ಹೈಕೋರ್ಟ ನ್ಯಾಯಾಧೀಶ ಹುದ್ದೆಗೆ 3ನೇ ಬಾರಿ ಭಟ್ಕಳದ ನಾಗೇಂದ್ರ ನಾಯ್ಕ ಹೆಸರು ಶಿಫಾರಸ್ಸು

Source: S O News Service | By I.G. Bhatkali | Published on 5th September 2021, 1:31 PM | Coastal News | State News |

ಭಟ್ಕಳ: ಹೈಕೋರ್ಟ ನ್ಯಾಯಮೂರ್ತಿ ಹುದ್ದೆಗೆ ಭಟ್ಕಳ ಮೂಲದ ಹೈಕೋರ್ಟ ನ್ಯಾಯವಾದಿ ನಾಗೇಂದ್ರ ರಾಮಚಂದ್ರ ನಾಯ್ಕ ಇವರ ಹೆಸರನ್ನು ಪರಿಗಣಿಸುವಂತೆ ಸುಪ್ರೀಮ್ ಕೋರ್ಟಿನ ಕೊಲಿಜಿಯಂ ಸಮಿತಿ 3ನೇ ಬಾರಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದೆ.

ಕಳೆದ 2019, ಅಕ್ಟೋಬರ್‍ನಲ್ಲಿಯೇ ಕೋಲಿಜಿಯಂ, ನಾಗೇಂದ್ರ ನಾಯ್ಕ ಸೇರಿದಂತೆ 8 ನ್ಯಾಯವಾದಿಗಳ ಹೆಸರನ್ನು ನ್ಯಾಯಮೂರ್ತಿ ಹುದ್ದೆಗೆ ಸಿಫಾರಸ್ಸು ಮಾಡಿತ್ತಾದರೂ, ಕೇಂದ್ರ ಸರಕಾರ ಪಟ್ಟಿಯಲ್ಲಿದ್ದ ನಾಗೇಂದ್ರ ನಾಯ್ಕ ಹೆಸರನ್ನು ಮಾತ್ರ ಪರಿಗಣಿಸಿರಲಿಲ್ಲ. ಕಳೆದ 2021, ಮಾ.2ರಂದು ಕೊಲಿಜಿಯಂ 2ನೇ ಬಾರಿ ನಾಗೇಂದ್ರ ನಾಯ್ಕರಿಗೆ ನ್ಯಾಯಾಧೀಶ ಹುದ್ದೆ ನೀಡುವಂತೆ ಶಿಫಾರಸ್ಸು ಮಾಡಿತ್ತು. ಆದರೆ 2ನೇ ಬಾರಿಯೂ ಕೇಂದ್ರ ಸರಕಾರ ನಾಗೇಂದ್ರರಿಗೆ ನ್ಯಾಯಾಧೀಶ ಹುದ್ದೆಗೆ ಅವಕಾಶ ನೀಡಿರಲಿಲ್ಲ.

ಈ ನಡುವೆ ಕಳೆದ ಏಪ್ರಿಲ್ 24, 2021ರಂದು ನ್ಯಾಯಾಧೀಶ ಹುದ್ದೆ ಆಯ್ಕೆ ಪ್ರಕರಣವೊಂದನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಸುಪ್ರೀಮ್ ಕೋರ್ಟ, ನ್ಯಾಯಾಧೀಶ ಹುದ್ದೆಗೆ ಪುನರುಚ್ಚಾರಗೊಂಡ ಭಟ್ಕಳ ಮೂಲದ ನಾಗೇಂದ್ರ ನಾಯ್ಕ ಸೇರಿದಂತೆ 6 ವಕೀಲರಿಗೆ 4 ವಾರಗಳ ಒಳಗೆ ನ್ಯಾಯಾಧೀಶ ಹುದ್ದೆಯನ್ನು ನೀಡುವಂತೆ ಆದೇಶ ನೀಡಿತ್ತು. ಆದರೆ ಕೇಂದ್ರ ಸರಕಾರ 6 ನ್ಯಾಯವಾದಿಗಳಲ್ಲಿ ನಾಗೇಂದ್ರ ನಾಯ್ಕ ಹಾಗೂ ಕೇರಳ ಮೂಲಕ ಕೆ.ಕೆ.ಪಾಲ್‍ರನ್ನು ಕೈ ಬಿಟ್ಟು, ಉಳಿದವರಿಗೆ ಹುದ್ದೆಯನ್ನು ನೀಡಿತು. ಇದೀಗ ಸೆ.1ರಂದು ಸಭೆ ಸೇರಿದ ಕೊಲಿಜಿಯಂ ಸಮಿತಿ ಮತ್ತೆ ನಾಗೇಂದ್ರ ನಾಯ್ಕರ ಹೆಸರನ್ನು ನ್ಯಾಯಾಧೀಶ ಹುದ್ದೆಗೆ ಶಿಫಾರಸ್ಸು ಮಾಡಿದೆ. ಇದೀಗ ಎಲ್ಲರ ಗಮನ ಕೇಂದ್ರ ಸರಕಾರದ ಕಡೆ ನೆಟ್ಟಿದ್ದು, ಈಗಲಾದರೂ ಆಯ್ಕೆಗೆ ಒಪ್ಪಿಗೆ ಸೂಚಿಸಿತೇ ಎನ್ನುವುದನ್ನು ಕಾದು ನೋಡಬೇಕಾಗಿದೆ. 

