ಹೊಸದಿಲ್ಲಿ: ಸ್ಟ್ಯಾನ್‌ಸ್ವಾಮಿ ವಿಧಿವಶ ಜಾಮೀನಿಗಾಗಿ ಕಾಯುತ್ತಲೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಮಾನವ ಹಕ್ಕು ಹೋರಾಟಗಾರ

Source: VB | By S O News | Published on 6th July 2021, 1:42 PM | National News |

ಹೊಸದಿಲ್ಲಿ: ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಕಳೆದ ವರ್ಷ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ಬಂಧಿತರಾಗಿದ್ದ ಕ್ಕ್ರೈಸ್ತ ಧರ್ಮಗುರು ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಸ್ಟ್ಯಾನ್‌ಸ್ವಾಮಿ (84) ಅವರು ಅನಾರೋಗ್ಯದ ನೆಲೆಯಲ್ಲಿ ಜಾಮೀನಿಗಾಗಿ ಕಾನೂನು ಹೋರಾಟದ ನಡುವೆಯೇ ಸೋಮವಾರ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರವಿವಾರ ಆರೋಗ್ಯ ಸ್ಥಿತಿ ಹದಗೆಟ್ಟ ಬಳಿಕ ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು.

ಮೇ 28ರ ನ್ಯಾಯಾಲಯದ ಆದೇಶದಂತೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮಿಯವರನ್ನು ಚಿಕಿತ್ಸೆಗಾಗಿ ಮುಂಬೈನ ಹೋಲಿ ಫ್ಯಾಮಿಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸುವುದನ್ನು ನ್ಯಾಯಾಲಯದಲ್ಲಿ ವಿರೋಧಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಸರಕಾರಿ ಜೆಜೆ ಆಸ್ಪತ್ರೆಗೆ ದಾಖಲಿಸುವಂತೆ ಶಿಫಾರಸು ಮಾಡಿತ್ತು. ಅಲ್ಲಿ ಸೇರುವ ಬದಲು ತಾನು ಜೈಲಿನಲ್ಲಿಯೇ ಸಾಯುತ್ತೇನೆ ಎಂದು ಸ್ವಾಮಿ ಆಗ ಹೇಳಿದ್ದರು.

ಕಳೆದ ವರ್ಷದ ಅಕ್ಟೋಬರ್‌ನಿಂದ ನವಿಮುಂಬೈನ ತಲೋಜಾ ಜೈಲಿನಲ್ಲಿ ಬಂಧನದಲ್ಲಿದ್ದ

ಫಾದರ್ ಸ್ಟ್ಯಾನ್‌ಸ್ವಾಮಿಯ ನಿಧನಕ್ಕಾಗಿ ತೀವ್ರವಾಗಿ ಶೋಕಿಸುತ್ತೇನೆ. ನ್ಯಾಯ ಮತ್ತು ಮಾನವೀಯ ದಯೆ ಅವರಿಗೆ ಸಿಗಬೇಕಿತ್ತು.

ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ

ಸ್ವಾಮಿ ತನ್ನ ಬದುಕಿನ ಕೊನೆಯ ಕೆಲವು ತಿಂಗಳುಗಳನ್ನು ಅತ್ಯಂತ ಸಣ್ಣ ಅಗತ್ಯಕ್ಕಾಗಿಯೂ ಕಾನೂನು ಹೋರಾಟ ನಡೆಸುತ್ತಲೇ ಕಳೆದಿದ್ದರು. ಪಾರ್ಕಿನ್ಸನ್ಸ್ ರೋಗದಿಂದ ಬಳಲುತ್ತಿದ್ದ ಅವರಿಗೆ ಪಾನೀಯ ಸೇವನೆಗಾಗಿ ಅಗತ್ಯವಿದ್ದಸ್ಟ್ರಾ ಮತ್ತು ಸಿಸ್ಟರ್ ನೀಡಲೂ ಜೈಲಿನ ಅಧಿಕಾರಿಗಳು ನಿರಾಕರಿಸಿದ್ದರು. ಅದಕ್ಕೂ ಸ್ವಾಮಿ ನ್ಯಾಯಾಲಯದಲ್ಲಿ ಮೊರೆಯಿಡಬೇಕಾಗಿ ಬಂದಿತ್ತು.

