ಕಾಯುವವರೇ ಕೊಲ್ಲುವವರಾದಾಗ..

Source: sonews | By Staff Correspondent | Published on 20th August 2018, 11:18 PM | National News | Special Report | Don't Miss |

 

ಹೆಣ್ಣುಮಕ್ಕಳ ಆಶ್ರಯತಾಣಗಳಲ್ಲಿ ಅತಂತ್ರ ಪರಿಸ್ಥಿಯಲ್ಲಿದ್ದವರನ್ನು ರಕ್ಷಿಸುವ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಪ್ರಭುತ್ವ ಮತ್ತು ಸಮಾಜ ಎರಡೂ ವಿಫಲವಾಗಿವೆ.

ಒಂದು ಅಸಮಾನ ಮತ್ತು ಪುರುಷ ಪ್ರಧಾನ ಸಮಾಜದಲ್ಲಿ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಪರಿಸ್ಥಿತಿಗಳು ಮಹಿಳೆ ಮತ್ತು ಮಕ್ಕಳಂತ ಅತಂತ್ರ ಸಮುದಾಯಗಳನ್ನು ಮೃಗೀಯ ಮನಸ್ಸತ್ವವುಳ್ಳವರಿಗೆ ಬಲಿಯಾಗದಂತೆ ರಕ್ಷಿಸುವ ಅಗತ್ಯವನ್ನು ಹುಟ್ಟುಹಾಕುತ್ತದೆ. ಆದರೆ ರಕ್ಷಕರ ಸ್ಥಾನದಲ್ಲಿರುವ ಪ್ರಭುತ್ವ ಮತ್ತು ನಾಗರಿಕ ಸಮಾಜಗಳೇ ತಮ್ಮ ವ್ಯವಸ್ಥೆಯೊಳಗಿರುವ ಇಂಥಾ ಅತಂತ್ರ ಸಮುದಾಯಗಳನ್ನು ರಕ್ಷಿಸಲು ವಿಫಲವಾಗಿವೆ. ಇತ್ತೀಚೆಗೆ ಬಿಹಾರದ ಮತ್ತು ಉತ್ತರ ಪ್ರದೇಶದ ಮಕ್ಕಳ ಆರೈಕಾ ಸಂಸ್ಥೆಗಳಲ್ಲಿ (ಚೈಲ್ಡ್ ಕೇರ್ ಇನ್ಸ್ಟಿಟ್ಯೂಷನ್-ಸಿಸಿಐ) ಮತ್ತು ಆಶ್ರಯಧಾಮಗಳಲ್ಲಿ (ಶೆಲ್ಟರ್ ಹೋಮ್ಸ್) ಅಪ್ರಾಪ್ತ ಮಕ್ಕಳ ಮೇಲೆ ಅವ್ಯಾಹತವಾಗಿ ನಡೆಯುತ್ತಿದ್ದ ದೈಹಿಕ ಮತ್ತು ಲೈಂಗಿಕ ದೌರ್ಜನ್ಯಗಳು ಬಯಲಾಗಿದ್ದು ರಕ್ಷಕರಾಗಿ ಪ್ರಭುತ್ವವೂ ಮತ್ತು ಅದರ ಮೇಲೆ ನಿಗಾ ಇಡುವ ಕಾವಲುಗಾರನಾಗಿ ನಾಗರಿಕ ಸಮಾಜವು ಹೇಗೆ ವಿಫಲಗೊಂಡಿದೆಯೆಂಬುದನ್ನು ಬಯಲುಗೊಳಿಸಿದೆ. ಕಾಯುವವರೇ ಪದೇಪದೇ ಕೊಲ್ಲುವವರಾಗುತ್ತಿರುವುದು ನ್ಯಾಯವ್ಯವಸ್ಥೆಯ ದುರಂತ ವಿಡಂಬನೆಯಾಗಿದೆ. ೨೦೧೫ರಲ್ಲಿ ಮಕ್ಕಳ ನ್ಯಾಯ (ಆರೈಕೆ ಮತ್ತು ರಕ್ಷಣೆ) ಕಾಯಿದೆ ಜಾರಿಯಾಗಿ, ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಅಯೋಗ (ನ್ಯಾಷನಲ್ ಕಮಿಷನ್ ಫಾರ್ ಪ್ರೊತೆಕ್ಷನ್ ಆಫ್ ಚೈಲ್ದ್ ರೈಟ್ಸ್- ಎನ್ಸಿಪಿಸಿಆರ್) ವೊಂದು ಅಸ್ತಿತ್ವದಲ್ಲಿದ್ದರೂ ಇವೆಲ್ಲಾ ಸಂಭವಿಸುತ್ತಿದೆ.

ಬಿಹಾರದ ಮುಜಾಫರ್ನಗರದ ಮಕ್ಕಳ ಆರೈಕಾ ಸಂಸ್ಥೆ (ಸಿಸಿಐ)ಯಲ್ಲಿ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯಗಳನ್ನು  ಸಂಸ್ಥೆಯ ೨೦೧೭ರ ಸೊಷಿಯಲ್ ಆಡಿಟ್ ನಡೆಸಿದ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೊಷಿಯಲ್ ಸೈನ್ಸಸ್ (ಟಿಐಎಸ್ಎಸ್- ಟಿಸ್) ತಂಡವು ಬಯಲು ಮಾಡಿತು. ಮುಜಫರ್ನಗರ್ ಸಿಸಿಐನಲ್ಲಿದ್ದ ಒಟ್ಟು ೪೨ ಮಕ್ಕಳಲ್ಲಿ ರಿಂದ ೧೭ ವಯಸ್ಸಿನೊಳಗಿದ್ದ ೩೪ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ದೈಹಿಕ ಮತ್ತು ಲೈಂಗಿಕ ಕಿರುಕುಳಗಳು ನಡೆಡಿತ್ತು. ಬಿಹಾರ ರಾಜ್ಯದಲ್ಲಿರುವ ಇನ್ನುಳಿದ ೧೪ ಸಿಸಿಐ ಮತ್ತು ಶೆಲ್ಟರ್ ಹೋಮ್ಗಳಳ್ಳಿರುವ ಮಕ್ಕಳ ಮೇಲೂ ನಡೆದಿರುವ ದೈಹಿಕ, ಮಾನಸಿಕ ಮತ್ತು ಲೈಂಗಿಕ ದೌರ್ಜನ್ಯಗಳ ಬಗ್ಗೆ ಮತ್ತು ಅಲ್ಲಿ ವಾಸಿಸಲು ದುಸ್ಸಾಧ್ಯವಾಗಿರುವ ಸ್ಥಿತಿಗಳ ಬಗ್ಗೆ ಹಾಗೂ ಶೆಲ್ಟರ್ ಹೋಮ್ಗಳಲ್ಲಿ ಕನಿಷ್ಟ ಸ್ವಾತಂತ್ರ್ಯವೂ ಇಲ್ಲದಿರುವ ಬಗ್ಗೆ ಆಡಿಟ್ ವರದಿಯು ಬೆಳಕನ್ನು ಚೆಲ್ಲಿದೆ. ಆದರೆ ತಳಮಳ ಹುಟ್ಟಿಸುವ ಸಂಗತಿಯೇನೆಂದರೆ ಮುಜಫರ್ನಗರದ ಪ್ರಕರಣದಲ್ಲಿ ಆರೋಪಿತರಾಗಿರುವವರಲ್ಲಿ ಏಳು ಜನ ಆರೈಕೆದಾರರು (ಕೇರ್ ಗೀವರ್ಸ್) ಮತ್ತು ಸಮಾಲೋಚಕರು (ಕೌನ್ಸೆಲ್ಲರ್ಸ್) ಮಹಿಳೆಯರೇ ಆಗಿದ್ದಾರೆ.

