ನ್ಯೂ ಇಂಗ್ಲಿಷ್ ಪಿಯು ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನಾಚರಣೆ

Source: sonews | By Staff Correspondent | Published on 3rd December 2018, 12:53 AM | Coastal News |

ಭಟ್ಕಳ: ಏಡ್ಸ ರೋಗವು ವೈರಸನಿಂದ ಬರುವ ಒಂದು ಕಾಯಿಲೆ ಆಗಿರುವುದರಿಂದ ಅದನ್ನು ಔಷಧಿಯಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಆದ್ದರಿಂದ ಕಾಯಿಲೆ ಬಂದ ನಂತರ ಔಷಧಿ ತೆಗೆದುಕೊಳ್ಳುವುದಕ್ಕಿಂತ ಕಾಯಿಲೆ ಬರದಂತೆ ಎಚ್ಚರವಹಿಸುವುದು ಸೂಕ್ತ, ಎಂದು ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ.ಮೂರ್ತಿರಾಜ ಭಟ್ ಹೇಳಿದರು. 

ಅವರು ದಿ ನ್ಯೂ ಇಂಗ್ಲೀಷ ಪಿಯು ಕಾಲೇಜಿನಲ್ಲಿ ವಿಶ್ವ ಏಡ್ಸ ದಿನಾಚರಣೆ ಪ್ರಯುಕ್ತ ಆಯೋಜಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಈ ರೋಗವು 15 ರಿಂದ 24 ರ ವಯಸ್ಸಿನ ಯುವಕ ಮತ್ತು ಯುವತಿಯರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಹದಿಹರೆಯದ ವಿದ್ಯಾರ್ಥಿಗಳು ಸಂಯಮವನ್ನು ಹೊಂದಬೇಕು ಎಂದು ಹೇಳಿದರು. 

ಮುಖ್ಯ ಅತಿಥಿಗಳಾದ ಹಿರಿಯ ಆರೋಗ್ಯ ನಿರೀಕ್ಷಕರಾದ ಈರಯ್ಯ ದೇವಾಡಿಗ ಹೆಚ್ ಆಯ್ ವಿ ಏಡ್ಸ ಎನ್ನುವುದು ಆರ್ಜಿತ ರೋಗವಾಗಿದ್ದು ಸಮುದಾಯದಲ್ಲಿ ಸಂಯಮ ಮತ್ತು ಜಾಗ್ರತಿಯಿಂದ ಮಾತ್ರ ಇದನ್ನು ನಿಯಂತ್ರಿಸಲು ಸಾಧ್ಯ ಎಂದು ಹೇಳಿದರು. 
        
ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲ ವಿರೇಂದ್ರ ವಿ. ಶಾನಭಾಗ  ಮಾತನಾಡಿ ಕೇವಲ ಪರೀಕ್ಷಾ ದೃಷ್ಟಿಯಿಂದ ಪುಸ್ತಕವನ್ನು ಓದುವುದು ಶಿಕ್ಷಣವಾಗಲಾರದು, ನಮ್ಮ ಜೀವನವನ್ನು ರೂಪಿಸುವಲ್ಲಿ ದೊರೆಯುವ ಎಲ್ಲಾ ಅವಕಾಶಗಳು, ಸಂಗತಿಗಳು ಮತ್ತು ಅನುಭವಗಳು ಶಿಕ್ಷಣವಾಗಿರುತ್ತವೆ. ಈವತ್ತಿನ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಆರೋಗ್ಯ ಶಿಕ್ಷಣ ನೀಡಿದೆ ಎಂದು ಹೇಳಿದರು. 
        
ಉಪನ್ಯಾಸಕಿ ಪೃಥ್ವಿ ಪೈ ನಿರೂಪಿಸಿದರು, ಶ್ರೀಮಾ ಬಿ.ಜಿ  ಸ್ವಾಗತಿಸಿದರು, ನಯನಾ ಖಾರ್ವಿ ವಂದಿಸಿದರು. ವಿದ್ಯಾರ್ಥಿಗಳಾದ ಜಯಶ್ರೀ ಮತ್ತು ಸಂಗಡಿಗರು ಪ್ರಾರ್ಥಿಸಿದರು.


 

Read These Next