಿಕ್ಷಣ ಇಲಾಖೆ; ತಿದ್ದೋಲೆ ಹೊರಡಿಸಲು ರಾಜ್ಯ ಸರಕಾರದ ಆದೇಶ

ಪಠ್ಯಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ಶಿಕ್ಷಣವನ್ನು ಕೇಸರೀಕರಣ ಮಾಡಲಾಗುತ್ತಿದೆ ಎಂದು ರಾಜ್ಯದಲ್ಲಿ ವಿವಾದವು ...

ದಾಖಲೆ ನೆಪದಲ್ಲಿ ವಾಹನಗಳನ್ನು ತಡೆಯಬೇಡಿ, ತೊಂದರೆ ಕೊಡಬೇಡಿ; ಡಿಜಿಪಿ ಪ್ರವೀಣ್ ಸೂದ್

ವಾಹನ ಸವಾರರನ್ನು ದಾಖಲೆ ಪರಿಶೀಲನೆ ನೆಪದಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಿ ಸುಗಮ ಸಂಚಾರ ವ್ಯವಸ್ಥೆಗೆ ತೊಂದರೆ ಉಂಟು ಮಾಡಬಾರದೆಂದು ...

ಕಾರ್ಮಿಕರ ಬದುಕು ಹಸನುಗೊಳಿಸಲು ಅನೇಕ ಕಾರ್ಯಕ್ರಮಗಳು : ಸಚಿವ ಶಿವರಾಮ್ ಹೆಬ್ಬಾರ್

ಶಿವಮೊಗ್ಗ : ವಿವಿಧ ಹೊಸ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಕಾರ್ಮಿಕರ ಜೀವನದಲ್ಲಿ ವಿಶ್ವಾಸ ತುಂಬುವ ಕೆಲಸವನ್ನು ಕಾರ್ಮಿಕ ಇಲಾಖೆ ...

ಕಾರ್ಮಿಕರ ವಿಸ್ತೃತ ವಸತಿ ಸಮುಚ್ಚಯ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ : ಅರಬೈಲು ಶಿವರಾಮ್ ಹೆಬ್ಬಾರ್

ಶಿವಮೊಗ್ಗ : ಶಿವಮೊಗ್ಗ ಸಮೀಪದ ಸಿದ್ಲೀಪುರ ಗ್ರಾಮದಲ್ಲಿ 10 ಎಕರೆ ಜಾಗದಲ್ಲಿ 10ಕೋಟಿ ರೂ.ಗಳ ವೆಚ್ಚದಲ್ಲಿ 500ಮಂದಿ ಕಟ್ಟಡ ಮತ್ತು ಇತರೆ ...