ಹೊಸದಿಲ್ಲಿ: ಜನವರಿಯಿಂದ ದೇಶದಲ್ಲಿ 2.53 ಕೋಟಿ ಉದ್ಯೋಗ ನಷ್ಟ

Source: VB | By S O News | Published on 20th June 2021, 1:45 PM | National News |

ಹೊಸದಿಲ್ಲಿ: ಈ ವರ್ಷದ ಜನವರಿಯಿಂದ ಭಾರತದಲ್ಲಿ 2.53 ಕೋ.ಜನರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ) ತನ್ನ ವರದಿಯಲ್ಲಿ ತಿಳಿಸಿದೆ. ಫೆಬ್ರವರಿ ವೇಳೆಗೆ ದೇಶದಲ್ಲಿ 25 ಲಕ್ಷ ಉದ್ಯೋಗಗಳು ನಷ್ಟವಾಗಿದ್ದರೆ, ಮಾರ್ಚ್‌ನಲ್ಲಿ ಒಂದು ಲಕ್ಷ ಎಪ್ರಿಲ್‌ನಲ್ಲಿ 74 ಲಕ್ಷ ಮತ್ತು ಮೇ ತಿಂಗಳಿನಲ್ಲಿ 1.53 ಕೋ.ಉದ್ಯೋಗಗಳು ನಷ್ಟವಾಗಿವೆ ಎಂದು ಸಿಎಂಐಇ ಎಮ್‌ಡಿ ಮತ್ತು ಸಿಇಒ ಮಹೇಶ್ ವ್ಯಾಸ್‌ ವರದಿಯಲ್ಲಿ ವಿವರಿಸಿದ್ದಾರೆ.

2021 ಮೇ ತಿಂಗಳಿನಲ್ಲಿ ಶೇ.11.9ಕ್ಕೆ ತಲುಪಿದ್ದ ನಿರುದ್ಯೋಗ ದರ ಜೂನ್ ಆರ೦ಭದಲ್ಲಿಯೊ ಏರಿಕೆಯ ಹಾದಿಯಲ್ಲಿಯೇ ಇದ್ದು, ಜೂ.6ರ ವೇಳೆಗೆ 30 ದಿನಗಳ ಮೂವಿಂಗ್ ಆವರೇಜ್ ಅಥವಾ ಚಲಿಸುವ ಸರಾಸರಿ ನಿರುದ್ಯೋಗ ದರವು ಶೇ.13ರಷ್ಟಿತ್ತು. ಶೇ.40ಕ್ಕೆ ಕುಸಿದಿದ್ದ ಕಾರ್ಮಿಕ ಭಾಗವಹಿಸುವಿಕೆ ದರವು ಇನ್ನಷ್ಟು ಕುಸಿದು ಶೇ.39.7ಕ್ಕೆ ತಲುಪಿತ್ತು. ಮೇ ತಿಂಗಳಿನಲ್ಲಿ ಶೇ.35.3ಕ್ಕೆ ಕುಸಿದಿದ್ದ ಪ್ರಮುಖ ಕಾರ್ಮಿಕ ಮಾರುಕಟ್ಟೆ ಸೂಚಕವಾಗಿರುವ ನಿರುದ್ಯೋಗ ದರವು ಜೂ.6ರ ವೇಳೆಗೆ ಶೇ.34.6ಕ್ಕೆ ಕುಸಿದಿತ್ತು.