ಕೋಲಿಜಿಯಂ ಶಿಫಾರಸ್ಸನ್ನು ಸರಕಾರ ಅಂಗೀಕರಿಸಿದ್ದಲ್ಲಿ, ನಾಗೇಂದ್ರ ನಾಯ್ಕ ಹೈಕೋರ್ಟ ನ್ಯಾಯಾಧೀಶ ಹುದ್ದೆಗೇರುವ ಭಟ್ಕಳದ ಪ್ರಪ್ರಥಮ ವ್ಯಕ್ತಿಯಾಗಲಿದ್ದಾರೆ. ತಾಲೂಕಿನ ಯಲ್ವಡಿಕವೂರು ಗ್ರಾಮ ಪಂಚಾಯತ ವ್ಯಾಪ್ತಿಯ ಸರ್ಪನಕಟ್ಟೆ ನಿವಾಸಿ, ಜ್ಯಾತ್ಯಾತೀತ ವ್ಯಕ್ತಿತ್ವ ಹಾಗೂ ಸರಳತೆಯನ್ನು ಮೈಗೂಡಿಸಿಕೊಂಡಿದ್ದ ನಾಗೇಂದ್ರ ನಾಯ್ಕ ಕಳೆದ 28 ವರ್ಷಗಳಿಂದ ಬೆಂಗಳೂರು ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಭಟ್ಕಳ ಅಂಜುಮನ್ ಕಾಲೇಜಿನಲ್ಲಿ ಪದವಿ ಹಾಗೂ ಬೆಂಗಳೂರಿನಲ್ಲಿ ಎಲ್‍ಎಲ್‍ಬಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ವಿಶೇಷ ಎಂದರೆ ತೋಟಗಾರಿಕೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು, ಅಲಂಕಾರಿಕಾ ಪುಷ್ಪವನ್ನು ಬೆಳೆದು ಪ್ರಗತಿಪರ ಕೃಷಿಕನಾಗಿ ಪ್ರಶಸ್ತಿ ಸನ್ಮಾನವನ್ನು ಪಡೆದಿದ್ದಾರೆ. ನಾಗೇಂದ್ರ ನಾಯ್ಕ ಹೆಸರನ್ನು ಕೊಲಿಜಿಯಂ 3ನೇ ಬಾರಿ ಶಿಫಾರಸ್ಸು ಮಾಡುತ್ತಿದ್ದಂತೆಯೇ ಭಟ್ಕಳ ಮಾತ್ರವಲ್ಲ, ಉತ್ತರಕನ್ನಡ ಜಿಲ್ಲೆಯಲ್ಲಿರುವ ಅವರ ಆತ್ಮೀಯರು, ಒಡನಾಡಿಗಳು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. 

Read These Next

ಕೋವಿಡ್ ಜನತೆ ಆತಂಕ ಪಡುವ ಅಗತ್ಯವಿಲ್ಲ. ಡಿ.2 ರಂದು ನವದೆಹಲಿಯಲ್ಲಿ ಕೇಂದ್ರ ಆರೋಗ್ಯ ಸಚಿವರ ಭೇಟಿ : ಸಿಎಂ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ : ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದೇಶಗಳಿಂದ ಆಗಮಿಸುವ ಪ್ರಯಾಣಿಕರನ್ನು ...