ಉತ್ತರಪ್ರದೇಶದ ದಿವೋರದದ ಸಿಸಿಐನಲ್ಲಿ ಅಪ್ರಾಪ್ತರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳನ್ನು ಅಲ್ಲಿಂದ ತಪ್ಪಿಸಿಕೊಂಡು ಓಡಿಂದಿದ್ದ ೧೦ ವರ್ಷದ ಹುಡುಗಿಯೊಬ್ಬಳು ಬಯಲುಗೊಳಿಸಿದ್ದರಿಂದ ಹೊರಜಗತ್ತಿಗೆ ಗೊತ್ತಾಯಿತು. ಹುಡುಗಿಯು ಅಲ್ಲಿಂದ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ಸಲ್ಲಿಸಿದ್ದರಿಂದ ಸಂಸ್ಥೆಯು ಸರ್ಕಾರದ ಪರವಾನಗಿ ಇಲ್ಲದೆ ನಡೆಯುತ್ತಿತ್ತೆಂಬುದೂ ಮತ್ತು ಅಲ್ಲಿದ್ದ  ೧೮ ಹುಡುಗಿಯರು ಇನ್ನೂ ನಾಪತ್ತೆಯಾಗಿದ್ದಾರೆಂಬುದೂ ತಿಳುದು ಬಂದಿತು.

ಇಂಥಾ ಅಪರಾಧಗಳಲ್ಲು ತಡೆಗಟ್ಟಲು ಕಾನೂನುಗಳ ಕೊರತೆಯೇನಿಲ್ಲ. ಬದಲಿಗೆ ಅದರ ಮೇಲುಸ್ತುವಾರಿ ಮತ್ತು ವಿಚಕ್ಷಣಾ ಸಮಿತಿಯು ರಚನೆಯಾಗದಿರುವುದರಿಂದ ಇಂಥಾ ದುರ್ಗತಿ ಉಂಟಾಗಿದೆ. ೨೦೧೫ರ ಕಾಯಿದೆಯ ಪ್ರಕಾರ ಎಲ್ಲಾ ಸಿಸಿಐಗಳು ಸರ್ಕಾರದಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ಪ್ರತಿ ಜಿಲ್ಲೆಗೊಬ್ಬ ಮಕಳ್ಳ ರಕ್ಷಣಾಧಿಕಾರಿ, ಒಂದು ಮಕ್ಕಳ ಕಲ್ಯಾಣ ಸಮಿತಿ ಮತ್ತು ಒಂದು ಮಕ್ಕಳ ನ್ಯಾಯ ಮಂಡಳಿಯು ರಚನೆಯಾಗಬೇಕು. ಆದರೆ ಇವೆಲ್ಲವೂ  ಸಿಸಿಐ ಸಂಸ್ಥೆಗಳು ಎಗಿರುವ ಹಣದ ಮತ್ತು ಅಧಿಕಾರದ ದುರ್ಬಳಕೆಯನ್ನು ನಿಯಂತ್ರಿಸುವಲ್ಲಿ ಘೋರವಾಗಿ ವಿಫಲವಾಗಿವೆ. ಎನ್ಸಿಪಿಸಿಆರ್ ನಡೆಸಿದ ಇತ್ತೀಚಿನ ಸರ್ವೇ ಪ್ರಕಾರ ಶೇ.೩೨ ರಷ್ಟು ಸಿಸಿಐಗಳು ೨೦೧೫ರ ಕಾಯಿದೆಯಡಿ ನೊಂದಾವಣೆಗೊಂಡಿಲ್ಲ ಮತ್ತು ಉಳಿದ ಶೇ.೩೩ರಷ್ಟು ಸಿಸಿಐಗಳು ಯಾವುದೇ ಪ್ರಾಧಿಕಾರದಡಿ ನೊಂದಾವಣೆಗೊಂಡಿಲ್ಲ. ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ಮಹಿಳಾ ಮತ್ತು ಮಕ್ಕಳ ಇಲಾಖೆಯು ಎಲ್ಲಾ ಸಿಸಿಐಗಳಿಗೆ ಅನುದಾನವನ್ನು ನೀಡುತ್ತಿದ್ದು ಕಾಲಕಾಲಕ್ಕೆ ಸಾಮಾಜಿಕ ಆಡಿಟ್ ನಡೆಸಿ ಯಾವುದೇ ದುರ್ಬಳಕೆಯನ್ನು ತಡೆಗಟ್ಟುವ ಜವಾಬ್ದಾರಿಯನ್ನು ಹೊಂದಿದೆ. ಆದ್ದರಿಂದ ಒಂದೋ ಎಲ್ಲಾ ಸಂಸ್ಥೆಗಳನ್ನು ಯಾವುದೇ ನಿಯಮಿತ ತಪಾಸಣೆ ನಡೆಸದೆ ನಡೆಯಲು ಬಿಟ್ಟಿರಬೇಕು ಅಥವಾ ಮುಜಫರ್ನಗರದ ಸಿಸಿಐನಲ್ಲಿ ಸಂಭವಿಸಿದಂತೆ ವಿಸ್ತೃತವಾದ ದೌರ್ಜನ್ಯಗಳು ಸಂಭವಿಸುತ್ತಿದ್ದರೂ ಅಲ್ಲಿ ತಪಾಸಣೆ ನಡೆಸಿದ ವಿವಿಧ ಸಂಸ್ಥೆಗಳಿಗೆ  ಅಲ್ಲಿ ಯಾವುದೇ ದುರ್ಬಳಕೆ ಪತ್ತೆಯಾಗಿಲ್ಲದಿರಬೇಕು.