ಕಳೆದ ವರ್ಷ ಅಕ್ಟೋಬರ್ 8ರಂದು ತಡರಾತ್ರಿ ಎನ್‌ಐಎ ಅಧಿಕಾರಿಗಳು ಸ್ವಾಮಿಯವರನ್ನು ಅವರ ರಾಂಚಿ ನಿವಾಸದಿಂದ ಬಂಧಿಸಿದ್ದರು. ಇದು ವ್ಯಾಪಕ ಟೀಕೆಗಳಿಗೆ ಗುರಿಯಾಗಿತ್ತು. ಅನಾರೋಗ್ಯದ ನೆಲೆಯಲ್ಲಿ ಸ್ವಾಮಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಅದನ್ನು ನ್ಯಾಯಾಲಯದಲ್ಲಿ ವಿರೋಧಿಸಿದ್ದ ಎನ್ ಐಎ, ಅವರು ಅನಾರೋಗ್ಯಪೀಡಿತರು ಎನ್ನುವುದಕ್ಕೆ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ ಎಂದು ಹೇಳಿತ್ತು. ಸ್ವಾಮಿ ದೇಶದಲ್ಲಿ ಅಶಾಂತಿಯನ್ನುಂಟು ಮಾಡಲು ಸಂಚು ಹೂಡಿದ್ದ ಮಾವೋವಾದಿಯಾಗಿದ್ದಾರೆ ಎಂಬ ತನ್ನ ವಾದಕ್ಕೆ ಗಟ್ಟಿಯಾಗಿ ಅಂಟಿಕೊಂಡಿತ್ತು.

ತಲೋಜಾ ಜೈಲಿನಲ್ಲಿ ತನ್ನ ಆರೋಗ್ಯ ನಿರಂತರವಾಗಿ ಹದಗೆಡುತ್ತಿದೆ ಎಂದು ವೀಡಿಯೊ

ಫಾದರ್ ಸ್ಟ್ಯಾನ್‌ಸ್ವಾಮಿಯರ ನಿಧನದಿಂದ ತುಂಬಾ ನೋವು ಮತ್ತು ಆಕ್ರೋಶ ಉಂಟಾಗಿದೆ. ಕ್ರೈಸ್ತ ಪಾದ್ರಿ ಹಾಗೂ ಸಾಮಾಜಿಕ ಹೋರಾಟಗಾರನಾಗಿ ಅವರು ದಮನಿತರಿಗೆ ಅವಿಶ್ರಾಂತವಾಗಿ ನೆರವಾಗುತ್ತಿದ್ದರು. ಯಾವುದೇ ಆರೋಪ ಸಾಬೀತಾಗದಿದ್ದರೂ 2020ರ ಅಕ್ಟೋಬರ್‌ನಿಂದ ಬಂಧಿಸಿ ಕರಾಳವಾದ ಯುಎಪಿಎ ಕಾಯ್ದೆಯಡಿ ಅವರನ್ನು ಜೈಲಿನಲ್ಲಿರಿಸಿ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ. ಈ ಕಸ್ಟಡಿ ಹತ್ಯೆಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕಾಗಿದೆ.

ಸೀತಾರಾಮ್ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

ಕಾನ್ಫರೆನ್ಸಿಂಗ್ ಮೂಲಕ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದ ಸ್ವಾಮಿ, ತನಗೆ ಮಧ್ಯಂತರ ಜಾಮೀನು ಮಂಜೂರು ಮಾಡದಿದ್ದರೆ ತಾನು ಶೀಘ್ರವೇ ಸಾಯುತ್ತೇನೆ ಎಂದು ಹೇಳಿದ್ದರು. ಅವರು ವೈದ್ಯಕೀಯ ಚಿಕಿತ್ಸೆ ಮತ್ತು ಮಧ್ಯಂತರ ಜಾಮೀನಿಗಾಗಿ ಹಲವಾರು ಸಲ ನ್ಯಾಯಾಲಯಕ್ಕೆ ಮೊರೆಯಿಟ್ಟಿದ್ದರು.

ಕಳೆದ ವಾರ ಮುಂಬೈ ಉಚ್ಚ ನ್ಯಾಯಾಲಯಕ್ಕೆ ಹೊಸದಾಗಿ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದ ಸ್ವಾಮಿ,ಯುಎಪಿಎ ಅಡಿ ಬಂಧಿತ ಆರೋಪಿಗೆ ಜಾಮೀನಿಗಾಗಿ ಕಠಿಣ ಷರತ್ತುಗಳನ್ನು ಪ್ರಶ್ನಿಸಿದ್ದರು.

ಸೋಮವಾರ ಉಚ್ಚ ನ್ಯಾಯಾಲಯವು ಜಾಮೀನು ಅರ್ಜಿಯ ವಿಚಾರಣೆಯನ್ನು ಆರಂಭಿಸಿದಾಗ ಸ್ವಾಮಿ ಅಪರಾಹ್ನ 1:30ಕ್ಕೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ವಕೀಲರು ಪೀಠಕ್ಕೆ ತಿಳಿಸಿದರು.

ಸ್ವಾಮಿ ಅವರ ಪಾರ್ಥಿವ ಶರೀರವನ್ನು ಸ್ಥಳೀಯ ಕ್ರೈಸ್ತ ಧರ್ಮಗುರು ಫಾ.ಫೈಝರ್ ಮಸ್ಕರನಾಸ್ ಅವರಿಗೆ ಹಸ್ತಾಂತರಿಸಲಾಗಿದೆ.

ಫಾ.ಸ್ಪ್ಯಾನ್ ಸ್ವಾಮಿ ಅವರ ನಿಧನದ ಸುದ್ದಿ ಹರಡುತ್ತಿದ್ದಂತೆ ಸಂತಾಪ ಸಂದೇಶಗಳು ಮತ್ತು ಶ್ರದ್ಧಾಂಜಲಿಗಳು ಹರಿದು ಬರತೊಡಗಿವೆ.

ತೀವ್ರ ಸಂತಾಪವನ್ನು ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಫಾ.ಸ್ಟ್ಯಾನ್‌ಸ್ವಾಮಿ ನ್ಯಾಯ ಮತ್ತು ಮಾನವೀಯತೆಗೆ ಅರ್ಹರಾಗಿದ್ದರು ಎಂದು ಟ್ವೀಟಿಸಿದ್ದಾರೆ.

'ಸ್ವಾಮಿಯವರ ನಿಧನ ತೀವ್ರ ದುಃಖವನ್ನುಂಟು ಮಾಡಿದೆ. ನಮ್ಮ ಸಮಾಜದಲ್ಲಿನ ಅತ್ಯಂತ

ಸ್ಟ್ಯಾನ್‌ಸ್ವಾಮಿ ಅವರ ನಿಧನವು ಜೈಲಿನ ಪರಿಸ್ಥಿತಿ, ಸ್ವಾಯತ್ತ ಮೇಲ್ವಿಚಾರಣೆಯ ಕೊರತೆ, ನಿಧಾನಗತಿಯ ನ್ಯಾಯಾಂಗ ಪ್ರಕ್ರಿಯೆ ಮುಂತಾದ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಅವರ ಸಾವು ವ್ಯರ್ಥವಾಗಬಾರದು ಎಂದಾದರೆ, ಇಂತಹ ಎಲ್ಲಾ ಪ್ರಕರಣಗಳ ವಿರುದ್ಧ ಜನತಾ ಆಂದೋಲನ ರೂಪುಗೊಳ್ಳಬೇಕು. ಯುಎಪಿಎ ಕಾಯ್ದೆ ರದ್ದುಗೊಳಿಸುವ ಬಗ್ಗೆ ಸ್ಪಷ್ಟ ಹಕ್ಕೊತ್ತಾಯ ಚಳವಳಿ ಆರಂಭವಾಗಬೇಕು.