2020 ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ದೇಶಾದ್ಯಂತ ಕೋವಿಡ್ ಲಾಕ್ ಡೌನ್ ಹೇರಿದಾಗಿನಿಂದ ಭಾರತೀಯ ಕಾರ್ಮಿಕ ಮಾರುಕಟ್ಟೆಯು ತನ್ನ ಅತ್ಯಂತ ಹೀನ ಸ್ಥಿತಿಯಲ್ಲಿದೆ. ಮೇ 16ಕ್ಕೆ ಅಂತ್ಯಗೊಂಡ ವಾರದಿಂದ ಮೊದಲ್ಗೊಂಡು ಕಳೆದ ನಾಲ್ಕು ವಾರಗಳಲ್ಲಿ ಕಾರ್ಮಿಕ ಮಾರುಕಟ್ಟೆಯ ಸ್ಥಿತಿ ಇನ್ನಷ್ಟು ತೀವ್ರವಾಗಿ ಹದಗೆಟ್ಟಿದೆ. ಹಲವಾರು ವಾರಗಳವರೆಗೆ ಶೇ.8ರ ಆಸುಪಾಸಿನಲ್ಲಿ ಸ್ಥಿರವಾಗಿದ್ದ ನಿರುದ್ಯೋಗ ದರವು ಏಕಾಏಕಿ ಶೇ.14.5ಕ್ಕೆ ಏರಿದ್ದು, ಇದು ಮೇ 16ಕ್ಕೆ ಕೊನೆಗೊಂಡ ವಾರದಲ್ಲಿ ಹಲವಾರು ಜನರು ದಿಢೀರ್ ಉದ್ಯೋಗವನ್ನು ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ. ಮೇ 23ಕ್ಕೆ ಅಂತ್ಯಗೊಂಡ ಮುಂದಿನ ವಾರದಲ್ಲಿ ನಿರುದ್ಯೋಗ ದರವು ಶೇ.14.7ಕ್ಕೆ ಜಿಗಿಯುವುದರೊಂದಿಗೆ ಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು. ಮೇ 30ಕ್ಕೆ ಕೊನೆಗೊಂಡ ವಾರದಲ್ಲಿ ಈ ದರವು ಶೇ.12.2ಕ್ಕೆ ಇಳಿದಿತ್ತಾದರೂ ಈ ಎಲ್ಲ ವಾರಗಳಲ್ಲಿ ಕಾರ್ಮಿಕ ಭಾಗವಹಿಸುವಿಕೆ ಪ್ರಮಾಣ ಕುಸಿಯುತ್ತಲೇ ಇತ್ತು. ಕಳೆದ ವಾರ ಇದು ಶೇ.39ಕ್ಕೂ ಕೆಳಕ್ಕೆ ಕುಸಿದಿದ್ದು, ಇದು ನಿರುದ್ಯೋಗ ದರ ಕೊಂಚ ಇಳಿಕೆಯಾಗಿದ್ದರೂ ಕಾರ್ಮಿಕರು ತೀರ ಹತಾಶರಾಗಿದ್ದಾರೆ ಎನ್ನುವುದನ್ನು ಸೂಚಿಸುತ್ತಿದೆ. ಆದರೆ ಜೂ.6ಕ್ಕೆ ಅಂತ್ಯಗೊಂಡ ವಾರದಲ್ಲಿ ನಿರುದ್ಯೋಗ ದರವು ಮತ್ತೆ ಶೇ.13.6ಕ್ಕೆ ಏರಿತ್ತು ಮತ್ತು ಕಾರ್ಮಿಕ ಭಾಗವಹಿಸುವಿಕೆ ಪ್ರಮಾಣವೂ ಚೇತರಿಸಿಕೊಂಡಿರಲಿಲ್ಲ. ಕಾರ್ಮಿಕ ಭಾಗವಹಿಸುವಿಕೆ ಪ್ರಮಾಣ ನಿರಂತರವಾಗಿ ಕುಸಿಯುತ್ತಲೇ ಇರುವುದು ಕಳವಳದ ವಿಷಯವಾಗಿದೆ.

ಇನ್ನು ಉದ್ಯೋಗ ದರದ ವಿಷಯಕ್ಕೆ ಬರುವುದಾದರೆ 2021 ಎಪ್ರಿಲ್‌ನಲ್ಲಿ ಶೇ.36.8ರಷ್ಟಿದ್ದ ಅದು ಮೇ ತಿಂಗಳಿನಲ್ಲಿ ಶೇ.35.3ಕ್ಕೆ ಕುಸಿದಿತ್ತು, ಅಂದರೆ 1.53 ಕೋ.ಉದ್ಯೋಗಗಳು ನಷ್ಟವಾಗಿದ್ದವು. ಜೂ.6ಕ್ಕೆ ಅಂತ್ಯಗೊಂಡ ವಾರಕ್ಕೆ ಇದು ಶೇ.33.9ಕ್ಕೆ ಇಳಿದಿತ್ತು.

2021 ಜನವರಿಯಲ್ಲಿ ಇತ್ತೀಚಿನ ಉತ್ತುಂಗ 40.07 ಕೋ. ಗೆ ತಲುಪಿದ್ದ ಉದ್ಯೋಗಗಳ ಸಂಖ್ಯೆ ನಂತರದ ನಾಲ್ಕು ತಿಂಗಳಲ್ಲಿ ನಿರಂತರವಾಗಿ ಕುಸಿಯುತ್ತಲೇ ಇದೆ. ಜನವರಿಯಿಂದ ದೇಶದಲ್ಲಿ ಒಟ್ಟು 2.53 ಕೋ.ಉದ್ಯೋಗಗಳು ನಷ್ಟವಾಗಿವೆ. ಅಂದರೆ ನಾಲ್ಕು ತಿಂಗಳುಗಳ ಅವಧಿಯಲ್ಲಿ ಶೇ.6.3ರಷ್ಟು ಕುಸಿದಿದೆ.

ಕೋವಿಡ್ ಲಾಕ್‌ಡೌನ್‌ ಜಾರಿಯಲ್ಲಿರುವ ದೇಶದ ಹಲವಾರು ರಾಜ್ಯಗಳು ನಿರ್ಬಂಧಗಳನ್ನು ಸಡಿಲಿಸಲು ಆರಂಭಿಸಿರುವುದರಿಂದ ಯಾವುದೇ ನಿಯಂತ್ರಣವಿಲ್ಲದೆ ಕುಸಿಯುತ್ತಲೇ ಇದ್ದ ಉದ್ಯೋಗ ದರವು ಮುಂದಿನ ವಾರಗಳಲ್ಲಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.

ಈ ಸಡಿಲಿಕೆಗಳು ಈ ವರ್ಷದ ಮೇ ತಿಂಗಳಿನಲ್ಲಿ ಲಾಕ್‌ಡೌನ್ ಹೇರಿದಾಗಿನಿಂದಲೂ ಸಂಕಷ್ಟದಲ್ಲಿರುವ ದಿನಗೂಲಿ ಕಾರ್ಮಿಕರಿಗೆ ಕೊಂಚ ನೆಮ್ಮದಿಯನ್ನು ಒದಗಿಸಬಹುದು. ಈ ಅವಧಿಯಲ್ಲಿ ಸುಮಾರು 1.7 ಕೋ.ದಿನಗೂಲಿ ಕಾರ್ಮಿಕರು ಮತ್ತು ಬೀದಿಬದಿ ಮಾರಾಟಗಾರರಂತಹ ಸಣ್ಣವ್ಯಾಪಾರಿಗಳು ಜೀವನೋಪಾಯಗಳನ್ನು ಕಳೆದುಕೊಂಡಿದ್ದಾರೆ.

ಸ್ಥಳೀಯ ಲಾಕ್‌ಡೌನ್‌ಗಳಿಂದಾಗಿ ಅಸಂಘಟಿತ ಕ್ಷೇತ್ರಗಳಲ್ಲಿ ನಷ್ಟವಾಗಿದ್ದ ಅನೌಪಚಾರಿಕ ಉದ್ಯೋಗಗಳಲ್ಲಿ ಚುರುಕಿನ ಚೇತರಿಕೆಯನ್ನು ನಿರೀಕ್ಷಿಸಬಹುದಾಗಿದೆ. ಆದರೆ ಉದ್ಯೋಗ ದರವನ್ನು 2019-20ರಲ್ಲಿದ್ದ ಮಟ್ಟಕ್ಕೆ ಹೆಚ್ಚಿಸಲು ದೇಶದ ಆರ್ಥಿಕತೆಯಲ್ಲಿ ಬಲವಾದ ಚೇತರಿಕೆ ಅಗತ್ಯವಾಗಿದೆ ಎಂದು ವ್ಯಾಸ್ ವರದಿಯಲ್ಲಿ ಹೇಳಿದ್ದಾರೆ.

 

Read These Next

ಹುಬ್ಬಳ್ಳಿ: ಹುಬ್ಬಳ್ಳಿಯ ಚರ್ಚ್‌ಗೆ ನುಗ್ಗಿ ಭಜನೆ ಮಾಡಿದ ಸಂಘಪರಿವಾರದ ಕಾರ್ಯಕರ್ತರು

ಬಲವಂತದಿಂದ ಮತಾಂತರಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ರವಿವಾರ ಬೆಳಗ್ಗೆ ಇಲ್ಲಿಯ ಭೈರಿದೇವರ ಕೊಪ್ಪದಲ್ಲಿರುವ ಚರ್ಚೆಂದಕ್ಕೆ ...

ಫೇಸ್ ಕ್ರೀಂನಲ್ಲಿ 24 ಲಕ್ಷ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಯತ್ನ: ಏರ್ ಪೋರ್ಟ್ ನಲ್ಲಿ ಆರೋಪಿ ಬಂಧನ

ಹೈದರಾಬಾದ್: ಹೈದರಾಬಾದ್ ಆರ್ ಜಿ ಐ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಫೇಸ್ ಕ್ರೀಮ್ ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ...