ಇರಾನ್ ನಲ್ಲಿ ಬಂಧಿತ ಉತ್ತರ ಕನ್ನಡದ 18 ಮೀನುಗಾರರಿಗೆ ಬಿಡುಗಡೆ ಭಾಗ್ಯ

Source: sonews | By Staff Correspondent | Published on 8th January 2019, 10:54 PM | Coastal News | State News | Gulf News |

* ದುಬೈ ಕರ್ನಾಟಕ ಎನ್.ಆರ್.ಐ ಫೋರಂ ನ ಕಾನೂನು ಹೋರಾಟಕ್ಕೆ   ಸಿಕ್ಕ ಜಯ
* ಭಟ್ಕಳದ ಮೀನುಗಾರರ ಕುಟುಂಬದಲ್ಲಿ ಸಂತಸದ ನಗೆ

ಭಟ್ಕಳ: ದುಬೈಯಿಂದ ಮೀನುಗಾರಿಕೆಗೆ ತೆರಳಿದ್ದ ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಕುಮಟಾ, ಮುರುಡೇಶ್ವರ, ಮಂಕಿಯ ಸುಮಾರು 18 ಮಂದಿ ಮೀನುಗಾರರನ್ನು ಇರಾನ್ ಗಡಿ ಪ್ರವೇಶಿಸಿದ್ದ ಹಿನ್ನೆಲೆಯಲ್ಲಿ ಕಳೆದ 6 ತಿಂಗಳ ಹಿಂದೆ ಜುಲೈ 27, 2018ರಂದು ಬಂಧಿಸಿದ್ದ ಇರಾನ್ ಸರ್ಕಾರ ದುಬೈ ಕರ್ನಾಟಕ ಎನ್.ಆರ್.ಐ ಫೋರಂ ನ  ನಿರಂತರ ಪ್ರಯತ್ನದಿಂದಾಗಿ ಮಂಗಳವಾರ ಅವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಅಧಿಕೃತ ಮಾಹಿತಿ ಲಭ್ಯವಾಗಿದೆ.

ಬಿಡುಗಡೆಗೊಂಡ ಉತ್ತರಕನ್ನಡ ಮೀನುಗಾರರನ್ನು ಮುರುಢೇಶ್ವರದ ಇಬ್ರಾಹಿಂ ಮುಲ್ಲಾ ಫಖೀರಾ, ಮುಹಮ್ಮದ್ ಅನ್ಸಾರ್ ಇಸ್ಮಾಯಿಲ್ ಬಾಪು, ನಯೀಮ್ ಹಸನ್ ಭಾಂಡಿ, ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ತೆಂಗಿನಗುಂಡಿ ಪ್ರದೇಶದ ಖಲೀಲ್ ಪಾನಿಬುಡು, ಉಸ್ಮಾನ್ ಬೊಂಬಾಯಿಕರ್ ಮುಹಮ್ಮದ್ ಇಸ್ಹಾಖ್, ಅಬ್ದುಲ್ ಮೊಹಮ್ಮದ್ ಹುಸೇನ್, ಮುಹಮ್ಮದ್ ಷರೀಫ್ ಯಸೂಫ್ ಬಾಪು, ಅಬ್ದುಲ್ಲಾ ಸುಲೈಮಾನ್ ಡಾಂಗಿ, ಕುಮಟಾ ತಾಲೂಕಿನ ಅತಿಖ್ ಸುಲೈಮಾನ್ ಧಾರು, ಯಾಖೂಬ್ ಇಸ್ಮಾಯಿಲ್ ಶಮು,ಇಲ್ಯಾಸ್ ಅಂಬಾಡಿ, ಇಲ್ಯಾಸ್ ಘರಿ, ಇನಾಯತ್ ಅಬ್ದುಲ್ ಖಾದಿರ್ ಶಮ್ಸು, ಖಾಸಿಮ್ ಶೇಖ್, ಅಜ್ಮಲ್ ಮೂಸಾ ಶಮು ಎಂದು ತಿಳಿದುಬಂದಿದ್ದು ಇವರ ಬಿಡುಗಡೆಯಿಂದಾಗಿ ಕಳೆದ 6 ತಿಂಗಳಿಂದ ಆತಂಕಿತ ಕುಟುಂಬಗಳಲ್ಲೀಗ ಸಂತಸದ ನಗೆ ಮೂಡಿದಂತಾಗಿದೆ. 