ತೀಸ್ತಾ ಸೆಟಲ್ವಾಡ್, ಸಾಮಾಜಿಕ ಕಾರ್ಯಕರ್ತೆ

ಶೋಷಿತರಿಗಾಗಿ ತನ್ನ ಜೀವಮಾನವೆಲ್ಲ ಹೋರಾಡಿದ್ದ ವ್ಯಕ್ತಿ ಕಸ್ಟಡಿಯಲ್ಲಿ ಸಾಯುವಂತಾಗಿದ್ದು ಸಮರ್ಥನೀಯವಲ್ಲ. ನಮ್ಮ ಪ್ರಜಾಪ್ರಭುತ್ವದಲ್ಲಿ ನ್ಯಾಯದ ಇಂತಹ ವಿಡಂಬನೆಗೆ ಅವಕಾಶವಿರಬಾರದು' ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತನ್ನ ಸಂತಾಪ ಸೂಚಕ ಸಂದೇಶದಲ್ಲಿ ಹೇಳಿದ್ದಾರೆ.

ಜೈಲಿನಲ್ಲಿಯ ಕಳಪೆ ಆರೋಗ್ಯ ಸೌಲಭ್ಯಗಳ ಬಗ್ಗೆ ಸ್ವಾಮಿ ಹಿಂದೆ ನ್ಯಾಯಾಲಯಕ್ಕೆ ದೂರಿಕೊಂಡಿದ್ದರು. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ವೈದ್ಯಕೀಯ ನೆರವು ಮತ್ತು ಪರೀಕ್ಷೆಗಳ ಲಭ್ಯತೆ, ಸ್ವಚ್ಛತೆ ಮತ್ತು ಸುರಕ್ಷಿತ ಅಂತರ ಇವುಗಳ ಬಗ್ಗೆ ಜೈಲಿನ ಅಧಿಕಾರಿಗಳು ಕಡೆಗಣಿಸಿದ್ದಾರೆ ಎಂದು ಸ್ವಾಮಿ ಮತ್ತು ಪ್ರಕರಣದಲ್ಲಿನ ಅವರ ಸಹ ಆರೋಪಿ ಆಪಾದಿಸಿದ್ದರು.

ಎಲ್ಗಾರ್ ಪರಿಷದ್ ಪ್ರಕರಣವು 2017,ಡಿ.31ರಂದು ಪುಣೆ ಸಮೀಪದ ಭೀಮಾ-ಕೋರೆಗಾಂವ್ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮಕ್ಕೆ ಸಂಬಂಧಿಸಿದೆ. ಕಾರ್ಯಕ್ರಮದ ಮರುದಿನ ನಡೆದಿದ್ದ ಹಿಂಸಾಚಾರ ಮತ್ತು ದಂಗೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದ. ಎಲ್ಗಾರ್ ಪರಿಷದ್‌ನಲ್ಲಿ ಭಾಗವಹಿಸಿದ್ದ ಸಾಮಾಜಿಕ ಹೋರಾಟಗಾರರ ಪ್ರಚೋದನಾಕಾರಿ ಭಾಷಣಗಳು ಹಿಂಸಾಚಾರಕ್ಕೆ ಕಾರಣವಾಗಿದ್ದವು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದರು.

