ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ; ನಾಳೆಯಿಂದ ಭಟ್ಕಳ್ ಸಂಪೂರ್ಣ ಬಂದ್: ಜಿಲ್ಲಾಧಿಕಾರಿ ಡಾ.ಕೆ ಹರೀಶಕುಮಾರ್

Source: sonews | By Staff Correspondent | Published on 23rd March 2020, 6:40 PM | Coastal News |

ಕಾರವಾರ: ಜಿಲ್ಲೆಯ ಭಟ್ಕಳ ತಾಲೂಕಿಗೆ ವಿದೇಶದಿಂದ ಬಂದಿರುವವರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ನಾಳೆಯಿಂದ ಭಟ್ಕಳ ಉಪವಿಭಾಗದಲ್ಲಿ ಕಲಂ 144 ಜಾರಿಮಾಡಿ ಸಂಪರ್ಕವನ್ನ ಸಂಪೂರ್ಣ ಬಂದ್ ಮಾಡುವ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ ಹರೀಶಕುಮಾರ್ ಅವರು ಹೇಳಿದರು.
    
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಪಕ್ಕದ ಜಿಲ್ಲೆಗಳಲ್ಲಿ ಪ್ರಕರಣಗಳು ಕಂಡು ಬಂದಿರುವ ಹಿನ್ನಲೆಯಲ್ಲಿ ಈ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರವನ್ನು ಕೈಗೊಂಡಿದ್ದು, ಉತ್ತರ ಕನ್ನಡ ಜಿಲ್ಲೆಗೆ ಅಥವಾ ಭಟ್ಕಳಕ್ಕೆ ಯಾವುದೇ ತೊಂದರೆ ಇರುವುದಿಲ್ಲಾ. ಜನರು ಆತಂಕ ಪಡುವ ಸನ್ನಿವೇಶವಿರುವದಿಲ್ಲ. ಭಟ್ಕಳ ಭಾಗದಲ್ಲಿ ಒಂದು ಪ್ರಕರಣ ಪಾಸಿಟಿವ್ ಬಂದಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಸತ್ಯಕ್ಕೆ ದೂರವಾದದ್ದು, ವಿದೇಶದಿಂದ ಬಂದ ಯುವಕ ಭಟ್ಕಳ ಊರಿನವನಾಗಿದ್ದು, ಆ ಯುವಕನನ್ನು ಭಟ್ಕಳಕ್ಕೆ ಬರುವ ಮೊದಲೇ ಮಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದ ಯಾರೂ ಭಯಪಡುವ ಅವಶ್ಯಕತೆಯಿಲ್ಲಾ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟೀಕರಣ ನೀಡಿದರು.
    
ಇದುವರೆಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವೊಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಕ್ಕೆ ಹೋಗಿಬಂದವರಿದ್ದಾರೆ ಆದ್ದರಿಂದ ಮುನ್ನೆಚ್ಚರಿಕಾ ದೃಷ್ಟಿಯಿಂದ ಪ್ರತಿನಿತ್ಯ ಎರಡು ಬಾರಿ ಅವರನ್ನ ತಪಾಸಣೆ ಮಾಡಲಾಗುತ್ತಿದೆ. 
    
ಕಳೆದ ಒಂದು ತಿಂಗಳಲ್ಲಿ ವಿದೇಶದಿಂದ ಭಟ್ಕಳಕ್ಕೆ ಬಂದವರ ಸಂಖ್ಯೆ ಶೇ.40 ರಷ್ಟು ಇದ್ದಾರೆ. ಮಾ. 24 ರಂದು ಬೆಳಿಗ್ಗೆಯಿಂದ ಮಾ. 31 ರ ವರೆಗೆ ಸಾರ್ವಜನಿಕರು ಇನ್ನಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸೆಕ್ಷನ್ 144 ಜಾರಿಯಲ್ಲಿರುತ್ತದೆ. ಯಾರೂ ಕೂಡಾ 5 ಜನಕ್ಕಿಂತ ಹೆಚ್ಚು ಗುಂಪು ಗುಂಪಾಗಿ ಜನ ಸೇರುವಂತಿಲ್ಲಾ, ಈ ಬಗ್ಗೆ ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಡಾ. ಕೆ ಹರೀಶಕುಮಾರ ವಿನಂತಿಸಿಕೊಂಡರು.
    
