ಭಟ್ಕಳ: ಯಲ್ವಡಿಕವೂರು ಪಂಚಾಯತ್ ವ್ಯಾಪ್ತಿಯ ಜನ-ಮನ ಸ್ಪಂಧನ ಕಾರ್ಯಕ್ರಮ

Source: S O News service | By Staff Correspondent | Published on 25th October 2016, 3:52 PM | Coastal News |

ಭಟ್ಕಳ: ಶಾಸಕರ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನ-ಮನ ಸ್ಪಂಧನ ಕಾರ್ಯಕ್ರಮವು ಶಾಸಕ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ಇಲ್ಲಿನ ಯಲ್ವಡಿಕವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜರುಗಿತು. 
ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕರು ಜನ-ಮನ ಸ್ಪಂಧನದ ಮೂಲಕ ಕಳೆದ ಮೂರು ವರ್ಷಗಳಲ್ಲಿ ಮಾಡಿದ ಕೆಲಸಗಳ ಅವಲೋಕನ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾವ ಕೊರತೆ ಇದೆ ಎಂದು ತಿಳಿಯುವುದಕ್ಕೆ ಸಹಕಾರಿಯಾಗಿದೆ.  ಯಾವುದೇ ಬಡ ಜನತೆ ಸರಕಾರದ ಸೌಲಭ್ಯದಿಂದ ವಂಚಿತರಾಗಬಾರದು ಎನ್ನುವುದಕ್ಕಾಗಿ ಜನತೆಯ ಬಳಿಯೇ ಹೋಗಿ ಅವರ ಅಹವಾಲನ್ನು ಕೇಳುತ್ತಿದ್ದೇನೆ. ಈ ಮೂಲಕ ಗ್ರಾಮ ಮಟ್ಟದಲ್ಲಿ ಬಡ ಜನತೆಯ ಕಷ್ಟಕ್ಕೆ ಸ್ಪಂಧಿಸುವ ಹಾಗೂ ಸೂಕ್ತ ಪರಿಹಾರವನ್ನು ವದಗಿಸುವುದಕ್ಕೆ ಮಾರ್ಗವನ್ನು ಕಂಡು ಕೊಂಡಿದ್ದೇನೆ ಎಂದರು. 
ಯಾವುದೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಡವರು ವಿದ್ಯುತ್ ಸಂಪರ್ಕವಿಲ್ಲದೇ ಇರಬಾರದು ಎನ್ನುವ ಸಂಕಲ್ಪ ಮಾಡಿದ್ದೇನೆ.  ಮನೆ, ವಿದ್ಯುತ್ ಸಂಪರ್ಕ, ನೀರು ಹಾಗೂ ಶೌಚಾಲಯಗಳನ್ನು ಆದ್ಯತೆಯ ಮೇಲೆ ನೀಡಲು ಕ್ರಮ ಕೈಗೊಂಡಿದ್ದು ಯಲ್ವಡಿಕವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ವಿದ್ಯುತ್ ಇಲ್ಲದ ಮನೆಗಳಿಗೆ ಮುಂದಿನ  ಒಂದು ತಿಂಗಳೊಳಗಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಚಿಂತನೆ ನಡೆಸಿದ್ದೇನೆ ಎಂದರು. 
ನನ್ನ ಕ್ಷೇತ್ರಕ್ಕೆ ವಿವಿಧ ವಸತಿ ಯೋಜನೆಯಡಿಯಲ್ಲಿ ೧೦೦೦ ಮನೆಗಳನ್ನು ಮಂಜೂರಿ ಮಾಡಿಸಿಕೊಂಡು ಬಂದಿದ್ದ ೧೫ ಕೋಟಿ ಹಣ ಬಂದಿದೆ.  ಫಲಾನುಭವಿಗಳ ಆಯ್ಕೆಯಲ್ಲಿ ಯಾವುದೇ ವ್ಯತ್ಯಾಸವಾಗಿದ್ದರೆ ಗ್ರಾಮ ಪಂಚಾಯತ್ ಮಟ್ಟದಲ್ಲಿಯೇ ಕ್ರಮ ಕೈಗೊಳ್ಳಲೂ ಸೂಚಿಸಿದ್ದೇನೆ. ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಒಟ್ಟೂ ೧೦೦ ಬಾವಿಯನ್ನು ಮಂಜೂರಿ ಮಾಡಿಸಿದ್ದು ಒಂದು ಬಾವಿಗೆ ೨ ಲಕ್ಷ ರೂಪಾಯಿ  ಸರಕಾರ ನೀಡುತ್ತದೆ. ಯಲ್ವಡಿಕವೂರು ಗ್ರಾಮ ವ್ಯಾಪ್ತಿಯಲ್ಲಿಯೇ ೧೩ ಬಾವಿಗಳನ್ನು ಮಂಜೂರು ಮಾಡಿಸಲಾಗಿದೆ ಎಂದ ಅವರು ನಮ್ಮಲ್ಲಿ ಯಾವುದೇ ಜನಪ್ರತಿನಿದಿಗಳಾಗಲೀ ಅಧಿಕಾರಿಗಳಾಗಲೀ ಹಣ ಕೇಳುವುದಿಲ್ಲ, ಹಣ ಕೊಡಲೂ ಬೇಡಿ ಎಂದು ನಾಗರೀಕರಿಗೆ ತಾಕೀತು ಮಾಡಿದರು. 
ನನ್ನ ಕ್ಷೇತ್ರದಲ್ಲಿ ಶೇ.೧೦೦ ಮನೆಗಳಿಗೆ ಎಲ್.ಪಿ.ಜಿ. ಸಂಪರ್ಕ ಕೊಡಬೇಕು ಎನ್ನುವುದು ನನ್ನ ಗುರಿಯಗಿದೆ. ಈಗಾಗಲೇ ಅರಣ್ಯ ಇಲಾಖೆಯ ಸಹಾಯದಿಂದ ಈಗಾಗಲೇ ೧೦೦೦೦ ಸಾವಿರ ಮನೆಗಳಿಗೆ ಎಲ್.ಪಿ.ಜಿ. ಸಂಪರ್ಕ ನೀಡಲಾಗಿದ್ದು ಸರಕಾರ ಸಾಮಾನ್ಯ ವರ್ಗಕ್ಕೂ ಎಲ್.ಪಿ.ಜಿ. ಸಂಪರ್ಕ ಕೊಡಲು ಆದೇಶ ನೀಡಿದ್ದರಿಂದ ಶೇ.೧೦೦ ಮನೆಗಳನ್ನು ಹೊಗೆ ಮುಕ್ತ ಮನೆಗಳನ್ನಾಗಿ ಮಾಡುತ್ತೇನೆ ಎಂದರು. ನನ್ನ ಕ್ಷೇತ್ರದಲ್ಲಿ ಎಲ್ಲರಿಗೂ ಒಂದು ಸೂರು, ಮನೆಗಳಿಗೆ ವಿದ್ಯುತ್ ಸಂಪರ್ಕ ಹಾಗೂ ಶೈಕ್ಷಣಿಕ ಸೌಲಭ್ಯ ನೀಡುವುದು ನನ್ನ ಗುರಿಯಾಗಿದ್ದು ಈಗಾಗಲೇ ಆ ಕಾರ್ಯ ಮಾಡುತ್ತಲೇ ಇದ್ದೇನೆ ಎಂದ ಅವರು ನಾನು ವಿದ್ಯುತ್ ಇಲ್ಲದ ಮನೆಯಲ್ಲಿ ಹುಟ್ಟಿದವನು, ಹತ್ತು ವರ್ಷದ ನಂತರ ವಿದ್ಯುತ್ ಸಂಪರ್ಕ ಕಂಡವನು ನಾನು, ಆದರೆ ಇಂದಿ ಮಕ್ಕಳಿಗೆ ಹಾಗಾಗಬಾರದು, ವಿದ್ಯುತ್ ಇಲ್ಲದೇ ಅವರ ಶೈಕ್ಷಣಿಕ ಪ್ರಗತಿ ಕುಂಠಿತವಾಗಬಾರದು ಎನ್ನುವುದು ನನ್ನ ಗುರಿ ಎಂದೂ ಹೇಳಿದರು. 
ಹಾಜರಿದ್ದ ನೂರಾರು ಸಂಖ್ಯೆಯ ಸಾರ್ವಜನಿಕರು ಹಲವಾರು ಪ್ರಶ್ನೆಗಳನ್ನು ಕೇಳಿದ್ದು ಅತ್ಯಂತ ಸಂಯಮದಿಂದ ಉತ್ತರಿಸಿದ ಶಾಸಕರು ಪ್ರತಿಯೊಂದು ಸಮಸ್ಯೆಯನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಉತ್ತರ ನೀಡಿದ್ದಲ್ಲದೇ ಸಮಸ್ಯೆಗಳನ್ನು ಬಗೆಹರಿಸಲು ಒಂದು ತಿಂಗಳ ಕಾಲಾವಕಾಶವನ್ನು ಸಹ ನೀಡಿರುವುದು ಕಂಡು ಬಂತು. ಬೆಳಕೆ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಸಿಬ್ಬಂದಿಗಳ ಉದ್ಧಟತನ, ಪುರವರ್ಗ ಸರಕಾರಿ ಶಾಲೆಯಲ್ಲಿನ ತೊಂದರೆ, ಕುಡಿಯುವ ನೀರಿನ ಘಟಕ ಸ್ಥಾಪನೆ, ೫ ವರ್ಷದೊಳಗಿನ ಮಕ್ಕಳಿಗೆ ಆರೋಗ್ಯ ಸೇವೆ, ೨೦-೩೦ ವರ್ಷಗಳಿಂದ ಪಟ್ಟಾ ಇದ್ದರೂ ಆರ್.ಟಿ.ಸಿ. ಇಲ್ಲದ ಸಮಸ್ಯೆ ಸೇರಿದಂತೆ ಅನೇಕ ಗಂಭೀರ ಸಮಸ್ಯೆಗಳೂ ಚರ್ಚೆಗೆ ಬಂದವು. 
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಲೂಕಾ ಪಂಚಾಯತ್ ಅಧ್ಯಕ್ಷ ಈಶ್ವರ ನಾಯ್ಕ, ಗ್ರಾ. ಪಂ. ಅಧ್ಯಕ್ಷೆ ಸುಶೀಲಾ ನಾಯ್ಕ, ಜಿ.ಪಂ.ಸದ್ಯ ಆಲ್ಬರ್ಟ ಡಿಕೋಸ್ತ, ಹೆಸ್ಕಾಂ ನಿರ್ದೇಶಕ ಮಂಜುನಾಥ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠಲ ನಾಯ್ಕ, ತಾ.ಪಂ. ಸದಸ್ಯ ಹನುಮಂತ ನಾಯ್ಕ, ಗ್ರಾ. ಪಂ. ಸದಸ್ಯರಾದ ರಮೇಶ ನಾಯ್ಕ, ಲಕ್ಷ್ಮೀನಾರಾಯಣ ನಾಯ್ಕ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. 
ತಾಲೂಕಿನ ಹಿರಿಯ, ಕಿರಿಯ ಅಧಿಕಾರಿ ವರ್ಗದವರೂ ಕೂಡಾ ಉಪಸ್ಥಿತರಿದ್ದು ತಮ್ಮ ತಮ್ಮ ಇಲಾಖೆಗೆ ಸಂಬಂಧ ಪಟ್ಟಂತೆ ತಕ್ಷಣ ಸ್ಪಂಧಿಸುವ ಭರವಸೆ ನೀಡಿದರು.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...