ಭಟ್ಕಳ ಸೇರಿದಂತೆ ಉತ್ತರಕನ್ನಡ ಜಿಲ್ಲೆಯ ಹಲವಾರು ಮೀನುಗಾರರು ತಮ್ಮ ಕುಟುಂಬ ಹೊಟ್ಟೆಯನ್ನು ಹೊರೆಯಲು ದುಬೈ ಮತ್ತಿತರರ ಗಲ್ಫ್ ರಾಷ್ಟ್ರಗಳಲ್ಲಿ ಮೀನುಗಾರಿಕೆ ಕಸುಬನ್ನು ಆಶ್ರಯಿಸಿದ್ದು 2-3 ವರ್ಷಗಳಿಗೊಮ್ಮೆ ತಮ್ಮ ಕುಟುಂಬದವರನ್ನು ಕಾಣಲು ಭಟ್ಕಳಕ್ಕೆ ಬರುತ್ತಿದ್ದರು. ಅಲ್ಲಿಂದಲೇ ಕುಟುಂಬವನ್ನು ಸಲುಹುತ್ತಿದ್ದರು. ಆದರೆ ಕಳೆದ ಅಕ್ಟೋಬರ್ ತಿಂಗಳ 11 ರಂದು ದುಬೈ ಮೂಲಕ ಮೀನುಗಾರಿಕೆಗೆ ತೆರಳಿದ್ದ ಉತ್ತರಕನ್ನಡ ಜಿಲ್ಲೆಯ 18 ಮೀನುಗಾರರು ಸೇರಿದಂತೆ ಮಹಾರಷ್ಟ್ರದ 5 ಹಾಗೂ ಸ್ಥಳಿಯ ಅರಬ್ ನ 5 ಮೀನುಗಾರರನ್ನು ಅಕ್ರಮ ಗಡಿ ಪ್ರವೇಶದ ಹಿನ್ನೆಲೆಯಲ್ಲಿ ಇರಾನ್ ಸರ್ಕಾರ ಬಂಧಿಸಿ ಅವರನ್ನು ಗೃಹಬಂಧನದಲ್ಲಿ ಇರಿಸಿತ್ತು. ಅಂದಿನಿಂದ ಬಂಧಿತ ಮೀನುಗಾರರ ಕುಟುಂಬದಲ್ಲಿ ಆತಂಕದ ಛಾಯೆ ಮನೆಮಾಡಿಕೊಂಡಿತ್ತು. ಇದೀಗ ದುಬೈನ ಕರ್ನಾಟಕ ಎನ್.ಅರ್.ಐ ಫೋರಂ ಸಂಘಟನೆಯ ನಿರಂತರ ಪ್ರಯತ್ನದ ಫಲವಾಗಿ ಆ ಎಲ್ಲ ಮೀನುಗಾರರಿಗೆ ಬಿಡುಗಡೆಯ ಭಾಗ್ಯ ಲಭಿಸಿದಂತಾಗಿದೆ. 

ದುಬೈನ ಬೋಟ್ ಸಂಖ್ಯೆ 378 ನ್ನು ಜುಲೈ 27 2018 ರಂದು,  ಬೋಟ್ ಸಂಖ್ಯೆ 398ನ್ನು ಆಗಷ್ಟ್ 2018 ರಂದು ಹಾಗೂ ಬೋಟ್ ಸಂಖ್ಯೆ 1717ನ್ನು ಸೆಪ್ಟಂಬರ್ 2018 ರಂದು ಅಕ್ರಮ ಗಡಿ ಪ್ರವೇಶದ ಹಿನ್ನೆಲೆಯಲ್ಲಿ  ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ 18, ಮಹಾರಾಷ್ಟ್ರದ 5 ಹಾಗೂ ದುಬೈನ ಅರಬ್ ಮೀನುಗಾರರನ್ನು ಇರಾನ್ ಸರ್ಕಾರ ಬಂಧಿಸಿ ಅವರನ್ನು ಗೃಹಬಂಧನದಲ್ಲಿರಿಸಿತ್ತು. 

ಈ ಕುರಿತಂತೆ ಭಟ್ಕಳದ ಮಜ್ಲಿಸೆ ಇಸ್ಲಾಹ್ ತಂಝೀಮ್ ಸಂಸ್ಥೆಯು ಅಕ್ಟಬೋಬರ್ 12 ರಂದು ಮೀನುಗಾರರ ಕುಟುಂಬದವರೊಂದಿಗೆ ಸೇರಿ ಮೀನುಗಾರರ ಕುಟುಂಬದವರನ್ನು ಬಿಡುಗಡೆಗೊಳಿಸುವಂತೆ ಕೇಂದ್ರ ಸಚಿವೆ ಸುಶ್ಮಾ ಸ್ವರಾಜ್ ರನ್ನು ಆಗ್ರಹಿಸಿ ಮನವಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.  

