ಬೆಂಗಳೂರು: ಕ್ರಿಪ್ಟೋ ಕರೆನ್ಸಿ ವಂಚನೆ ಪ್ರಕರಣದಲ್ಲಿ ಆರೋಪಿಯ ಬಂಧನ
ಬೆಂಗಳೂರು: ಕ್ರಿಪ್ಟೋ ಕರೆನ್ಸಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖಾಧಿಕಾರಿಗಳು 26 ವರ್ಷದ ಶುಭಾಂಗ್ ಜೈನ್ ಎಂಬಾತನನ್ನು ಮುಂಬೈನಲ್ಲಿ ಬಂಧಿಸಿದ್ದಾರೆ.
ಮೂಲಗಳ ಪ್ರಕಾರ, 2022ರ ಏಪ್ರಿಲ್‌ನಲ್ಲಿ ಬೆಂಗಳೂರಿನ ಸೈಫರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಜಿ ನೌಕರ, ಕಂಪನಿಯ ಕ್ರಿಪ್ಟೋ ಪಾಸ್‌ವರ್ಡ್ ಬದಲಾಯಿಸಿ, ಲಕ್ಷಾಂತರ ರೂ.ಮೌಲ್ಯದ ಕ್ರಿಪ್ಟೋ ಕರೆನ್ಸಿಯನ್ನು ತಾನು ಮತ್ತು ತನ್ನ ಸ್ನೇಹಿತರ ಖಾತೆಗಳಿಗೆ ವರ್ಗಾಯಿಸಿದ್ದಾನೆ.
ಈ ಬಗ್ಗೆ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಮೊ.ಸಂ.48/2022 ಅಡಿಯಲ್ಲಿ ಐ.ಟಿ ಕಾಯ್ದೆಯ ವಿವಿಧ ವಿಧಿಗಳಡಿ ಪ್ರಕರಣ ದಾಖಲಿಸಲಾಗಿದ್ದು, ಬಳಿಕ ಸಿಐಡಿ ಘಟಕದ ಸೈಬರ್ ಕ್ರೈಂ ವಿಭಾಗಕ್ಕೆ ತನಿಖೆ ಹಸ್ತಾಂತರಿಸಲಾಗಿದೆ. ತನಿಖೆಯಲ್ಲಿ, ಕಂಪನಿಯ ಕ್ರಿಪ್ಟೋ ವಾಲೆಟ್‌ನಿಂದ ಹಣವನ್ನು ತನ್ನ ಹಾಗೂ ಸ್ನೇಹಿತರ ಖಾತೆಗೆ ವರ್ಗಾಯಿಸಿ, ಅದನ್ನು ನಗದಾಗಿ ಪರಿವರ್ತಿಸಿರುವುದು ಪತ್ತೆಯಾಗಿದೆ.
ಆರೋಪಿತನ ಬಂಧನದ ವೇಳೆ, 2 ಮೊಬೈಲ್‌ಗಳು ಹಾಗೂ 2 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.
ಈ ಕಾರ್ಯಾಚರಣೆಯಲ್ಲಿ ಶಿವಪ್ರಸಾದ್ ಮತ್ತು ಹೆಚ್.ಸಿ. ವಿಶ್ವನಾಥ್ ಪ್ರಮುಖ ಪಾತ್ರವಹಿಸಿದ್ದು, ರಾಜ್ಯ ಪೊಲೀಸ್ ಕಚೇರಿಯ ಎಸ್‌ಪಿ ಮೂರ್ತಿ ಈ ಕುರಿತು ಮಾಹಿತಿ ನೀಡಿದ್ದಾರೆ.