ಇದೀಗ ಎಲ್ಲಾ ಸಿಸಿಐ ಗಳಲ್ಲೂ ಸೋಷೀಯಲ್ ಅಡಿಟ್ ನಡೆಸಬೇಕೆಂದು ಎನ್ಸಿಪಿಸಿಆರ್ ಆದೇಶಿಸಿದೆ. ಮತ್ತು s ರಾಜ್ಯ ಸರ್ಕಾರಗಳು ತನಿಖೆಗೆ ಆದೇಶ ನೀಡಿವೆ. ಆದರೆ ಇವೆಲ್ಲ ತುಂಬಾ ತಡವಾಗಿ ನಡೆಯುತ್ತಿವೆಸಾಕಷ್ಟು ಜೀವಗಳು ತಮ್ಮ ರಕ್ಷಕರಿಂದಲೇ ದೌರ್ಜನ್ಯಕ್ಕೆ ಗುರಿಯಾಗಿ ಆಘಾತಕ್ಕೊಳಗಾದ ಬಹು ಸಮಯದ ನಂತರ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ತನಿಖೆಗಳು ಇಂತದ್ದೇ ಹಲವಾರು ಪ್ರಕರಣಗಳನ್ನು ಬಯಲಿಗೆ ತಂದಿವೆ, ಪ್ರಾಯಶಃ ಇನ್ನೂ ಸಾಕಷ್ಟು ಪ್ರಕರಣಗಳು ಬಯಲಿಗೆ ಬರಲಿವೆ.