ಜನತೆ ತಮ್ಮ ದಿನನಿತ್ಯದ ಸಂಚಾರ ಸೇವೆಗಳಿಗೆ ಸಾಧ್ಯವಾದಷ್ಟರಮಟ್ಟಿಗೆ ತಮ್ಮದೇ ಖಾಸಗಿ ವಾಹನ ಮತ್ತು ಇತರ  ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ. ತಮ್ಮನ್ನ ತಾವು ರಕ್ಷಿಸಿಕೊಳ್ಳುವುದರ ಜೊತೆಗೆ ಇನ್ನೊಬ್ಬರನ್ನು ರಕ್ಷಿಸುವ ನಿಟ್ಟಿನಲ್ಲಿ ಸ್ವಯಂ ಪ್ರೇರಿತವಾಗಿ ಮುಂಜಾಗ್ರತೆ ವಹಿಸುವುದು ತುಂಬಾ ಮುಖ್ಯವಾಗಿರುತ್ತದೆ ಎಂದು ಅವರು ಹೇಳಿದರು.
    
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ರೋಶನ್ ಅವರು ಮಾತನಾಡಿ, ಕೋವಿಡ್-19 ವೈರಾಣು ಚಿಕಿತ್ಸೆಗೆ ಜಿಲ್ಲಾಸ್ಪತ್ರೆ ಸಂಪೂರ್ಣ ಸಿದ್ಧವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಶಿಸ್ಟಾಚಾರದಂತೆ ಐಸೂಲ್ಯೂಶನ್ ಸೆಂಟರ್ 500 ರಿಂದ 800 ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದ ಚಿಕಿತ್ಸೆಗೆ ಪ್ರತ್ಯೇಕವಾದ ವಾರ್ಡ್‍ಗಳ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ನಿಬೊಲೈಸೇಶನ್, ಪಲ್ಸ್ ಆಕ್ಸಿಮೀಟರ್, ವೆಂಟಿಲೇಟರ್ ಮಶೀನ್, ಐಸುಲ್ಯೂಶನ್ ತೀವ್ರನಿಗಾಘಟಕದಂತಹ ಎಲ್ಲಾ ರೀತಿಯ ವೈಧ್ಯಕೀಯ ವ್ಯವಸ್ಥೆಯನ್ನು ಜಿಲ್ಲಾಸ್ಪತ್ರೆಯಲ್ಲಿ ಮಾಡಲಾಗಿದ್ದು, ಯಾವುದೇ ರೀತಿಯ ಭಯ ಪಡಬೇಕಾದ ಅಗತ್ಯತೆಯಿಲ್ಲಾ ಎಂದು ಹೇಳಿದರು.
    
ಜಿಲ್ಲೆಯಲ್ಲೂ ಕೂಡ ಸಾಮಾಜಿಕ ಜಾಲತಾಣಗಳಿಂದ ಜನತೆಯಲ್ಲಿ ಕೋವಿಡ್-19 ವೈರಾಣು ಕುರಿತು ಆತಂಕ ಮೂಡಿಸುವ ಗಾಳಿಸುದ್ಧಿ, ಸಂದೇಶಗಳು ಹರಿದಾಡುತ್ತಿದ್ದು, ಇಂತಹ ಸುಳ್ಳು ಸುದ್ದಿಗಳ ರವಾನೆಯನ್ನು ಜನರು ಸಾಧ್ಯವಾದಷ್ಟರ ಮಟಿಗೆ ನಿಲ್ಲಿಸಬೇಕು ಹಾಗೂ ಅಗತ್ಯತೆ ಇಲ್ಲದೆ ಅನಗತ್ಯವಾಗಿ ಬೀದಿಗಳಲ್ಲಿ ಗುಂಪು ಗುಂಪಾಗಿ ತಿರುಗಾಡಿದರೆ ಅಂತವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೂಲೀಸ್ ವರಿಷ್ಟಾಧಿಕಾರಿ ಶಿವಪ್ರಕಾಶ್ ದೇವರಾಜು ಹೇಳಿದರು.

     

Read These Next