ರಮಝಾನ್ ದಾನಧರ್ಮ, ಸತ್ ಚಿಂತನೆ ತಿಂಗಳಾಗಿದೆ ಭಿಕ್ಷಾಟನೆಯ ಮಾಸವಲ್ಲ

Source: S O News service | By Staff Correspondent | Published on 27th June 2016, 10:46 PM | Special Report | Islam |

 

*ಎಂ.ಆರ್.ಮಾನ್ವಿ ಭಟ್ಕಳ

ರಮಝಾನ್ ತಿಂಗಳು ದಾನಧರ್ಮ ಹಾಗೂ ಸತ್ ಚಿಂತನೆಯ ತಿಂಗಳಾಗಿದ್ದು ವ್ಯಕ್ತಿಯೊಬ್ಬ ಮಾಡಿದ ಒಂದು ಉತ್ತಮ ಕಾರ್ಯಕ್ಕೆ ೭೦ಪಟ್ಟು ಪುಣ್ಯ ಲಭಿಸುವುದು ಎಂದು ಪವಿತ್ರಕುರಾನ್ ಹೇಳುತ್ತದೆ. 

ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಉಳಿತಾಯದ ಸಂಪತ್ತಿನಲ್ಲಿ ಶೇ೨.೫% ಹಣವನ್ನು ಝಕಾತ್ ದಾನವಾಗಿ ನೀಡುತ್ತಾನೆ. ಇದು ಇಸ್ಲಾಮ್ ಧರ್ಮ ಸ್ಥಿತಿವಂತರಿಗೆ ಕಡ್ಡಾಯಗೊಳಿಸಿದೆ. ಯಾರು ಝಕಾತ್ ನೀಡುವುದಿಲ್ಲವೋ ಅವರ ವಿರುದ್ಧ ಸಮರ ಸಾರುವಂತೆ ಇಸ್ಲಾಮಿ ರಾಜ್ಯದ ಖಲಿಫಾ ಹಝರತ್ ಉಮರ್ ಕರೆಕೊಟ್ಟಿದ್ದನ್ನು ನಾವು ಇಲ್ಲಿ ಸ್ಮರಿಸಲೆಬೇಕು. 

ಝಕಾತ್ ಕೊಡುವುದು ಉಳ್ಳವರ ಹಕ್ಕಾದರೆ ಅದನ್ನು ಪಡೆಯುವುದು ಇಲ್ಲದವರ ಹಕ್ಕಾಗಿದೆ. ಆದ್ದರಿಂದ ಝಕಾತ್ ಅನ್ನುವುದು ಒಂದು ಕಡ್ಡಾಯ ಕರ್ಮವೇ ಹೊರತು ಭಿಕ್ಷಾಟನೆಯಲ್ಲ ಎನ್ನುವುದು ಬಹುತೇಕ ಮಂದಿಗೆ ತಿಳಿಯದು. ರಮಝಾನ ಮಾಸದಲ್ಲಿ ಅಧಿಕ ಪುಣ್ಯ ಗಳಿಸುವ ಉದ್ದೇಶದಿಂದಲೇ ಮುಸ್ಲಿಮರು ಇದೇ ತಿಂಗಳಲ್ಲಿ ಝಕಾತ್ ಹಣವನ್ನು ತೆಗೆಯುತ್ತಾರೆ. ಸರ್ಕಾರಕ್ಕೆ  ಹೇಗೆ ಟ್ಯಾಕ್ಸ್ ತುಂಬುವುದು ಕಡ್ಡಾಯವೋ ಹಾಗೆಯೆ ಮುಸ್ಲಿಮರು ತಮ್ಮ ಒಂದು ವರ್ಷದಲ್ಲಿ ತಿಂದುಂಡು ಉಳಿದ ಹಣದಲ್ಲಿ ಝಕಾತ್ ನೀಡುವುದು ಕಡ್ಡಾಯವಾಗಿದೆ. ಇದರಿಂದ ಯಾರೂ ಕೂಡ ತಪ್ಪಿಸಿಕೊಳ್ಳುವ ಹಾಗಿಲ್ಲ. ಟ್ಯಾಕ್ಸ್ ನೀಡದಿದ್ದರೆ ಇನ್‌ಕಮ್ ಟ್ಯಾಕ್ಸ್ ನವರು  ನೋಟಿಸ್ ನೀಡುತ್ತಾರೆ. ಆದರೆ ಝಕಾತ್ ನೀಡದೆ ವಂಚಿಸುವವರಿಗೆ ನೊಟೀಸ್ ನೀಡುವ ವ್ಯವಸ್ಥೆ ಇರದು. ಇದು ಝಕಾತ್ ನೀಡುವವನ ವಿವೇಚನೆಗೆ ಬಿಟ್ಟಿದ್ದು ಯಾರಲ್ಲಿ ಕಿಂಚಿತ್ತೂ ದೇವಭಯ ಹಾಗೂ ಮನುಷ್ಯ ಪ್ರೇಮ ಇದ್ದರೆ ಅವರು ಯಾವುದೇ ಸಂದರ್ಭದಲ್ಲಿ ಝಕಾತ್ ನೀಡೆ ನೀಡುತ್ತಾರೆ. ಇದರ ಹೊರತು ಯಾರಲ್ಲಿ ದೇವಭಯ ಇಲ್ಲವೋ ಅವರಿಗೆ ಇದಾವುದರ ಪರಿವೇ ಇರಲ್ಲ. ಯಾವ ರೀತಿ ನಮ್ಮಲ್ಲಿ ಟ್ಯಾಕ್ಸ್ ಕಳ್ಳರು ಇದ್ದಾರೋ ಅದೇ ರೀತಿ ಮುಸ್ಲಿಮ್ ಸಮುದಾಯದಲ್ಲಿ ಕೆಲವು ಝಕಾತ್ ಕಳ್ಳರೂ ಇದ್ದಾರೆ. ತಮ್ಮಲ್ಲಿ ಸಾಕಷ್ಟು ಹಣ ಹಾಗೂ ಚಿನ್ನಾಭರಣ ಇದ್ದಾಗ್ಯೂ ಅವರು ಝಕಾತ್ ದಾನ ನೀಡುವುದರಿಂದ ತಮ್ಮನ್ನು ತಾವು ತಡೆದುಕೊಳ್ಳುತ್ತಾರೆ. ಇಂತಹರಿಂದಲೇ ಸಮಾಜದಲ್ಲಿ ದಾರಿದ್ರ್ಯತೆ ಉಂಟಾಗುತ್ತಿರುವುದು. ಇಂದು ಮುಸ್ಲಿಮ್ ಜಗತ್ತಿನಲ್ಲಿ ತಮ್ಮ ಝಕಾತ್ ನ್ನು ಪೈಸೆ ಪೈಸೆ ಲೆಕ್ಕಮಾಡಿ ಚುಕ್ತಾ ಮಾಡಿದ್ದೇ ಆದಲ್ಲಿ ಯಾರೂಕೂಡ ಭಿಕ್ಷಕರು ಕಾಣುತ್ತಿರಲಿಲ್ಲ. 

ಝಕಾತ್ ನೀಡುವುದು ಪ್ರತಿಷ್ಟೆಯಲ್ಲ: ಕೆಲ ಧನಿಕರು ಝಕಾತ್ ನೀಡುವುದನ್ನು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಂಡಿದ್ದಾರೆ. ರಮಝಾನ್ ತಿಂಗಳ ಕೊನೆಯ ಹತ್ತು ದಿನಗಳಲ್ಲಿ ತಮ್ಮ ಮನೆಯ ಮುಂದೆ ಸಾಲು ಸಾಲು ಭಿಕ್ಷುಕರು ನಿಲ್ಲುವುದನ್ನು ಕಾಣಲು ಅವರು ಇಷ್ಟಪಡುತ್ತಾರೆ. ಕೆಲವು ಚಿಲ್ಲರೆ ಕಾಸನ್ನು ಇಟ್ಟುಕೊಂಡು ಮನೆ ಮುಂದೆ ಬಂದು ನಿಂತವರಿಗೆ ೫,೧೦ ರೂ ಗಳನ್ನು ನೀಡಿ ಧನಿ ಎಂದು ಅನ್ನಿಕೊಳ್ಳುತ್ತಾರೆ. ಆದರೆ ವಸ್ತುಸ್ಥಿತಿ ಬೇರೆಯೇ ಇದೆ. 

ಝಾಕತ್ ಭಿಕ್ಷೆಯಲ್ಲ: ಝಕಾತ್ ಎನ್ನುವುದು ಇಸ್ಲಾಮಿ ಆರಾಧನ ಕರ್ಮಗಳೊಂದಾಗಿದೆ. ಇಸ್ಲಾಮಿ ಪರಿಭಾಷೆಯಲ್ಲಿ ಝಾಕಾತ್ ಎಂದರೆ ‘ಶುದ್ಧಗೊಳಿಸುವುದು’ ಎಂದಾಗಿದೆ. ಅಂದರೆ ನಮ್ಮ ಒಂದು ವರ್ಷದ ಉಳಿತಾಯದ ಹಣವನ್ನು ಬಡಬಗ್ಗರಿಗೆ ನೀಡುವುದರ ಮೂಲಕ ತನ್ನ ಹಣವನ್ನು ಶುದ್ಧಗೊಳಿಸಿಕೊಳ್ಳುತ್ತಾನೆ. ನಮ್ಮ ದೈಹಿಕ ಹಾಗೂ ಮಾನಸಿಕ ಶುದ್ದಿಕರಣಕ್ಕಾಗಿ ಉಪವಾಸ ಆಚರಿಸಿಕೊಂಡರೆ ಸಂಪತ್ತಿನ ಶುದ್ಧೀಕರಣಕ್ಕಾಗಿ ಝಕಾತ್ ನೀಡಬೇಕಾಗಿದೆ. ಹಾಗಾಗಿ ಇದು ವ್ಯಕ್ತಿಯನ್ನು ಸರ್ವತೋಮುಖ ಶುದ್ಧಿಕರಣಗೊಳಿಸುವ ವಿಧಾನವೇ ಹೊರತು ಬಡವರಿಗೆ ನೀಡುವ ಭಿಕ್ಷೆಯಲ್ಲ. ಝಕಾತ್ ದಾನವನ್ನು ತಮ್ಮ ಸಂಬಂಧಿಕರಿಗೆ ನೀಡುವುದು ಮೊದಲ ಅದ್ಯತೆ ಎನ್ನಬಹುದು. ನಂತರ ಸಮುದಾಯದ ನಿರ್ಗತಿಕರಿಗೆ ಝಕಾತ್ ನೀಡುವುದರ ಮೂಲಕ ಅವರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಬಡವರ ಶೈಕ್ಷಣಿಕ ಏಳಿಗೆಯಾಗಬೇಕು, ಅವರೂ ಸಮಾಜದಲ್ಲಿ ತಲೆ ಎತ್ತಿ ತಿರುಗಾಡುವಂತಾಗಬೇಕು ಎನ್ನುವುದು ಈ ಝಾಕತ್ ಕಡ್ಡಾಯಗೊಳಿಸಿದ್ದರ ಹಿಂದೆ ಅಡಗಿರುವ ಉದ್ದೇಶಗಳಲ್ಲೊಂದಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಆದರೆ ಇಂದು ಝಕಾತ್ ನೀಡುವವರು ಮತ್ತು ಅದನ್ನು ಪಡೆದುಕೊಳ್ಳುವವರ ಇಬ್ಬರ ಮನಸ್ಥಿತಿಯೂ ಬದಲಾಗಬೇಕಿದೆ. 

ಭಟ್ಕಳದಲ್ಲಿ ಝಕಾತ್ ನೀಡುವವರ ಸಂಖ್ಯೆ ಅಧಿಕ: ಭಟ್ಕಳದ ಮುಸ್ಲಿಮರು ಅತ್ಯಂತ ನಿಷ್ಟೆಯಿಂದ ಪ್ರತಿಯೊಂದು ಧಾರ್ಮಿಕ ವಿಧಿವಿಧಾನಗಳನ್ನು ನರವೇರಿಸುವಂತೆ ಝಕಾತ್ ನೀಡುವ ಕ್ರಮವನ್ನೂ ಅತ್ಯಂತ ಉತ್ಸುಕ ಧಾರ್ಮಿಕ ನಿಷ್ಠೆಯಿಂದ ನೀಡುತ್ತ ಬಂದಿರುತ್ತಾರೆ. ಇದಕ್ಕಾಗಿಯೆ ರಮಝಾನ ಮಾಸದ ಕೊನೆ ೧೦ ದಿನಗಳಲ್ಲಿ ಭಟ್ಕಳದಲ್ಲಿ ಬೇಡಿ ಬರುವವರ ಸಂಖ್ಯೆ ವರ್ಷ ವರ್ಷಕ್ಕೆ ಅಧಿಕವಾಗುತ್ತಲೇ ಹೋಗುತ್ತಿದೆ. ಆದಾಗ್ಯೂ ಇಲ್ಲಿನ ಮುಸ್ಲಿಮರ ಐಕ್ಯ ವೇದಿಕೆಯಾಗಿರುವ ಮಜ್ಲಿಸೆ ಇಸ್ಲಾಹ್-ವ-ತಂಝಿಮ್ ಇಂತಹ ಹೊರಗಡೆಯಿಂದ ಬೇಡಿ ಬರುವ ವ್ಯಕ್ತಿಗಳನ್ನು ನಿಯಂತ್ರಿಸುತ್ತಿದೆ. ಮದರಸಾ, ಮಸೀದಿಗಳ, ಸಂಘಸಂಸ್ಥೆಗಳ ಹೆಸರನ್ನು ಹೇಳಿಕೊಂಡು ನೂರಾರು ಮಂದಿ ಬರುತ್ತಾರೆ. ಅವರೆಲ್ಲರನ್ನೂ ಪರಿಶೀಲಿಸಿ ಸತ್ಯಾಸತ್ಯತೆಯನ್ನು ಅರಿತುಕೊಂಡ ನಂತರವಷ್ಟೆ ತಂಝೀಮ್ ಅಧಿಕೃತ ಪತ್ರವನ್ನು ನೀಡುತ್ತದೆ ಈ ಪತ್ರದ ಸಹಾಯದೊಂದಿಗೆ ಅವರು ಪ್ರತಿ ಮನೆ ಹಾಗೂ ಅಂಗಡಿಗಳಿಗೆ ಹೋಗಿ ಝಕಾತ್ ಅಥವಾ ದೇಣಿಗೆಯನ್ನು ಪಡೆದುಕೊಳ್ಳುತ್ತಾರೆ. ಆದರೆ ಕೆಲ ಭಿಕ್ಷಾಟನೆಯ ತಮ್ಮ ವೃತ್ತಿಯನ್ನಾಗಿಸಿಕೊಂಡವರು ವಿವಿಧ ಭಿಕ್ಷುಕರ ವೇಷ ಹಾಕಿಕೊಂಡು ಇಲ್ಲಿನ ಮುಗ್ಧ ಮುಸ್ಲಿಮರನ್ನು ವಂಚಿಸುತ್ತಾರೆ. ಅದೆಷ್ಟು ಮಹಿಳೆಯರು ಇವರ ವಂಚನೆಗೆ ಒಳಗಾಗುತ್ತಾರೆ. ಮನೆಯಲ್ಲಿದ್ದ ಹಣ ಹಾಗೂ ಆಹಾರವನ್ನು ನೀಡುತ್ತಾರೆ. ಇದನ್ನು ಪಡೆದುಕೊಂಡೂ ಅವರ ಬೆನ್ನ ಹಿಂದೇ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬಳಸಿಕೊಂಡು ಮನೆಗೆ ಕನ್ನ ಹಾಕುವ ಪ್ರವೃತ್ತಿಯುಳ್ಳವರು ಮನೆಯನ್ನೇ ಲೂಟಿ ಮಾಡಿಕೊಂಡು ಹೋಗುವ ಎಷ್ಟೋ ಪ್ರಸಂಗಗಳು ಭಟ್ಕಳದಲ್ಲಿ ಪ್ರತಿವರ್ಷ ಜರಗುತ್ತಲೆ ಇವೆ. ಆದರೂ ಇಲ್ಲಿನ ಜನ ಬಂದವರಿಗೆ ಬರಿಗೈಯಲ್ಲಿ ಕಳಿಸುವ ಜಾಯಮಾನದವರಲ್ಲ. ತಮ್ಮಿಂದ ಆದಷ್ಟು ಅವರಿಗೆ ಸಹಾಯ ನೀಡಿಯೇ ಕಳಿಸುತ್ತಾರೆ. ಇದೇ ಭಟ್ಕಳಿಗರ ಒಳ್ಳೆಯ ಗುಣ ಎಲ್ಲರನ್ನು ಮೆಚ್ಚುವಂತೆ ಮಾಡಿದ್ದು. 

[email protected]
೯೮೮೬೪೫೫೪೧೬
Shams school jamiabad road BHATKAL

 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಟ್ಕಳ: ಕುರಾನ್ ಕಂಠಪಾಠ ಮಾಡಿದ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಚೀಫ್ ಖಾಝಿ

ಭಟ್ಕಳ: ಇಲ್ಲಿನ ಖಲಿಫಾ ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ನ ಚೀಫ್ ಖಾಜಿ ಹಾಗೂ ಜಾಮಿಯಾ ಇಸ್ಲಾಮಿ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಮೌಲಾನ ...

ಜಿಲ್ಲಾಮಟ್ಟದ ಸೀರತ್ ಪ್ರಬಂಧ ಸ್ಪರ್ಧೆ ಫಲಿತಾಂಶ; ಹೊನ್ನಾವರದ ಜಿ.ಎಸ್.ಹೆಗಡೆ ಪ್ರಥಮ

ಭಟ್ಕಳ: ‘ಪ್ರವಾದಿ ಮುಹಮ್ಮದ್(ಸ) ಎಲ್ಲರಿಗಾಗಿ’ ಸೀರತ್ ಅಭಿಯಾನದ ಅಂಗವಾಗಿ ‘ಪ್ರವಾದಿ ಮುಹಮ್ಮದ್(ಸ) ಮತ್ತು ಸಮಾನತೆ’ ಎಂಬ ವಿಷಯದಲ್ಲಿ ...