ಬೆಂಗಳೂರು: ಕೊಲೆ ಆರೋಪ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ಗೆ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಿರುವ ಆರೋಪದಡಿ ಬಂದಿಖಾನೆ ಇಲಾಖೆಯ 9 ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ನಟ ದರ್ಶನ್ ಮತ್ತು ಸಹಚರರನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ ಪ್ರಕರಣ ಕುರಿತು ಗೃಹ ಇಲಾಖೆ ಅಧಿ ಕಾರಿಗಳನ್ನು ತರಾಟೆ ತೆಗೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಸೂಚಿಸಿದ್ದಾರೆ.
ದರ್ಶನ್ ಮತ್ತು ಇತರರನ್ನು ಕೂಡಲೇ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡುವಂತೆ ತಾಕೀತು ಮಾಡಿದ್ದಾರೆ. ಜತೆಗೆ, ಕಾರಾಗೃಹಕ್ಕೆ ಭೇಟಿ ನೀಡಿ ಪ್ರಕರಣದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಸಿಎಂ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ಅಮಾನತು: ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಪರಪ್ಪನ ಅಗ್ರಹಾರ ಬಂದಿಖಾನೆಯಲ್ಲಿ ನಟ ದರ್ಶನ್ ಗೆ ವಿಶೇಷ ಸೌಲಭ್ಯ ನೀಡುತ್ತಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.
ಮಾಹಿತಿ ಆಧರಿಸಿ ಸಂಬಂಧಪಟ್ಟ ಅಧಿಕಾರಿಗಳು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಜೈಲರ್ ಶರಣಬಸವ ಅಮೀನ್ ಘಡ್, ಪ್ರಭು ಎಸ್.ಖಂಡೇಲ್ ವಾಲ್, ಸಹಾಯಕ ಜೈಲರ್ ಶ್ರೀಕಾಂತ್ ತಳವಾರ್, ಎಲ್.ಎಸ್. ತಿಪ್ಪೇಸ್ವಾಮಿ, ಮುಖ್ಯ ವಾರ್ಡಶ್‌್ರಗಳಾದ ವೆಂಕಪ್ಪ, ಸಂಪತ್ ಕುಮಾರ್ ತಡಪಟ್ಟಿ, ವಾರ್ಡರ್ ಬಸಪ್ಪ ತೇಲಿ ಎಂಬವರನ್ನು ಅಮಾನತು ಮಾಡಲಾಗಿದೆ ಎಂದರು.
ಯಾವ ರೀತಿ ಘಟನೆ ನಡೆದಿದೆ ಎಂಬುದರ ಕುರಿತು ವರದಿ ಕೇಳಿದ್ದೇನೆ. ಹಿರಿಯ ಅಧಿಕಾರಿಗಳು ಭಾಗಿಯಾಗಿರುವುದು ತನಿಖೆಯಲ್ಲಿ ಕಂಡು ಬಂದರೆ, ವರದಿ ಆಧರಿಸಿ ತಕ್ಷಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದ ಅವರು, ಪದೇಪದೇ ಇಂತಹ ಘಟನೆಗಳು ಆಗಬಾರದು. ರಾಜ್ಯದ ಬಂದಿಖಾನೆಗಳಲ್ಲಿ ಸಿಸಿ ಕ್ಯಾಮರಾ, ಜಾಮರ್ ಹಾಕಿದರೂ ಸಹ ಇಂತಹ ಘಟನೆಗಳು ಜರುಗಿವೆ ಎಂದು ತಿಳಿಸಿದರು.
ಕಾರಾಗೃಹ ಒಳಗೆ ಫೋಟೊ ತೆಗೆದಿರುವವರು ಯಾರು, ಮೊಬೈಲ್ ಹೇಗೆ ಹೋಯಿತು ಎಂಬುದರ ಕುರಿತು ಸಹ ತನಿಖೆ ನಡೆಯಲಿದೆ. ಎಲ್ಲರೂ ಜೈಲಿನ ಒಳಗೆ ಹೋಗಲು ಸಾಧ್ಯವಿಲ್ಲ. ಜೈಲ್ ಅಧೀಕ್ಷಕರು ಅವಕಾಶ ನೀಡಿದರೆ ಮಾತ್ರ ಹೋಗಲು ಸಾಧ್ಯ. ಜೈಲಿಗೆ ಭೇಟಿ ನೀಡಿದವರು ಯಾರು ಎಂದು ಸಹ ತನಿಖೆಯಲ್ಲಿ ಹೊರಬರಲಿದೆ.
ಪೊಲೀಸರು ಸಲ್ಲಿಸಲಿರುವ ಚಾರ್ಜ್ ಶೀಟ್ ಮೇಲೆ ಯಾವುದೇ ರೀತಿಯ ಅನುಮಾನ ಪಡುವುದು ಬೇಡ. ನಾವು ಕಾನೂನು ಪ್ರಕಾರ ಕ್ರಮ ಜರುಗಿಸುತ್ತೇವೆ. ಆರೋಪಿಗಳನ್ನು ಬೇರೆ ಕಡೆ ವರ್ಗಾಯಿಸುವ ಬಗ್ಗೆ ಪರಿ ಶೀಲಿಸಲಾಗುವುದು. ಮರೆಮಾಚುವ, ಸುಳ್ಳು ಹೇಳುವ ಪ್ರಮೇಯ ನನಗಿಲ್ಲ. ತಪ್ಪಿನಲ್ಲಿ ಯಾರ ಪಾತ್ರ ಇದೆ ಎಂಬುದು ಕಂಡು ಬಂದರೂ ಕ್ರಮ ಜರುಗಲಿದೆ ಎಂದರು.
ಈ ಪ್ರಕರಣದಿಂದ ಗೃಹ ಇಲಾಖೆಯನ್ನು ಅನುಮಾನ ದಿಂದನೋಡುವ ಅವಶ್ಯಕತೆ ಇಲ್ಲ. ಅನೇಕ ಒಳ್ಳೆಯ ಕೆಲಸ ಗಳನ್ನು ಇಲಾಖೆ ಮಾಡಿದೆ. ಶೇ.95ರಷ್ಟು ಕೊಲೆ ಪ್ರಕರಣ ಗಳ ಆರೋಪಿಗಳನ್ನು ಬಂಧಿಸಿದ್ದಾರೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗಿದೆ. ಪೊಲೀಸ್ ಇಲಾಖೆ ಕೆಟ್ಟದು ಅಂದುಕೊಳ್ಳುವ ಅಗತ್ಯವಿಲ್ಲ. ಯಾರು, ಎಷ್ಟೇ ದೊಡ್ಡ ವ್ಯಕ್ತಿ ತಪ್ಪು ಮಾಡಿರಲಿ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಜರುಗಿಸುತ್ತೇವೇ ಎಂದು ರಾಜ್ಯದ ಜನತೆಗೆ ಭರವಸೆ ನೀಡುತ್ತೇನೆ ಎಂದು ಪರಮೇಶ್ವರ್ ಹೇಳಿದರು.