ಅಬುಧಾಬಿ:ಇಶಾರ ಸಹಭಾಗಿತ್ವದಲ್ಲಿ ಕೆಸಿಎಫ್ ಇಫ್ತಾರ್

Source: yahya abbas | By Arshad Koppa | Published on 14th June 2017, 6:57 AM | Gulf News | Guest Editorial |

ಅಬುಧಾಬಿ  : ಮಧ್ಯ ಪ್ರಾಚ್ಯದಲ್ಲಿರುವ ಕನ್ನಡಿಗರ ಅಚ್ಚುಮೆಚ್ಚಿನ, ಏಕೈಕ ನೋಂದಾಯಿತ ಕನ್ನಡ  ಪತ್ರಿಕೆ ಗಲ್ಫ್ ಇಶಾರ ಮಾಸಿಕದ ವತಿಯಿಂದ ಕೆಸಿಎಫ್ ಸಹಭಾಗಿತ್ವದಲ್ಲಿ ಇಫ್ತಾರ್ ಕೂಟವು ಕಾರ್ನಿಶ್ ಅಬುದಾಬಿ ಪಂಚತಾರಾ ಹೋಟೆಲ್ ನಲ್ಲಿ ಇತ್ತೀಚೆಗೆ ಜರುಗಿತು. ಗಲ್ಫ್ ನಲ್ಲಿ ಮೂರು ಸಾವಿರಕ್ಕೂ ಮಿಕ್ಕಿದ ಚಂದಾದಾರರನ್ನು ಹೊಂದಿರುವ ಇಶಾರ ಅನಿವಾಸಿ ಕನ್ನಡಿಗರ ನಾಡಿಮಿಡಿತಕ್ಕೆ ಧ್ವನಿಯಾಗಿ, ದಿಕ್ಸೂಚಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷ ರಾದ  ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ ಅತಿಥಿಗಳನ್ನು ಸ್ವಾಗತಿಸಿ ಇಶಾರ ಮಾಸಿಕ ಮತ್ತು ಇಹ್ಸಾನ್ ನ ಕುರಿತಾಗಿ ಬೆಳಕು ಚೆಲ್ಲಿದರು. ಇಹ್ಸಾನ್ 2020 ನ ಗುರಿಯನ್ನು ಅನಾವರಣ ಮಾಡಲಾಯಿತು. ಇಹ್ಸಾನ್ ನ ದ್ಯೇಯೋದ್ದೇಶಗಳ ಕುರಿತಾಗಿ ಬೆಳಕು ಚೆಲ್ಲುವ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು

ಏನಿದು ಇಹ್ಸಾನ್ ?

ಅನಿವಾಸಿ ಕನ್ನಡಿಗರ ಒಡನಾಡಿಯಾಗಿರುವ ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಬುಧಾಬಿ ಘಟಕವು ಕಳೆದ ಐದು ವರ್ಷ ಗಳಿಂದ ತಮ್ಮ  ನಾಡಿನ ಶೈಕ್ಷಣಿಕ ಮತ್ತು ಸಾಮಾಜಿಕ ಶ್ರೇಯೋಭಿವೃದ್ಧಿಗೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಾ  ಬಂದಿದೆ. ಇದೀಗ ಕರ್ನಾಟಕ ಕಲ್ಚರಲ್ ಫೌಂಡೇಶನ್ ತನ್ನ ಮಾತೃ ಸಂಘಟನೆಯಾದ ಎಸ್ಎಸ್ಎಫ್ ಗೆ  ಹೆಗಲುಕೊಟ್ಟು ಮುನ್ನಡೆಸುತ್ತಿರುವ ಮಹತ್ವಾಕಾಂಕ್ಷಿ ಯೋಜನೆಯೇ ಇಹ್ಸಾನ್. 