ಮುಜಫರ್ನಗರದ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ಸುಪ್ರೀಂ ಕೋರ್ಟು ಶೆಲ್ಟರ್ ಹೋಮ್ಗಳಲ್ಲಿರುವ ಮಕ್ಕಳ ಸುರಕ್ಷತೆ ಮತ್ತು ಕಲ್ಯಾಣಗಳ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದೆ. ಎನ್ಸಿಪಿಸಿಆರ್ ಸರ್ವೇಯ ಪ್ರಕಾರ ಭಾರತದಲ್ಲಿರ್ರುವ ಎಲ್ಲಾ ಸಿಸಿಐಗಳಲ್ಲಿ ಲೈಂಗಿಕ ದೌರ್ಜನ್ಯಗಳಿಗೆ ಗುರಿಯಾಗಿರುವ ೧೫೭೫ ಮಕ್ಕಳಿದ್ದಾರೆ. ಮಕ್ಕಳು ಒಮ್ಮೆ ಲೈಂಗಿಕ ದೌರ್ಜನ್ಯಗಳಿಂದ ಬಚಾವಾದರೂ  ಶೆಲ್ಟರ್ ಹೋಮ್ನಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ. ತಪ್ಪಿತಸ್ತರ ಮೇಲೆ ಕ್ರಮ ತೆಗೆದುಕೊಳ್ಳುವುದು ಅತ್ಯವಶ್ಯಕ. ಆದರೆ ಸರ್ಕಾರದ ಜವಾಬ್ದಾರಿ ಅಲ್ಲಿಗೆ ಮುಕ್ತಾಯವಾಗಬಾರದು. ಸರ್ಕಾರವು ಅಲ್ಲಿ ವಾಸಿಸುತ್ತಿರುವ ಮಕ್ಕಳ ಮತ್ತು ಮಹಿಳೆಯರ ಸ್ಥಿತಿಗತಿಗಳನ್ನು ಉತ್ತಮ ಪಡಿಸುವ ಮತ್ತು ಸಂಸ್ಥೆಗಳ ನಿರ್ವಹಣೆಯ ಮೇಲೆ ನಿಗಾ ಇಡುವಂಥ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಆದರೆ ಬಹಳಷ್ಟು ಸಾರಿ ಪ್ರಕರಣದ ಬಿಸಿಯು ಆರುತ್ತಿದ್ದಂತೆ ಸರ್ಕಾರದ ಗಮನವು ಆವಿಯಾಗುತ್ತಾ ಹೋಗುತ್ತದೆ.

ಬಹಳಷ್ಟು ಸಾರಿ ಅತ್ಯಂತ ಹಿಂಸಾತ್ಮಕ ಮತ್ತು ಅಸಹಾಯಕ ಪರಿಸ್ಥಿಗಳಲ್ಲಿ ದೌರ್ಜನ್ಯಗಳಿಗೆ ಬಲಿಯಾಗುವ ಮಕ್ಕಳು ಮತ್ತು ಮಹಿಳೆಯರಿಗೆ ತಮ್ಮ ಅಭಿವೃದ್ಧಿಗಾಗಿ ರೂಪಿಸಲಾಗುವ ಯೋಜನೆಗಳ ಬಗ್ಗೆ ಅಭಿಪ್ರಾಯಗಳನ್ನು ದಾಖಲಿಸುವ ಅವಕಾಶವಿರುವುದಿಲ್ಲ. ಹಾಗೂ ಅವರ ಭವಿಷ್ಯವು ಸರ್ಕಾರದ ಮತ್ತು ಅದರ ಅಧಿಕಾರಿಗಳ, ರಾಜಕಾರಣಿಗಳ ಅಥವಾ ಒಟ್ಟಾರೆ ಸಮಾಜದ ಮರ್ಜಿಗೆ ಒಳಪಟ್ಟಿರುತ್ತದೆ. ಸರ್ಕಾರದ ರಕ್ಷಣೆಯಲ್ಲಿರುವ ಅತಂತ್ರ ಜೀವಿಗಳ ಪರಿಸ್ಥಿತಿಗಳಲ್ಲಿ ಪರಿವರ್ತನೆ ತರಬೇಕೆಂದರೆ ತಮ್ಮ ಸಹಜೀವಿಗಳ ಬದುಕು ಗೌರವ ಮತ್ತು ಘನತೆಗಳಿಗೆ ಅನರ್ಹವೆಂದು ಭಾವಿಸುತ್ತಾ ಅವರ ಮೇಲೆ ಹಿಂಸಾಚಾರವನ್ನು ಮುಂದುವರೆಸುವ ಸಂದರ್ಭವನ್ನು ಪುನರುತ್ಪಾದನೆ ಮಾಡುವ ಸಮಾಜದ ಅನಾಗರಿಕ ಮತ್ತು ಪುರುಷಪ್ರಧಾನ ಮನಸ್ಥಿಯು ಬದಲಾಗಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಅವರೆಲ್ಲರನ್ನು ಸಕಲ ಹಕ್ಕುಗಳನ್ನುಳ್ಳ ನಾಗರಿಕರನ್ನಾಗಿ ಪರಿಗಣಿಸಬೇಕು. ಮತ್ತು ಅವರು ತಮ್ಮ ಹಾಗು ತಮ್ಮ ಕಲ್ಯಾಣದ ಬಗೆಗಿನ ಸಂಗತಿಗಳಲ್ಲಿ ಸಕ್ರಿಯ ಪಾತ್ರವಹಿಸುವಂತಾಗಬೇಕು.

ಸಿಸಿಐಗಳಲ್ಲಿ ಎಂಥಾ ಪರಿಸ್ಥಿತಿಗಳು ಮನೆಮಾಡಿದೆಯೆಂದರೆ ಅಲ್ಲಿರುವ ಅಪ್ರಾಪ್ತರನ್ನು ಮತ್ತು ನಿರಾಶ್ರಿತ ಮಹಿಳೆಯರನ್ನು ಅವರ ರಕ್ಷಕರಿಂದ ಮತ್ತು ವಿವಿಧ ಬಗೆಯ ದೌರ್ಜನ್ಯ ಮತ್ತು ದುರ್ಬಳಕೆಗಳಿಂದ ಮೊದಲು ರಕ್ಷಿಸಬೇಕಿದೆ. ರಕ್ಷಕರ ಹೆಸರಲ್ಲಿ ಸಂಸ್ಥೆಗಳನ್ನು ನಡೆಸುತ್ತಿರುವ ಕ್ರಿಮಿನಲ್ಗಳನ್ನು ಸಾಮಾಜಿಕ ಭದ್ರತಾ ಯೋಜನೆಗಳಿಂದ ಕಿತ್ತುಹಾಕಿ ಸರಿಯಾದ ಶಿಕ್ಷೆಯನ್ನು ನೀಡಬೇಕು. ಮತ್ತೆ ಅಂಥಾ ಕ್ರಿಮಿನಲ್ಗಳು ಅಲ್ಲಿ ನುಸುಲಿಕೊಳ್ಳದಂತೆ ವ್ಯವಸ್ಥಿತವಾದ ಮೇಲುಸ್ತುವಾರಿ ಇರುವಂತಾಗಬೇಕು. ಆಗ ಮಾತ್ರ ಇಂಥಾ ಸಂಸ್ಥೆಗಳಲ್ಲಿ ಬದುಕಲೇಬೇಕಾದ ಅನಿವಾರ್ಯತೆಗೆ ಗುರಿಯಾಗಿರುವ ಸಾವಿರಾರು ಜನರಲ್ಲಿ ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮಾನವ ಘನತೆ ಪುನರ್ಸ್ಥಾಪನೆಗೊಳ್ಳುತ್ತದೆ.

ಕೃಪೆ: Economic and Political Weekly    ಅನು: ಶಿವಸುಂದರ್ 

                  

 

Read These Next

ಜೈಶ್ರೀರಾಂ ಹೇಳುವಂತೆ ಒತ್ತಾಯಿಸಿ ಮುಸ್ಲಿಮರನ್ನು ಥಳಿಸಿದ ದುಷ್ಕರ್ಮಿಗಳಿಂದ ಸಂತೃಸ್ತರನ್ನು ರಕ್ಷಿಸಿದ ಹಿಂದೂ ದಂಪತಿ

ಸಂತ್ರಸ್ತ ಇಮ್ರಾನ್ ಇಸ್ಮಾಯಿಲ್ ಪಟೇಲ್ ಹೋಟೆಲ್ ಉದ್ಯೋಗಿಯಾಗಿದ್ದು, ಬೆಳಗ್ಗೆ ಮನೆಗೆ ಹಿಂದಿರುಗುತ್ತಿದ್ದಾಗ ಬೇಗಂಪುರ ಪ್ರದೇಶದ ...

ಮೋದಿ ಸರ್ಕಾರ ಅವಧಿಯಲ್ಲಿ ’ಬೀಫ್’ ರಪ್ತು ಪ್ರಮಾಣದಲ್ಲಿ ಗರಿಷ್ಠ ಏರಿಕೆ; 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ಬೀಫ್ ರಫ್ತು

2014ರಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿದಂದಿನಿಂದ ಎಮ್ಮೆ ಮಾಂಸದ ರಫ್ತು ಗಣನೀಯಾಗಿ ಹೆಚ್ಚಾಗಿದೆ. 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ...

ಹೊಸದಿಲ್ಲಿ:ಬಿಜೆಪಿ ರಾಷ್ಟ್ರೀಯ ಪ್ರ. ಸಂಘಟನಾ ಕಾರ್ಯದರ್ಶಿಯಾಗಿ ಕರ್ನಾಟಕ ಮೂಲದ ಬಿ.ಎಲ್ ಸಂತೋಷ್ ನೇಮಕ

ಹೊಸದಿಲ್ಲಿ: ಕಳೆದ 13 ವರ್ಷಗಳಿಂದ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮಲಾಲ್ ಹುದ್ದೆ ತೊರೆದ ಹಿನ್ನೆಲೆಯಲ್ಲಿ ತೆರವಾದ ...

ಮೋದಿ ಸರ್ಕಾರ ಅವಧಿಯಲ್ಲಿ ’ಬೀಫ್’ ರಪ್ತು ಪ್ರಮಾಣದಲ್ಲಿ ಗರಿಷ್ಠ ಏರಿಕೆ; 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ಬೀಫ್ ರಫ್ತು

2014ರಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿದಂದಿನಿಂದ ಎಮ್ಮೆ ಮಾಂಸದ ರಫ್ತು ಗಣನೀಯಾಗಿ ಹೆಚ್ಚಾಗಿದೆ. 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ...

ವಂಚನೆಯ ಮತ್ತೊಂದು ಮಾರ್ಗ

ಸಾಮಾಜಿಕ-ಆರ್ಥಿಕ ಆಡಳಿತ ನಿರ್ವಹಣೆಯಲ್ಲಿ ಅತ್ಯಂತ ಹೀನಾಯವಾದ ಕಾರ್ಯನಿರ್ವಹಣೆ ತೋರಿದ ಸರ್ಕಾರವೊಂದು ಹಿಂದಿಗಿಂತಲೂ ಹೆಚ್ಚಿನ ...

ತಡೆಗಟ್ಟಬಹುದಾದ ಸಾವುಗಳು

ಕಳೆದ ತಿಂಗಳು ಬಿಹಾರದ ಮುಝಫರ್‌ಪುರ್  ಜಿಲ್ಲೆಯಲ್ಲಿ ತೀವ್ರ ಮೆದುಳು ಜ್ವರಕ್ಕೆ ಬಲಿಯಾಗಿ ಪ್ರಾಣ ತೆತ್ತಿರುವ ೧೫೩ ಮಕ್ಕಳ ಸಾವುಗಳು ...

ಒಣಗು ವರ್ತಮಾನ, ಕರಕಲು ಭವಿಷ್ಯ?

ಈ ಜಲ ಬಿಕ್ಕಟ್ಟು ಪ್ರದೇಶ, ಜಾತಿ ಮತ್ತು ಲಿಂಗಾಧಾರಿತ ಅಸಮಾನತೆಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಪಾರಂಪರಿಕವಾಗಿ ನೀರನ್ನು ...

ಸಾರ್ವಜನಿಕ ಸಂಸ್ಥೆಗಳ ಘನತೆ

ಒಂದು ಪ್ರಭುತ್ವದ ಪ್ರಜಾತಾಂತ್ರಿಕ ಸಾರ ಮತ್ತು ಗಣರಾಜ್ಯ ಸ್ವಭಾವಗಳೆಲ್ಲವನ್ನೂ ನಾಶಗೊಳಿಸಿ ಒಂದು ಸಾರ್ವಜನಿಕ ಸಂಸ್ಥೆಯು ...