ಬೆಂಗಳೂರು: 29 ಸಚಿವರಿಂದ ಪ್ರಮಾಣ 10 ವಲಸಿಗರಿಗೆ ಅವಕಾಶ, 13 ಜಿಲ್ಲೆಗಳಿಗೆ ದಕ್ಕದ 'ಪ್ರಾತಿನಿಧ್ಯ', 6 ಮಂದಿಗೆ ಕೊಕ್, ವಿಜಯೇಂದ್ರಗೆ ಮಂತ್ರಿಭಾಗ್ಯವಿಲ್ಲ

Source: VB | By S O News | Published on 5th August 2021, 4:52 PM | State News |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಂಪುಟದಲ್ಲಿ ನೂತನ ಸಚಿವರಾಗಿ ಹಿರಿಯ ಶಾಸಕರಾದ ಗೋವಿಂದ ಎಂ.ಕಾರಜೋಳ, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಬಿ.ಶ್ರೀರಾಮುಲು, ಉಮೇಶ್ ಕತ್ತಿ ಸೇರಿದಂತೆ ಒಟ್ಟು 29 ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಬಾರಿ ಉಪ ಮುಖ್ಯಮಂತ್ರಿಯಾಗಿ ಯಾರನ್ನೂ ಆಯ್ಕೆ ಮಾಡದೇ ಇರುವುದು ವಿಶೇಷವಾಗಿದೆ.

ಬುಧವಾರ ವಿಧಾನಸೌಧದ ಗಾಜಿನ ಮನೆಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನವನ್ನು ಬೋಧಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನೂತನ ಸಚಿವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು.

ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಅವರ ಅಭಿಮಾನಿಗಳು

ಕಳೆದುಕೊಂಡವರು

ಕಾಂಗ್ರೆಸ್ ಹಾಗೂ ಜೆಡಿಎಸ್ ತ್ಯಜಿಸಿ ಬಿಜೆಪಿ ಸೇರ್ಪಡೆಯಾಗಿದ್ದ ಒಟ್ಟು ಹತ್ತು ಮಂದಿ ವಲಸಿಗರಿಗೆ ಸಚಿವ ಸ್ಥಾನ ನೀಡಿದ್ದು, ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿದ್ದ ಆರ್‌.ಶಂಕರ್ ಹಾಗೂ ಶ್ರೀಮಂತ ಪಾಟೀಲ್ ಅವರಿಗೆ ಸ್ಥಾನ ಕೈತಪ್ಪಿದೆ. ಅದೇ ರೀತಿಯಲ್ಲಿ ಜಗದೀಶ್ ಶೆಟ್ಟರ್, ಎಸ್.ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ, ಲಕ್ಷ್ಮಣ ಸವದಿ, ಸಿ.ಪಿ.ಯೋಗೇಶ್ವರ್ ಅವರನ್ನು ಸಂಪುಟದಿಂದ ಈ ಬಾರಿ ಕೈಬಿಡಲಾಗಿದೆ.

ಹಾಗೂ ಬಿಜೆಪಿ ಕಾರ್ಯಕರ್ತರ ಶಿಳ್ಳೆ, ಚಪ್ಪಾಳೆ, ಹರ್ಷೋದ್ದಾರ, ಜಯಘೋಷಗಳು ಮುಗಿಲು ಮುಟ್ಟಿದವು. ಬೊಮ್ಮಾಯಿ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಮೂವರು(ಪರಿಶಿಷ್ಟ ಜಾತಿ-ಎಸ್ಸಿ), ಒಬ್ಬರು (ಪರಿಶಿಷ್ಟ ಪಂಗಡ-ಎಸ್ಪಿ), ಏಳು ಮಂದಿ ಹಿಂದುಳಿದ ವರ್ಗ, ಎಂಟು ಲಿಂಗಾಯತ, ಏಳು ಮಂದಿ ಒಕ್ಕಲಿಗ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದ್ದು, ಇಬ್ಬರು ಬ್ರಾಹ್ಮಣ ಹಾಗೂ ಓರ್ವ ಮಹಿಳೆ ಸೇರಿದಂತೆ ಒಟ್ಟು 29 ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಂಸದ ಡಾ.ಉಮೇಶ್ ಜಾಧವ್ ಸೇರಿದಂತೆ ಹಲವು ಗಣ್ಯರು ಹಾಗೂ ಅವರ ಕುಟುಂಬದ ಸದಸ್ಯರು ಸಮಾರಂಭದಲ್ಲಿ ಹಾಜರಿದ್ದು, ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.