ಯುಎಪಿಎ ಅಡಿ ನಿಷೇಧಿತ ಸಂಘಟನೆ ಸಿಪಿಐ(ಮಾವೋವಾದಿ)ನ ಹಿರಿಯ ನಾಯಕರು ಎಲ್ಗಾರ್ ಪರಿಷದ್‌ನ ಸಂಘಟಕರು ಮತ್ತು ಬಂಧಿತ ಹೋರಾಟಗಾರರೊಡನೆ ಸಂಪರ್ಕದಲ್ಲಿದ್ದರು ಹಾಗೂ ಮಾವೋವಾದಿ ಮತ್ತು ನಕ್ಸಲ್ ಸಿದ್ದಾಂತವನ್ನು ಹರಡಲು ಹಾಗೂ ಕಾನೂನುಬಾಹಿರ ಚಟುವಟಿಕೆಗಳನ್ನು ಉದ್ದೇಶಿಸಿದ್ದರು ಎಂದು ಎನ್ ಐಎ ಹೇಳಿತ್ತು.

ಐದು ದಶಕಗಳಿಗೂ ಹೆಚ್ಚುಕಾಲ ಜಾರ್ಖಂಡ್‌ನಲ್ಲಿ ಬುಡಕಟ್ಟು ಜನರ ಏಳಿಗೆಗಾಗಿ ಶ್ರಮಿಸಿದ್ದ ಸ್ಟ್ಯಾನ್‌ಸ್ವಾಮಿ ನಕ್ಸಲ್‌ರು,ವಿಶೇಷವಾಗಿ ನಿಷೇಧೀತ ಸಿಪಿಐ (ಮಾವೋವಾದಿ) ಜೊತೆ ಸಂಬಂಧ ಹೊಂದಿದ್ದರು ಎಂದು ಎನ್‌ಐಎ ಆರೋಪಿಸಿತ್ತು.

ಎಲ್ಗಾರ್ ಪರಿಷದ್ ಪ್ರಕರಣ ವಿಚಾರಣೆಗಾಗಿ ಕಾಯುತ್ತ ಹಲವಾರು ಪ್ರಮುಖ ಮಾನವ ಹಕ್ಕು ಹೋರಾಟಗಾರರು, ವಿದ್ವಾಂಸರು ಮತ್ತು ವಕೀಲರು ಕಳೆದೆರಡು ವರ್ಷಗಳಿಂದಲೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ.

ಹಲವಾರು ಅನಾರೋಗ್ಯಗಳಿಂದ ಬಳಲುತ್ತಿದ್ದ ಸ್ವಾಮಿ ಪ್ರಕರಣದ ಬಂಧಿತರಲ್ಲಿ ಅತ್ಯಂತ ಹಿರಿಯರಾಗಿದ್ದರು. ಕಳೆದ ತಿಂಗಳು ಖಾಸಗಿ ಆಸ್ಪತ್ರೆಯಲ್ಲಿ ಕೊರೋನ ಸೋಂಕಿಗೆ ತುತ್ತಾಗಿದ್ದ ಅವರನ್ನು ನಂತರ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು.

Read These Next

ಹುಬ್ಬಳ್ಳಿ: ಹುಬ್ಬಳ್ಳಿಯ ಚರ್ಚ್‌ಗೆ ನುಗ್ಗಿ ಭಜನೆ ಮಾಡಿದ ಸಂಘಪರಿವಾರದ ಕಾರ್ಯಕರ್ತರು

ಬಲವಂತದಿಂದ ಮತಾಂತರಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ರವಿವಾರ ಬೆಳಗ್ಗೆ ಇಲ್ಲಿಯ ಭೈರಿದೇವರ ಕೊಪ್ಪದಲ್ಲಿರುವ ಚರ್ಚೆಂದಕ್ಕೆ ...

ಫೇಸ್ ಕ್ರೀಂನಲ್ಲಿ 24 ಲಕ್ಷ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಯತ್ನ: ಏರ್ ಪೋರ್ಟ್ ನಲ್ಲಿ ಆರೋಪಿ ಬಂಧನ

ಹೈದರಾಬಾದ್: ಹೈದರಾಬಾದ್ ಆರ್ ಜಿ ಐ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಫೇಸ್ ಕ್ರೀಮ್ ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ...