ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳ ಒಗ್ಗಟ್ಟಿಗೆ ನಿತೀಶ್ ಕರೆ

Source: Vb | By I.G. Bhatkali | Published on 27th September 2022, 12:43 AM | National News |

ಫತೇಹಾಬಾದ್ (ಹರ್ಯಾಣ): ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಮತ್ತು ಎಡಪಕ್ಷಗಳು ಸೇರಿದಂತೆ ಎಲ್ಲ ಪ್ರತಿಪಕ್ಷಗಳು ಒಗ್ಗೂಡುವಂತೆ ರವಿವಾರ ಇಲ್ಲಿ ಕರೆ ನೀಡಿದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಪ್ರತಿಪಕ್ಷಗಳ ಈ ಪ್ರಮುಖ ಮೈತ್ರಿಕೂಟವು 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಕೆಟ್ಟ ಸೋಲನ್ನು ಖಚಿತಪಡಿಸಲಿದೆ ಎಂದರು.

ಮಾಜಿ ಉಪಪ್ರಧಾನಿ ದೇವಿಲಾಲ್‌ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದಐಎನ್ ಎಲ್‌ ಡಿ ಬ್ಯಾಲಿಯಲ್ಲಿ ಮಾತನಾಡಿದ ಅವರು, ಎಲ್ಲ ಬಿಜೆಪಿಯೇತರ ಪಕ್ಷಗಳು ಒಗ್ಗೂಡಿದರೆ ದೇಶವನ್ನು ನಾಶಗೊಳಿಸುತ್ತಿರುವವರನ್ನು ಕಿತ್ತೊಗೆಯಬಹುದು ಎಂದು ಹೇಳಿದರು. ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಯಾವುದೇ ಕಲಹವಿಲ್ಲ ಎಂದ ಅವರು, ಬಿಜೆಪಿಯು ಗಲಭೆಗಳನ್ನು ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

'ರಾಷ್ಟ್ರೀಯ ಮಟ್ಟದಲ್ಲಿ ನಾವು ಒಂದುಗೂಡುವ ಅಗತ್ಯವಿದೆ ಎನ್ನುವುದು ನನ್ನ ಏಕೈಕ ಬಯಕೆ. ನಾವು ಹೆಚ್ಚೆಚ್ಚು ಪಕ್ಷಗಳನ್ನು ಒಂದುಗೂಡಿಸುವ ಅಗತ್ಯವಿದೆ ಎಂದು ನಿತೀಶ್ ಹೇಳಿದರು.

ಎನ್‌ಡಿಎ ಈಗ ಅಸ್ತಿತ್ವದಲ್ಲಿಲ್ಲ, ಬಿಜೆಪಿಯ ಮಿತ್ರಪ್ಪಗಳು ಅದರಿಂದ ಹೊರಬಂದಿವೆ. ಜೆಡಿಯು, ಅಕಾಲಿ ದಳ ಮತ್ತು ಶಿವಸೇನೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸಲು ಬಿಜೆಪಿ ನೇತೃತ್ವದ ಎನ್ ಡಿಎ ಅನ್ನು ತೊರೆದಿವೆ ಎಂದು ಆರ್‌ಜೆಡಿ ನಾಯಕ ಹಾಗೂ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಹೇಳಿದರು.

ಬಿಜೆಪಿಯು ಸುಳ್ಳು ಹೇಳಿಕೆಗಳು ಮತ್ತು ಭರವಸೆಗಳನ್ನು ನೀಡುತ್ತಿದೆ ಎಂದು ಹೇಳಿದ ಅವರು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇತ್ತೀಚೆಗೆ ಬಿಹಾರದ ಪೂರ್ಣಿಯಾದಲ್ಲಿನ ಸಾರ್ವಜನಿಕ ಸಭೆಯಲ್ಲಿ ಅಲ್ಲಿಯ ವಿಮಾನ ನಿಲ್ದಾಣದ ಬಗ್ಗೆ ಮಾತನಾಡಿದ್ದರು, ಅಸಲಿಗೆ ಅಲ್ಲಿ ವಿಮಾನ ನಿಲ್ದಾಣವೇ ಇಲ್ಲ ಎಂದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗದ ಬಲ ಪ್ರದರ್ಶನಕ್ಕಾಗಿ ಹರ್ಯಾಣದ ಇಂಡಿಯನ್ ನ್ಯಾಷನಲ್ ಲೋಕ ದಳವು ಆಯೋಜಿಸಿದ್ದ ದೇವಿಲಾಲ್ ಸಮಾನ ರಾಲಿಯಲ್ಲಿ ಪ್ರತಿಪಕ್ಷಗಳ ಹಲವಾರು ಹಿರಿಯ ನಾಯಕರು ಭಾಗವಹಿಸಿದ್ದರು. ಐಎನ್‌ಎಲ್‌ಡಿ ನಾಯಕ ಓಂ ಪ್ರಕಾಶ್ ಚೌಟಾಲಾ, ಶಿರೋಮಣಿ ಅಕಾಲಿ ದಳದ ಸುಖಬೀರ್‌ಸಿಂಗ್ ಬಾದಲ್, ಎನ್ ಸಿಪಿ ನಾಯಕ ಶರದ್ ಪವಾರ್, ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಹಾಗೂ ಸಿವಸೇನಾದ ಅರವಿಂದ ಸಾವಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಹಾರದ ಉಪಮುಖ್ಯಮಂತ್ರಿ ಹಾಗೂ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಕೂಡಾ ವೇದಿಕೆಯಲ್ಲಿದ್ದರು. ಕಾಂಗ್ರೆಸ್ ಪಕ್ಷದ ನಾಯಕರ ಗೈರುಹಾಜರಿ ಎದ್ದು ಕಾಣುತ್ತಿತ್ತು.

ಕಾಂಗ್ರೆಸ್ ಮತ್ತು ಐಎನ್‌ಎಲ್‌ಡಿ ಹರ್ಯಾಣದಲ್ಲಿ ಬದ್ಧವೈರಿಗಳಾಗಿವೆ. ಆದಾಗ್ಯೂ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ತಾನು ಈಗ ಕಾಂಗ್ರೆಸ್ ಜೊತೆಗೂ ಕೈ ಜೋಡಿಸಲು ಸಿದ್ಧವಿದ್ದೇನೆ ಎಂದು ಐಎನ್‌ಎಲ್‌ಡಿ ಹೇಳಿದೆ.

ಹರ್ಯಾಣದ ಅತ್ಯಂತ ಪ್ರಬಲ ಪಕ್ಷಗಳಲ್ಲಿ ಒಂದಾಗಿದ್ದ ಐಎನ್‌ಎಲ್‌ಡಿ ವಿಭಜನೆಯ ಬಳಿಕ ಈಗ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದು, ಹರ್ಯಾಣ ವಿಧಾನಸಭೆಯಲ್ಲಿ ಏಕೈಕ ಶಾಸಕನನ್ನು ಹೊಂದಿದೆ. ಪಕ್ಷದ ಪೋಷಕ ಓಂ ಪ್ರಕಾಶ್ ಚೌಟಾಲಾ ಅವರ ಹಿರಿಯ ಪುತ್ರ ಅಜಯ್ ಚೌಟಾಲಾ ಅವರು ತನ್ನದೇ ಆದ ಜನನಾಯಕ ಜನತಾ ಪಕ್ಷವನ್ನು ಸ್ಥಾಪಿಸಿ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ.

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...