ಗಮನಾರ್ಹ ಸಂಗತಿಗಳು: ಪ್ರಮಾಣ ವಚನ ಸ್ವೀಕರಿಸಲು ಆಗಮಿಸಿದ ಬಹುತೇಕ ಶಾಸಕರು ತಮ್ಮ ಕೊರಳಿಗೆ ಕೇಸರಿ ವಸ್ತ್ರವನ್ನು ತೊಟ್ಟಿದ್ದರು. ಬಂಜಾರ ಸಮುದಾಯದ ಆಕರ್ಷಕ ಉಡುಗೆ ತೊಟ್ಟ ಪ್ರಭು ಚವ್ಹಾಣ್ ಅವರು ತಮ್ಮ ಉಡುಗೆ-ತೊಡುಗೆಯಿಂದ ಎಲ್ಲರ ಗಮನ ಸೆಳೆದರು. ತಡವಾಗಿ ಆಗಮಿಸಿದ ಶಶಿಕಲಾ ಜೊಲ್ಲೆ ಅವರು ಏಕೈಕ ಮಹಿಳಾ ಸದಸ್ಯೆಯಾಗಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.

ಎಲ್ಲ ಸಚಿವರೂ ಕನ್ನಡದಲ್ಲಿಯೇ ಹಾಗೂ ದೇವರ ಹೆಸರಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾದರೆ, ಮುರುಗೇಶ್ ಆರ್. ನಿರಾಣಿ ಹಾಗೂ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ದೇವರ ಜೊತೆಗೆ ರೈತರ ಹೆಸರು ಸೇರಿಸಿ ಪ್ರಮಾಣ ವಚನ ಸ್ವೀಕರಿಸಿದರು. ಶಿವರಾಂ ಹೆಬ್ಬಾರ ಹಾಗೂ ಶಶಿಕಲಾ ಜೊಲ್ಲೆ ದೇವರ ಜೊತೆಗೆ ಕ್ಷೇತ್ರದ ಜನರ ಹೆಸರಲ್ಲೂ ಪ್ರಮಾಣ ಮಾಡಿದರು. ಆನಂದ್ ಸಿಂಗ್ ಅವರು ವಿಜಯನಗರದ ಪಂಪ ವಿರೂಪಾಕ್ಷ ಮತ್ತು ತಾಯಿ ಭುವನೇಶ್ವರಿ ಹೆಸರಿನಲ್ಲಿ ಹಾಗೂ ಬಿ.ಸಿ.ಪಾಟೀಲ್ ಅವರು ಜಗಜ್ಯೋತಿ ಬಸವೇಶ್ವರ ಹಾಗೂ ರೈತರ ಹೆಸರಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಪ್ರಭು ಚವ್ಹಾಣ್ ಅವರು ಗೋಮಾತೆ ಹಾಗೂ ಸಂತ ಸೇವಾಲಾಲ್ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

2ನೇ ಬಾರಿ ಪ್ರಮಾಣವಚನ ಸ್ವೀಕರಿಸಿದ ಶಂಕರ್ ಪಾಟೀಲ್ ಶಂಕರ್ ಪಾಟೀಲ್

10 ವಲಸಿಗರಿಗೆ ಪಟ್ಟ ಗಟ್ಟಿ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಮೂಲ ಕಾರಣಕರ್ತರು ಎನ್ನಲಾಗಿರುವ ಕಾಂಗ್ರೆಸ್-ಜೆಡಿಎಸ್ ಪಕ್ಷತ್ಯಜಿಸಿ ಬಂದು ಉಪ ಚುನಾವಣೆಯಲ್ಲಿ ಪುನರ್ ಆಯ್ಕೆಯಾದ (ಎಂಟಿಬಿ ನಾಗರಾಜ್ ಹೊರತುಪಡಿಸಿ) ಒಟ್ಟು 10 ಮಂದಿಗೆ ಸಚಿವ ಸ್ಥಾನ ನೀಡಿದ್ದು, ವಲಸಿಗರಿಗೆ ಪಟ್ಟ ಗಟ್ಟಿಯಾಗಿದೆ.

ಶಿವರಾಂ ಹೆಬ್ಬಾರ, ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ಬಿ.ಎ.ಬಸವರಾಜು (ಭೈರತಿ), ಡಾ.ಕೆ.ಸುಧಾಕರ್, ಕೆ.ಗೋಪಾಲಯ್ಯ, ಎಂಟಿಬಿ ನಾಗರಾಜ್ (ಮೇಲ್ಮನೆ ಸದಸ್ಯ), ಕೆ.ಸಿ.ನಾರಾಯಣಗೌಡ, ಆನಂದ್ ಸಿಂಗ್, ಮುನಿರತ್ನ ಸೇರಿದಂತೆ ಒಟ್ಟು ಹತ್ತು ಮಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿದೆ. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಅವರ ಸಹೋದರ

ಬಾಲಚಂದ್ರ ಜಾರಕಿಹೊಳಿ ಅವರನ್ನು ವರಿಷ್ಠರು ಪರಿಗಣಿಸಿಲ್ಲ. ಬಿಎಸ್‌ವೈ ಸಂಪುಟದಲ್ಲಿ ಸಚಿವರಾಗಿದ್ದ ಸಿ.ಪಿ.ಯೋಗೇಶ್ವರ್, ಆರ್. ಶಂಕರ್ ಹಾಗೂ ಶ್ರೀಮಂತ ಪಾಟೀಲ್ ಅವರನ್ನು ಕೈಬಿಡಲಾಗಿದೆ. ಅಲ್ಲದೆ, ಹಿರಿಯರಾದ ಎಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿತ್ತು. ಆದರೆ, ಅವರಿಗೂ ಈ ಬಾರಿ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಜೊತೆಗೆ ಬೆಳಗಾವಿ ಜಿಲ್ಲೆ ಅಥಣಿ ಕ್ಷೇತ್ರದ ಮಹೇಶ್‌ ಕುಮಟಳ್ಳಿ ಅವರಿಗೂ ಸಚಿವ ಸ್ಥಾನ ಕೈತಪ್ಪಿದೆ.

ಮುನೇನಕೊಪ್ಪ ಸಚಿವರಾಗಿ ಅಧಿಕಾರ ಮತ್ತು ಗೌಪ್ಯತಾ ಪ್ರಮಾಣ ವಚನವನ್ನು ಪ್ರತ್ಯೇಕವಾಗಿ ಸ್ವೀಕರಿಸುವ ಬದಲು ಅಧಿಕಾರಪದದ ಪ್ರತಿಜ್ಞಾ ವಿಧಿಯನ್ನು ಎರಡು ಬಾರಿ ಸ್ವೀಕರಿಸಿದರು. ಇದನ್ನು ಗಮನಿಸಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮುನೇನಕೊಪ್ಪ ಅವರನ್ನು ರಾಜಭವನಕ್ಕೆ ಕರೆಸಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಸಮ್ಮುಖದಲ್ಲಿ ಮತ್ತೊಮ್ಮೆ ಪ್ರಮಾಣ ವಚನವನ್ನು ಬೋಧಿಸಿದರು ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭು ಶಂಕರ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರಮಾಣ ವಚನ ಸ್ವೀಕರಿಸಿದವರು

ಗೋವಿಂದ ಎಂ.ಕಾರಜೋಳ-ಮುಧೋಳ ಕ್ಷೇತ್ರ, ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ, ಆರ್. ಅಶೋಕ್-ಪದ್ಮನಾಭ ನಗರ, ಬಿ.ಶ್ರೀರಾಮುಲು-ಮೊಳಕಾಲ್ಲೂರು, ಉಮೇಶ್ ಕತ್ತಿ-ಹುಕ್ಕೇರಿ, ಎಸ್.ಅಂಗಾರ-ಸುಳ್ಯ, ಜೆ.ಸಿ. ಮಾಧುಸ್ವಾಮಿ-ಚಿಕ್ಕನಾಯಕನಹಳ್ಳಿ, ಡಾ.ಸಿ.ಎನ್.ಅಶ್ವತ್ಥ ನಾರಾಯಣ-ಮಲ್ಲೇಶ್ವರ, ಸಿ.ಸಿ.ಪಾಟೀಲ್-ನರಗುಂದ, ಆನಂದ್ ಸಿಂಗ್-ವಿಜಯನಗರ, ಕೋಟ ಶ್ರೀನಿವಾಸ ಪೂಜಾರಿ-ಪರಿಷತ್ ಸದಸ್ಯ, ಪ್ರಭು ಚವ್ಹಾಣ್-ಔರಾದ್, ಮುರುಗೇಶ್ ಆರ್.ನಿರಾಣಿ-ಬೀಳಗಿ, ವಿ.ಸೋಮಣ್ಣ-ಗೋವಿಂದರಾಜನಗರ, ಶಿವರಾಂ ಹೆಬ್ಬಾರ-ಯಲ್ಲಾಪುರ, ಎಸ್.ಟಿ.ಸೋಮಶೇಖರ್-ಯಶವಂತಪುರ, ಬಿ.ಸಿ. ಪಾಟೀಲ್-ಹಿರೇಕೆರೂರು, ಬಿ.ಎಸ್.ಬಸವರಾಜು-ಕೆ.ಆರ್‌.ಪುರ, ಡಾ.ಕೆ.ಸುಧಾಕರ್-ಚಿಕ್ಕಬಳ್ಳಾಪುರ, ಕೆ.ಗೋಪಾಲಯ್ಯ-ಮಹಾಲಕ್ಷ್ಮಿ ಲೇಔಟ್, ಎಂಟಿಬಿ ನಾಗರಾಜ್ ವಿಧಾನಪರಿಷತ್ ಸದಸ್ಯ, ಶಶಿಕಲಾ ಜೊಲ್ಲೆನಿಪ್ಪಾಣಿ, ಕೆ.ಸಿ.ನಾರಾಯಣಗೌಡ-ಕೆ. ಆರ್.ಪೇಟೆ, ವಿ.ಸುನೀಲ್ ಕುಮಾರ್-ಕಾರ್ಕಳ, ಅರಗ ಜ್ಞಾನೇಂದ್ರ-ತೀರ್ಥಹಳ್ಳಿ, ಮುನಿರತ್ನ-ರಾಜರಾಜೇಶ್ವರಿ ನಗರ, ಹಾಲಪ್ಪ ಆಚಾರ್-ಯಲಬುರ್ಗಾ, ಶಂಕರ್‌ ಪಾಟೀಲ್ ಮುನೇನಕೊಪ್ಪ-ನವಲಗುಂದ, ಬಿ.ಸಿ.ನಾಗೇಶ್-ತಿಪಟೂರು.

ಓಡೋಡಿ ಬಂದ ಜೊಲೆ

ಬೆಂಗಳೂರು: ಅಂಗನವಾಡಿ ಕೇಂದ್ರಗಳಿಗೆ 'ಕೋಳಿಮೊಟ್ಟೆ ಪೂರೈಕೆ ಪ್ರಕರಣದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಕೈತಪ್ಪುವ ಭೀತಿಯಲ್ಲಿದ್ದ ಬೆಳಗಾವಿ ಜಿಲ್ಲೆ ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಕೊನೆಯ ಕ್ಷಣದಲ್ಲಿ ಅಕ್ಷರಶಃ ಓಡೋಡಿ ಬಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ವರಿಷ್ಠರ ಮನವೊಲಿಕೆಗೆ ದಿಲ್ಲಿಯಲ್ಲೇ ಬೀಡುಬಿಟ್ಟಿದ್ದ ಶಶಿಕಲಾ, ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ಖಚಿತವಾದ ಬಳಿಕ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರವಾಗಿ ಝೀರೋ ಟ್ರಾಫಿಕ್‌ನಲ್ಲಿ, ಪೊಲೀಸ್ ಎಸ್ಕಾರ್ಟ್‌ನಲ್ಲಿ ಪತಿ ಹಾಗೂ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರೊಂದಿಗೆ ರಾಜಭವನಕ್ಕೆ ತಡವಾಗಿ ಆಗಮಿಸಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು ವಿಶೇಷವಾಗಿತ್ತು.

