ಕೇಂದ್ರದಿಂದ 9 ಸಾವಿರ ಅಂಪೋಟೆರಿಸಿನ್ ಬಿ ವೈಲ್ಸ್ ಹಂಚಿಕೆ : ಅಗತ್ಯಾನುಸರ ಜಿಲ್ಲೆಗಳಿಗೆ ವಿತರಣೆ: ಸಿಎಂ ಬಿ.ಎಸ್. ಯಡಿಯೂರಪ್ಪ

Source: SO News | By Laxmi Tanaya | Published on 5th June 2021, 8:26 PM | State News | Don't Miss |

ಹುಬ್ಬಳ್ಳಿ‌: ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬ್ಲಾಕ್ ಫಂಗಸ್ ಚಿಕಿತ್ಸೆಗಾಗಿ 9 ಸಾವಿರ ಅಂಪೋಟೆರಿಸಿನ್ ಬಿ ವೈಲ್ಸ್ ಹಂಚಿಕೆ ಮಾಡಲಾಗಿದೆ. ಅಗತ್ಯಾನುಸಾರ ಜಿಲ್ಲೆಗಳಿಗೆ ತ್ವರಿತವಾಗಿ ವಿತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಹುಬ್ಬಳ್ಳಿ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಧಾರವಾಡ ಜಿಲ್ಲೆಗೆ ಸಂಬಂಧಿಸಿದ ಕೋವಿಡ್ ಪಗ್ರತಿ ಪರಿಶೀಲನೆ ನಡೆಸಿದ ಅವರು ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಉತ್ತಮವಾಗಿದೆ. ಕೋವಿಡ್ ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ‌. ಮಕ್ಕಳಿಗಾಗಿ 600 ಆಕ್ಸಿಜನ್ ಬೆಡ್‌ಗಳನ್ನು ಮೀಸಲಿರಿಸಿದ್ದಾರೆ. ಕಿಮ್ಸ್‌ನ ತಾಯಿ ಮಕ್ಕಳ ಆರೈಕೆ (ಎಂ.ಸಿ.ಹೆಚ್) ಆಸ್ಪತ್ರೆಯಲ್ಲಿ 400 ಬೆಡ್ ಕೋವಿಡ್ ಆಸ್ಪತ್ರೆಯನ್ನು ಮಕ್ಕಳಿಗಾಗಿ ನಿರ್ಮಿಸಲಾಗಿದೆ. 

ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಮರಣ ದರ ಶೇ. 1.70 ಇದೆ. ಇದು‌ ರಾಜ್ಯದ ಸರಾಸರಿಗೆ ಹೋಲಿಸಿದರೆ , ಜಿಲ್ಲೆಯ ಮರಣ ದರ ತಗ್ಗಿಸುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸುವಂತೆ ನಿರ್ದೇಶನ ನೀಡಿದರು.

ಸೋಂಕು ಪತ್ತೆ ಆದ ತಕ್ಷಣ ಸೋಂಕಿತರನ್ನು ನಿಗಾ ವಹಿಸಿ ಚಿಕಿತ್ಸೆ ನೀಡಬೇಕು. ಹಳ್ಳಿಗಳಲ್ಲಿನ ಸೋಂಕಿತರನ್ನು ಕೋವಿಡ್ ಕೇರ್‌ ಸೆಂಟರುಗಳಿಗೆ ಕಡ್ಡಾಯವಾಗಿ ದಾಖಲಿಸಿ. ಮನೆಯಲ್ಲಿ ಇರಲು ಬಿಡಬೇಡಿ. ಗ್ರಾಮೀಣ ಭಾಗದ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಉತ್ತಮ ಆಹಾರ, ವೈದ್ಯಕೀಯ ಚಿಕಿತ್ಸೆ, ಔಷಧೋಪಚಾರ ಮಾಡಬೇಕು. ಸ್ವಚ್ಛತೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬ್ಲಾಕ್ ಫಂಗಸ್ ಸಾವು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. 
ಕೋವಿಡ್ ಲಸಿಕೆ ನೀಡುವುದನ್ನು ತ್ರೀವ್ರಗೊಳಿಸಬೇಕು. ಧಾರವಾಡ ಜಿಲ್ಲೆಯಲ್ಲಿ ಸದ್ಯ ಕೋವಿಡ್ ಸೋಂಕಿತರ ಖಚಿತತೆ ಪ್ರಮಾಣ ಶೇ.11.9 ಇದೆ. ಇದನ್ನು ಶೇ.5 ಕ್ಕೆ ಇಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು.

ಕೋವಿಡ್ ಸೋಂಕಿನ ಖಚಿತತೆ ಪ್ರಮಾಣ ಶೇ‌.5ಕ್ಕೆ ಇಳಿದರೆ ಕೋವಿಡ್ ಲಾಕ್‌ಡೌನ್ ನಲ್ಲಿ ವಿನಾಯಿತಿ ನೀಡಲಾಗುವುದು. ಕೋವಿಡ್ ಸೋಂಕು ಹರಡದಂತೆ ತಡೆಯುವುದು ಜನರ ಕೈಯಲ್ಲೇ ಇದೆ. ರಾಜ್ಯಕ್ಕೆ ಎರೆಡು ದಿನದಲ್ಲಿ ಅಗತ್ಯ ಕೋವಿಡ್ ವ್ಯಾಕ್ಸಿನ್‌ಗಳು ಬರಲಿವೆ. ವ್ಯಾಕ್ಸಿನ್ ಕೊರತೆ ನೀಗಲಿದೆ. ಸರ್ಕಾರದಿಂದಲೇ ಎಲ್ಲರಿಗೂ ಉಚಿತ ವ್ಯಾಕ್ಸಿನ್ ನೀಡಲಾಗುವುದು ಎಂದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಅಕ್ಕಪಕ್ಕದ 13 ಜಿಲ್ಲೆಗಳಿಂದ ಕೋವಿಡ್ ಗಂಭೀರ ಸ್ಥಿತಿ ತಲುಪಿದ ರೋಗಿಗಳನ್ನು ಹುಬ್ಬಳ್ಳಿಯ ಕಿಮ್ಸ್ ಸೇರಿದಂತೆ ಇತರೆ ಆಸ್ಪತ್ರೆ ದಾಖಲಿಸುತ್ತಾರೆ. ಹಾಗಾಗಿ ಜಿಲ್ಲೆಯಲ್ಲಿ ಮರಣದ ಪ್ರಮಾಣ ರಾಜ್ಯದ ಸರಾಸರಿಗಿಂತ ಸ್ವಲ್ಪ ಅಧಿಕವಾಗಿದೆ. ಬ್ಲಾಕ್ ಫಂಗಸ್ ಚಿಕಿತ್ಸೆಯನ್ನು ಎ.ಬಿ.ಎ.ಆರ್.ಕೆ ನೀಡಬೇಕು. ಗ್ರಾಮೀಣ ಭಾಗದಲ್ಲಿ ಕೋವಿಡ್ ನಿರ್ವಹಣೆಗೆ ಪ್ರತಿ ಗ್ರಾಮಪಂಚಾಯತಿಗೆ  50 ಸಾವಿರ ರೂ. ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿರುವುದು ಸ್ವಾಗತಾರ್ಹ, ಕಿಮ್ಸ್ ಗೆ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಖರೀದಿಸಲು  ಅನುಮೋದನೆ ನೀಡಬೇಕು ಎಂದು ಸಭೆಯಲ್ಲಿ ಮುಖ್ಯಮಂತ್ರಿಗಳಲ್ಲಿ ಕೋರಿದರು. 

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಕಿಮ್ಸ್‌ನಲ್ಲಿ ಬ್ಲಾಕ್ ಫಂಗಸ್‌‌ ಸೋಂಕಿತರ ಪೈಕಿ ಶೇ.65% ಜನರಿಗೆ ಸರ್ಜರಿ ಆಗಿದೆ. ಬೇರೆ ಜಿಲ್ಲೆಗಳಿಂದ ರೋಗಿಗಳು ಸರ್ಜರಿ ಆಗಮಿಸುತ್ತಾರೆ. ಸರ್ಜರಿ ಅನುಕೂಲವಾಗುವ ವೈದ್ಯಕೀಯ ಪರಿಕರಗಳನ್ನು ಕಿಮ್ಸ್‌ಗೆ ಒದಗಿಸಬೇಕು. ಲಾಕ್‌ಡೌನ್ ಮುಂದುವರಿದರೆ ಆಹಾರ ಪದಾರ್ಥಗಳನ್ನು ಸರಬರಾಜು ಸರಪಳಿಗೆ ತೊಂದರೆ ಆಗಿದೆ. ಹಾಗಾಗಿ ಕಿರಾಣಿ ಅಂಗಡಿಗಳ ವಹಿವಾಟಿಗೆ ಲಾಕ್‌ಡೌನ್‌ನಲ್ಲಿ ವಿನಾಯಿತಿ ನೀಡಬೇಕು. ಖಾಸಗಿ ಆಸ್ಪತ್ರೆ‌ಗಳಲ್ಲಿ ಕೋವಿಡ್ ಲಸಿಕೆಗೆ ಹೆಚ್ಚಿನ ದರ ಪಡೆಯುತ್ತಾರೆ. ಇದಕ್ಕೆ ಕಡಿವಾಣ ಹಾಕುವಂತೆ  ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿ ,ಕುಂದಗೋಳ ತಾಲೂಕಿನಲ್ಲಿ ವೈದ್ಯರ ಕೊರತೆ ನೀಗಿಸುವಂತೆ ಕೋರಿದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಲಕ್ಷಣರಹಿತರಿಗೆ ಮನೆಗಳಲ್ಲಿಯೇ ಚಿಕಿತ್ಸೆ ನೀಡುವ ಕಾರ್ಯ ಪರಿಣಾಮಕಾರಿಯಾದರೆ, ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದರು.

ಶಾಸಕರಾದ ಅಮೃತ ದೇಸಾಯಿ,ಸಿ.ಎಂ.ನಿಂಬಣ್ಣವರ ಮಾತನಾಡಿದರು.

ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಸಭೆಯಲ್ಲಿ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಕಳೆದ ಮೇ ಮೊದಲ ವಾರದಲ್ಲಿ ಕೋವಿಡ್ ಪಾಸಿಟಿವ್ ದರ ಶೇ.39.2 ಕ್ಕೆ ಏರಿತ್ತು. ವ್ಯಾಪಕ ನಿಯಂತ್ರಣ ಕ್ರಮಗಳಿಂದ ಇದೀಗ ಅದು 11.9 ಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಇದೀಗ 4385 ಸಕ್ರಿಯ ಪ್ರಕರಣಗಳಿವೆ 600 ಜನ ಕೋವಿಡ್ ಕೇರ್ ಸೆಂಟರುಗಳಲ್ಲಿ,1500 ಜನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಕ್ಷಣರಹಿತ ಸೋಂಕಿತರು ಮನೆಗಳಲ್ಲಿ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.ಜಿಲ್ಲೆಯ 20 ಲಕ್ಷ ಜನಸಂಖ್ಯೆಯಲ್ಲಿ ಸುಮಾರು 9 ಲಕ್ಷ ಜನರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ. ಕಳೆದ 10 ದಿನಗಳಲ್ಲಿ ನಗರ ಪ್ರದೇಶದ ಶೇ.41 ಹಾಗೂ ಗ್ರಾಮೀಣ ಪ್ರದೇಶದ ಶೇ.58 ರಷ್ಟು ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಜಿಲ್ಲೆಯ ಆಸ್ಪತ್ರೆಗಳಿಗೆ ರೆಮಿಡಿಸಿವರ್ ಹಾಗೂ ಆ್ಯಂಪೊಟೋರಿಸಿನ್-ಬಿ ಔಷಧಿಗಳನ್ನು ಸಮರ್ಪಕವಾಗಿ ಪೂರೈಸಲಾಗುತ್ತಿದೆ. ಇದುವರೆಗೆ 3,31,717 ಜನರಿಗೆ ಲಸಿಕೆ ಹಾಕಿಸಲಾಗಿದೆ. ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ 1215 ಜನರಿಗೆ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಅಡಿ ಸೌಲಭ್ಯ ಕಲ್ಪಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದಕಾ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

 

Read These Next

ಕೋಲಾರ್: ಮೀನುಗಾರಿಕೆ ಮತ್ತು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವ ಎಸ್. ಅಂಗಾರ

ಬೂದಿಕೋಟೆ ಮಾರ್ಕಂಡೇಯ ಡ್ಯಾಮ್‍ನಲ್ಲಿ ಮೀನುಗಾರಿಕೆ ಮತ್ತು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಂಬಂಧಪಟ್ಟ ಮೀನುಗಾರಿಕೆ ...

ಬೆಂಗಳೂರು: ದ್ವಿತೀಯ ಪಿಯು ರಿಪೀಟರ್‌ಗಳ ತೇರ್ಗಡೆಗೆ ಮನವಿ ಸರಕಾರದ ನಿಲುವು ಕೇಳಿದ ಹೈಕೋರ್ಟ್

2020-21ನೇಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸು ಮಾಡುವ ಸರಕಾರದ ಆದೇಶ ಪ್ರಶ್ನಿಸಿ ಸಲ್ಲಿಸಿರುವ ...

ಶ್ರೀನಿವಾಸಪುರ: ಮಾವು ಬೆಳೆದ ರೈತರಿಗೆ ಬೆಳೆ ನಷ್ಟ ಆಗದಂತೆ ಸಂಸ್ಕರಣಾ ಘಟಕಗಳು ಸ್ಥಾಪನೆ

ಮಾವು ಬೆಳೆದ ರೈತರಿಗೆ ಬೆಳೆ ನಷ್ಟ ಆಗದಂತೆ ಸರ್ಕಾರದಿಂದ ಶೇ . 50 ರಷ್ಟು ಅನುದಾನದೊಂದಿಗೆ ಹೆಚ್ಚಿನ ಮಾವು ಸಂಸ್ಕರಣಾ ಘಟಕಗಳನ್ನು ಮತ್ತು ...