ಇಹ್ಸಾನ್  ನೀಲನಕ್ಷೆ ಯ ಬಗ್ಗೆ ಗೊತ್ತಾಗಬೇಕಾದರೆ, ನೀವು ಖಂಡಿತವಾಗಿಯೂ ಉತ್ತರ ಕರ್ನಾಟಕದ ಮುಸ್ಲಿಮರ ಸ್ಥಿತಿ ಗತಿಗಳ ಬಗ್ಗೆ  ಅರಿತುಕೊಳ್ಳುವುದು ಅತ್ಯಗತ್ಯ. ಕರ್ನಾಟಕದ ಮಧ್ಯ ಹಾಗು ಉತ್ತರ ಜಿಲ್ಲೆಗಳ ನೂರಾರು ಗ್ರಾಮಗಳಲ್ಲಿನ ಧಾರ್ಮಿಕ ಮತ್ತು ಶೈಕ್ಷಣಿಕ ಸ್ಥಿತಿ ಅತ್ಯಂತ ಶೋಚನೀಯ. ಇಲ್ಲಿನ ಮುಸ್ಲಿಂ ಬಾಹುಳ್ಯ ಪ್ರದೇಶಗಳು  ದಶಕಗಳಿಂದ  ಸರಕಾರಗಳ ಅವಜ್ಞೆಗೆ  ಒಳಗಾಗಿದೆ ಎಂದರೆ ಅತಿಶಯೋಕ್ತಿಯೂ ಕ್ಲಿಷೆಯೂ ಆಗದು. Social Scientist ಗಳ ಪ್ರಕಾರ ವೈದ್ಯರ ತಪ್ಪುಗಳು ಹೂಳಲ್ಪಡುತ್ತವೆ; ವಕೀಲರ ತಪ್ಪುಗಳು ನೇಣಿಗೇರಿಸಲ್ಪಡುತ್ತವೆ ಆದರೆ ಶಿಕ್ಷಣ ದ ತಪ್ಪುಗಳು ಒಂದೂ ಇಡೀ ಜನಾಂಗವನ್ನು ಅಭಿವೃದ್ಧಿಯ ಬೆಳಕನ್ನೇ ಕಾಣದಂತೆ ಅಂಧಕಾರಕ್ಕೆ ನೂಕಿ ಬಿಡುತ್ತದೆ. ಇಲ್ಲಿ ಆಗಿರುವುದೇ ಅದೇ. ಪ್ರಾಥಮಿಕ ಶಿಕ್ಷಣ, ಧಾರ್ಮಿಕ, ಶಿಕ್ಷಣ ದ ಕೊರತೆ ಜನರ ಆರ್ಥಿಕ ಪರಿಸ್ಥಿತಿ ಇಲ್ಲಿಯ ಜನರನ್ನು ಅನಾಚಾರ ಅಧಾರ್ಮಿಕತೆಯ ಕೂಪದಲ್ಲಿ ಕೊಳೆಯುವಂತೆ ಮಾಡಿದೆ. ಇಲ್ಲಿ ಜೀವಿಸುವ ಬಹುಪಾಲು ಮುಸ್ಲಿಮರಿಗೆ  ಧರ್ಮದ ಬಾಲ ಪಾಠ ಕೂಡಾ ತಿಳಿಯದೆ ನಮಾಜ್, ವ್ರತಾನುಷ್ಠಾನ ಕರ್ಮಗಳ ಪರಿಜ್ಞಾನ ವಿಲ್ಲದೆ, ಮದ್ಯಪಾನ, ಶಿರ್ಕ್, ಕಂದಾಚಾರಗಳಿಗೆ ಬಲಿಪಶುಗಳಾಗಿದ್ದಾರೆ. 