ಕಾನೂನು ಸಮರ: ದುಬೈನಲ್ಲಿರುವ ಭಟ್ಕಳಿಗರ ಎನ್.ಆರ್.ಐ. ಫೋರಮ್ ಈ ಕುರಿತು ತೀವ್ರ ಪ್ರಯತ್ನಕ್ಕೆ ಮುಂದಾಗಿದ್ದು ಕಾನೂನು ಸಮರವನ್ನು ಸಾರಿತ್ತು. ಇರಾನ್ ಸರಕಾರದೊಂದಿಗೆ ಕಾನೂನು ಹೋರಾಟ ಮಾಡಿ ಕೊನೆಗೂ ಗೆದ್ದ ಎನ್.ಆರ್.ಐ. ಫೋರಂ ಎಲ್ಲ 28 ಜನರನ್ನು ಕೂಡಾ ಬಿಡುಗಡೆಗೊಳಿಸುವಲ್ಲಿ ಯಶಸ್ವೀಯಾಗಿದ್ದು ನ್ಯಾಯಾಲಯ ವಿಧಿಸಿದ ದಂಡವನ್ನು ಅವರು ಅಲ್ಲಿನ ನ್ಯಾಯಾಲಯಕ್ಕೆ ಪಾವತಿಸಿದ್ದರು. 

ಎರಡು ಬೋಟ್ ಬಿಡುಗಡೆ: ಒಟ್ಟೂ ಮೂರು ಬೋಟುಗಳನ್ನು ವಶಕ್ಕೆ ಪಡೆದಿದ್ದರೂ ಸಹ ಕಾನೂನು ಸಮರದಲ್ಲಿ ಎರಡು ಬೋಟುಗಳನ್ನು ಬಿಡಿಸಿಕೊಳ್ಳುವಲ್ಲಿ ಯಶಸ್ವೀಯಾಗಿದ್ದಾರೆ. ಇನ್ನೊಂದು ಬೋಟನ್ನು ನ್ಯಾಯಾಲಯ ವಿಧಿಸಿದ್ದ ದಂಡದ ಪಾವತಿಯಾಗದ ಕಾರಣ ಬಿಡಿಗಡೆಯಾಗಿಲ್ಲ ಎನ್ನಲಾಗಿದ್ದು ದಂಡ ತುಂಬಿದ ನಂತರ ಬೋಟನ್ನು ಬಿಡಲಾಗುವುದು ಎಂದೂ ತಿಳಿದು ಬಂದಿದೆ. 

ವಾಪಸಾಗುತ್ತಿರುವ ಮೀನುಗಾರರು: ಇರಾನ್ ಸರಕಾರ ಬಿಡುಗಡೆ ಮಾಡಿದ ಮೀನುಗಾರರು ಭಾರತೀಯ ಕಾಲಮಾನ ಸಂಜೆ ಸುಮಾರು 4.30ಕ್ಕೆ  ತಮ್ಮ ಎರಡು ಬೋಟುಗಳಲ್ಲಿ ಇರಾನ್‍ನಿಂದ ಹೊರಟಿದ್ದು ದುಬೈಗೆ ತಲುಪಲಿದ್ದಾರೆ ಎಂದು ತಿಳಿಸಲಾಗಿದೆ.  ಎಲ್ಲಾ ಮೀನುಗಾರರು ಕೂಡಾ ಎರಡು ಬೋಟುಗಳಲ್ಲಿ ಹೊರಟಿದ್ದು ಇರಾನ್ ಗಡಿಯ ತನಕ ಅಲ್ಲಿ ಪೊಲೀಸರು ಬೆಂಗಾವಲಾಗಿದ್ದಾರೆ ಎನ್ನಲಾಗಿದೆ. 

ಸಂತಸ ವ್ಯಕ್ತ ಪಡಿಸಿದ ತಾಯಿ ಬೀಬಿ ಆಯಿಶಾ  
ಬಂಧಿತರಲ್ಲಿ ಬಿಡುಗಡೆಗೊಂಡಿರುವ ಉಸ್ಮಾನ್ ಬೊಂಬಾಯಿಕರ್ ನ ತಾಯಿ  ಭಟ್ಕಳದ ಜಾಮಿಯಾಬಾದ್ ನಿವಾಸಿ ಬೀಬಿ ಆಯಿಶಾ  ಸಂತಸವನ್ನು ವ್ಯಕ್ತಪಡಿಸಿದ್ದು ಕಳೆದ 6 ತಿಂಗಳಿಂದ ತಮ್ಮ ಮಗನ ಬರುವಿಕೆಯ ನಿರೀಕ್ಷೆಯಲ್ಲಿದ್ದ ನಮಗೆ ಬಿಡುಗಡೆಯ ಸುದ್ದಿ ಸಂತೋಷ ತಂದಿದೆ. ಅವರು ಇರಾನ್ ನಿಂದ ದುಬೈಗೆ ಪ್ರಯಾಣಿಸಿದ್ದಾರೆ. ಅಲ್ಲಿನ ಕಾನೂನು ಪ್ರಕ್ರಿಯೆ ಪೂರ್ಣಗೊಂಡ ನಂತರ ಭಟ್ಕಳಕ್ಕೆ ಬರುತ್ತಾರೆ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.