ಇಂದು ಸಂಪುಟ ವಿಸ್ತರಣೆ; 24 ಮಂದಿಗೆ ಸಚಿವ ಸ್ಥಾನ; ಇಂದು ಪ್ರಮಾಣ ವಚನ; ದೇಶಪಾಂಡೆ, ಹರಿಪ್ರಸಾದ್, ಸವದಿ, ಶೆಟ್ಟರ್ ಪಟ್ಟಿಯಲ್ಲಿ ಇಲ್ಲ

Source: Vb | By I.G. Bhatkali | Published on 27th May 2023, 7:38 AM | State News | National News |

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಎರಡು ದಿನಗಳಿಂದ ಹೊಸದಿಲ್ಲಿಯಲ್ಲಿ ನಡೆಯುತ್ತಿದ್ದ ಪ್ರಕ್ರಿಯೆ ಅಂತಿಮಗೊಂಡಿದ್ದು, 24 ಮಂದಿ ಶಾಸಕರಿಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ತೋರಿದೆ ಎಂದು ತಿಳಿದು ಬಂದಿದೆ.

ರಾಜ್ಯ ಸರಕಾರದ ಮನವಿ ಹಿನ್ನೆಲೆಯಲ್ಲಿ ಶನಿವಾರ(ಮೇ 27) ರಾಜಭವನದ ಗಾಜಿನ ಮನೆಯಲ್ಲಿ ಬೆಳಗ್ಗೆ 11:45ಕ್ಕೆ ನೂತನ ಸಚಿವರ ಪದಗ್ರಹಣ ಸಮಾರಂಭ ನಡೆಯಲಿದ್ದು, ರಾಜ್ಯಪಾಲ ಥಾವರ್‌ಚಂದ್ ಗೆಹ್ಲಟ್ ಪ್ರಮಾಣ ವಚನ ಬೋಧಿಸಲಿದ್ದಾರೆ. ಅಂದು ಸಂಜೆಯೇ ಎಲ್ಲ ಸಚಿವರಿಗೆ ಖಾತೆಗಳ ಹಂಚಿಕೆಯಾಗುವ ಸಾಧ್ಯತೆಯಿದೆ.

ಹೊಸದಿಲ್ಲಿಯಲ್ಲಿರುವ ಕಾಂಗ್ರೆಸ್ ವಾರ್ ರೂಮ್‌ನಲ್ಲಿ ಗುರುವಾರ ಹಾಗೂ ಶುಕ್ರವಾರ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರೊಂದಿಗೆ ಸರಣಿ ಸಭೆಗಳನ್ನು ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಂತಿಮವಾಗಿ ಸಚಿವ ಸಂಪುಟಕ್ಕೆ ಯಾರನ್ನೆಲ್ಲ ಸೇರಿಸಿಕೊಳ್ಳಬೇಕು ಎಂಬುದರ ಕುರಿತು ಒಮ್ಮತದ ತೀರ್ಮಾನಕ್ಕೆ ಬಂದರು.

ಇದಲ್ಲದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ವರಿಷ್ಠ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತ್ಯೇಕವಾಗಿ ಭೇಟಿ ಮಾಡಿ ಸಂಪುಟ ವಿಸ್ತರಣೆ ಹಾಗೂ ಸಚಿವರಿಗೆ ಖಾತೆಗಳ ಹಂಚಿಕೆ ಕುರಿತು ಚರ್ಚೆ ನಡೆಸಿದರು.

ಕಾಂಗ್ರೆಸ್ ನಾಯಕರೊಂದಿಗೆ ಸರಣಿ ಸಭೆಗಳ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಪ್ತ ಸಚಿವರಾದ ಕೆ.ಜೆ, ಜಾರ್ಜ್, ಎಂ.ಬಿ.ಪಾಟೀಲ್, ಝಮೀರ್ ಅಹ್ಮದ್ ಖಾನ್ ಹಾಗೂ ಶಾಸಕ ಭೈರತಿ ಸುರೇಶ್ ಜೊತೆ ವಿಶೇಷ ವಿಮಾನದ ಮೂಲಕ ಹೊಸದಿಲ್ಲಿಯಿಂದ ಬೆಂಗಳೂರು ತಲುಪಿದ್ದಾರೆ.

ಹಿರಿಯರಿಗೆ ಕೈತಪ್ಪಲಿರುವ ಸಚಿವ ಸ್ಥಾನ?: ಸ್ಪೀಕರ್ ಹುದ್ದೆ ಸ್ವೀಕರಿಸಲು ನಿರಾಕರಿಸಿದ ವಿಧಾನಸಭೆಯ ಅತ್ಯಂತ ಹಿರಿಯ ಸದಸ್ಯ ಆರ್.ವಿ.ದೇಶಪಾಂಡೆ, ಟಿ.ಬಿ.ಜಯಚಂದ್ರ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ವಿಧಾನಪರಿಷತ್ತಿನ ಹಿರಿಯ ಸದಸ್ಯ ನಸೀರ್ ಅಹ್ಮದ್, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಬಸವರಾಜ ರಾಯರಡ್ಡಿ, ವಿನಯ್ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ್, ತನ್ವೀರ್ ಸೈಟ್ ಸೇರಿದಂತೆ ಹಿರಿಯ ಶಾಸಕರಿಗೆ ಸಚಿವ ಸ್ಥಾನ ಕೈ ತಪ್ಪುವ ಸಾಧ್ಯತೆಯಿದೆ ಎನ್ನಲಾಗಿದೆ.

ಸಿಎಂಗೆ ಪರಮಾಧಿಕಾರ; ಸುರ್ಜೆವಾಲ: ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸುತ್ತಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ತಿಳಿಸಿದ್ದಾರೆ. ಶುಕ್ರವಾರ ಹೊಸದಿಲ್ಲಿರುವ ಕಾಂಗ್ರೆಸ್ ವಾರ್ ರೂಮ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ನಾಯಕರ ಜೊತೆ ಸಿದ್ದರಾಮಯ್ಯ ಹಲವು ಹೆಸರುಗಳನ್ನು ಮುಂದಿಟ್ಟಿದ್ದಾರೆ. ಎಲ್ಲವೂ ಮುಖ್ಯಮಂತ್ರಿಯ ವಿವೇಚನೆ ಹಾಗೂ ಪರಮಾಧಿಕಾರ ಎಂದರು. ಶನಿವಾರ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದು ಸುರ್ಜೆವಾಲ ಮಾಹಿತಿ ನೀಡಿದರು.

ಸಚಿವರಾಗಲಿರುವವರು: ಡಾ.ಎಚ್.ಸಿ.ಮಹದೇವಪ್ಪ, ಎಚ್‌.ಕೆ. ಪಾಟೀಲ್, ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್, ಶರಣಬಸಪ್ಪ ದರ್ಶನಾಪುರ್, ಲಕ್ಷ್ಮೀ ಹೆಬ್ಬಾಳ‌ಕರ್, ಸಂತೋಷ್ ಲಾಡ್, ಎಂ.ಸಿ.ಸುಧಾಕರ್, ಡಿ. ಸುಧಾಕರ್‌, ಡಾ. ಶರಣಪ್ರಕಾಶ್ ಪಾಟೀಲ್, ಈಶ್ವರ್ ಖಂಡ್ರೆ, ಆ. ರಹೀಮ್ ಖಾನ್, ಬಿ.ನಾಗೇಂದ್ರ, ಮಂಕಾಳು ವೈದ್ಯ, ಮಧು ಬಂಗಾರಪ್ಪ, ಬೋಸರಾಜು, ಕೆ.ಎನ್‌.ರಾಜಣ್ಣ, ಬೈರತಿ ಸುರೇಶ್, ಶಿವಾನಂದ ಪಾಟೀಲ್‌, ಕೆ.ವೆಂಕಟೇಶ್, ಎಸ್‌.ಎಸ್‌. ಮಲ್ಲಿಕಾರ್ಜುನ್, ಎನ್.ಚಲುವರಾಯಸ್ವಾಮಿ, ಶಿವರಾಜ ತಂಗಡಗಿ, ಆರ್.ಬಿ.ತಿಮ್ಮಾಪುರ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...

ಪತಂಜಲಿಯಿಂದ ನ್ಯಾಯಾಲಯದ ಆದೇಶ ಉಲ್ಲಂಘನೆ; ಕಾನೂನು ಕ್ರಮ ಎದುರಿಸಲು ಸಿದ್ದರಾಗಿ ಪತಂಜಲಿಗೆ ಸುಪ್ರೀಂ ಕೋರ್ಟ್ ಚಾಟಿ

ವೈಜ್ಞಾನಿಕ ತಳಹದಿಯ ಔಷಧಿಗಳನ್ನು ಟೀಕಿಸುವ ಹಾಗೂ ಜನರನ್ನು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸುವುದನ್ನು ...