ಇಲ್ಲಿ ಬೆಳೆಯುವ ಪುಟಾಣಿ ಮಕ್ಕಳು ಪ್ರತಿಭಾವಂತರಾಗಿದ್ದರೂ ಹೆಚ್ಚಿನವರು ಆಡು, ಕುರಿ ಮೇಯಿಸುವಿಕೆ ಅಥವಾ ಹೊಲ ಉಳುಮೆ ಯಲ್ಲಿ ತಲ್ಲೀನರಾಗಿ ಅಕ್ಷರ ಜ್ಞಾನದಿಂದ ವಂಚಿತರಾಗುತ್ತಿದ್ದಾರೆ. ಮದ್ರಸ ಸಂಸ್ಥೆಗಳು ಯಾವುದೂ ಇಲ್ಲದಿರುವುದರಿಂದಲೇ  ನವ ಜನಾಂಗ ಕೂಡ ಇರುಳಿನ ಬೇಗೆ ಯಿಂದ ಹೊರಬರಲು ಆಗುತ್ತಿಲ್ಲ. ಈ ಶೋಚನೀಯ ಸ್ಥಿತಿ ಕಂಡು ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಕರ್ನಾಟಕ, ಕೇರಳಗಳ ದರ್ಸ್, ದಅವಾ ಕಾಲೇಜುಗಳಲ್ಲಿ ಕಲಿಯುತ್ತಿರುವ ಮುತಅಲ್ಲಿಮರನ್ನು ಸೇರಿಸಿ ಭೋದನೆಗಾಗಿ  ಇಹ್ಸಾನ್ ಎನ್ನುವ ಮಾನವ ಸೇವೆಯ ಮತ್ತು ಶೈಕ್ಷಣಿಕ ಜಾಗೃತಿಯ ತಂಡವೊಂದಕ್ಕೆ ರೂಪು ಕೊಟ್ಟು ಇದೀಗ ಒಂಬತ್ತು ವರ್ಷ ತುಂಬಿತು. ರಮಳಾನ್ ತಿಂಗಳಿನಲ್ಲಿ ನೂರೈವತಕ್ಕೂ ಮಿಕ್ಕ ದಾಯಿಗಳನ್ನು ಸೇರಿಸಿ ಅವರಿಗೆ ತರಬೇತಿ ನೀಡಿ  ಬಳ್ಳಾರಿ, ದಾವಣಗೆರೆ, ಹಾವೇರಿ, ಗದಗ, ಕೊಪ್ಪಳ, ಚಿತ್ರದುರ್ಗ, ರಾಯಚೂರು, ಬಾಗಲಕೋಟೆ, ಧಾರವಾಡ ಜಿಲ್ಲೆ ಗಳ ಅತ್ಯಂತ ಹಿಂದುಳಿದ ನೂರೈವತ್ತರಷ್ಟು ಹಳ್ಳಿಗಳಿಗೆ ಕಳುಹಿಸಲಾಗುತ್ತದೆ. ವಯಸ್ಕರಿಗೆ ಮತ್ತು ಎಳೆಯರಿಗೆ ಮದ್ರಸಾ ಆರಂಭಿಸಿ ನಮಾಜ್ ವೃತ ಗಳಂತಹ ಕಡ್ಡಾಯ ಕರ್ಮಗಳ ಬಗ್ಗೆ ಅರಿವು ಮತ್ತು ಪ್ರಜ್ಞೆ ಬೆಳೆಸಲಾಗುತ್ತದೆ. ಮದ್ಯಪಾನ ಮತ್ತು ಮೂಢನಂಬಿಕೆ ಗಳ ಬಗ್ಗೆ ತೀವ್ರವಾದ ಜಾಗೃತಿ ಮೂಡಿಸಲಾಗುತ್ತಿದೆ. ಕಳೆದ ಒಂಬತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಶೈಕ್ಷಣಿಕ ಧಾರ್ಮಿಕ ಮೌನ ಕ್ರಾಂತಿ ಇಲ್ಲಿನ ಗ್ರಾಮೀಣರ ಬದುಕನ್ನು ತಕ್ಕ ಮಟ್ಟಿಗೆ ಹಸನಾಗಿಸಿದೆ. ಇಲ್ಲಿನ ಜನರ ಬೇಡಿಕೆಗೆ ಅನುಸಾರವಾಗಿ ರಮಳಾನ್ ನಲ್ಲಿ ನೂರಾರು ದಾಯಿಗಳು ಹೊತ್ತಿಸಿದ ಜ್ಞಾನದ ಕಂದೀಲು ಕೆಡದಿರಲು ತಂಡದೊಳಗಿನ ವಿದ್ಯಾರ್ಜನೆ ಪೂರ್ತಿ ಮಾಡಿದ ಉಲಮಾಗಳನ್ನು ಖಾಯಂ ಭೋದಕರನ್ನಾಗಿ ನಿಲ್ಲಿಸಲಾಗುತ್ತದೆ. ಕಳೆದ ೯ ವರ್ಷಗಳಿಂದ ಹದಿನೈದು ಮಂದಿ ಖಾಯಂ ಭೋದಕರು ವಿವಿಧ ಕೇಂದ್ರಗಳಲ್ಲಿ ನಿಂತು ಇಪ್ಪತ್ತಕ್ಕೂ ಮಿಕ್ಕ ಮದ್ರಸಗಳನ್ನು ನಡೆಸುವುದರ ಜೊತೆಯಲ್ಲಿ ಯುವಕರಲ್ಲಿ ಸಾಂಘಿಕ ಆಂದೋಲನವನ್ನು ಸೃಷ್ಟಿಸುವುದರಲ್ಲಿ ಯಶಸ್ಸು ಕಂಡಿದ್ದಾರೆ. 

