ಬೆಂಗಳೂರು: ಪೊಲೀಸರ ವಶದಲ್ಲಿದ್ದ ಆಫ್ರಿಕನ್ ಪ್ರಜೆ ಸಾವು; ಠಾಣೆ ಮುಂದೆ ಪ್ರತಿಭಟನೆ, ಪೊಲೀಸರಿಂದ ಲಾಠಿಚಾರ್ಜ್

Source: VB News | By S O News | Published on 3rd August 2021, 5:29 PM | State News |

ಬೆಂಗಳೂರು: ಪೊಲೀಸ್ ವಶದಲ್ಲಿದ್ದ ಆಫ್ರಿಕನ್ ಪ್ರಜೆ ಸಾವನ್ನಪ್ಪಿದ ಘಟನೆ ಖಂಡಿಸಿ ಜೆ.ಸಿ.ನಗರ ಪೊಲೀಸ್ ಠಾಣೆ ಎದುರು ಕೆಲ ಆಫ್ರಿಕಾ ಪ್ರಜೆಗಳು ಸೋಮವಾರ ಪ್ರತಿಭಟನೆ ನಡೆಸಿದರು. ಇದೇ ವೇಳೆ ಪೊಲೀಸರ ಹಾಗೂ ಆಫ್ರಿಕನ್ ಪ್ರಜೆಗಳ ನಡುವೆ ವಾಗ್ವಾದ ನಡೆದಿದ್ದು, ಕೆಲ ಆಫ್ರಿಕನ್ ಪ್ರಜೆಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಕಾರಣ ಲಾಠಿಚಾರ್ಜ್ ನಡೆಸಿ, ಮುಂಜಾಗ್ರತಾ ಕ್ರಮವಾಗಿ ಜೆ.ಸಿ.ನಗರ ಪೊಲೀಸ್ ಠಾಣೆ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಡ್ರಗ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿ ಜೆ.ಸಿ.ನಗರ ಪೊಲೀಸರ ವಶದಲ್ಲಿದ್ದ ಆಫ್ರಿಕನ್ ಪ್ರಜೆ ಜಾನ್ (27) ಸಾವನ್ನಪ್ಪಿದ್ದಾನೆ. ಆರೋಗ್ಯದಲ್ಲಿ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರ ವಶದಲ್ಲಿದ್ದ ವಿದೇಶಿ ಪ್ರಜೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಆಫ್ರಿಕಾ ಪ್ರಜೆ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ 5 ಗ್ರಾಂ ಎಂಡಿಎಂಎ ಪತ್ತೆಯಾಗಿತ್ತು. ಹೀಗಾಗಿ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಎದೆನೋವು ಮತ್ತು ಶೀತ ಇದೆ ಎಂದು ಆಫ್ರಿಕಾ ಪ್ರಜೆ ಪೊಲೀಸರಿಗೆ ತಿಳಿಸಿದ್ದ. ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಪೊಲೀಸರು ಚಿಕಿತ್ಸೆ ಕೊಡಿಸಿದ್ದರು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವನ್ನಪ್ಪಿದ್ದು, ಆತನ ಆಫ್ರಿಕಾ ಮೂಲದ ಗುರುತು ಈವರೆಗೂ ಪತ್ತೆಯಾ ಗಿಲ್ಲ. ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ನಂತರವಷ್ಟೇ ತಿಳಿದುಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಆಫ್ರಿಕನ್ ಪ್ರಜೆಗಳು ಪೊಲೀಸರ ವಿರುದ್ಧ ಪ್ರತಿಭಟಿಸಿದ್ದು, ಮೃತ ಆಫ್ರಿಕನ್ ಪ್ರಜೆಯನ್ನು ಬಂಧಿಸಿದ್ದ ಪೊಲೀಸರು ಸ್ಥಳಕ್ಕೆ ಬರುವಂತೆ ಆಗ್ರಹಿಸಿದರು.

ಸಿಐಡಿಯಿಂದ ತನಿಖೆ: ಆಫ್ರಿಕನ್ ಪ್ರಜೆ ಸಾವು ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿದೇಶಿ ಪ್ರಜೆಗಳ ಪ್ರತಿಭಟನೆ ವೇಳೆ ಸ್ಥಳಕ್ಕೆ ಬಂದ ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ, ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು.

ಪ್ರಧಾನಿ ಮೋದಿ ಗಮನಿಸಬೇಕು: ಪ್ರಧಾನಿ ನರೇಂದ್ರ ಮೋದಿ ಅವರು ಜೆ.ಸಿ.ನಗರ ಪೊಲೀಸರ ದೌರ್ಜನ್ಯವನ್ನು ಗಮನಿಸಬೇಕು. ಅಲ್ಲದೆ, ನಾವು ಹೂಮನ್ ರೈಟ್ಸ್ ಯುನೈಟೆಡ್ ನೇಷನ್ಸ್, ನಮ್ಮ ಎಂಬೆಸ್ಸಿಯಲ್ಲೂ ದೂರು ನೀಡುತ್ತೇವೆ ಎಂದು ವಿದೇಶಿ ಪ್ರಜೆಗಳು ಪ್ರತಿಭಟನೆ ವೇಳೆ ಹೇಳಿದ್ದಾರೆ.

ನಗರ ಪೊಲೀಸ್ ಆಯುಕ್ತರ ಹೇಳಿಕೆ: ಆ.1ರ ರಾತ್ರಿ 10:30ಕ್ಕೆ ಡ್ರಗ್ ಪೆಡ್ಲರ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಪಿಎಸ್ಐ ರಘುಪತಿ ಮಾಹಿತಿಯನ್ನು ಆಧರಿಸಿ ಆರೋಪಿಯನ್ನು ರಾತ್ರಿ 12:30ಕ್ಕೆ ವಶಕ್ಕೆ ಪಡೆದಿದ್ದು, ಬಂಧಿಸುವ ಸಂದರ್ಭದಲ್ಲಿ ಪರಾರಿಯಾಗಲು ಪ್ರಯತ್ನ ಮಾಡಿದ್ದ ಎನ್ನಲಾಗಿದೆ.

ಪಿಎಸ್ಐ ಸಿಬ್ಬಂದಿಯೊಂದಿಗೆ ಬಂಧಿಸಿದ ತಡರಾತ್ರಿ 2:15ಕ್ಕೆ ಡ್ರಗ್ಸ್ ಸಮೇತ ಆತನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಸ್ವಲ್ಪ ಹೊತ್ತಿನ ಬಳಿಕ ಆರೋಪಿಗೆ ಎದೆ ನೋವು ಪ್ರಾರಂಭವಾಯಿತು. ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ 6:45ರ ಹೊತ್ತಿಗೆ ಆತನಿಗೆ ಹೃದಯಾಘಾತ ಆಗಿ ಸಾವನ್ನಪ್ಪಿದ್ದಾನೆ. ಪೊಲೀಸರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

Read These Next

ತಂಬಾಕು ದುಷ್ಪರಿಣಾಮ ಮತ್ತು ಕೋಟ್ಪಾ ಕಾಯ್ದೆ ಕುರಿತು ತರಬೇತಿ ಕಾರ್ಯಕ್ರಮ. ಮಕ್ಕಳನ್ನು ಸರಿದಾರಿಗೆ ತರುವಲ್ಲಿ ನಮ್ಮೆಲ್ಲರ ಜವಾಬ್ದಾರಿ ಇದೆ : ಎಸ್‍ಪಿ

ಶಿವಮೊಗ್ಗ : ಪ್ರಸ್ತುತ ದಿನಮಾನಗಳಲ್ಲಿ ಹದಿ ವಯಸ್ಸಿನ ಮಕ್ಕಳೇ ತಂಬಾಕು ಉತ್ಪನ್ನಗಳ ಚಟಕ್ಕೆ ಒಳಗಾಗುತ್ತಿದ್ದು, ಮಕ್ಕಳನ್ನು ...