ಹೊಸದಿಲ್ಲಿಯಿಂದ ಬೆಂಗಳೂರಿಗೆ ಬರುವ ವಿಮಾನ ತಡವಾಗಿದ್ದರಿಂದ ಪ್ರಮಾಣವಚನ ಕಾರ್ಯಕ್ರಮಕ್ಕೂ ತಡವಾಗಿ ಬಂದಿದ್ದಾರೆ. ಶಶಿಕಲಾ ಜೊಲ್ಲೆ ಅವರು ಪ್ರಯಾಣದ ಮಾರ್ಗದಲ್ಲಿ ಸಂಚಾರ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ಇಂಡಿ ಗೋ ವಿಮಾನದಲ್ಲಿ ಬಂದ ಶಶಿಕಲಾ ಜೊಲ್ಲೆ ಜೊತೆ ಸಂಸದ ಡಾ.ಉಮೇಶ್ ಜಾಧವ್ ಮತ್ತು ಅಧಿಕಾರಿಗಳು ಇದ್ದರು ಎಂದು ತಿಳಿದು ಬಂದಿದೆ.

ಡಿಸಿಎಂ ಸ್ಥಾನಕ್ಕೆ ತಡೆ!

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರದಲ್ಲಿ ಈ ಬಾರಿ ಉಪಮುಖ್ಯಮಂತ್ರಿ ಸ್ಥಾನವನ್ನು ಯಾರಿಗೂ ನೀಡಲಾಗಿಲ್ಲ.

ಡಿಸಿಎಂ ಸ್ಥಾನಕ್ಕಾಗಿ ಹಿರಿಯ ಶಾಸಕರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಈ ಬಾರಿ ಯಾವುದೇ ಕಾರಣಕ್ಕೂಡಿಸಿಎಂಹುದ್ದೆಯನ್ನು ಯಾರಿಗೂ ನೀಡುವುದು ಬೇಡ ಎಂಬ ತೀರ್ಮಾನ ಕೈಗೊಂಡಿದ್ದು, ಈ ವಿಚಾರವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಸ್ಪಷ್ಟಪಡಿಸಿದ್ದಾರೆ.

ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಗೋವಿಂದ ಎಂ.ಕಾರಜೋಳ, ಡಾ.ಅಶ್ವತ್ಥ ನಾರಾಯಣ ಹಾಗೂ ಲಕ್ಷ್ಮಣ ಸವದಿ ಸೇರಿದಂತೆ ಮೂರು ಮಂದಿಯನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ಇದೀಗ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ನಾಲ್ಕೈದು ಮಂದಿಯನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ವರಿಷ್ಠರು ಈ ಬಾರಿ ಯಾರಿಗೂ ಡಿಸಿಎಂ ಹುದ್ದೆಯನ್ನು ನೀಡುವುದು ಬೇಡ ಎಂದು ಕೈಬಿಟ್ಟಿದ್ದಾರೆ.

'ಉಪಮುಖ್ಯಮಂತ್ರಿ ಹುದ್ದೆ'ಗೆ ಯಾವುದೇ ಸಾಂವಿಧಾನಿಕ ಮಾನ್ಯತೆ ಇಲ್ಲ. ಅಲ್ಲದೆ, ಉಪಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಅನಗತ್ಯ ತಾರತಮ್ಯ ಮಾಡಲಾಗುತ್ತದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ, ವರಿಷ್ಠರು ಈ ನಿರ್ಧಾರ ಮಾಡಿದ್ದಾರೆ. ಡಿಸಿಎಂ ಹುದ್ದೆಯಿಂದ ಯಾವುದೇ ಲಾಭವೂ ಇಲ್ಲ. ಹೆಸರಿಗಷ್ಟೆ ಡಿಸಿಎಂ ಹುದ್ದೆಯಾಗಿದೆ. ಹೀಗಾಗಿ ಉಪಮುಖ್ಯಮಂತ್ರಿ ಹುದ್ದೆಯನ್ನು ಕೈಬಿಡಲಾಗಿದೆ.

ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ, ಬಿ.ಶ್ರೀರಾಮುಲು, ಡಾ.ಅಶ್ವತ್ಥನಾರಾಯಣ, ಆರ್.ಅಶೋಕ್ ಸೇರಿದಂತೆ ಹಲವು ಮಂದಿ ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿದ್ದರು. ಕಾರಜೋಳ, ಕೆ.ಎಸ್.ಈಶ್ವರಪ್ಪ, ಬಿ.ಶ್ರೀರಾಮುಲು ಬೆಂಬಲಿಗರಿಂದ 'ತಮ್ಮ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನೇ ನೀಡಬೇಕು' ಎಂದು ಆಗ್ರಹಪಡಿಸಿದ್ದರು. ಈಶ್ವರಪ್ಪ ಪರವಾಗಿ ವಿವಿಧ ಮಠಾಧಿಪತಿಗಳು ಬಹಿರಂಗವಾಗಿ ಸುದ್ದಿಗೋಷ್ಠಿ ನಡೆಸಿ 'ಈಶ್ವರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದು ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು' ಎಂದು ಒತ್ತಾಯಿಸಿದ್ದರು.

ಒಕ್ಕಲಿಗ ಸಮುದಾಯದ ಆರ್.ಅಶೋಕ್ ಮತ್ತು ಡಾ.ಅಶ್ವತ್ಥ ನಾರಾಯಣ ಅವರೂ ಉಪಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ, ಅಂತಿಮವಾಗಿ ವರಿಷ್ಠರು ಉಪಮುಖ್ಯಮಂತ್ರಿ ಸ್ಥಾನವನ್ನು ಕೈಬಿಟ್ಟಿದ್ದಾರೆ. ಹೀಗಾಗಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಯಾರಿಗೂ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗುವುದು ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ.

6 ಮಂದಿ ಹೊಸಬರು

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ನೂತನ ಸಂಪುಟದಲ್ಲಿ ಆರು ಮಂದಿ ಹೊಸಬರಿಗೆ ಸಚಿವ ಸ್ಥಾನ ನೀಡಿದ್ದು, 2023ರ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಕೊಂಡು ಹೊಸ ಮುಖಗಳಿಗೆ ಅವಕಾಶ ಕಲ್ಪಿಸಿರುವುದು ಸ್ಪಷ್ಟವಾಗಿದೆ.

ಬಿಜೆಪಿ ಸಂಘಟನೆ ದೃಷ್ಟಿಯಲ್ಲಿಟ್ಟುಕೊಂಡುಶಿವಮೊಗ್ಗಜಿಲ್ಲೆ ತೀರ್ಥಹಳ್ಳಿಕ್ಷೇತ್ರದ

ಅರಗ ಜ್ಞಾನೇಂದ್ರ ಸುನೀಲ್ ಕುಮಾರ್ ಹಾಲಪ್ಪ ಆಚಾರ್ ಶಂಕರ್ ಪಾಟೀಲ್ ಎಂ. ಮುನಿರತ ಬಿ.ಸಿ.ನಾಗೇಶ್

ಅರಗಜ್ಞಾನೇಂದ್ರ, ತಿಪಟೂರು ಕ್ಷೇತ್ರದ ಬಿ.ಸಿ.ನಾಗೇಶ್, ಕಾರ್ಕಳ ಕ್ಷೇತ್ರದ ವಿ.ಸುನೀಲ್ ಕುಮಾರ್, ಯಲಬುರ್ಗಾ ಕ್ಷೇತ್ರ ಹಾಲಪ್ಪ ಆಚಾರ್, ನವಲಗುಂದ ಕ್ಷೇತ್ರದ ಶಂಕರ್ ಪಾಟೀಲ್ ಮುನೇನಕೊಪ್ಪ ಹಾಗೂ ಉಪಚುನಾವಣೆಯಲ್ಲಿ ಅತ್ಯಂತ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ರಾಜರಾಜೇಶ್ವರಿ ನಗರ ಕ್ಷೇತ್ರದ ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ.

ಎರಡು-ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಕೆಲಸ ಮಾಡಿದ ಅನುಭವವೂ ಇವರಿಗಿದೆ. ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಹೊಸ ಹುಮ್ಮಸ್ಸು, ವರ್ಚಸ್ಸು ತಂದುಕೊಡಬೇಕಿರುವ ಅಗತ್ಯವಿದೆ. ಹೀಗಾಗಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಕೆಲ ಹಿರಿಯರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ.

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...