ಇದೀಗ ಹರಿಹರದಲ್ಲಿ ಸುಮಾರು ೫೦೦ ರಷ್ಟು ವಿದ್ಯಾರ್ಥಿಗಳು ಮದ್ರಸದಲ್ಲಿ ಕಲಿಯುತ್ತಿದ್ದು, ಈ ವರ್ಷದಿಂದ ೪೦ ರಷ್ಟು ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಧಾರ್ಮಿಕ ಮತ್ತು ಲುಕಿಕ  ಶಿಕ್ಷಣ ನೀಡಿ ಬೆಳೆಸುವ ಯೋಜನೆ ಆರಂಭವಾಗಿದೆ. ಹುಬ್ಬಳ್ಳಿ ಯಲ್ಲಿ ಇಹ್ಸಾನ್ ಸೆಂಟರ್ ತೆರೆದು ಮಸೀದಿ ನಿರ್ಮಾಣ ಮಾಡಿ ಮದ್ರಸಾಗಳನ್ನು ತೆರೆಯುವುದು. ಬಳ್ಳಾರಿಯಲ್ಲಿ ಸುಮಾರು ೨ ಎಕ್ರೆ ಜಾಗದಲ್ಲಿ ಸಮನ್ವಯ ಶಿಕ್ಷಣ, ಇಂಗ್ಲಿಷ್ ಮಾಧ್ಯಮ ಶಾಲೆ ತೆರೆಯುವುದು. ಚಿತ್ರದುರ್ಗದಲ್ಲಿ ಸುಮಾರು ೫ ಎಕ್ರೆಯ ಕ್ಯಾಂಪಸ್ ನಲ್ಲಿ ಹಿಫ್ ಳ್ ಕಾಲೇಜು, ದಾವಾ ಕಾಲೇಜು, ಶರಿಯತ್ ಕಾಲೇಜು, ಮಹಿಳಾ ಕಾಲೇಜು, ಕೌಶಲ್ಯಾ ಭಿವೃದ್ಧಿ ಕೇಂದ್ರ, ತಾಂತ್ರಿಕ ಕಾಲೇಜು ಮುಂತಾದ ವಿನೂತನ ತೆರೆಯಲಾಗುತ್ತಿದೆ. ಅಲ್ಲದೆ ಇಲ್ಲಿ ಎಸಿಎಸೆಲ್ಸಿ ದಾಟಿದ ೫೦ ರಷ್ಟು ವಿದ್ಯಾರ್ಥಿಗಳು ಬೋರ್ಡಿಂಗ್ ಶಿಕ್ಷಣ ಪಡೆಯುತ್ತಿದ್ದಾರೆ.

ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಬುಧಾಬಿ ತಂಡವು ಇತ್ತೀಚಿಗೆ ಉತ್ತರ ಕರ್ನಾಟಕದ ಹರಿಹರ, ಗಂಗನ ಹಳ್ಳಿಗೆ ಭೇಟಿ ನೀಡಿ ಅಲ್ಲಿ ಇಹ್ಸಾನ್ ಸಾಮಾಜಿಕ, ಧಾರ್ಮಿಕ , ಶೈಕ್ಷಣಿಕ ರಂಗಗಳಲ್ಲಿ ಅಭ್ಯದಯಕ್ಕಾಗಿ ನಿರಂತರ ಕ್ರಿಯಾಶೀಲವಾಗಿ ನಡೆಸಿಕೊಂಡು ಬರುತ್ತಿರುವ ಚಟುವಟಿಕೆಗಳನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದೆ. ಈ ಯೋಜನೆಗಾಗಿ ತನು ಮನ ಧನ ಗಳಿಂದ ಸಹಕರಿಸುವ ಕೈಂಕರ್ಯವನ್ನು ಕೈಗೆತ್ತಿಕೊಂಡಿದೆ.

ಹಲವಾರು ಗಣ್ಯ ಅಥಿತಿಗಳು ಇಫ್ತಾರ್ ನಲ್ಲಿ ಪಾಲ್ಗೊಂಡು, ಕೆಸಿಎಫ್ ನ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.  ಉತ್ತರ ಕರ್ನಾಟಕದ ಶೈಕ್ಷಣಿಕ ಕ್ಷೇತ್ರದಲ್ಲಿಸಂಚಲನ ಮೂಡಿಸಿರುವ ಇಹ್ಸಾನ್ ನ ಮುನ್ನಡೆ ಮತ್ತು ಯಶಸ್ಸಿಗಾಗಿ ಎಲ್ಲರೂ ಶುಭಹಾರೈಸಿದರು. ಅಸಯ್ಯದ್ ಜಲಾಲುದ್ದೀನ್ ಮಲ್ಜಅ್  ತಂಙಳ್ ಉಜಿರೆ ಆರಂಭದಲ್ಲಿ ಪ್ರಾರ್ಥನೆ ನಡೆಸಿದರು. ಹಫೀಳ್ ಸಅದಿ ಹನೀಫಿ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದರು.  ಕೆ ಸಿ ಎಫ್ ಅಂತಾರಾಷ್ಟ್ರೀಯ ಸಮಿತಿಯ ಹಾಜಿ ಶೇಖ್ ಬಾವ, ಪಿಎಂಹೆಚ್ ಈಶ್ವರಮಂಗಲ, ಅಬು ಧಾಬಿ ಕೆಸಿಎಫ್ ಅಧ್ಯಕ್ಷ ಹಸೈನಾರ್ ಅಮಾನಿ. ಪ್ರಧಾನ ಕಾರ್ಯದರ್ಶಿ ಹಕೀಮ್ ತುರ್ಕಳಿಕೆ, ಹಸನ್ ಹಾಜಿ ಬಾಳೆಹಣ್ಣೂರು, ಕಬೀರ್ ಬಾಯಂಬಾಡಿ  ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ವರದಿ: ಯಹ್ಯಾ ಅಬ್ಬಾಸ್, ಅಬುಧಾಬಿ.

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...